PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. :ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ ಈ ಬಾರಿಯೂ ೨೦೧೦ ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ.
ಪುಸ್ತಕ ಬಹುಮಾನ ಯೋಜನೆಗಾಗಿ ೨೦೧೦ ರ ಜನವರಿ ೦೧ ರಿಂದ ಡಿಸೆಂಬರ್ ೩೧ ರ ಒಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳನ್ನು ಆಹ್ವಾನಿಸಲಾಗಿದ್ದು, ಕೃತಿಯ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ ೨೦೧೦ ಎಂದು ಮುದ್ರಿತವಾಗಿರಬೇಕು. ಪುಸ್ತಕದ ವಿವಿಧ ಪ್ರಕಾರಗಳ ವಿವರ ಇಂತಿದೆ. ಕಾವ್ಯ (ವಚನಗಳು ಮತ್ತು ಹನಿಗವನಗಳು), ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ಆತ್ಮಕಥೆ, ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ), ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕಗಳು, ಸಂಶೋಧನೆ, ಅನುವಾದ, ಸಂಕೀರ್ಣ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಶ್ರೇಷ್ಠವೆಂದು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು.
ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ : ಮಧುರಚೆನ್ನ ದತ್ತಿನಿಧಿ ಅಡಿ ಈ ಬಹುಮಾನ ನೀಡಲಾಗುತ್ತಿದ್ದು, ೨೦೧೦ ರಲ್ಲಿ ಪ್ರಕಟವಾದ ಹೊಸ ಬರಹಗಾರರ ಮೊದಲ ಸ್ವತಂತ್ರ ಕೃತಿಗೆ ರೂ. ೫೦೦೦ ಗಳ ಬಹುಮಾನ ಕೊಡಲಿದೆ. ಲೇಖಕರ ಮೊದಲ ಕೃತೆಯೆಂದು ಖಾತರಿಪಡಿಸುವ ದೃಢೀಕರಣ ಪತ್ರದೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ಕಳುಹಿಸಬೇಕು.
ಅನುವಾದ ಕೃತಿಗೆ ಬಹುಮಾನ : ಅಮೆರಿಕ ಕನ್ನಡಿಗರ ಹಾಗೂ ಕನ್ನಡ ಸಂಘಗಳ ಬಹುಮಾನ ಯೋಜನೆ ನಿಧಿಯ ವತಿಯಿಂದ ೨೦೧೦ ನೇ ವರ್ಷದಲ್ಲಿ ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿರುವ ಒಂದು ನೂರು ಪುಟಗಳಿಗೆ ಕಡಿಮೆಯಿಲ್ಲದ ಶ್ರೇಷ್ಠ ಸೃಜನಾತ್ಮಕ ಕೃತಿಗೆ ೫೦೦೦ ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.
ಮೇಲ್ಕಂಡ ಪುಸ್ತಕ ಬಹುಮಾನ ಯೋಜನೆಗಳಿಗಾಗಿ ಮರುಮುದ್ರಣವಾದ ಪುಸ್ತಕಗಳು, ಜಾನಪದ ಕೃತಿಗಳು, ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು, ಪಠ್ಯಪುಸ್ತಕಗಳು, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು, ಈಗಾಗಲೆ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು, ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಅದೇ ಪ್ರಕಾರದಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ.
ಪುಸ್ತಕ ಬಹುಮಾನ ಯೋಜನೆಗಾಗಿ ಕೃತಿಗಳನ್ನು ಸಲ್ಲಿಸಬಯಸುವವರು, ಪುಸ್ತಕಗಳ ಒಂದೊಂದು ಸಾದಾ ಪ್ರತಿಯನ್ನು ಯಾವ ಸಾಹಿತ್ಯ ಪ್ರಕಾರದ ಪುಸ್ತಕವೆಂಬುದನ್ನು ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದು, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ೦೨ ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-೦೨ ಇವರಿಗೆ ನೋಂದಾಯಿತ ಅಂಚೆ, ಕೊರಿಯರ್ ಮೂಲಕ ಅಥವಾ ಖುದ್ದಾಗಿ ಏಪ್ರಿಲ್ ೧೫ ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top