PLEASE LOGIN TO KANNADANET.COM FOR REGULAR NEWS-UPDATES

ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ಜರುಗಿದ ಎರಡನೆಯ ದಿನ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಕಾರ್ಯಕ್ರಮ ಜರುಗಿತು. ಇದು ಕೂಡಾ ಶ್ರೀಗವಿಮಠದ ಪರಂಪರಾಗತ ಸಂಪ್ರದಾಯ. ಬಳಗಾನೂರಿನ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಶ್ರೀ ಗವಿಮಠದ ಬೆಟ್ಟದ ಮೇಲಿನ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಪ್ರತಿ ವರ್ಷ ಹಾಕುತ್ತಾರೆ. ಇದರಲ್ಲಿ ಶರಣರ ಹಿಂದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡ ಅಪಾರ ಭಕ್ತ ಸಮೂಹವೇ ದೀರ್ಘದಂಡ ನಮಸ್ಕಾರ ಹಾಕಿದರು. ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ತಮ್ಮ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು ೫೦ ವರ್ಷಗಳಿಂದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಅವರ ಲಿಂಗೈಕ್ಯದ ನಂತರ ಬಳಗಾನೂರಿನ ಶರಣಾದ ಶ್ರೀ ಶಿವಶಾಂತವೀರ ಶರಣರು ತಮ್ಮ ಗುರು ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮವನ್ನು ನೋಡಲು ಜಾತ್ರೆಯಷ್ಟೇ ಜನರು ಆಗಮಿಸಿ ಶರಣರ ದರ್ಶನಾಶಿರ್ವಾದ ಪಡೆದರು.  ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿಭಾವದ ಘೋಷಣೆಗಳು, ಭಕ್ತರೆಲ್ಲರ ಎದೆಯಲ್ಲಿ 'ಗವಿಸಿದ್ಧ, ಗವಿಸಿದ್ಧ' ಎಂಬ ವಾಣಿ ಪ್ರತಿಧ್ವನಿಸಿದವು.

Advertisement

0 comments:

Post a Comment

 
Top