PLEASE LOGIN TO KANNADANET.COM FOR REGULAR NEWS-UPDATES

ಇಂದು ನಾವು ಬಹುತೇಕರು ಭ್ರಮಾಲೋಕ ಮತ್ತು ವಾಸ್ತವ ಜಗತ್ತನ್ನು ಪ್ರತ್ಯೇಕಿಸಿಕೊಂಡು ನೋಡಲಾರದಷ್ಟು ಕುರುಡರಾಗುತ್ತಿದ್ದೇವೆ . ಅದರಲ್ಲೂ ವಿಶೇಷವಾಗಿ ಆಧುನಿಕ ನಗರ ಜೀವನ ಶೈಲಿಯನ್ನು ರೂಢಿಸಿಕೊಂಡ ಮಹಿಳೆ, ಮಣ್ಣಿನ ವಾಸನೆಯೇ ತಗುಲದ ಅಪಾಟ್೯ಮೆಂಟ್ಗಳಲ್ಲಿಯೋ, ಕ್ವಾಟ್೯ಸ್೯ಗಳಲ್ಲಿಯೋ ವಾಸಿಸುವ ಮಹಿಳೆ ತನಗರಿವಿಲ್ಲದಂತೆ ಅಂಧತೆಗೆ ಒಳಗಾಗುತ್ತಿದ್ದಾಳೆ ಎನ್ನುವ ಅಂಶ ಸ್ತ್ರೀ ಮನೋವಿಜ್ಞಾನದ ನೆಲೆಯಿಂದ ಚರ್ಚೆಯಾಗಬೇಕಾಗಿದೆ. ಹೊರಜಗತ್ತಿನ ಎಲ್ಲ ಜನ ವರ್ಗಗಳೊಂದಿಗೆ ಬೆರೆಯದೇ, ವಿವಿಧ ಸಾಮಾಜಿಕವಲಯಗಳ ಪರಿಚಯವನ್ನೂ ಮಾಡಿಕೊಳ್ಳದ ಬಹುಪಾಲು ಮಹಿಳೆಯರು ತಾವುನಂಬಿಕೊಂಡ ಸಾಂಪ್ರದಾಯಿಕ ಆಚರಣೆಗಳಿಗೇ ಜೋತುಬಿದ್ದು,ಪೊಳ್ಳು ಅಹಮಿನ ಕೋಟೆಯೊಳಗೆ ಬಂಧಿಯಾಗಿಬಿಟ್ಟಿರುತ್ತಾರೆ. ವ್ಯಕ್ತಿಯೊಬ್ಬ ಎಷ್ಟೇ ಉನ್ನತ ಶಿಕ್ಷಣ ಪಡೆದು,ಉತ್ತಮ ಉದ್ಯೋಗ,ಸಂಪಾದನೆಯನ್ನು ಹೊಂದಿದ್ದರೂ ತನ್ನನ್ನು ತಾನು ಇತರರೊಂದಿಗೆ ಒರೆಗೆ ಹಚ್ಚಿಕೊಳ್ಳದೆ,ತನ್ನದೇ ಆದ ಭ್ರಮಾಲೋಕದಲ್ಲಿ ಉಳಿದು ಬಿಡುವ ಸಂಭವಗಳನ್ನು ಇಂದು ಹೆಚ್ಚಾಗಿ ಕಾಣುತ್ತಿದ್ದೇವೆ.ಅನಗತ್ಯ ಮೇಲರಿಮೆ ಬೆಳೆಸಿಕೊಳ್ಳುವ ಇಂತಹ ವ್ಯಕ್ತಿಗಳು ತಾವೇ ಎಲ್ಲರಿಗಿಂತಲೂ ಸುಸಂಸ್ಕೃತ,ಸಜ್ಜನ ಎಂದು ತಪ್ಪಾಗಿ ಭ್ರಮಿಸಿಕೊಂಡಿರುತ್ತಾರೆ.
