PLEASE LOGIN TO KANNADANET.COM FOR REGULAR NEWS-UPDATES
ಜನವರಿ ೨೯ ಭಾರತೀಯ ಪತ್ರಿಕೋದ್ಯಮದ ಐತಿಹಾಸಿಕ ದಿನ. ಈ ದಿನದಂದು ದೇಶದ ಮೊದಲ ಪತ್ರಿಕೆ "ದಿ ಬೆಂಗಾಲ್ ಗೆಜೆಟ್" ಅಥವಾ "ಕಲ್ಕತ್ತಾ ಜನರಲ್ ಅಡ್ವರ್ಟೈಸರ್" ಕೊಲ್ಕತ್ತಾ ನಗರದಲ್ಲಿ ಹೊರಬಂತು. ೧೭೮೦ರ ಜನವರಿ ೨೯ ಶನಿವಾರದಂದು ಹೊರಬಂದ ಎರಡು ಪುಟಗಳ (೧೨ ಇಂಚು ಎತ್ತರ ೮ ಇಂಚು ಅಗಲ) ಈ ವಾರಪತ್ರಿಕೆ ಭಾರತೀಯರಿಗೆ ಪತ್ರಿಕೆಗಳ ರುಚಿಯನ್ನು ಪರಿಚಯಿಸಿತು.
ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೇಂದ್ರವಾಗಿದ್ದ ಕೊಲ್ಕತ್ತಾ ನಗರ ಬ್ರಿಟಿಷರು ಸೇರಿದಂತೆ ಅನೇಕ ಯುರೋಪಿಯನ್ನರಿಗೆ ಆಶ್ರಯ ನೀಡಿತ್ತು. ಹಡಗಿನ ಮೂಲಕ ಐದಾರು ತಿಂಗಳ ನಂತರ ಬರುತ್ತಿದ್ದ ಯುರೋಪಿನ ಪತ್ರಿಕೆಗಳನ್ನು ಜನತೆ ಕುತೂಹಲದಿಂದ ಓದಿ, ತಮ್ಮ ದೇಶದ ಬೆಳವಣಿಗೆಗಳನ್ನು ತಿಳಿಯುತ್ತಿದ್ದರು. ಸ್ಥಳೀಯ ಸುದ್ದಿಗಳ ಕೊರತೆ ಬಹುವಾಗಿತ್ತು. ಶ್ರೀಮಂತ ಅಧಿಕಾರ ವರ್ಗ, ಕಂಪನಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಅಧಿಕೃತ ಮಾಹಿತಿಗಾಗಿ ಯಾವಾಗಲೂ ಪರಿತಪಿಸುತ್ತಿದ್ದರು. ಊಹಾಪೋಹಗಳಿಗೆ ಕಿವಿಕೊಡುವುದು ಸರ್ವೆ ಸಾಮಾನ್ಯವಾಗಿತ್ತು. ಅಧಿಕೃತ ಸರ್ಕಾರಿ ತಿಳವಳಿಕೆಗಳನ್ನು ಸೇವಕರು ರಸ್ತೆಗಳಲ್ಲಿ ನಿಂತು ಸಾರ್ವಜನಿಕರಿಗೆ ತಿಳಿಸುತ್ತಿದ್ದರು.
ಇಂತಹ ಆಧುನಿಕ ಕಾಲದಲ್ಲಿಯೂ, ಕಲ್ಕತ್ತಾದಂತಹ ನಗರದಲ್ಲಿ ಈ ಬಗೆಯ ಮಾಹಿತಿ ತಿಳಿಸುವುದನ್ನು ಕಂಡು, ಬೇಸರಗೊಂಡ ಒರ್ವ ಮುದ್ರಕ, ಪತ್ರಿಕೆಯೊಂದನ್ನು ಹೊರತಂದರೆ ಈ ಕೊರತೆಯನ್ನು ನೀಗಿಸಬಹುದೆಂಬುದನ್ನು ಮನಗಂಡ. ಆತನೇ ಜೇಮ್ಸ್ ಅಗಸ್ಟಸ್ ಹಿಕ್ಕಿ. ಕಡಲ ವ್ಯಾಪಾರ ಮಾಡಿ ಶ್ರೀಮಂತನಾಗಬೇಕೆಂಬ ಕನಸು ಕಂಡ ಹಿಕ್ಕಿಗೆ ಅದೃಷ್ಟ ನೆರವಾಗಲಿಲ್ಲ. ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿ, ಬೇರೆ ಉದ್ಯೋಗ ಹಿಡಿಯಬೇಕಾಯಿತು. ಆತ ಆಯ್ದುಕೊಂಡದ್ದು ಮುದ್ರಣ ಕೆಲಸ.
