ಕರ್ನಾಟಕ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದ ದಿರುವುದಕ್ಕೆ ರಾಜ್ಯದ ಜನರ ತರಲೆ ಮನಸ್ಥಿತಿಯೇ ಕಾರಣ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಆರೋಪಿಸಿದ್ದಾರೆ. ‘ಶ್ರಿ ಆಸರೆ ಫೌಂಡೇಶನ್’ ಹೊರ ತಂದಿರುವ 2011ನೆ ಸಾಲಿನ ದಿನ ಚರಿಯನ್ನು ಇಂದಿಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಅಭಿವೃದ್ಧಿಯಲ್ಲಿ ಗುಜರಾತ್ ನಂ.1 ಸ್ಥಾನ ಪಡೆದಿರುವುದಕ್ಕೆ ಆ ರಾಜ್ಯದ ಜನತೆ ಅಲ್ಲಿನ ಸರಕಾರಕ್ಕೆ ನೀಡುತ್ತಿರುವ ಬೆಂಬಲ ಮತ್ತು ಸಹಕಾರ ಕಾರಣ. ಆದರೆ ಕರ್ನಾಟಕದ ಜನತೆ ಅಂತಹ ಮನಸ್ಥಿತಿ ಹೊಂದಿಲ್ಲ. ಆದುದರಿಂದ ರಾಜ್ಯ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಎಂದು ಅವರು ವಿಶ್ಲೇಷಿಸಿದರು.ಬೆಲೆ ಕುಸಿತಕ್ಕೆ ಆಕ್ರೋಶ ವ್ಯಕ್ತಪಡಿಸುವ ರೈತರು ತಾವು ಬೆಳೆದ ಟೊಮೊಟೊ ಮತ್ತಿತರ ತರಕಾರಿಗಳನ್ನು ಬೀದಿಗೆ ಸುರಿದು ಪ್ರತಿಭಟನೆ ಮಾಡುತ್ತಾರೆ. ಆದರೆ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೇಳಿದರೆ 50 ಲಕ್ಷ ರೂ. ಬೇಡಿಕೆ ಮುಂದಿಡುತ್ತಾರೆ ಎಂದು ಭೈರಪ್ಪ ಪರೋಕ್ಷವಾಗಿ ರೈತರನ್ನು ತರಾಟೆಗೆ ತೆಗೆದುಕೊಂಡರು.ನ್ಯಾನೊ ಕಾರು ಉತ್ಪಾದನಾ ಘಟಕ ಪಶ್ಚಿಮ ಬಂಗಾಳದಿಂದ ಕಾಲ್ತೆಗೆದ ಸಂದರ್ಭದಲ್ಲಿ ಕರ್ನಾಟಕ ಹಾಗೂ ಗುಜರಾತ್ ಸರಕಾರಗಳೆರಡೂ ತಮ್ಮ ರಾಜ್ಯದಲ್ಲಿ ಘಟಕ ಸ್ಥಾಪಿಸುವಂತೆ ಸಂಸ್ಥೆಯ ಮುಖ್ಯಸ್ಥರಿಗೆ ಆಹ್ವಾನ ನೀಡಿದವು. ಕಾರು ಉತ್ಪಾದನಾ ಘಟಕಕ್ಕೆ ಭೂಮಿ ನೀಡುವುದಕ್ಕೆ ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಯಿತು.ಆದರೆ ಗುಜರಾತ್ ಸರಕಾರ ಕಾರು ಉತ್ಪಾದನಾ ಘಟಕ ಸ್ಥಾಪನೆಯಿಂದ ರಾಜ್ಯಕ್ಕೆ ಆಗುವ ಪ್ರಯೋಜನದ ಬಗ್ಗೆ ಸ್ಥಳೀಯರಿಗೆ ಪೂರ್ವಯೋಜಿತವಾಗಿ ಮನವರಿಕೆ ಮಾಡಿಕೊಟ್ಟಿತ್ತು. ಆದುದರಿಂದ ಆ ರಾಜ್ಯದ ಜನತೆ ಸರಕಾರದ ಪ್ರಯತ್ನಕ್ಕೆ ಬೆಂಬಲ ನೀಡಿತು. ಪರಿಣಾಮ ಅಲ್ಲಿ ನ್ಯಾನೊ ಘಟಕ ಸ್ಥಾಪನೆಯಾಯಿತು. ಒಂದು ವರ್ಷದೊಳಗಾಗಿ ಉತ್ಪಾದನೆಯೂ ಆರಂಭವಾಯಿತು ಎಂದು ವಿವರಿಸಿದ ಅವರು, ನಮ್ಮ ರಾಜ್ಯದಲ್ಲಿ ಇಂತಹ ಬೆಳವಣಿಗೆಯನ್ನು ನಿರೀಕ್ಷಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ದೇಶ ಕಂಡ ಏಕೈಕ ಉತ್ತಮ ಆಡಳಿತಗಾರ ಹಾಗೂ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದ ಭೈರಪ್ಪ, ಮೋದಿಗೆ ಪರ್ಯಾಯ ಹುಡುಕುವ ಪ್ರಯತ್ನ ಸಲ್ಲದು. ಆದುದರಿಂದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೋದಿಗೆ ಹೋಲಿಕೆ ಮಾಡಬಾರದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಪ್ರತಿಕ್ರಿಯಿಸಿದರು. ನರೇಂದ್ರಮೋದಿ ಮತ್ತು ಗುಜರಾತ್ ಅನುಕ್ರಮವಾಗಿ ಮಾದರಿ ಮುಖ್ಯಮಂತ್ರಿ ಹಾಗೂ ರಾಜ್ಯವಾಗುವುದಕ್ಕೆ ಅಲ್ಲಿನ ಜನರು ಆ ಸರಕಾರಕ್ಕೆ ನೀಡಿದ ಸಹಕಾರವೇ ಕಾರಣವಾಗಿದ್ದು, ನಮ್ಮ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದರು. ಭೂಕಬಳಿಕೆ ಮತ್ತು ಭ್ರಷ್ಟಾಚಾರ ರಾಜ್ಯಕ್ಕೆ ಹೊಸದಲ್ಲ. ಅದು ಹಿಂದಿನಿಂದಲೂ ಇದ್ದು, ಪ್ರಸ್ತುತ ಬಿಜೆಪಿ ಸರಕಾರದ ಅವಧಿಯಲ್ಲೂ ಮುಂದುವರಿದಿದೆ ಎಂದ ಭೈರಪ್ಪ, ಒಬ್ಬ ವ್ಯಕ್ತಿಯ ಮೇಲಿನ ಅಭಿಮಾನ ಅಥವಾ ಒಂದು ಪಕ್ಷದ ಮೇಲಿನ ಅಸಮಾಧಾನ ತನ್ನ ಈ ಅಭಿಪ್ರಾಯಕ್ಕೆ ಕಾರಣವಲ್ಲ ಎಂದು ಈ ಸಂದರ್ಭದಲ್ಲಿ ಸ್ವಯಂಪ್ರೇರಿತ ಸ್ಪಷ್ಟನೆ ನೀಡಿದರು.
ಭಾರತದಲ್ಲಿ ಕಪ್ಪುಹಣದ ಸಂಸ್ಕೃತಿಗೆ ನೆಹರೂ ಮತ್ತು ಇಂದಿರಾಗಾಂಧಿ ಅಡಿಪಾಯ ಹಾಕಿಕೊಟ್ಟರು. ದೇಶವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸಲುವಾಗಿ ಅವರು ರೂಪಿಸಿದ್ದ ಕಮ್ಯುನಿಸ್ಟ್, ಆರ್ಥಿಕ ನೀತಿಗಳು ರಾಷ್ಟ್ರದ ಇಂದಿನ ಸಮಸ್ಯೆಗಳಿಗೆ ಕಾರಣ ಎಂದು ಅವರು ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೃಪೆ : ವಾರ್ತಾಭಾರತಿ
ಮುಖ್ಯವಾಗಿ ರೈತರಿಗೆ ಒಂದೇ ಸಲ ಹಣ ಕೊಡುವದರ ಬದಲು , ತಿಂಗಳು ತಿಂಗಳು ಪಿಂಚಣಿಯ ರೂಪದಲ್ಲಿ 10 ಸಾವಿರ ರೂ ಪ್ರತಿ ಎಕರೆಗೆ ನೀಡಿದಲ್ಲಿ ಯಾವ ರೈತ ಭೂಮಿ ನೀಡಲು ಒಪ್ಪುವದಿಲ್ಲ?
ReplyDelete