"ಧರ್ಮ -ರಾಜಕಾರಣ ನಮ್ಮನ್ನು ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ. ಕವಿಸಮಯದಲ್ಲಿ ಎಲ್ಲರೂ ಒಂದಾಗಿ ಕುಳಿತು ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು. ಇತ್ತೀಚಿನ ತಲೆಮಾರಿನ ಲೇಖಕರು,ಸಾಹಿತಿಗಳು ಹಿರಿಯರಿಗಿಂತ ಉತ್ತಮವಾದ ಸಾಹಿತ್ಯ ರಚನೆ ಮಾಡುತ್ತಿರುವುದು ಒಳ್ಳೆಯ ಸಂಗತಿ. ಕೊಪ್ಪಳ ನನ್ನ ಕರ್ಮಭೂಮಿಯಾಗಿ ನನ್ನನ್ನು ಬೆಳೆಸಿದೆ. ಇಲ್ಲಿಯ ಗೆಳೆಯರ ಬಳಗ ಯಾವಾಗ ಕರೆದರೂ ನಾನು ತಪ್ಪದೇ ಬರುತ್ತೇನೆ. ಈ ಸನ್ಮಾನಗಳು ನನ್ನ ಬಗ್ಗೆ ನಾನು ಪುನರ್ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿವೆ" ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ರಹಮತ್ ತರೀಕೆರೆ ಹೇಳಿದರು. ಅವರು ನಗರದ ಜಚನಿ ಜನ್ಮಶತಾಬ್ದಿ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಪುಸ್ತಕಗಳ ಬಿಡುಗಡೆ ಹಾಗೂ ಸನ್ಮಾನ ಕಾರ್‍ಯಕ್ರಮದಲ್ಲಿ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕೊಪ್ಪಳದಲ್ಲಿ ಕವಿಗಳ ಸಂಖ್ಯೆ ಹೆಚ್ಚಿದೆ ಅದೇ ರೀತಿ ಸಂಶೋಧಕರು ಮತ್ತು ವಿಮರ್ಶಕರ ಸಂಖ್ಯೆ ಹೆಚ್ಚಾಗಲಿ.ಕವಿಸಮಯದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಲಿ. ವಿಮರ್ಶೆ, ಸಾಹಿತ್ಯ ವಿಶ್ಲೇಷಣೆ ನಡೆಯಲಿ ಎಂದು ಹೇಳಿದರು.
ಕಾರ್‍ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಾಜ್ ಬಿಸರಳ್ಳಿ ಕವಿಸಮಯ ನಡೆದುಬಂದ ದಾರಿ ಹಾಗೂ ಕಾರ್‍ಯಕ್ರಮದ ಕುರಿತು ಮಾತನಾಡಿದರು.ಉದ್ಘಾಟನಾ ಭಾಷಣ ಮಾಡಿದ ವಿಠ್ಠಪ್ಪ ಗೋರಂಟ್ಲಿಯವರು ಕವಿ ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತ ತನ್ನ ಕವಿತೆಯಲ್ಲಿ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ತುಡಿಯಬೇಕಾಗುತ್ತದೆ. ಸಾಹಿತಿ ಸಾಯಬಹುದು ಆದರೆ ಸಾಹಿತ್ಯ ಸಾಯುವುದಿಲ್ಲ. ಸಿರಾಜ್ ಬಿಸರಳ್ಳಿ ತಮ್ಮ ತಂದೆ ದಿ.ಬಾಬುಸಾಬ ಬಿಸರಳ್ಳಿಯವರ ಆದರ್ಶದ ವಾರಸುದಾರ,ದಿ.ಬಾಬುಸಾಬ ಬಿಸರಳ್ಳಿಯವರ ಕಾವ್ಯ ಯಾವತ್ತೂ ಸ್ಮರಣೀಯವಾದದ್ದು ಎಂದರು.