ಯುರೋಪಿನಲ್ಲಿ ಆಧುನಿಕ ಮುದ್ರಣ ಕಲೆ ಆರಂಭವಾದದ್ದು ೧೪೫೪ರಲ್ಲಿ. ಜೊಹಾನ್ ಗುವೆನ್‌ಬರ್ಗ ೧೪೫೪ರಲ್ಲಿ ಲೋಹದ ಎರಕಹೊಯ್ದು ಅಚ್ಚುಮೊಳೆ ತಯಾರಿಸಿದ. ಸುಮಾರು ನೂರು ವರ್ಷಗಳ ನಂತರ (೧೫೫೬) ಮುದ್ರಣ ಕಲೆ ಕ್ರೈಸ್ತ ಮಿಷನರಿಗಳ ಮೂಲಕ ಭಾರತವನ್ನು ಪ್ರವೇಶಿಸಿತು. ಧಾರ್ಮಿಕ ಗ್ರಂಥಗಳ ಪ್ರಕಟಣೆಗೆ ಮಾತ್ರ ಮುದ್ರಣಯಂತ್ರಗಳ ಬಳಕೆಯಾದವು. ೧೬೧೭ರ ಹೊತ್ತಿಗೆ ಯುರೋಪಿನಲ್ಲಿ ವ್ಯವಸ್ಥಿತವಾಗಿ ನಿಯತಕಾಲಿಕೆಗಳು ಪ್ರಕಟವಾಗುತ್ತಿದ್ದವು. ರಾಜಕೀಯ ಅಸ್ಥಿರತೆಗಳಿಂದಾಗಿ ಭಾರತದಲ್ಲಿ ಮುದ್ರಣ ತಂತ್ರಜ್ಞಾನ ಲಭ್ಯವಿದ್ದರೂ, ಪತ್ರಿಕೆಗಳು ಪ್ರಕಟವಾಗುವುದು ಬಹು ತಡವಾಯಿತು. ೧೭೦೨ರಲ್ಲಿ ಆಂಗ್ಲ ಭಾಷೆಯ ಮೊದಲ ದೈನಿಕ ಲಂಡನ್ನಿನಲ್ಲಿ ಪ್ರಕಟಣೆ ಆರಂಭಿಸಿತು.
ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಕಲ್ಕತ್ತೆಯನ್ನು ಕೇಂದ್ರವನ್ನಾಗಿರಿಸಿ, ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದರು. ಇಂಗ್ಲೀಷ್ ಮಾತನಾಡುವವರ ಸಂಖ್ಯೆ ಕ್ರಮೇಣ ಹೆಚ್ಚಿತು. ವ್ಯಾಪಾರ ವಹಿವಾಟುಗಳು ವೃದ್ಧಿಸಿದವು. ಕಲ್ಕತ್ತಾ ನಗರ ಯುರೋಪಿಯನ್ನರ ವ್ಯವಹಾರಗಳಿಂದ ಹೊಸ ಕಳೆ ಪಡೆತು. ಕಂಪನಿ ಅಧಿಕಾರ ವರ್ಗ ಬಿಟ್ಟರೆ, ಉಳಿದವರಿಗೆ ಅಧಿಕೃತ ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ವ್ಯಾಪಾರಸ್ಥರಿಗೆ, ದಲ್ಲಾಳಿಗಳಿಗೆ ಹಡಗಿನ ಏಜೆಂಟರುಗಳಿಗೆ ಸಮರ್ಪಕ ಮಾಹಿತಿ ಒದಗಿಸಲು ಆಧುನಿಕ ಮಾಧ್ಯಮದ ಅವಶ್ಯಕತೆತ್ತು. ಬೀದಿ ಬೀದಿಗಳಲ್ಲಿ ನಿಂತು, ಸುದ್ದಿ ಸಮಾಚಾರ ಹಾಗೂ ಇತರೆ ಮಾಹಿತಿಗಳನ್ನು ತಿಳಿಸುವ ಇಲ್ಲವೆ ಕರಪತ್ರ ಹಂಚುವುದು ಆಧುನಿಕ ಶೈಲಿಗೆ ಒಗ್ಗುವುದಿಲ್ಲ ಎಂದು ಮನಗಂಡ ಜೆಮ್ಸ್ ಅಗಸ್ಟಸ್ ಹಿಕ್ಕಿ, ಈ ಊರಿಗೆ ಯುರೋಪಿನಲ್ಲಿ ಇರುವಂತೆ ಪತ್ರಿಕೆಯ ಅವಶ್ಯಕತೆ ಇದೆ ಎಂದು ಮನದಟ್ಟು ಮಾಡಿಕೊಂಡನು.