ಒಂದು ಸೀಮಿತ ಜನವರ್ಗದೊಂದಿಗೆ ಮಾತ್ರ ಬೆಳೆಯುವ ಮಹಿಳೆಯರಲ್ಲಿ ಇಂತಹ ಮನೋಧರ್ಮ ಇರುವದು ಎಲ್ಲರ ಗಮನಕ್ಕೂ ಬಂದಿರಲು ಸಾಧ್ಯವಿದೆ.ವಾಸ್ತವ ಜಗತ್ತಿನ ವರ್ತಮಾನಗಳಿಗೆ ಮುಖಾಮುಖಿಯಾಗದೇ,ಎಲ್ಲ ಜನ ಸಮುದಾಯಗಳ ನೋವು ನಲಿವುಗಳನ್ನು
ಅರಿಯದಂತಹ ಸಂವೇದನಾರಹಿತ ಮನೋಭಾವ ಕೇವಲ ಮಹಿಳೆಯರಲ್ಲಿ ಮಾತ್ರ ಇದೆ ಎಂದು ಆರೋಪಿಸುವದು ಸರ್ವಥಾ ತಪ್ಪಾಗುತ್ತದೆ. ಆದರೂ ಪುರುಷ ವರ್ಗದೊಂದಿಗೆ ಹೋಲಿಸಿದಾಗ ಇಂತಹ ವಾಸ್ತವ ಜಗತ್ತನ್ನು ತಿಳಿಯದೇ ಇರುವ ಪ್ರವೃತ್ತಿ ಮಹಿಳೆಯರಲ್ಲಿ ಹೆಚ್ಚು ಎಂಬುದನ್ನು ಮಹಿಳಾ ಚಿಂತನೆಗಳೇ ಒಪ್ಪಿಕೊಂಡಿವೆ.
ವಿಶೇಷವಾಗಿ ಮಹಿಳೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯಾಕೆ ವಿಚಾರವನ್ನು ಮುಂದುವರೆಸಬೇಕಾಗಿದೆ ಎಂದರೆ, ‘ಹೆಣ್ಣು ಕುಟುಂಬದ ಕಣ್ಣುಎಂಬ ಮಾತು ಆಕೆಯ ಪ್ರಾಮುಖ್ಯತೆಯನ್ನು ಹೆಳುತ್ತದೆ.ಮನೆಯೊಂದರಲ್ಲಿ ತಂದೆಯ ನಡುವಳಿಕೆಗಿಂತಲೂ ಹೆಚ್ಚಾಗಿ ತಾಯಿಯ ವರ್ತನೆ,ವಿಚಾರಗಳ ಪ್ರಭಾವ ತೀಕ್ಷ್ಣವಾಗಿರುತ್ತದೆ.ಸಹಜವಾಗಿ ತಾಯಿಯು ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವದರಿಂದ ಇದು ಸಾಧ್ಯವೆನ್ನಬಹುದು. ಆಧುನಿಕ ವೃತ್ತಿನಿರತ ಮಹಿಳೆಗೆ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶವಿರುವದಿಲ್ಲವಾದರೂ ಇರುವ ಅಲ್ಪ ಕಾಲದಲ್ಲಿಯೇ ಆಕೆ ತೋರುವ ಸೂಚನೆಗಳು ಮಕ್ಕಳ ಮೇಲೆ ಪರಿಣಾಮ ಬೀರದೆ ಇರವು.
