PLEASE LOGIN TO KANNADANET.COM FOR REGULAR NEWS-UPDATES



ಈ ಜಾಕಿಗೆ ಹೇಗಾದರೂ ಹಣ ಸಂಪಾದನೆ ಮಾಡಿ ಮನೆ ಮೇಲೆ ಹಾರಾಡೋ "ಮಾನದಲ್ಲಿ ಪ್ರಯಾಣ ಮಾಡೋ ಆಸೆ. ಆದರೆ ಜೇಬಲ್ಲಿ ಒಂದು ರುಪಾನೂ ಇಲ್ಲ. ಓದಿದ್ದು ಎಂಟನೇ ಕ್ಲಾಸಾದರೂ ಇವನಿಗೆ ಗೊತ್ತಿಲ್ಲದ ಕೆಲಸಾನೇ ಇಲ್ಲ. ಅಮ್ಮನ ಗಿರಣೀಲಿ ಜೋಳ, ಗೋಧಿನಾ ಹಿಟ್ಟು ಮಾಡಿ ಚಿಲ್ಲರೆ ಕಾಸು ಸಂಪಾದನೆ ಮಾಡೋದಕ್ಕಿಂತ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಲಕ್ಷ ರುಪಾಯ ಗಳಿಸೋ ಆಸೆ. ಒಂದು ವರ್ಷದಿಂದ ಪ್ರಯತ್ನ ಮಾಡಿದರೂ ೪ * ೬ ಸೈಜಿನ ಜಾಗದ ವ್ಯಾಪಾರಾನೂ ಮಾಡಾಕಾಗಲ್ಲ. ಚಿಕ್ಕ ವಯಸ್ಸಿನಲ್ಲಿ ಗೆಳೆಯನಿಗೆ ಸಹಾಯ ಮಾಡೋಕಂತ ಅಮ್ಮನ ಹತ್ತು ರುಪಾಯಿ ಕದ್ದು ಊರು ಬಿಟ್ಟು ಓಡಿ ಹೋಗಿ ಮತ್ತೇ ಮನೆಗೆ ಬಂದಾಗ, ಅಮ್ಮ ಹೆದರಿಸೋಕೆ ಅಂತ ಹೇಳಿದ ಮಾತು "ನಿನ್ನ ಪೋಲೀಸರಿಗೆ ಹಿಡಿದು ಕೊಡ್ತಿನಿ". ಆವಾಗಿನಿಂದ ಜಾಕಿಗೂ ಪೋಲೀಸರಿಗೂ ಬಿಡಿಸಲಾಗದ ಬಂಧ. ಜೊತೆಗೆ ಜಾಕಿ ಮೇಲೆ ಅಮ್ಮನಿಗೆ ಅಷ್ಟಕ್ಕಷ್ಟೇ ವಿಶ್ವಾಸ. ಜೀವನದಲ್ಲಿ ಮುಂದೊಂದಿನ ತಾನು ದೊಡ್ಡ ಹೆಸರು ಮಾಡಿ ಅಮ್ಮ ಹೊಟ್ಟೆಕಿಚ್ಚು ಪಡೋ ಹಾಗೆ ಆಗ್ಬೇಕು ಅನ್ನೋದು ಜಾಕಿಯ ಕನಸುಗಳಲ್ಲೊಂದು.
ಪೋಲೀಸರಿಂದ ದೂರ ಇರೋಣ ಅನ್ಕೊಂಡಷ್ಟು ತನಗೆ ಗೊತ್ತಿಲ್ದಂಗೆ ಜಾಕಿ ಮತ್ತೆ ಮತ್ತೆ ಪೋಲೀಸರ ಕೈಗೆ ಸಿಕ್ತಾನೆ ಇರ್‍ತಾನೆ. ಅದೊಂದಿನ ಪಕ್ಕದ್ಮನೆ ಪೂಜಾರಿ ಮಗಳು (ಅರ್ಚನಾ) ಪ್ರೀತಿಸಿದ ಹುಡುಗನ ಜೊತೆ ಊರು ಬಿಡ್ತಾಳೆ. ಇದಕ್ಕೆಲ್ಲಾ ಜಾಕಿನೇ ಕಾರಣ ಅಂತ ಪೂಜಾರಿ ಜಾಕಿ ತಾಗೆ ದೂರು ಹೇಳ್ತಾನೆ. ಅಮ್ಮನಿಂದ ಪೊರಕೆ ಸೇವೆ ಮಾಡಿಸಿಕೊಂಡ ಜಾಕಿ ಅರ್ಚನಾಳನ್ನು ಹುಡಕೋಕೆ ಶುರು ಮಾಡ್ತಾನೆ. ಇಲ್ಲಿಂದ ಪ್ರಾರಂಭವಾಗೋ ಜಾಕಿ-ಪೋಲೀಸ್ ಜುಗಲ್ ಬಂಧಿ ಕೊನೆತನಕ ಮುಂದುವರೆಯುತ್ತೆ. ದಾರಿ ಮದ್ಯ ಹುಡುಗಿ ಸಿಗ್ತಾಳೆ. ಯಾರೋ ಬಲಿ ಕೊಡೋಕೆ ಕರ್‍ಕೊಂಡು ಬಂದಿದ್ದ ಹುಡುಗೀನಾ ಕಾಪಾಡಿ ಜಾಕಿ ಪ್ರೀತಿ ಬಲೆ ಬೀಸ್ತಾನೆ. ತಂಗಿಗಿಂತ ಹೆಚ್ಚಾಗಿ ನೋಡ್ಕೊತ್ತಿದ್ದ ಕುರುಡಿ ಪುಟ್ಟವ್ವಳ ಶವಾನಾ ಬೆಂಗಳೂರಿನಲ್ಲಿ ಕಂಡ ಮೇಲೆ ಅರ್ಚನಾನೂ ಇಲ್ಲೇ ಇರಬೇಕು ಅನ್ಕೊಂಡು ಜಾಕಿನೇ ಪೋಲೀಸರ ಹಿಂದೆ ಬೀಳ್ತಾನೆ. ಪೋಲೀಸರಿಗೆ ಸಣ್ಣಪುಟ್ಟ ಸಹಾಯ ಮಾಡ್ತಾ ವಿಶ್ವಾಸ ಗಳಿಸ್ತಾನೆ. ಪೋಲೀಸರ ಜೊತೆ ಸೇರಿ ಕೆಲ ಖದೀಮರಿಗೆ ಖೆಡ್ಡಾ ತೋಡಿ ಅರ್ಚನಾ ಇರೋ ಜಾಗ ಪತ್ತೆ ಮಾಡ್ತಾನೆ. ಅರ್ಚನಾ ಎಲ್ಲಿದ್ದಳು? ಆಕೆಯ ಪ್ರಿಯಕರ ಏನ್ ಕೆಲಸಾ ಮಾಡ್ತಿದ್ದ? ಮತ್ತಿತರ ವಿಷಯಗಳನ್ನು ಥೇಟರ್‌ನಲ್ಲಿ ಜಾಕಿ ನೋಡಿ ತಿಳ್ಕೋಳ್ಳಿ.