ಕಡಲ ವ್ಯಾಪಾರದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಹಿಕ್ಕಿ, ಕೆಲಕಾಲ ಕಂಪನಿಯ ಮುದ್ರಕನಾಗಿ ಕೆಲಸ ಮಾಡಿದ. ಈ ಅನುಭವದ ಮೇಲೆ ಪತ್ರಿಕೆಯನ್ನು ಹೊರ ತರಲು ನಿರ್ಧರಿಸಿದ. "ಹಿಕ್ಕೀಸ್ ಬೆಂಗಾಲ್ ಗೆಜೆಟ್" ಆರ್ "ಕಲ್ಕತ್ತಾ ಜನರಲ್ ಅಡ್ವರ್ಟೈಸರ್" ಹೆಸರಿನ ಎರಡು ಪುಟಗಳ ಸಾಪ್ತಾಹಿಕ ೨೯ ಜನವರಿ ೧೭೮೦ರ ಶನಿವಾರ ಕಲ್ಕತ್ತಾ ನಗರದಲ್ಲಿ ಹೊರಬಂದಾಗ ಏಯಾ ಉಪಖಂಡದಲ್ಲಿ ಒಂದು ದಾಖಲೆಯೆನಿಸಿತು.
ಹಿಕ್ಕಿ ಹೆಚ್ಚು ಓದಿದವನಲ್ಲ. ಪತ್ರಿಕೋದ್ಯಮದ ಹಿನ್ನಲೆ ಹೊಂದಿದವನೂ ಅಲ್ಲ. ಅವನ ಅದಮ್ಯ ಚೈತನ್ಯವೆಂದರೆ ಹೋರಾಟದ ಮನೋಭಾವ. ಎರಡು ಸಾವಿರ ರುಪಾಯಿಗಳ ಬಂಡವಾಳದೊಡನೆ ಆರಂಭವಾದ ಈ ಪತ್ರಿಕೆಯ ಉದ್ದೇಶ "ಯಾರ ಪ್ರಭಾವಕ್ಕೂ ಒಳಗಾಗದ ಎಲ್ಲ ವರ್ಗದವರಿಗೆ ಮುಕ್ತವಾದ ರಾಜಕೀಯ ಹಾಗೂ ವಾಣಿಜ್ಯ ಸಾಪ್ತಾಹಿಕ".
ಈ ಪತ್ರಿಕೆಯ ಉದ್ದೇಶ - ಸುಲಭವಾದ ರೀತಿಯಲ್ಲಿ ಎಲ್ಲರಿಗೂ ಮಾಹಿತಿಯನ್ನು ತಲಪಿಸುವುದು. ಅದು ಉಪಯುಕ್ತವಾಗಿರಬಹುದು ಇಲ್ಲವೆ ಮನೋರಂಜಿತವಾಗಿರಬಹುದು. ಸಾಹಸಿಗರ ವ್ಯಾಪಾರಿ ಪ್ರಯತ್ನಗಳನ್ನು ಉತ್ತೇಜಿಸುವುದು. ಈ ಉದ್ದೇಶಗಳಿಂದ ಹೆಜ್ಜೆ ಇಟ್ಟಿರುವ ಈ ಪ್ರಕಟಣೆ, ಕೈ ಬರಹಗಳು ಇಲ್ಲವೆ ವಿರಾಕಾರರಿಂದ (ಜವಾನರು) ಹೊರಬರುತ್ತಿರುವ ಅಸಂಖ್ಯ ನೋಟಿಸುಗಳು ಮತ್ತು ಜಾಹಿರಾತುಗಳನ್ನು ನಿಮ್ಮ ತಕ್ಷಣದ ಗಮನಕ್ಕೆ ತರುವುದೇ ಆಗಿದೆ-ಎಂದು ಸ್ಪಷ್ಟಪಡಿಸಿದ.