ಕೇವಲ ಪೂಜೆ ಪುನಸ್ಕಾರ,ಉಪವಾಸ ವ್ರತ ಆಚರಣೆಗಳು,ದೇವಾಲಯಗಳಿಗೆ ಹೋಗಿ ಬರುವಂತಹ ವ್ಯಕ್ತಿಗಳು ಮಾತ್ರವೇ ಸರ್ವ ಶ್ರೇಷ್ಠರು.ತಾನು ರೀತಿ ನಡೆದುಕೊಳ್ಳುತ್ತಿರುವದರಿಂದ ಸಮಾಜದಲ್ಲಿ ಇತರರಿಗಿಂತಲೂ ಭಿನ್ನ,ಮಾದರಿವ್ಯಕ್ತಿ,ಉಳಿದವರು ನನ್ನನ್ನು ನೋಡಿ ಕಲಿಯಬೇಕು ಎಂಬ ಗರ್ವವನ್ನು ತನಗರಿವಿಲ್ಲದಂತೆ ಬೇರೂರಿಸಿಕೊಂಡುಬಿಟ್ಟಿರುತ್ತಾಳೆ.ತನ್ನ ಭ್ರಮಾ ಜಗತ್ತಿನಿಂದ ಹೊರಬಂದು ಆಲೋಚಿಸುವ ವ್ಯವಧಾನವೂ ಆಕೆಗಿರುವುದಿಲ್ಲ.ಸಾಮಾನ್ಯವಾಗಿ ಇಂತಹ ಮನೋಧರ್ಮದ ವ್ಯಕ್ತಿಗಳು ನೆರೆಹೊರೆಯವರೊಂದಿಗೂ ಉತ್ತಮ ಸಂಬಧ ಹೊಂದಿರುವುದಿಲ್ಲ.ಸಹೊದ್ಯೋಗಿಗಳಿಗೆ,ಅಸಹಾಯಕರಿಗೆ ನೆರವಾಗುವ ಗುಣ ಹೊಂದಿರುವದಿಲ್ಲ.ಕಾಯಕವೇ ಕೈಲಾಸವೆಂದು ನಂಬಿ,ದುಡಿಯುವ ಇತರ ಕರ್ತವ್ಯನಿಷ್ಠ ಜನರನ್ನು ಕನಿಷ್ಠಪಕ್ಷ ಗೌರವಿಸುವ ಸೌಜನ್ಯವನ್ನೂ ತೋರುವದಿಲ್ಲ.
ಪೂಜೆ, ವ್ರತ,ಪಾರಾಯಣಗಳನ್ನು ಮಾಡಿ ಆಫೀಸಿಗೆ ಬರುವ ಬಹುತೇಕ ಸಂಪ್ರದಾಯನಿಷ್ಠ ಮಹಿಳೆಯರಲ್ಲಿ ಪಾರಾಯಣಗಳು ಹೇಳುವ ಬೋಧನೆಯನ್ನು ಕಾರ್ಯರುಪಕ್ಕೆ ತರಬೇಕೆಂಬ ಕಲ್ಪನೆಯೇ ಇರುವದಿಲ್ಲ. ಅವರ ಪ್ರಕಾರ ಪೂಜೆ ಪಾರಾಯಣಗಳೇ ಬೇರೆ,ವಾಸ್ತವ ಬದುಕೇ ಬೇರೆ ಎಂಬತಿರುತ್ತಾರೆ.
ಪುನರ್ಜನ್ಮದಲ್ಲಿ ನಂಬಿಕೆ ಹೊಂದಿರುವ ಸಂಪ್ರದಾಯಿ ಮನಸ್ಸುಗಳು ಮರಣಾನಂತರ ತಾವು ಹೋಗಬಹುದೆಂದು ಕಲ್ಪಿಸಿಕೊಂಡಿರುವ ಸ್ವರ್ಗ,ನರಕಗಳ ಲೆಕ್ಕಾಚಾರದಲ್ಲಿ ತೊಡಗುತ್ತವೆಯೇ ವಿನಃ ಕರ್ಮವೆ ಇಹ ಪರ ಸಾಧನವು ಎಂದು ತಿಳಿಯಬಯಸುವುದಿಲ್ಲ.ಸ್ವರ್ಗ,ನರಕಗಳೆಂಬುದು ಕೇವಲ ಕಾಲ್ಪನಿಕ ಅವುಗಳನ್ನು ನಿಜಕ್ಕೂ ಕಂಡುಬಂದವರಾರು ಎಂಬುದನ್ನು ಡಿ.ವಿ.ಜಿ.ಯವರು ಬಹಳ ಹಿಂದೆಯೇ ಪ್ರಶ್ನಿಸುವದನ್ನು ಇಲ್ಲಿ ಉಲ್ಲೇಖಿಸಬಹುದು....
