PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. ೦೭ : ವೈದ್ಯರು ಅಥವಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವವರಿಗೆ ಇನ್ನು ಕಠಿಣ ಶಿಕ್ಷೆ ಕಾದಿದೆ. ವೈದ್ಯೋಪಚಾರ ನಿರತರಾಗಿರುವ ವೈದ್ಯರು, ಶುಶ್ರೂಷಕರು, ಅಥವಾ ಅರೆ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರಿಗೆ ೦೩ ವರ್ಷಗಳ ಅವಧಿಯ ಕಾರಾಗೃಹ ವಾಸ ಮತ್ತು ೫೦೦೦೦ ರೂ.ಗಳ ದಂಡ ವಿಧಿಸುವ ನೂತನ ಕಾಯ್ದೆಯನ್ನು ೨೦೦೯ ರಿಂದ ಅನ್ವಯವಾಗುವಂತೆ ಸರ್ಕಾರ ಜಾರಿಗೊಳಿಸಿದೆ.
ಸರ್ಕಾರಿ ಅಥವಾ ಸ್ಥಳೀಯ ಸಂಸ್ಥೆಗಳ ನಿಯಂತ್ರಣದಲ್ಲಿರುವ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ಪ್ರಸೂತಿ ಗೃಹ ಅಥವಾ ಆರೋಗ್ಯ ಧಾಮ ಇವುಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ನೋಂದಾತ ಶುಶ್ರೂಷಕಿಯರು, ವೈದ್ಯ "ದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ವೈದ್ಯೋಪಚಾರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅರೆ ವೈದ್ಯಕೀಯ ಕಾರ್ಯಕರ್ತರ ಮೇಲೆ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಹಿಂಸಾಚಾರವೆಸಗುವ ಅಥವಾ ಅದಕ್ಕೆ ಪ್ರಯತ್ನಿಸುವ ಅಥವಾ ಅದಕ್ಕೆ ಪ್ರಚೋದಿಸುವ ಯಾವುದೇ ವ್ಯಕ್ತಿ ಹಲ್ಲೆ ಮಾಡುವುದು, ಪ್ರಾಣಾಪಾಯ ಉಂಟುಮಾಡುವುದು, ಬೆದರಿಕೆ ಒಡ್ಡುವುದು ಅಥವಾ ವೈದ್ಯ ಕಾರ್ಯಕ್ಕೆ ಅಡ್ಡಿಪಡಿಸುವುದು ಅಥವಾ ವೈದ್ಯೋಪಚಾರ ಸಂಸ್ಥೆಯಲ್ಲಿನ ಆಸ್ತಿಗೆ ಹಾನಿಯುಂಟು ಮಾಡುವುದನ್ನು ನೂತನ ಕಾಯ್ದೆಯನ್ವಯ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇಂತಹ ಕೃತ್ಯವೆಸಗುವ ಯಾವುದೇ ವ್ಯಕ್ತಿಗೆ ಜಾಮೀನು ನೀಡಲು ಅವಕಾಶ ಇರುವುದಿಲ್ಲ. ಅಲ್ಲದೆ ಅಪರಾಧ ಸಾಬೀತುಗೊಂಡಲ್ಲಿ ಅಂತಹ ವ್ಯಕ್ತಿಗೆ ೦೩ ವರ್ಷಗಳ ಕಾರಾಗೃಹ ವಾಸ ಮತ್ತು ೫೦೦೦೦ ರೂ.ಗಳವರೆಗೆ ದಂಡ ವಿಧಿಸಲಾಗುವುದು. ಅಲ್ಲದೆ ಆಸ್ತಿಗೆ ಉಂಟಾದ ನಷ್ಟ ಮತ್ತು ಹಾನಿಗೊಳಗಾದ ವೈದ್ಯಕೀಯ ಸಲಕರಣೆಯ ಖರೀದಿ ಬೆಲೆಯ ದುಪ್ಪಟ್ಟು ಮೊತ್ತದ ದಂಡವನ್ನು ಸಂದಾಯ ಮಾಡಬೇಕಾಗುತ್ತದೆ. ಒಂದು ವೇಳೆ ದಂಡದ ಮೊತ್ತವನ್ನು ಸಂದಾಯ ಮಾಡದಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಅಧಿನಿಯಮ ಅಡಿ ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಅಧಿನಿಯಮಕ್ಕೆ ರಾಜ್ಯದ ರಾಜ್ಯಪಾಲರು ದಿ: ೨೬-೦೨-೨೦೦೯ ರಂದು ಅನುಮೋದನೆ ನೀಡಿದ್ದು, ಈ ಕಾಯ್ದೆಯನ್ನು ದಿ: ೦೨-೦೩-೨೦೦೯ ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

0 comments:

Post a Comment

 
Top