ರೋಚಕವಾದ ಸುದ್ದಿಗಳು ಈ ಪತ್ರಿಕೆಯಲ್ಲಿರಲಿಲ್ಲ. ಸುದ್ದಿ ಸಂಗ್ರಹ ದೊಡ್ಡ ಸವಾಲಾಗಿತ್ತು. ಇಂಗ್ಲೆಂಡಿನಿಂದ ಬಂದ ಪತ್ರಿಕೆಗಳ ಬಹುಪಾಲು ಸುದ್ದಿಗಳು ಇಲ್ಲಿ ಮರುಮುದ್ರಣಗೊಳ್ಳುತ್ತಿದ್ದವು. ಆರೆಂಟು ತಿಂಗಳ ಹಿಂದೆ ಇಂಗ್ಲೆಂಡಿನ ಹೌಸ್ ಆಫ್ ಕಾಮರ್ಸ್‌ನಲ್ಲಿ ನಡೆದ ಚರ್ಚೆಗಳು, ಸ್ಥಳೀಯರ ಆಸಕ್ತಿ ಕುದುರಿಸುವ ಸಂಪಾದಕೀಯಗಳು, ಓದುಗರ ಪತ್ರಗಳು, ಸರ್ಕಾರಿ ನೋಟಿಸುಗಳು, ಸಾಮಾಜಿಕ ಚಟುವಟಿಕೆಗಳು, ವ್ಯಾಪಾರ ಹಾಗೂ ವೈಯಕ್ತಿಕ ಜಾಹಿರಾತುಗಳು, ಕವನಗಳು ಹಾಗೂ ಯುರೋಪು ಕುರಿತಾದ ವಾರ್ತಾಪತ್ರಗಳು ಪ್ರಕಟಗೊಳ್ಳುತ್ತಿದ್ದವು.
ಮೂರು ಕಾಲಂಗಳಲ್ಲಿ ಪ್ರಕಟವಾಗುತ್ತಿದ್ದ ಈ ಸಾಪ್ತಾಹಿಕದಲ್ಲಿ ಜಾಹಿರಾತುಗಳು ಬಹು ಆಕರ್ಷಕವಾಗಿದ್ದವು. ಆ ಕಾಲದ ಸಾಮಾಜಿಕ ಸ್ಥಿತಿಗಳಿಗೆ ಹಿಡಿದ ಕನ್ನಡಿಯಂತಿದ್ದವು. ಗುಲಾಮರ ಮಾರಾಟ, ಕೌಟುಂಬಿಕ ಕಲಹಗಳು, ಶಿಶುಮರಣ, ಶೈಕ್ಷಣಿಕ ಸಮಸೈಗಳು ಹಾಗು ಜನತೆಯಲ್ಲಿನ ಕೆಳಮಟ್ಟದ ನೈತಿಕತೆಗಳಿಗೆ ಈ ಜಾಹಿರಾತುಗಳು ಕೈಗನ್ನಡಿಯಂತಿದ್ದವು. ಯುರೋಪಿನಿಂದ ಬರುತ್ತಿದ್ದ ನವನವೀನ ವಸ್ತುಗಳ ಮಾರಾಟಕ್ಕೆ ಈ ಪತ್ರಿಕೆ ಪ್ರಧಾನವಾದ ಮಾಧ್ಯಮವಾಯಿತು. ಯುರೋಪಿಯನ್ನರ ಪಾರ್ಟಿಗಳಲ್ಲಿ ಕಳವಾಗುತ್ತಿದ್ದ ಶೂಗಳು, ಶಾಲುಗಳು, ಪಿಸ್ಟಲ್ ಇಲ್ಲವೆ ಕತ್ತಿಗಳ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ಮರಳಿಸುವ ಮನವಿಗಳು ಪ್ರಕಟವಾಗುತ್ತಿದ್ದವು. ಪ್ರೇಮಪ್ರಕರಣಗಳು, ವಿವಾಹ ಪ್ರಕಟಣೆ, ಮುಂದಾಗಬಹುದಾದ ನಿಶ್ಚಿತಾರ್ಥಗಳು ಈ ಜಾಹಿರಾತು ಅಂಕಣಗಳಲ್ಲಿ ವಿಪುಲವಾಗಿ ಪ್ರಕಟಗೊಂಡವು.
