PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೦೪ (ಕ ವಾ) ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿದಾಗ ಮಾತ್ರ ಸರ್ಕಾರದ ಆಶಯ ಈಡೇರಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರದಂದು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಸಲುವಾಗಿ ಏರ್ಪಡಿಸಲಾಗಿದ್ದ ಜನ-ಮನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.
     ಬಡ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ.  ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವಾರು ಜನಪರ ಯೋಜನೆಗಳು ಜಾರಿಗೊಂಡಿವೆ.  ಇನ್ನೂ ಹಲವು ಯೋಜನೆಗಳು ಜಾರಿಗೊಳ್ಳುವ ದಿಸೆಯಲ್ಲಿವೆ.  ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ, ರಾಜೀವ್ ಆರೋಗ್ಯ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ, ಕೃಷಿ ಭಾಗ್ಯ ಹೀಗೆ ಅನೇಕ ಯೋಜನೆಗಳು ಬಡ ಜನರ ಪಾಲಿನ ಭಾಗ್ಯವಾಗಿ ಪರಿಣಮಿಸಿವೆ.   ಈ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಬಡ ಜನರ ಶ್ರೇಯೋಭಿವೃದ್ಧಿಯ ಸರ್ಕಾರದ ಆಶಯ ಈಡೇರಲು ಸಾಧ್ಯ.   ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರನ್ನು ನಿರೀಕ್ಷೆಯಂತೆ ತಲುಪುತ್ತಿವೆಯೇ.  ಸರ್ಕಾರದ ಮೂಲ ಉದ್ದೇಶ ಈಡೇರಿದೆಯೇ.  ಅಭಿವೃದ್ಧಿಪರ ಯೋಜನೆಗಳನ್ನು ಇನ್ನಷ್ಟು ಜನರಿಗೆ ಹೇಗೆ ತಲುಪಿಸಬಹುದು.  ಅಥವಾ ಹೇಗೆ ಮತ್ತಷ್ಟು ಪರಿಣಾಮಕಾರಿಯನ್ನಾಗಿಸಬಹುದು.  ಸಾರ್ವಜನಿಕರು ಸರ್ಕಾರದಿಂದ ನಿರೀಕ್ಷಿಸುವುದು ಏನು ಎಂಬುದನ್ನು ಸಂಬಂಧಪಟ್ಟ ಫಲಾನುಭವಿಗಳಿಂದಲೇ ಕೇಳಿ ತಿಳಿದುಕೊಳ್ಳಬೇಕು ಎನ್ನುವುದು ಮುಖ್ಯಮಂತ್ರಿಗಳ ಪರಿಕಲ್ಪನೆ.  ಈ ಉದ್ದೇಶದಿಂದಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಜನ-ಮನ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.  ನಂತರ ಅನ್ನಭಾಗ್ಯ, ಕೃಷಿಭಾಗ್ಯ, ಋಣಮುಕ್ತ (ಸಾಲ ಮನ್ನಾ ಯೋಜನೆ), ಕ್ಷೀರಭಾಗ್ಯ, ಮನಸ್ವಿನಿ-ಮೈತ್ರಿ, ಕ್ಷೀರಾಧಾರೆ (ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ), ವಿದ್ಯಾಸಿರಿ ಮತ್ತು ವಸತಿ ಭಾಗ್ಯ ಸೇರಿದಂತೆ ಒಟ್ಟು ೦೯ ಯೋಜನೆಗಳ ಆಯ್ದ ಫಲಾನುಭವಿಗಳೊಂದಿಗೆ ಯೋಜನೆಯ ಸಾರ್ಥಕತೆ, ಯೋಜನೆ ಬಗ್ಗೆ ಫಲಾನುಭವಿಗಳ ಅನಿಸಿಕೆ ಅಭಿಪ್ರಾಯಗಳನ್ನು ಸಚಿವರು ಆಲಿಸಿದರು.  ಫಲಾನುಭವಿಗಳು ವಿವಿಧ ಯೋಜನೆಗಳ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸೌಲಭ್ಯ ವಿಸ್ತರಣೆಯ ಭರವಸೆಯನ್ನು ಸಚಿವರು ಫಲಾನುಭವಿಗಳಿಗೆ ನೀಡಿದರು.
