PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಏ. : ಜನಗಣತಿಯ ಸಲುವಾಗಿ ಮನೆಯ ಬಾಗಿಲಿಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಗಣತಿದಾರರಿಗೆ ತಪ್ಪು ಮಾಹಿತಿ ನೀಡದಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಕಾರ್ಯಕ್ರಮವಾದ ಜನಗಣತಿ- ೨೦೧೧ ರ ಮೊದಲ ಹಂತದ ಕಾರ್ಯಕ್ರಮವಾದ ಮನೆ ಪಟ್ಟಿ ಮಾಡುವ ಕಾರ್ಯಕ್ಕೆ ತಮ್ಮ ನಿವಾಸದಲ್ಲಿ ಗಣತಿದಾರರಿಗೆ ಮಾಹಿತಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಂದು ಅವರು ಮಾತನಾಡುತ್ತಿದ್ದರು. ಸಾರ್ವಜನಿಕರು ಒದಗಿಸುವ ಮಾಹಿತಿಯು ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ರೂಪಿಸಲು ದಿಕ್ಸೂಚಿಯಾಗಲಿದೆ. ಆದ್ದರಿಂದ ಮಾಹಿತಿ ಸಂಗ್ರಹಿಸಲು ಮನೆಯ ಬಾಗಿಲಿಗೆ ಆಗಮಿಸುವ ಗಣತಿದಾರರಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡದೆ, ನಿಖರವಾದ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದ ಮೊದಲ ಹಂತವಾದ ಮನೆ ಪಟ್ಟಿ ಮಾಡುವ ಕಾರ್ಯ ಏ. ೧೫ ರಿಂದ ಮೇ ೩೧ ರವರೆಗೆ ನಡೆಯಲಿದೆ. ಜನಗಣತಿ ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ೧೮೧೫ ಗಣತಿದಾರರು, ೩೦೧ ಮೇಲ್ವಿಚಾರಕರನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ ೧೮೧ ಗಣತಿದಾರರು ಹಾಗೂ ೩೨ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಒಟ್ಟು ೨೩೨೯ ಸಿಬ್ಬಂದಿಗಳನ್ನು ಜನಗಣತಿ ಕಾರ್ಯಕ್ಕೆ ನೇಮಿಸಲಾಗಿದ್ದು, ೪೦ ಜನ ಮಾಸ್ಟರ್ ಟ್ರೈನರ್ಸ್‌ರಿಂದ ಗಣತಿದಾರರಿಗೆ ಈಗಾಗಲೆ ತರಬೇತಿ ನೀಡಲಾಗಿದೆ. ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಉಸ್ತುವಾರಿಯ ಹೊಣೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ೮ ಅಧಿಕಾರಿಗಳನ್ನು ಚಾರ್ಜ್ ಆಫೀಸರ್‌ಗಳೆಂದು ನೇಮಿಸಿ ವಹಿಸಲಾಗಿದೆ. ಜನಗಣತಿಯ ಸಂದರ್ಭದಲ್ಲಿ ಯಾವುದೇ ಮನೆ ಬಿಟ್ಟು ಹೋಗದಂತೆ ಮಾಡಲು ಪ್ರತಿ ತಾಲೂಕಿನಲ್ಲಿಯೂ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು. ಒಂದು ವೇಳೆ ಯಾವುದೇ ಮನೆ ಗಣತಿಕಾರ್ಯದಿಂದ ಬಿಟ್ಟುಹೋಗಿದ್ದಲ್ಲಿ, ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಿ ಮನವಿ ಸಲ್ಲಿಸಬಹುದು. ಸಾರ್ವಜನಿಕರು ಗಣತಿದಾರರಿಗೆ ನಿಖರವಾದ ಮಾಹಿತಿಯನ್ನು ಒದಗಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಮನವಿ ಮಾಡಿದರು. ಅಶೋಕ್ ಕುಮಾರ್ ನಾಯಕ್ ಅವರು ಮಾತನಾಡಿ, ಜನಗಣತಿ ಸಂದರ್ಭದಲ್ಲಿ ಗಣತಿದಾರರು, ಸಾರ್ವಜನಿಕರಿಂದ ಅವರು ವಾಸಿಸುವ ಕಟ್ಟಡ, ಗೋಡೆ, ಮೇಲ್ಛಾವಣಿ, ಕಟ್ಟಡದ ಬಳಕೆಯ ಉದ್ದೇಶ, ಕುಟುಂಬದ ಜಾತಿ, ಕುಟುಂಬ ಹೊಂದಿರುವ ಸೌಲಭ್ಯಗಳು, ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಬೆಳಕಿನ ಸೌಲಭ್ಯ, ಶೌಚಾಲಯ, ಚರಂಡಿ ವ್ಯವಸ್ಥೆ, ಅಡುಗೆ ಮನೆ, ಸ್ನಾನಗೃಹ, ರೇಡಿಯೋ, ಟಿ.ವಿ., ಕಂಪ್ಯೂಟರ್, ದ್ವಿಚಕ್ರ ವಾಹನ ಮುಂತಾದ ಸೌಲಭ್ಯವನ್ನು ಹೊಂದಿರುವ ಕುರಿತು ಮಾಹಿತಿ ಸಂಗ್ರಹಿಸುವರು. ೬ ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಬೇರೆ ಪ್ರದೇಶದಲ್ಲಿ ವಾಸ ಮಾಡುವವರನ್ನು ಗಣತಿ ಮಾಡಲಾಗುವುದಿಲ್ಲ. ಜನಗಣತಿಯ ಯಶಸ್ವಿಗಾಗಿ ಸಹಕರಿಸುವಂತೆ ಪ್ರತಿಯೊಂದು ಗ್ರಾಮಗಳಲ್ಲಿ ಡಂಗುರ ಸಾರುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ನಗರಸಭೆ ಪೌರಾಯುಕ್ತ ಬೆಳ್ಳಿಕಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top