ಪತ್ರಿಕೆಯೊಂದಕ್ಕೆ ಇರಬೇಕಾದ ಯಾವುದೇ ಉನ್ನತ ಧ್ಯೆಯಗಳನ್ನು ಹಿಕ್ಕಿ ಹೊಂದಿರಲಿಲ್ಲ. ತನ್ನ ದೇಶಿಯರಾದ ಬ್ರಿಟಿಷರ ಬಗ್ಗೆ ಅವನಿಗೆ ಅಸಹನೆ ಇತ್ತು. ಅವರ ಖಾಸಗಿ ಬದುಕನ್ನು ಕುರಿತು ಸದಾ ಟೀಕೆಗಳನ್ನು ಬರೆದು ಮಾನ ಹರಾಜು ಹಾಕುತ್ತಿದ್ದ. ಈಸ್ಟ್ ಇಂಡಿಯಾ ಕಂಪನಿಯ ನೌಕರರು ಈತನ ಕೆಂಗಣ್ಣಿಗೆ ಸದಾ ಗುರಿಯಾಗಿದ್ದರು. ಕಲ್ಕತ್ತೆಯ ಬ್ರಿಟಿಷ್ ಮದ್ಯಮ ವರ್ಗದವರನ್ನು ಪ್ರಧಾನವಾಗಿ ಗಮನದಲ್ಲಿರಿಸಿಕೊಂಡು, ಈತನ ಟೀಕಾಪ್ರಹಾರ ವ್ಯಾಪಕವಾಗಿರುತ್ತಿತ್ತು. ವರ್ಣರಂಜಿತ ಊಹಾಪೂಹ ಸುದ್ದಿಗಳು ಹೆಚ್ಚು ಜಾಗೆಯನ್ನು ಅತಿಕ್ರಮಿಸಿದವು. ಅಂದಿನ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್‌ನನ್ನು ಸಹ ಈತನು ಬಿಡಲಿಲ್ಲ. ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿನ ದೊಷಗಳಿಗೆ ಈ ಪತ್ರಿಕೆ ಕೈಗನ್ನಡಿಯಾತು. ಕಂಪನಿಯ ಆಡಳಿತ ಮಂಡಳಿಯನ್ನು ಕಟುವಾಗಿ ಟೀಕಿಸುತ್ತಿದ್ದ.
ಈ ಸಾಪ್ತಾಹಿಕ ಕಲ್ಕತ್ತೆಯ ವ್ಯಾಪಾರಸ್ಥರಿಗೆ ಹಾಗೂ ಅಧಿಕಾರೇತರ ಬ್ರಿಟಿಷರಿಗೆ ಉಪಯುಕ್ತ ಸಂಪರ್ಕ ಮಾಧ್ಯಮವಾತು. ಅದೇ ವರ್ಷದ ನವಂಬರ ತಿಂಗಳಿನಲ್ಲಿ "ಇಂಡಿಯನ್ ಗೆಜೆಟ್" ಎಂಬ ಇನ್ನೊಂದು ಸಾಪ್ತಾಹಿಕ ಆರಂಭಗೊಂಡ ನಂತರ ಹಿಕ್ಕಿಯ ಸಹನೆ ಮಿತಿಮೀರಿತು. ಈ ವಿರೋಧಿ ಪತ್ರಿಕೆಯನ್ನು ಬೆಂಬಲಿಸುತ್ತಿದ್ದ ಎಲ್ಲರ ಮೇಲೆ ದೊಷಣೆ ಹೊರಿಸಿದ. ಗವರ್ನರ್ ಜನರಲ್ ಅವರ ಬೆಂಬಲ ಈ ಪತ್ರಿಕೆಗೆ ಇದೆ ಎಂದು ತಿಳಿದ ಹಿಕ್ಕಿ, ಮನಸೋಇಚ್ಚೆ ಅವನನ್ನು ತೆಗಳಿದ. ಗವರ್ನರ್ ಅವರ ಪತ್ನಿ ಮೂಲಕ, ವಿರೋಧಿ ಪತ್ರಿಕೆಗೆ ಹೆಚ್ಚುವರಿ ಅಂಚೆ ಸೌಲಭ್ಯ ನೀಡಲಾಗಿದೆ ಎಂದು ಆರೋಪಿಸಿದ.