ವಾರದ ೦೬ ದಿನವೂ ಹಾಲು ನೀಡಿ : ಕ್ಷೀರಭಾಗ್ಯ ಯೋಜನೆಯ ಫಲಾನುಭವಿ ಮಕ್ಕಳು, ಸಚಿವರೊಂದಿಗೆ ನಡೆಸಿದ ಸಂವಾದದಲ್ಲಿ, ನಮ್ಮ ಮನೆಯಲ್ಲಿ ಹಾಲು ಕುಡಿಯಲು ಸಾಧ್ಯವಾಗದಷ್ಟು ಬಡತನವಿತ್ತು.  ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಈಗ ವಾರದಲ್ಲಿ ಮೂರು ದಿನ ಹಾಲು ನೀಡುತ್ತಿದೆ.  ಮೂರು ದಿನದ ಬದಲಿಗೆ ವಾರದ ೦೬ ದಿನವೂ ಹಾಲು ನೀಡಬೇಕು.  ಪೌಡರ್ ಹಾಲಿನ ಬದಲಿಗೆ ದ್ರವರೂಪದ ನೇರ ಹಾಲು ನೀಡಬೇಕು.  ಬಾದಾಮಿ ಹಾಲು ನೀಡಿದರೆ ಇನ್ನಷ್ಟು ಉತ್ತಮ ಎಂದು ಅನಿಸಿಕೆ ವ್ಯಕ್ತಪಡಿಸಿದರು.  ವಾರದಲ್ಲಿ ೦೬ ದಿನ ಹಾಲು ಕೊಡುವುದು ಮತ್ತು ಬಾದಾಮಿ ಹಾಲು ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ವಿದ್ಯಾಸಿರಿಯಿಂದ ಶಿಕ್ಷಣ ಮುಂದುವರೆದಿದೆ : ಹಾಸ್ಟೆಲ್ ಸೌಲಭ್ಯ ದೊರಕದ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತಿ ವರ್ಷ ೧೫೦೦೦ ರೂ. ಗಳ ಸಹಾಯಧನ ನೀಡುವಂತಹ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿರುವುದು ಬಡ ಕುಟುಂಬಗಳ ಮಕ್ಕಳಿಗೆ ವರದಾನವಾಗಿದೆ.  ಬಡವರು ತಮ್ಮ ಮಕ್ಕಳನ್ನು ಹಾಸ್ಟೆಲ್‌ನಲ್ಲಿರಿಸಿ ಓದಲು ಕಳುಹಿಸುವುದು ಹೆಚ್ಚು.  ಹಾಸ್ಟೆಲ್ ಸೌಲಭ್ಯ ದೊರಕದಿದ್ದರೆ, ಶಾಲೆಗೆ ಕಳುಹಿಸದೆ, ದುಡಿಯಲು ಹಚ್ಚುತ್ತಾರೆ.  ಇದರಿಂದ ಅಂತಹ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತದೆ.  ವಿದ್ಯಾಸಿರಿ ಯೋಜನೆಯಿಂದಾಗಿಯೇ ನಮ್ಮ ಶಿಕ್ಷಣ ಇನ್ನೂ ಮುಂದುವರೆದಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮನಸ್ವಿನಿಯವರಿಗೆ ಮನೆ ನೀಡಿ : ಮದುವೆಯಾಗದೇ ಉಳಿದ ಹೆಣ್ಣು ಮಕ್ಕಳು, ಪರಿತ್ಯಕ್ತ ಮಹಿಳೆಯರಿಗೆ ಪ್ರತಿ ತಿಂಗಳು ೫೦೦ ರೂ. ಮಾಸಾಶನ ನೀಡುವಂತಹ ಮನಸ್ವಿನಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿರುವುದು, ನಮ್ಮನ್ನು ಸ್ವಾವಲಂಬಿಗಳನ್ನಾಗಿಸಿದೆ.  ಕುಟುಂಬದ ಯಾವುದೇ ಬೆಂಬಲ ಭವಿಷ್ಯದಲ್ಲಿ ನಮಗೆ ದೊರೆಯುವ ಸಂಭವ ಕಡಿಮೆ ಇರುತ್ತದೆ.  ಹೀಗಾಗಿ ದಯವಿಟ್ಟು ನಮಗೆ ಮನೆ ನೀಡುವ ಕಾರ್ಯಕ್ರಮವನ್ನು ಸರ್ಕಾರ ಹಾಕಿಕೊಳ್ಳಬೇಕು ಎಂದು ಮನಸ್ವಿನಿ ಯೋಜನೆಯ ಫಲಾನುಭವಿಗಳು ಮನವಿ ಮಾಡಿದದರು.  