ಸಿನಿಮಾದಲ್ಲಿ ನಾಯಕನ ಹೆಸರೇ ಜಾಕಿ. ಇದನ್ನ ಬಿಟ್ಟರೆ ರೇಡಿಯೋ ಜಾಕಿಗೂ ಸಿನಿಮಾ ಕತೆಗೂ ಸಂಬಂಧ ಇಲ್ಲ. ಚಿತ್ರದ ಪ್ರತಿ ಫ್ರೇಮ್‌ನಲ್ಲಿ ಪುನೀತ್ ಕಾಣಿಸ್ಕೋತಾರೆ. ಟೈಟಲ್ ಸಾಂಗ್‌ನಲ್ಲಿ ಹರಿಕೃಷ್ಣ, ಸೂರಿ ಹಾಗೂ ಯೋಗರಾಜ್‌ಭಟ್ ಕಾಣಿಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಸುವ ಸೂಚನೆ ನೀಡುತ್ತಾರಾದರೂ ಕೊಂಚ ಮಾತ್ರ ನಿರೀಕ್ಷೆ ಹುಸಿಯಾಗೋದು ಸುಳ್ಳಲ್ಲ. ನಾಯಕಿಯ ಫ್ಲ್ಯಾಶ್‌ಬ್ಯಾಕ್ ಕತೆಗೆ ಪೂರಕವಾಗಿಲ್ಲ. ಸೂರಿ ಮತ್ತು ಭಟ್‌ರು ಬರೆದ ಸಾಲುಗಳು ಪ್ರೇಕ್ಷಕರು ಅವರ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿವೆ. ಜಾಕಿ ನೋಡುತ್ತಿದ್ದಂತೆ ಈ ಹಿಂದೆ ಪುನೀತ್ ನಟಿಸಿ, ಪ್ರೇಮ್ ನಿರ್ದೇಶಿಸಿದ್ದ ರಾಜ್ ನೆನಪಾಗುತ್ತೆ. ಡೌಟ್‌ರಾಜಾ, ಡೌವ್‌ರಾಣಿ ಎಂಬ ದುನಿಯಾ ಸಿನಿಮಾದ ಪದಪುಂಜಗಳಿಂದ ಸೂರಿ ಇನ್ನೂ ಹೊರಬಂದಿಲ್ಲ. ಸತ್ಯಹೆಗಡೆ ಛಾಯಾಗ್ರಹಣದ ಬಗ್ಗೆ ನೋ ಕಾಮೆಂಟ್ಸ್. ".ಹರಿಕೃಷ್ಣ ಸಂಗೀತದ "ಎಕ್ಕಾ ರಾಜಾ ರಾಣಿ" ಹಾಗೂ "ಶಿವ ಅಂತ ಹೋಗುತ್ತಿದ್ದೆ" ಹಾಡುಗಳು ಶಿಳ್ಳೆ, ಕೇಕೆ ಗಿಟ್ಟಿಸಿಕೊಳ್ಳುತ್ತವೆ. ನಾಯಕಿ ಭಾವನಾ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಶೋಭರಾಜ್, ರಂಗಾಯಣ ರಘು, ಸತ್ಯಜಿತ್, ಅರ್ಚನಾ, ಪೆಟ್ರೋಲ್ ಪ್ರಸನ್ನ, ರವಿಕಾಳೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ಗೆ ನಷ್ಟದ ಭಯ ಬೇಕಿಲ್ಲ. ಹಾಗಂತ ಸಾಕಷ್ಟು ಲಾಭವನ್ನೂ ನಿರೀಕ್ಷಿಸಬಾರದು ಅನ್ನೋದು ಪ್ರೇಕ್ಷಕ ಮಹಾಪ್ರಭುವಿನ ಅಭಿಪ್ರಾಯ.

-ಬಸವರಾಜ್ ಕರುಗಲ್, ಕೊಪ್ಪಳ.

Advertisement

0 comments:

Post a Comment

 
Top