ಆರಂಭದಿಂದಲೂ ಈ ಪ್ರಕಟಣೆಯನ್ನು ಇಚ್ಛಿಸದ ಕಂಪನಿ ಅಧಿಕಾರಿಗಳು ತಮ್ಮ ಸಹನೆ ಕಳೆದುಕೊಂಡರು. ಇದುವರೆಗೆ ಈ ಪತ್ರಿಕೆಯ ಟೀಕಾವಳಿಗಳನ್ನು ಸಹಿಸಿಕೊಂಡಿದ್ದ ವಾರನ್ ಹೇಸ್ಟಿಂಗ್, ಆಜ್ಞೆಯೊಂದನ್ನು ಹೊರಡಿಸಿದ. ಈ ಪತ್ರಿಕೆಯನ್ನು ಅಂಚೆ ಇಲಾಖೆ ಮೂಲಕ ವಿತರಿಸಬಾರದೆಂದು ಸೂಚಿಸಿದ. ಸುಮಾರು ೫೦೦ ರೂಗಳ ಹೆಚ್ಚುವರಿ ಖರ್ಚಿನಲ್ಲಿ, ಸೇವಕರ ಮೂಲಕ ಪತ್ರಿಕೆಗಳನ್ನು ಹಿಕ್ಕಿ ವಿತರಿಸಲಾರಂಭಿಸಿದ. ಈ ಅಧಿಕಾರವರ್ಗದವರ ಮುಂದೆ ತಲೆ ಬಗ್ಗಿಸಲಾರೆ ಎಂದು ಪ್ರಕಟಿಸಿದ ಹಿಕ್ಕಿ, ತನ್ನ ಟೀಕಾಪ್ರಹಾರಗಳನ್ನು ತೀರ್ವಗೊಳಿಸಿದ. ಸ್ವೀಡನ್ ಮೂಲದ ಧರ್ಮ ಪ್ರಚಾರಕ ಜಾನ್ ಜಕಾರಯ್ಯ ಕಿರೆಂಡಾರ್ ವಿರುದ್ಧ ಹಿಕ್ಕಿ ಕೆಂಡಾಮಂಡಲನಾದ. ಇಲ್ಲಸಲ್ಲದ ಆರೋಪಗಳನ್ನು ಮಾಡಿದ. ಹಿಕ್ಕಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾವೆ ಹೂಡಲಾತು. ಹಿಕ್ಕಿಗೆ ೫೦೦ ರೂ ದಂಡ ಹಾಗೂ ನಾಲ್ಕು ತಿಂಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸಲಾಯಿತು.
ಇದು ಹಿಕ್ಕಿಯನ್ನು ಮತ್ತಷ್ಟು ಕೆರಳಿಸಿತು. ಗವರ್ನರ್ ಹೇಸ್ಟಿಂಗ್, ಅವರ ಪತ್ನಿ ಹಾಗೂ ಮುಖ್ಯ ನ್ಯಾಯಾಧೀಶರ ಮೇಲೆ ಟೀಕಾಪ್ರಹಾರ ಮತ್ತಷ್ಟು ಹೆಚ್ಚಾದವು. ಸೇತುವೆಗಳ ಉಸ್ತುವಾರಿಗೆ ನೀಡಲಾದ ಕಂಟ್ರಾಕ್ಟ ಅನ್ನು ನ್ಯಾಯಾಧೀಶರ ಸಂಬಂಧಿಗೆ ನೀಡಲಾಗಿದೆ ಎಂದು ಹಿಕ್ಕಿ ಆರೋಪಿಸಿದ. ೧೭೮೧ರ ಜೂನನಲ್ಲಿ ಹಿಕ್ಕಿಯನ್ನು ಪುನಃ ದಸ್ತಗಿರಿ ಮಾಡಲಾತು. ಅಂದಿನ ದಿನಗಳಲ್ಲಿ ಹಿಕ್ಕಿಂದ ೮೦ ಸಾವಿರ ಜಾಮೀನು ಹಣ ನೀಡುವಂತೆ ಸುಪ್ರೀಂಕೋರ್ಟ ಆದೇಶಿಸಿತು. ಹಣ ನೀಡಲಾಗದ ಹಿಕ್ಕಿ ಸೆರೆಗೆ ಹೋದ. ಅಲ್ಲಿಂದಲೂ ನಿಂದನಾತ್ಮಕ ಲೇಖನಗಳನ್ನು ಬರೆದ. ಜನವರಿ ೧೯೮೨ರ ಹೊತ್ತಿಗೆ ಹಿಕ್ಕಿಯ ಮೇಲೆ ಎರಡು ಪ್ರಮುಖ ಮೊಕದ್ದಮೆಗಳು ದಾಖಲಾದವು. ಪನಃ ಒಂದು ವರ್ಷದ ಜೈಲುವಾಸವನ್ನು ಹಿಕ್ಕಿಗೆ ವಿಧಿಸಲಾಯಿತು.