ಲಿಂಗತ್ವ ಅಲ್ಪಸಂಖ್ಯಾತರ ಜೀವನಕ್ಕೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ಮೈತ್ರಿ ಯೋಜನೆಯಡಿ ಪ್ರತಿ ತಿಂಗಳು ೫೦೦ ರೂ. ಮಾಸಾಶನ ನೀಡುವ ಮೂಲಕ, ಸಮಾಜದಲ್ಲಿ ನಮಗೂ ಗೌರವದಿಂದ ಬಾಳುವ ಹಕ್ಕನ್ನು ಸರ್ಕಾರ ಕಲ್ಪಿಸಿದ್ದು, ಮಾಸಾಶನ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಹೆಚ್ಚಿಸಿ : ಹಾಲು ಉತ್ಪಾದಕರಿಗೆ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಸದ್ಯ ೦೪ ರೂ. ಗಳ ಪ್ರೋತ್ಸಾಹಧನ ನೀಡುವ ಮೂಲಕ ಸರ್ಕಾರ ರಾಜ್ಯದಲ್ಲಿ ಕ್ಷೀರಕ್ರಾಂತಿಗೆ ಕಾರಣವಾಗಿದೆ.  ಸರ್ಕಾರ ಇದೀಗ ಹಾಲಿನ ದರ ಏರಿಕೆ ಮಾಡುತ್ತಿದ್ದು, ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು
ಕೃಷಿಭಾಗ್ಯ ಅಂತರ್ಜಲ ಹೆಚ್ಚಿಸಿದೆ : ಕೃಷಿಭಾಗ್ಯ ಯೋಜನೆ ಬಗ್ಗೆ ನಡೆದ ಸಂವಾದದಲ್ಲಿ ರೈತರು ಕೃಷಿಹೊಂಡ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.  ಅಲ್ಲದೆ ಕೃಷಿಭಾಗ್ಯ ಅನುಷ್ಟಾನದಲ್ಲಿ ಆಗುತ್ತಿರುವ ಲೋಪಗಳನ್ನು ಸಚಿವರ ಗಮನಕ್ಕೆ ತಂದರು.  ಕೃಷಿಹೊಂಡ ವಿಸ್ತೀರ್ಣದ ಬಗ್ಗೆ ರೈತಾಪಿ ಸಮುದಾಯದಲ್ಲಿ ಗೊಂದಲವಿದೆ.  ಕೃಷಿಹೊಂಡದ ಕೆಳಗೆ ಹಾಕುವ ತಾಡಪತ್ರಿಯ ಬದಲಾಗಿ ಕಲ್ಲು ಹಾಕಿಕೊಳ್ಳಲು ಯೋಜನೆ ಪರಿಷ್ಕರಿಸಬೇಕು.  ಅಲ್ಲದೆ ಕೃಷಿಹೊಂಡದ ವಿಸ್ತೀರ್ಣ ಹೆಚ್ಚಿಸಲು ಅವಕಾಶ ಕಲ್ಪಿಸಬೇಕೆಂದು ಕೆಲವರು ಮನವಿ ಮಾಡಿದರು. ಅಂತರ್ಜಲ ಹೆಚ್ಚಳವಾಗುತ್ತಿರುವುದನ್ನೂ ಸಹ ಸಚಿವರ ಗಮನಕ್ಕೆ ತಂದರು. ಅನ್ನಭಾಗ್ಯ ಟೀಕಿಸುವವರಿಗೆ ಹಸಿವಿನ ಅರಿವಿಲ್ಲ : ರಾಜ್ಯದಲ್ಲಿ ಬಡ ಜನರಿಗೆ ಉಚಿತ ಅಕ್ಕಿ, ಗೋಧಿ ವಿತರಣೆ ಮಾಡುವಂತಹ ಅನ್ನಭಾಗ್ಯ ಯೋಜನೆಯನ್ನು ಟೀಕಿಸುವವರಿಗೆ ಹಸಿವಿನ ಅರಿವಿಲ್ಲ.  ಖುಷ್ಕಿ ಪ್ರದೇಶದ ಜನರಿಗೆ ಅಕ್ಕಿ ವಿತರಣೆ ಯೋಜನೆ ತುಂಬ ಅನುಕೂಲವಾಗಿದೆ. ಬಡವರು ಹೊಟ್ಟೆ ತುಂಬ ಊಟ ಮಾಡುವುದನ್ನು ಸಹಿಸಿಕೊಳ್ಳದ ಸಮೂಹ ಅನ್ನಭಾಗ್ಯ ಯೋಜನೆಯನ್ನು ಟೀಕಿಸುತ್ತಿದೆ. ಟೀಕೆಗೆ ಸೊಪ್ಪು ಹಾಕದೇ ಅನ್ನಭಾಗ್ಯ ಯೋಜನೆಯನ್ನು ಮುಂದುವರಿಸಿ ಎಂದು ಕೆಲ ಫಲಾನುಭವಿಗಳು ಸಚಿವರಿಗೆ ಮನವಿ ಮಾಡಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ ಉಪಸ್ಥಿತರಿದ್ದರು.  ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಹಾಜರಿದ್ದರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ಜನ-ಮನ ಸಂವಾದ ಕಾರ್ಯಕ್ರಮ ಆಯೋಜನೆಯ ಆಶಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ವಂದನಾರ್ಪಣೆಗೈದರು.  ಸದಾಶಿವಪಾಟೀಲ್ ಮತ್ತು ಸಂಗಡಿಗರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.

Advertisement

0 comments:

Post a Comment

 
Top