ಕೊಪ್ಪಳ ಏ. ೦೭ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಲು ಅಶಕ್ತರಾದ ವಯೋವೃದ್ಧರು, ಮಾನಸಿಕ ಅಸ್ವಸ್ಥರು ಹಾಗೂ ಅಶಕ್ತ ವ್ಯಕ್ತಿಗಳಿಗೆ ಮಾನವೀಯ ದೃಷ್ಟಿಯಿಂದ ಅವರ ಮನೆಗೆ ತೆರಳಿ ಆಧಾರ್ ನೋಂದಣಿ ಮಾಡಿಸಲು ಉದ್ದೇಶಿಸಲಾಗಿದ್ದು, ಅರ್ಹರು ಬೇಡಿಕೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲ ನಾಗರೀಕರು ಆಧಾರ್ ನೋಂದಣಿ ಮಾಡಿಸುವ ಸಲುವಾಗಿ ಈಗಾಗಲೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೪೯ ಆಧಾರ್ ನೋಂದಣಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ನೋಂದಣಿ ಕೇಂದ್ರಗಳಿಗೆ ಬರಲು ಅಶಕ್ತರಾದ ವಯೋವೃದ್ಧರು, ಮಾನಸಿಕ ಅಸ್ವಸ್ಥರು ಹಾಗೂ ಅಶಕ್ತ ವ್ಯಕ್ತಿಗಳಿಗೆ ಮಾನವೀಯ ದೃಷ್ಟಿಯಿಂದ ಅವರ ಮನೆಗೆ ತೆರಳಿ ಆಧಾರ್ ನೋಂದಣಿ ಮಾಡಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಅಂತಹ ವ್ಯಕ್ತಿಗಳಿಂದ ಲಿಖಿತ ಬೇಡಿಕೆಗಳು ಬಂದು, ಅವರೇ ಸ್ವಂತ ವಾಹನದ ವ್ಯವಸ್ಥೆ ಕಲ್ಪಿಸಿದಲ್ಲಿ, ಅವರ ವಾಹನದಲ್ಲಿ ನೋಂದಣಿ ಕಿಟ್ ಹಾಗೂ ಆಪರೇಟರನ್ನು ಬೇಡಿಕೆದಾರರ ಮನೆಗೆ ಕಳುಹಿಸಿ ಆಧಾರ್ ನೋಂದಣಿ ಮಾಡಿಸಲಾಗುವುದು. ಒಂದು ವೇಳೆ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ, ಅಂತಹವರ ಬೇಡಿಕೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅರ್ಹ ನಾಗರೀಕರು ಅಥವಾ ಅವರ ಕುಟುಂಬದ ಸದಸ್ಯರು ಹತ್ತಿರದ ತಾಲೂಕು ಕಚೇರಿ ಅಥವಾ ನಾಡ ಕಚೇರಿ ಅಥವಾ ಕಂದಾಯ ನಿರೀಕ್ಷಕರ ಕಚೇರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.
0 comments:
Post a Comment