PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೨೧ ಆದ್ಯ ವಚನಕಾರ ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಏ. ೧೨ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು. 
       ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
      ದೇವರದಾಸಿಮಯ್ಯ ಜಯಂತಿ ಉತ್ಸವವನ್ನು  ಏ. ೧೨ ರಂದು ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು.  ಕಾರ್ಯಕ್ರಮ.  ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಗವಿಮಠ ಆವರಣದಿಂದ ದೇವರದಾಸಿಮಯ್ಯ ನವರ ಭಾವಚಿತ್ರ ಮೆರವಣಿಗೆ ಹೊರಡಲಿದ್ದು, ಮೆರವಣಿಗೆಯು ಗವಿಮಠ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ.   ಮೆರವಣಿಗೆಯಲ್ಲಿ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.    ಅಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದ್ದು, ಸಮಾರಂಭದಲ್ಲಿ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ದೇವರ ದಾಸಿಮಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡುವರು.  ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.  ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಪಾಲ್ಗೊಳ್ಳಬೇಕು.  ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಕರಡಿ ಸಂಗಣ್ಣ ಅವರು, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.
        ಸಭೆಯಲ್ಲಿ ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸೇರಿದಂತೆ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,  ನೇಕಾರರ ಒಕ್ಕೂಟದ ಅಧ್ಯಕ್ಷ ಕೆ. ಕಾಳಪ್ಪ ಸೇರಿದಂತೆ ಸಮಾಜದ ಮುಖಂಡರಾದ  ನಾಗರಾಜ ಬಳ್ಳಾರಿ, ರಮೇಶ್ ಹ್ಯಾಟಿ,  ಲಕ್ಷ್ಮಣ ಚಳಮರದ, ವೀರಣ್ಣ, ರವಿ ಬುಡ್ಡೋಡಿ ಕಿನ್ನಾಳ, ನೀಲಕಂಠಪ್ಪ ಮೈಲಿ ಗಣ್ಯರಾದ ಡಾ. ಜ್ಞಾನಸುಂದರ್, ಶಿವಾನಂದ ಹೊದ್ಲೂರು, ಮಂಜುನಾಥ ಗೊಂಡಬಾಳ, ಭರಮಪ್ಪ ಬೆಲ್ಲದ, ಗವಿಸಿದ್ದಪ್ಪ ಕಂದಾರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top