ಬಿಡುಗಡೆಗೊಂಡ ಪುಸ್ತಕಗಳ ಕುರಿತು ಮಾತನಾಡಿದ ಕವಿ, ವಿಮರ್ಶಕ ಪ್ರಮೋದ ತುರ್ವಿಹಾಳ" ಕ್ರಾಂತಿ ಸೂರ್ಯನ ಕಂದೀಲು ಕವನ ಸಂಕಲನದಲ್ಲಿ ಅಪ್ಪ-ಮಗನ ಕಾವ್ಯ ಜುಗಲ್ ಬಂದಿ ನಡೆದಿದೆ. ಅಪ್ಪ ಮತ್ತು ಮಗ ಸೇರಿ ಕವನ ಸಂಕಲನ ಹೊರತಂದಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ದಾಖಲೆ. ದಿ.ಬಾಬುಸಾಬ ಬಿಸರಳ್ಳಿಯವರು ರಚಿಸಿರುವ ಅಪ್ಪ-ಅಮ್ಮ ಕವನ ,ಹರಾಜು ಕವನಗಳು ಮನುಷ್ಯ ಸಂಬಂಧವನ್ನು ಎತ್ತಿಹಿಡಿಯುತ್ತವೆ. ಸಿರಾಜ್ ಬಿಸರಳ್ಳಿ ತಮ್ಮ ತಂದೆ ದಿ.ಬಾಬುಸಾಬ ಬಿಸರಳ್ಳಿಯವರ ಜ್ಞಾನಪ್ರಜ್ಞೆಯ ವಾರಸುದಾರರಾಗಿ ಮುಂದುವರೆಯುತ್ತಿದ್ದಾರೆ. ಸಿರಾಜ್ ಬಿಸರಳ್ಳಿಯವರ ಕವನಗಳು ಬದುಕಿನ ದಟ್ಟ ಅನುಭವವನ್ನು ನೀಡುತ್ತವೆ. ಅದೇ ರೀತಿ ಕವಿಸಮೂಹದ ಕವಿಸಮಯ ಕವನಸಂಕಲನ ಸಹ ಉತ್ತಮ ಕವನಗಳನ್ನು ಹೊಂದಿದೆ. ಭರವಸೆ ಹುಟ್ಟಿಸುವಂತಹ ಕವಿಗಳು ಇದರಲ್ಲಿದ್ದಾರೆ" ಎಂದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಅನುಭವ ಎನ್ನುವ ಮೂಲದ್ರವ್ಯದ ಜೊತೆಗೆ ಅಧ್ಯಯನವೂ ಸೇರಿದಾಗ ಉತ್ತಮ ಕಾವ್ಯ ಸಾಧ್ಯ,ಕವಿಸಮಯಕ್ಕೆ ನಾನಾ ಅರ್ಥಗಳಿವೆ ಡಾ.ರಹಮತ್ ತರೀಕೆರೆಯವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು ಎಂದರು. ವೇದಿಕೆಯ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಉಧ್ಯಮಿ ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಉಪಸ್ಥಿತರಿದ್ದರು.
ನಂತರ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಬಿ.ಪೀರಬಾಷಾ ವಹಿಸಿಕೊಂಡಿದ್ದರು.ಕವಿಗೋಷ್ಠಿಯನ್ನು ಶಿವಪ್ರಸಾದ ಹಾದಿಮನಿ,ಅರುಣಾ ನರೇಂದ್ರ ಮಾಡಿದರು. ಸುಮಾರು ೪೫ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ವಿ.ಬಿ.ರಡ್ಡೇರ್,ಹೆಚ್.ಎಸ್.ಪಾಟೀಲ್, ಮುನಿಯಪ್ಪ ಹುಬ್ಬಳ್ಳಿ,ಬಿ.ಎಸ್.ಪಾಟೀಲ್, ವೀರಣ್ಣ ಹುರಕಡ್ಲಿ,ಎನ್.ಜಡೆಯಪ್ಪ, ಹನುಮಂತಪ್ಪ ಅಂಡಗಿ, ಶಾಂತಾದೇವಿ ಹಿರೇಮಠ, ಪ್ರಕಾಶ ಬಳ್ಳಾರಿ, ಆರ್.ಎಂ.ಪಾಟೀಲ್, ಬಸವರಾಜ್ ಆಕಳವಾಡಿ,ಶಿವಪ್ಪ ಶೆಟ್ಟರ್,ಮಂಜುನಾಥ ಗೊಂಡಬಾಳ,ಫಕೀರಪ್ಪ ವಜ್ರಭಂಡಿ ಸೇರಿದಂತೆ ಕವಿಸಮೂಹದ ಕವಿಗಳು, ಹಿರಿಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಸ್ವಾಗತವನ್ನು ಮಹೇಶ ಬಳ್ಳಾರಿ,ಪ್ರಾರ್ಥನೆಯನ್ನು ಪ್ರಿಯಾಂಕ,ಪಲ್ಲವಿ ನಿರೂಪಣೆಯನ್ನು ಸುಮತಿ ಹಿರೇಮಠ ನಡೆಸಿಕೊಟ್ಟರು. ಪುಷ್ಪಲತಾ ಏಳುಬಾವಿ ವಂದನಾರ್ಪಣೆ ಮಾಡಿದರು.
0 comments:
Post a Comment