ಇಂಗ್ಲೆಂಡಿನಲ್ಲಿರುವಂತೆ, ತನಗೂ ಸಾಂವಿಧಾನಿಕ ಹಕ್ಕುಗಳಿವೆ ಎಂದು ವಾದಿಸಿದ ಹಿಕ್ಕಿ, ಅಂದಿನ ಬ್ರಿಟಿಷರು ಹಾಗೂ ಭಾರತೀಯರಲ್ಲಿ ಸಂಚಲನ ಮೂಡಿಸಿದ. ವಾರಣಾಸಿ ಹಾಗೂ ಅವದಗಳಲ್ಲಿನ ಬೆಳವಣಿಗೆಗಳು ಕಂಪನಿ ಸರ್ಕಾರವನ್ನು ಇರಸು ಮುರುಸು ಮಾಡಿದ್ದವು. ಹಿಕ್ಕಿಯ ವಿಡಂಬನೆಗಳು ಆಡಳಿತಗಾರರಲ್ಲಿ ಇನ್ನಷ್ಟು ಕೋಪ ಹೆಚ್ಚಿಸಿದವು. ಮಾರ್ಚ ೧೭೮೨ರ ಹೊತ್ತಿಗೆ ಆತನ ಮೇಲೆ ನಾಲ್ಕು ಹೊಸ ಮೊಕದ್ದಮೆಗಳನ್ನು ಸರ್ಕಾರ ಹೂಡಿತ್ತು ಅವನ ಮುದ್ರಾಣಲಯಾದ ಮೇಲೆ ದಾಳಿ ಮಾಡಿ ಅಚ್ಚು ಮೊಳೆಗಳನ್ನು ಸರಕಾರ ತನ್ನ ಸ್ವಾದೀನಕ್ಕೆ ತೆಗೆದುಕೊಂಡಿತು. ಇದರಿಂದ ಹಿಕ್ಕಿ ಅಸಹಾಯಕನಾದ. ಆತನ ಹೋರಾಟಕ್ಕೆ ಅಂತಿಮ ತೆರೆಬಿತ್ತು.
ಹಿಕ್ಕಿಯ ಪತ್ರಿಕೆ ಆದರ್ಶವಾದ ಪ್ರಕಟಣೆಯಲ್ಲದಿದ್ದರೂ, ಭಾರತದ ಇತಿಹಾಸದಲ್ಲಿ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾತು. ಕಂಪನಿ ಅಧಿಕಾರಿಗಳೊಡನೆ ಹೊಂದಾಣಿಕೆ ಮಾಡಿಕೊಂಡು, ಹಿಕ್ಕಿ ಅಪಾರ ಹಣ, ಆಸ್ತಿಗಳನ್ನು ಮಾಡಬಹುದಿತ್ತು. ಆದರೆ, ಗುಲಾಮಗಿರಿಗೆ ನನ್ನನ್ನು ಮಾರಿಕೊಳ್ಳಲಾರೆ ಎಂದು ಪ್ರತಿಪಾದಿಸಿದ. ಈತನ ಪ್ರಕಟಣೆ, ದೇಶದ ಅಂದಿನ ಮುಖ್ಯ ಸ್ಥಾನಗಳಾದ ಮುಂಬು ಹಾಗೂ ಮದರಾಸುಗಳಲ್ಲಿ ಪತ್ರಿಕೆಗಳ ಆರಂಭಕ್ಕೆ ಕಾರಣವಾಯಿತು. ಕಲ್ಕತ್ತಾ ನಗರದಲ್ಲಿ ೧೭೮೫ರ ಹೊತ್ತಿಗೆ ಐದು ಪತ್ರಿಕೆಗಳು ಹೊರಬಂದವು. ಪತ್ರಿಕೆಗಳ ಪ್ರಭಾವವನ್ನು ಹಿಕ್ಕಿ ಭಾರತೀಯರಿಗೆ ಪರಿಚಯಿಸಿದ. ಭಾರತದಲ್ಲಿ ನೆಲೆಸಿದ್ದ ಆಂಗ್ಲರೂ ಕೂಡ, ಪತ್ರಿಕೆಯೊಂದು ಹೇಗೆ ಸಾರ್ವಜನಿಕ ವೇದಿಕೆಯಾಗಬಲ್ಲದು ಎಂಬುದನ್ನು ಮನಗಂಡರು. ರಾಜಕೀಯ ಬೆಳವಣಿಗೆಗಳನ್ನು ಸುದ್ದಿಯಾಗಿ ಹಿಕ್ಕಿ ಪರಿವರ್ತಿಸಿದ. ಭಾರತೀಯ ಪತ್ರಿಕೆಗಳಲ್ಲಿ ರಾಜಕೀಯ ಸುದ್ದಿಯ ಪ್ರಾಧಾನ್ಯತೆ ಮೊದಲ ಪತ್ರಿಕೆಂದಲೇ ಆರಂಭವಾಯಿತು ಎಂಬುದು ಗಮನಾರ್ಹ.
