PLEASE LOGIN TO KANNADANET.COM FOR REGULAR NEWS-UPDATES

ಕುಷ್ಟಗಿ ಜ .೧೧ ಬರುವ ಫೆ.೨೮ ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ, ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ರಾಜಶೇಖರ ಅಂಗಡಿ ಸೋಮವಾರ ಕುಷ್ಟಗಿ ಪಟ್ಟಣದ ಕಸಾಪ ಆಜೀವ ಸದಸ್ಯರ ಮನೆಗಳಿಗೆ ತೆರಳಿ ಮತಯಾಚನೆ ಕಾರ್ಯ ನಡೆಸಿದರು. ಕಳೆದ ಬಾರಿಯ ಕಸಾಪ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿರುವ ನನಗೆ ಈ ಬಾರಿ ಸಮಸ್ತ ಕಸಾಪ ಆಜೀವ ಸದಸ್ಯರು ತಮ್ಮ ಅಮೂಲ್ಯ ಮತಗಳನ್ನು ನೀಡಿ, ಕನ್ನಡದ ತೇರನೆಳೆಯಲು ಅವಕಾಶ ನೀಡಬೇಕೆಂದು ನಿಯೋಜಿತ ಅಭ್ಯರ್ಥಿ ರಾಜಶೇಖರ ಅಂಗಡಿ ಮನವಿ ಮಾಡಿದರು.
ಕುಷ್ಟಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕಸಾಪ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವದು.ನಾಡು-ನುಡಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನೂ ಸಹ ಕೈಗೊಳ್ಳಲಾಗುವದು.  ಕಸಾಪದ ಆಜೀವ ಸದಸ್ಯರೊಂದಿಗೆ ಸಂವಹನ,ಸಂಪರ್ಕ ಸಾಧಿಸಲು ಎಲ್ಲ ತಾಲ್ಲೂಕುಗಳಲ್ಲಿಯೂ ಆಜೀವ ಸದಸ್ಯರ ಸಮಾವೇಶಗಳನ್ನು ಆಯೋಜಿಸಲಾಗುವದು.ಅರ್ಥಪೂರ್ಣ ಸಮ್ಮೇಳನ,ವಿಚಾರ ಸಂಕಿರಣ,ಕಾವ್ಯಗಾಯನಗುಚ್ಛ, ಕಾವ್ಯ,ಕಥಾ ಕಮ್ಮಟಗಳು ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ ಕ್ರಿಯಾಶೀಲ ಜಿಲ್ಲಾ ಘಟಕವನ್ನು ಮುನ್ನಡೆಸುವ ಹೆಬ್ಬಯಕೆ ನನ್ನದಾಗಿದೆ ಎಂದು ರಾಜಶೇಖರ ಅಂಗಡಿ ಮತದಾರರಲ್ಲಿ ಅರಿಕೆ ಮಾಡಿಕೊಂಡರು. ಹಿಂದಿನ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತಿರುವ ರಾಜಶೇಖರ ಅಂಗಡಿ ಉತ್ತಮ ಸಂಘಟನಾಕಾರರಾಗಿದ್ದಾರೆ. ಎರಡು ಅವಧಿಗಳಿಗೆ ಕೊಪ್ಪಳ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾಗಿ , ಒಂದು ಬಾರಿ ಜಿಲ್ಲಾ ಗೌರವ ಕೋಶಾಧ್ಯಕ್ಷರಾಗಿ ಅವರು ತೋರಿದ ಕ್ರಿಯಾಶೀಲತೆ ಎಲ್ಲರಿಗೂ ಮಾದರಿಯಾಗುವಂತಹದ್ದು, ಈ ಬಾರಿಯ ಚುನಾವಣೆಯಲ್ಲಿ ರಾಜಶೇಖರ ಅವರಿಗೆ ಬೆಂಬಲ ನೀಡಿ ಗೆಲ್ಲಿಸುವ ಭರವಸೆಯನ್ನು ಆಜೀವ ಸದಸ್ಯರು ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಹೆಚ್.ವೈ.ಈಟಿಯವರ್, ರವೀಂದ್ರ ಬಾಕಳೆ, ಶರಣಪ್ಪ ವಡಗೇರಿ, ಚನ್ನಪ್ಪ ಬಾವಿಮನಿ, ಪ್ರಕಾಶ ಬೆದವಟ್ಟಿ, ಶರಣಪ್ಪ ಲೈನದ, ಆರ್.ಕೆ.ಸುಬೇದಾರ.ಶ್ರೀಕಾಂತ, ಬಸವರಾಜ ಕುಡಿತಿನಿ,ಡಾ.ಎನ್.ಎಸ್.ಪಾಟೀಲ, ಶರಣಪ್ಪ ನಿಡಶೇಸಿ, ಬಾಳಪ್ಪ ಗೋನಾಳ, ಶರಣಯ್ಯ ಹಿರೇಮಠ ಸೇರಿದಂತೆ ಅನೇಕ ಕಸಾಪ ಆಜೀವ ಸದಸ್ಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top