"ಮರಣದಿಂ ಮುಂದೇನು?
ಭೂತವೋ? ಪ್ರೇತವೋ?
ಪರಲೋಕವೋ? ಪುನರ್ಜನ್ಮವೋ?
ಅದೇನದು,
ಹೋಗಿ ಬಂದವರಿಲ್ಲ, ಸುದ್ದಿ ತಂದವರಿಲ್ಲ
ಧರೆಯ ಬದುಕಿಗೆ ಅದರಿಂದೇನಲೆ ಮಂಕುತಿಮ್ಮ"

ಎಂಬ ಅರ್ಥಪೂರ್ಣ ಸಾಲುಗಳನ್ನು ಓದಿಕೊಂಡಿದ್ದರೂ ಸಹ ಒಮ್ಮೆಯಾದರೂ ಅದರ ಹಿರಿದರ್ಥವನ್ನು ಅರಿಯುವ ಪ್ರಯತ್ನಕ್ಕೆ ಕೈ ಹಾಕದೆ,ಅಪರಿಪೂರ್ಣರಾಗಿಯೇ ಉಳಿಯುವ,ಮೌಢ್ಯತೆಯನ್ನು ಪೋಷಿಸುವವರಾಗಿ ಕಾಲವ್ಯಯಿಸುತ್ತಾರೆ.ತಾಯಿಯಂದಿರ ಭಾವನೆಗಳು.ವರ್ತನೆಗಳು ನೇರವಾಗಿ ಆಕೆಯ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತವೆ.ತಾಯಿಯು ದೂಷಿಸುವ ವ್ಯಕ್ತಿಗಳನ್ನು ಆಕೆಯ ಮಕ್ಕಳೂ ದೂಷಿಸತೊಡಗುತ್ತಾರೆ.ವಿಶ್ವಮಾನವರಾಗಿದ್ ಮಕ್ಕಳ ಮನಸ್ಸನ್ನು ಸಂಕುಚಿತಗೊಳಿಸಿಬಿಟ್ಟಿರುತ್ತೇವೆ.
ಇಂತಹ ಎಲ್ಲ ಋಣಾತ್ಮಕ ಬೆಳವಣಿಗೆ,ಅನಾರೋಗ್ಯಕರ ವಾತಾವರಣ ನಿರ್ಮಾಣಕ್ಕೆ ನಮ್ಮೊಳಗಿನ ಅಪರಿಪೂರ್ಣತೆಯೇ ಕಾರಣವಾಗಿರುತ್ತದೆ. ಇರುವ ಒಂದೇ ಒಂದು ಜೀವನವನ್ನು ಅನಗತ್ಯವಾಗಿ ಹಾಳು ಮಾಡಿಕೊಳ್ಳದೇ,ಸುಂದರವಾಗಿ ಕಳೆಯುವಂತಾಗಲು ಪ್ರತಿನಿತ್ಯವೂ ನಮ್ಮೊಳಗಿನ ಕೊರತೆಯನ್ನು ನೀಗಿಸಿಕೊಳ್ಳುವದರತ್ತ ಹೆಜ್ಜೆಯಿಡೋಣ.
-ಮಂಜುನಾಥ ಡಿ.ಡೊಳ್ಳಿನ,
ಪ್ರಸಾರ ನಿರ್ವಾಹಕ,ಆಕಾಶವಾಣಿ ಭದ್ರಾವತಿ, ಶಿವಮೊಗ್ಗ ಜಿಲ್ಲೆ

Advertisement

0 comments:

Post a Comment

 
Top