ಹಿಕ್ಕಿಗೆ ಪ್ರತಿಭೆದ್ದರೂ, ವಿದ್ಯಾವಂತಿಕೆ ಇರಲಿಲ್ಲ. ಆತನ ಸಿಟ್ಟಿನ ಮನೋಭಾವ ಹಾಗೂ ಪರರ ಬೆಳವಣಿಗೆಗಳನ್ನು ಸಹಿಸದ ಕೀಳು ಸ್ವಭಾವ ಆತನಿಗೆ ಮಾರಕವಾಯಿತು. ಒಂದು ರೀತಿಯಲ್ಲಿ ಆತ ನತದೃಷ್ಷ. ಯಾವ ಕ್ಷೇತ್ರದಲ್ಲಿಯೂ ಆತ ಯಶ ಕಾಣಲಿಲ್ಲ. ಆತನ ಕೊನೆಯ ದಿನಗಳ ಬಗ್ಗೆ ಯಾವುದೇ ಮಾಹಿತಿಲ್ಲ. ಆತನ ಭಾವಚಿತ್ರವೂ ಇಲ್ಲ. ಬಾಲ್ಯ ವಿವರಗಳೂ ಲಭ್ಯವಿಲ್ಲ. ಲಂಡನ್ನಿನ ಪತ್ರಿಕಾ ಮ್ಯೂಸಿಯಂ ಹಾಗೂ ಕೊಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯದಲ್ಲಿರುವ ಹಿಕ್ಕಿ ಗೆಜೆಟ್‌ನ ಹಲವು ಪ್ರತಿಗಳು ಮಾತ್ರ ಆತನ ವಿರೋಚಿತ ಪತ್ರಿಕಾವೃತ್ತಿಯ ನೆನಪುಗಳು.
೨೩೧ ವರ್ಷಗಳ ಭವ್ಯ ಪರಂಪರೆಯ ಭಾರತೀಯ ಪತ್ರಿಕಾರಂಗದ ಐತಿಹಾಸಿಕ ದಿನವಾದ ಇಂದು ನಾವು ಹಿಕ್ಕಿಯನ್ನು ನೆನೆಯುವುದು ಔಚಿತ್ಯಪೂರ್ಣ. ಅಂದಿನ ಸಾಮಾಜಿಕ - ರಾಜಕೀಯ ಹಿನ್ನಲೆಯಲ್ಲಿ ಹಿಕ್ಕಿಯ ಸಾಧನೆ ಗಮನಾರ್ಹ. ೧೨೦ ಭಾಷೆ-ಲಿಪಿಗಳಲ್ಲಿ ಹೊರಬರುತ್ತಿರುವ ೬೭ ಸಾವಿರ ವೈವಿಧ್ಯಮಯ ಭಾರತೀಯ ಪ್ರಕಟಣೆಗಳ ಆರಂಭದ ಹರಿಕಾರನಿಗೆ ಇದೊಂದು ಗೌರವಪೂರ್ಣ ನೆನಪು.

ಡಾ. ಎ. ಎಸ್. ಬಾಲಸುಬ್ರಹ್ಮಣ್ಯ
ಪ್ರಾಧ್ಯಾಪಕರು ಪತ್ರಿಕೋದ್ಯಮ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ-೫೮೦೦೦೩
ಮೊಬೈಲ್: ೯೪೪೮೩ ೭೧೮೩೧


Advertisement

0 comments:

Post a Comment

 
Top