PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೦೮ (ಕ ವಾ) ಮಾರಕ ರೋಗಗಳ ಕೊಂಡಿಯಾಗಿರುವ ಮದ್ಯ, ಮಾದಕಗಳಿಂದ ದೂರವಿರುವ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಸಕಾರಾತ್ಮಕ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಹೊಂದಬೇಕು ಎಂದು ಬಂಡಿಹರ್ಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗುರುಬಸವರಾಜ ಅವರು ಕರೆ ನೀಡಿದರು.
     ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಂಡಿಹರ್ಲಾಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಬಂಡಿಹರ್ಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ವಯಸ್ಸು ತುಂಬಾ ಕುತೂಹಲವನ್ನು ಹೊಂದಿರುತ್ತದೆ. ಮೋಜಿನ ಪದಾರ್ಥಗಳಾಗಿರುವ ಮದ್ಯ, ಮಾದಕಗಳೆಡೆಗೆ ಬಹುಬೇಗ ಹೊರಳುತ್ತದೆ.   ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು, ಸ್ವಾಮಿ ವಿವೇಕಾನಂದ ರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸಿಕೊಂಡು, ಉತ್ತಮ ವ್ಯಕ್ತಿಗಳೊಡನೆ ಒಡನಾಟ ಹೊಂದುವ ಮೂಲಕ ಧೂಮಪಾನ, ಮಧ್ಯ ಮತ್ತು ಮಾದಕ ವ್ಯಸನಗಳಿಂದ ದೂರವಿರಬೇಕು. ಅಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ  ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಶಂಸಾರ್ಹ ಎಂದು ಪ್ರಾಚಾರ್ಯ ಗುರುಬಸವರಾಜ ಹೇಳಿದರು.
     ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀಕಾಂತ್ ಸಜ್ಜನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಾದಕಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಸಿಗರೇಟನ್ನು ಸುಮಾರು ೪೦೦೦ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿರುತ್ತದೆ. ಇದರಲ್ಲಿ ಸುಮಾರು ೪೦೦ ಪದಾರ್ಥಗಳು ಕ್ಯಾನ್ಸರ್‌ಕಾರಕಗಳಾಗಿವೆ. ಅಲ್ಲದೆ, ೩೦ ಪದಾರ್ಥಗಳು ಜೀವಕ್ಕೆ ಹಾನಿಯನ್ನುಂಟು ಮಾಡುತ್ತವೆ. ಇಷ್ಟೆಲ್ಲ ವಿಷದಿಂದ ತುಂಬಿರುವ ಸಿಗರೇಟನ್ನು ಮನುಷ್ಯ ತಾತ್ಪೂರ್ತಿಕ ತೃಪ್ತಿಗಾಗಿ (ನಿಕೋಟಿನ್) ಸೇದುವುದು ಮುರ್ಖತನವೇ ಸರಿ. ಒಂದು ಸಿಗರೇಟು ಸೇವನೆ ಮನುಷ್ಯನ ೫ ನಿಮಿಷದ ಆಯಸ್ಸನ್ನು ಕಡಿಮೆಗೊಳಿಸುತ್ತದೆ. ಸೇದಿದ ಹತ್ತೇ ಸೆಕೆಂಡುಗಳಲ್ಲಿ ದೇಹವನ್ನು ವ್ಯಾಪಿಸುತ್ತದೆ. ಸಂಶೋಧನೆಯೊಂದರ ಪ್ರಕಾರ ಪ್ರತಿ ಎಂಟು ಸೆಕೆಂಡಿಗೆ ಒಬ್ಬರಂತೆ ಪ್ರಪಂಚದಾದ್ಯಂತ ಪ್ರತಿವರ್ಷ ೧೫೯ ಕೋಟಿ ಜನರು ಧೂಮಪಾನ ಸಂಬಂಧಿ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಅಲ್ಲದೆ, ಪರೋಕ್ಷ ಧೂಮಪಾನದಿಂದ ಸುಮಾರು ೧೫ ಕೋಟಿ ಮಕ್ಕಳು ಜಗತ್ತಿನಾದ್ಯಂತ ತಮ್ಮ ಜೀವ ಕಳೆದುಕೊಳ್ಳುತ್ತವೆ ಎಂದರೆ. ಇದರ ವಿಷ ವರ್ತುಲವನ್ನು ಅಂದಾಜಿಸಬಹುದಾಗಿದೆ ಎಂದರು.
     ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆಯ ಶಾಂತಕುಮಾರ ಮಾತನಾಡಿ, ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ೧೦೯೮ ನ್ನು ಆರಂಭಿಸಲಾಗಿದೆ.  ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದ್ದು,  ಕರೆ ಮಾಡಿದ ೬೦ ನಿಮಿಷದೊಳಗಾಗಿ ಸಂಕಷ್ಟಕ್ಕೊಳಗಾದ ಮಗುವನ್ನು ರಕ್ಷಿಸಿ, ಅಗತ್ಯ ಪುನರ್ವಸತಿ ಕಲ್ಪಿಸಲಾಗುತ್ತದೆ. ಇಂದಿನ ಯುವಕ, ಯುವತಿಯರು ಪ್ರೀತಿ, ಪ್ರೇಮ ಎಂದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳದೇ, ವಿದ್ಯಾಭ್ಯಾಸದ ಕಡೆ ಗಮನ ಹರಿಸಿ, ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಕಿವಿಮಾತು ಹೇಳಿದರು.
     ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಅವಿನಾಶ, ಕಾಲೇಜಿನ ಉಪನ್ಯಾಸಕಾರದ ಶರಣಪ್ಪ ಬಿಂಗಿ, ಈರಣ್ಣ ಜಿ, ಹನುಮಂತಪ್ಪ, ರಾಜೇಶ, ರಾಜೇಸಾಬ್, ದೇವರಾಜ, ಶರಬಸಯ್ಯ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಇಂದ್ರಜಾ ಪ್ರಾರ್ಥಿಸಿದರು. ಚಂದ್ರಕಲಾ ಸ್ವಾಗತಿಸಿದರು. ಈರಣ್ಣ ನಿರೂಪಿಸಿದರು. ರಾಜೇಶ್ವರಿ ವಂದನಾರ್ಪಣೆ ಸಲ್ಲಿಸಿದರು.

Advertisement

0 comments:

Post a Comment

 
Top