PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಫೆ.೦೧ (ಕ ವಾ) ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್‌ಗೆ ತುಂಗಭದ್ರಾ ಎಡದಂಡೆ ಕಾಲುವೆ ನೀರನ್ನು ಮರಳಿ ಹಳ್ಳದ ಮೂಲಕ ಹರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರವು ಬಳ್ಳಾರಿ ಜಿಲ್ಲೆಯ ಕುಡತಿನಿ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿದೆ. ಕೇಂದ್ರದ ಮೊದಲ ಎರಡು ೫೦೦ ಮೆ.ವ್ಯಾಟ್ ಸಾಮರ್ಥ್ಯದ ಘಟಕಗಳು ಈಗಾಗಲೇ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಮೂರನೆಯ ೭೦೦ ಮೆ.ವ್ಯಾಟ್ ಸಾಮರ್ಥ್ಯದ ಘಟಕವು ವಿದ್ಯುತ್ ಉತ್ಪಾದನೆಗೆ ಸಿದ್ಧವಾಗುವ ಹಂತದಲ್ಲಿದೆ. ಈ ಘಟಕಗಳಿಗೆ ಅವಶ್ಯವಿರುವ ನೀರನ್ನು ಸರ್ಕಾರದ ಆದೇಶದಂತೆ ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ ಮರಳಿ ಹಳ್ಳದಿಂದ ಪಂಪ್‌ಹೌಸ್ ಮುಖಾಂತರ ಸರಬರಾಜು ಮಾಡಲಾಗುತ್ತಿದೆ. ಆದರೆ ಪ್ರಸಕ್ತ ವರ್ಷ ಜಲಾಶಯದಲ್ಲಿ ನೀರು ಸಂಗ್ರಹವಾಗದೇ ಇರುವುದರಿಂದ ಹಿಂಗಾರು ಹಂಗಾಮಿಗೆ ನೀರು ಹರಿಸಲಾಗುವುದಿಲ್ಲವೆಂದು ತುಂಗಭದ್ರಾ ಮಂಡಳಿಯವರಿಂದ ಪ್ರಕಟಣೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್‌ಗೆ ನೀರು ಲಭ್ಯವಾಗುವ ಸಾಧ್ಯತೆಗಳಿರುವುದಿಲ್ಲ.  ಶಾಖೋತ್ಪನ್ನ ಘಟಕಗಳಿಗೆ ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶದಲ್ಲಿ ಬರುವ ಮರಳಿ ಹಳ್ಳದಿಂದ ೬೦ ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಫೆ.೦೧ ರಿಂದ ಜೂ.೩೦ ರವರೆಗೆ ಸರಬರಾಜು ಮಾಡಲು ಸರ್ಕಾರ ಅನುಮತಿ ನೀಡಿದೆ. 
     ತುಂಗಭದ್ರಾ ಎಡದಂಡೆ ಕಾಲುವೆ ಡಿಸ್ಟ್ರಿಬ್ಯೂಟರಿ ೧೭ ರಿಂದ ಮರಳಿ ಹಳ್ಳ ಪಂಪ್‌ಹೌಸ್‌ನ ಮೂಲಕ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಸರಾಗವಾಗಿ ನೀರು ಸರಬರಾಜು ಮಾಡಲು ಹಾಗೂ ನೀರಿನ ಅನಧೀಕೃತ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ  ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ವ್ಯಾಪ್ತಿಯಲ್ಲಿ ಫೆ.೦೧ ರಿಂದ ಮಾ.೩೧ ರವರೆಗೆ ಎರಡು ತಿಂಗಳುಗಳ ಕಾಲ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
     ನಿಷೇಧಾಜ್ಞೆಯನ್ವಯ ಗಂಗಾವತಿ ತಾಲೂಕಿನ ಬಸಾಪಟ್ಟಣ, ವಡ್ಡರಹಟ್ಟಿ ಕ್ಯಾಂಪ್, ಇಸ್ಲಾಂಪುರ, ಗಂಗಾವತಿ-ಕನಕಗಿರಿ ಸೇತುವೆ, ಬಾಪಿರೆಡ್ಡಿ ಕ್ಯಾಂಪ್, ಜಂಗಮರ ಕಲ್ಗುಡಿ, ಹಂತದಲ್ಲಿ ಮರಳಿ ಹಳ್ಳದ ದಡದಲ್ಲಿ ಬರುವ ರೈತರು ಯಾವುದೇ ಕಾರಣಕ್ಕೂ ಪಂಪ್‌ಸೆಟ್ ಮೂಲಕ ನೀರನ್ನು ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಅಕಸ್ಮಾತ್ ಬಳಸಿದರೆ, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಪಂಪ್‌ಸೆಟ್‌ಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳಬೇಕು ಮತ್ತು  ಜೆಸ್ಕಾಂನ ಗಂಗಾವತಿಯ ಕಾರ್ಯನಿರ್ವಾಹಕ ಅಭಿಯಂತರರು ಮರಳಿಹಳ್ಳದ ದಡದಲ್ಲಿ ಬರುವ ಎಲ್ಲಾ ಪಂಪ್‌ಸೆಟ್‌ಗಳಿಗೆ ಪ್ರಸಾರವಾಗುವ ತ್ರಿ-ಫೇಸ್ ವಿದ್ಯುತ್ ಕಡಿತಗೊಳಿಸಬೇಕು. ಫೆ.೦೧ ರಿಂದ ಮಾ.೩೧ ರವರೆಗೆ ಎರಡು ತಿಂಗಳುಗಳ ಕಾಲ ತುಂಗಭದ್ರಾ ಎಡದಂಡೆ ಕಾಲುವೆ ಡಿಸ್ಟ್ರಿಬ್ಯೂಟರಿ ೧೭ ರಿಂದ ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದಲ್ಲಿ ಸ್ಥಾಪಿತವಾಗಿರುವ ಕೆ.ಪಿ.ಸಿ.ಎಲ್ ಪಂಪ್‌ಹೌಸ್ ವರೆಗೆ ಕಡ್ಡಾಯವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಗಸ್ತು ಒದಗಿಸಬೇಕು. ಈ ಮೇಲಿನ ಅಂಶಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top