PLEASE LOGIN TO KANNADANET.COM FOR REGULAR NEWS-UPDATES



ಶಬ್ದ ಶಕ್ತಿ ಸುಂದರ ಕವಿತೆಗೆ ಮುಖ್ಯ - ಡಾ.ಕೆ.ಬಿ.ಬ್ಯಾಳಿ
ಕೊಪ್ಪಳ : ನಾವು ಬಳಸುವ ಶಬ್ದಗಳು ಕವಿತೆಗೆ ಶಕ್ತಿಯನ್ನು ನೀಡುತ್ತವೆ. ಶಬ್ದ ಶಕ್ತಿಯಿಂದ ಕವಿತೆಗಳು ಸುಂದರ ರೂಪ ಪಡೆಯುತ್ತವೆ. ಕವಿತೆಗಳ ಅರ್ಥ ಇನ್ನೂ ಹೆಚ್ಚಾಗುತ್ತದೆ ಎಂದು ಹಿರಿಯ ಕವಿ ಡಾ.ಕೆ.ಬಿ.ಬ್ಯಾಳಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕವಿಸಮೂಹ,ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕವಿತೆಯನ್ನು ವಿಮರ್ಶೆ ಮಾಡಬಾರದು ಅದನ್ನು ಕವಿಯು ತನ್ನ ಭಾವನೆಗಳಿಗೆ ತಕ್ಕಂತೆ ಬರೆದಿರುತ್ತಾನೆ. ಕವಿತೆ ಹುಟ್ಟಿದ ಸಮಯ, ಸಂದರ್ಭ ಮತ್ತು ಕವಿಯ ಮನಸ್ಥಿತಿಗೆ ಅನುಗುಣವಾಗಿ ಕವನವಿರುತ್ತದೆ. ಅದನ್ನೆಲ್ಲಾ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಬಹುದಷ್ಟೆ ಎಂದರು. ಕೆಲವು ಸಲ ಈ ಕವನಗಳನ್ನು ವಿಮರ್ಶೆ ಮಾಡುವಲ್ಲಿ ವಿಮರ್ಶಕ ಸೋಲುತ್ತಾನೆ. ಕವಿತೆ ಯಾವಾಗ ಎಲ್ಲಿ ಹುಟ್ಟುತ್ತದೋ ಗೊತ್ತಿಲ್ಲ, ಹುಟ್ಟಿದ ತಕ್ಷಣ ಬರೆಯಿರಿ , ಹಿರಿಯ ಕವಿಗಳ , ಅನುಭವಿಗಳ ಸಲಹೆ ಸೂಚನೆಗಳನ್ನು ಪಾಲಿಸಿದರೆ ಸುಂದರ ಕವಿತೆ ರಚನೆ ಸಾಧ್ಯ ಎಂದರು.
ವಿಮರ್ಶೆಗೂ ಮೊದಲು ಡಾ.ಕೆ.ಬಿ.ಬ್ಯಾಳಿಯವರು ಹಾಯ್ಕುಗಳು ಮತ್ತು ರುಬಾಯಿಗಳನ್ನು ಕುರಿತು ಮಾತನಾಡಿದರು. ಹಾಯಕುಗಳ ಮೂಲ ಮತ್ತು ಅದು ಈಗ ನಡೆದು ಬರುತ್ತಿರುವ ದಾರಿಯನ್ನು ತಿಳಿಸಿದ ಅವರು, ರುಬಾಯಿಗಳ ಬಗ್ಗೆಯೂ ಮಾತನಾಡಿ ಅದರ ರಚನೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಮಾತನಾಡಿದರು.
ಈ ಸಲದ ಕವಿಸಮೂಹ ಕಾರ್‍ಯಕ್ರಮದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದ್ದು ವಿಶೇಷವಾಗಿತ್ತು.
ಎನ್.ಜಡೆಯಪ್ಪ- ಜೀವನವಲ್ಲ, ಎ.ಪಿ.ಅಂಗಡಿ-ಇಂತವರು ಇರ್ತಾರ, ವಿರೇಶ ಹುಲ್ಲೂರ-ಅಂಕಿತ, ಶಾಂತಾದೇವಿ ಹಿರೇಮಠ- ಎಲ್ಲಿಗೆ ಹೋದೆ?, ಲಕ್ಷ್ಮೀ- ಕವಿಯ ಆಸೆ, ಪುಷ್ಪಲತಾ ಏಳುಭಾವಿ- ಹಾಯ್ಕುಗಳು, ವಾಗೀಶ ಪಾಟೀಲ್-ಬೇಡಿಕೆ, ಮಹಾಂತೇಶ ಮಲ್ಲನಗೌಡರ- ಬದುಕು, ಶರಣಬಸಪ್ಪ ಅಳ್ಳಳ್ಳಿ-ಮಾಯ,ನಾಶ, ಶಿ.ಕಾ.ಬಡಿಗೇರ-ನಿರಾಸೆ, ಕಾರಣ, ಮಹೇಶ ಬಳ್ಳಾರಿ- ಬದುಕು ಜಟಕಾ ಬಂಡಿ, ಶ್ರೀನಿವಾಸ ಚಿತ್ರಗಾರ- ಕವಿ, ಕಿವಿ, ಜಿ.ಎಸ್.ಬಾರಕೇರ- ಇಟಗಿ ದೇವಾಲಯ, ಎಸ್.ಚೌಡೇಶ್- ಪೋಸ್ಟಮ್ಯಾನ್, ವೀರಣ್ಣ ಹುರಕಡ್ಲಿ- ಕೇಳುವರಾರು?, ಅಲ್ಲಮಪ್ರಭು ಬೆಟ್ಟದೂರು-ಮಠ,ಸಾರು ಚುಟುಕುಗಳು, ವೀರಣ್ಣ ವಾಲಿ- ಜೆಡ್ ಗುಡಿ, ವಿಠ್ಠಪ್ಪ ಗೋರಂಟ್ಲಿ-ಮೌನ ಮಾತಾದಾಗ, ಸಿರಾಜ್ ಬಿಸರಳ್ಳಿ- ಕನಸುಗಳು ಕವನ ವಾಚನ ಮಾಡಿದರು. ಈ ಎಲ್ಲ ಕವನಗಳ ಕುರಿತು ಡಾ.ಕೆ.ಬಿ.ಬ್ಯಾಳಿಯವರು ಮಾತನಾಡಿದರು.
ಮುಂದಿನ ವಾರದ ಕವಿಸಮಯದಲ್ಲಿ ಜಿಲ್ಲೆಯ ಪ್ರತಿಭಾವಂತ ಯುವಕವಿ ಮಹೇಶ ಬಳ್ಳಾರಿಯವರ ಕಗ್ಗತ್ತಲು ಕವನ ಸಂಕಲನ ಕುರಿತು ಸಂವಾದ ನಡೆಸಲು ತೀರ್‍ಮಾನಿಸಲಾಗಿದೆ.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top