PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. ೧೯ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು.
     ಜಿಲ್ಲಾಡಳಿತ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ಛೇಂಬರ್ ಆಫ್ ಕಾಮರ್ಸ್, ಗಂಗಾವತಿ ಮತ್ತು ಕಾರಟಗಿಯ ರೈಸ್ ಮಿಲ್ಲರ್‍ಸ್ ಅಸೋಶಿಯೇಷನ್, ರೈಸ್ ಟೆಕ್ನಾಲಜಿ ಪಾರ್ಕ್, ಕಾರಟಗಿ, ಮತ್ತು ಗ್ರಾನೈಟ್ ಮಾಲೀಕರ ಸಂಘ, ಕುಷ್ಟಗಿ ಇವರ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶವಿದೆ.  ಇಲ್ಲಿನ ಹವಾಗುಣ ಕೂಡ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿದೆ.  ತೋಟಗಾರಿಕೆ ಉತ್ಪನ್ನ, ಭತ್ತದ ಉಪ ಉತ್ಪನ್ನಗಳಿಂದ ಆಹಾರ ಸಂಸ್ಕರಣೆಗೊಳಿಸುವಂತಹ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಉತ್ತಮ ಅವಕಾಶವಿದೆ.  ಆದರೆ ಈ ಕ್ಷೇತ್ರಗಳತ್ತ ಉದ್ಯಮಿಗಳು ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ.  ಇನ್ನಾದರೂ, ಈ ಕ್ಷೇತ್ರದತ್ತ ಉದ್ಯಮಿಗಳು ಗಮನ ನೀಡಿ, ಉದ್ಯಮ ಸ್ಥಾಪಿಸಲು ಮುಂದಾದಲ್ಲಿ, ನೂತನ ಕೈಗಾರಿಕಾ ನೀತಿಯಡಿ, ಜಿಲ್ಲಾಡಳಿತ ಅಂತಹವರಿಗೆ ಸಕಲ ನೆರವನ್ನು ಒದಗಿಸಲಿದೆ.  ಇದರಿಂದ ಕೈಗಾರಿಕಾ ಕ್ಷೇತ್ರದ ಜೊತೆಗೆ ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರವೂ ಅಭಿವೃದ್ಧಿಗೊಂಡು, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.  ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ.  ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವ ಉದ್ಯಮಿಗಳಿಗೆ ಭೂಮಿ ಪರಿವರ್ತನೆ, ಭೂ-ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಸಕಲ ವ್ಯವಸ್ಥೆಯನ್ನು ಏಕಗವಾಕ್ಷಿ ಪದ್ಧತಿಯಡಿ ತ್ವರಿತವಾಗಿ ವಿಲೇವಾರಿಗೊಳಿಸಿ, ಸಹಕರಿಸಲಾಗುವುದು.  ಜಿಲ್ಲೆಯಲ್ಲಿ ವರ್ಷದ ೩೬೦ ದಿನಗಳೂ ಸಹ ಉತ್ತಮ ಬಿಸಿಲು ಇರುವುದರಿಂದ ಸೋಲಾರ್ ಘಟಕಗಳ ಸ್ಥಾಪನೆ ಅಥವಾ ಉತ್ಪಾದನೆಗೆ ವಾತಾವರಣ ಪೂರಕವಾಗಿದೆ.  ಉದ್ಯಮಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಉದ್ಯಮಿಗಳಿಗೆ ಕರೆ ನೀಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ರಾಜ್ಯ ಮಟ್ಟದಲ್ಲಿ ಸರ್ಕಾರ ಬಂಡವಾಳವನ್ನು ಆಕರ್ಷಿಸಲು ಫೆ. ೦೪ ರಿಂದ ೦೬ ರವರೆಗೆ ಹೂಡಿಕೆದಾರರ ಸಮಾವೇಶವನ್ನು ಆಯೋಝಿಸಿದ್ದು,  ಇದಕ್ಕೆ ಪೂರಕವಾಗಿ ಇದೀಗ ಜಿಲ್ಲಾ ಮಟ್ದಲ್ಲೂ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.  ಕೈಗಾರಿಕೆಗಳ ಸ್ಥಾಪನೆಗೆ ಈ ಹಿಂದೆ ಇದ್ದಂತಹ ಕಠಿಣ ನಿಯಮಗಳನ್ನು ಸರ್ಕಾರ ಈಗಾಗಲೆ ಸಡಿಲಗೊಳಿಸಿ, ಪರವಾನಿಗೆ ಪಡೆಯುವುದೂ ಸೇರಿದಂತೆ ಇತರೆ ನಿಯಮಗಳನ್ನು ಸರಳೀಕರಣಗೊಳಿಸಿದೆ.  ಅಲ್ಲದೆ ತೆರಿಗೆ ವಿನಾಯಿತಿ, ಸಹಾಯಧನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಒಳಗೊಂಡ ಉದ್ಯಮ ಸ್ನೇಹಿ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿ, ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ.  ರಾಜ್ಯದಲ್ಲಿ ಕಳೆದ ೧೫ ರಿಂದ ೨೦ ವರ್ಷಗಳಲ್ಲಿನ ಬೆಳವಣಿಗೆಯನ್ನು ಗಮನಿಸಿದಾಗ, ಹೆಚ್ಚು ಹೆಚ್ಚು ಯುವ ಜನತೆ ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣವನ್ನು ಪಡೆದು, ಕುಶಲತೆಯನ್ನು ಪಡೆದುಕೊಳ್ಳುತ್ತಿದ್ದಾರೆ.  ಅಕುಶಲ ವೃತ್ತಿಯವರಿಗೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡಿ, ಉದ್ಯೋಗ ಸೃಜಿಸಲಾಗುತ್ತಿದೆ.  ಅದೇ ರೀತಿ ವಿದ್ಯಾವಂತ ಯುವಕರಿಗೆ ಕೈಗಾರಿಕೆಗಳು ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಬೇಕು.  ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
     ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಟಿ. ನಾಗೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಇದೇ ಮೊದಲ ಬಾರಿಗೆ ಹೈ-ಕ ಪ್ರದೇಶದ ಕೈಗಾರಿಕಾ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ತಂದಿದ್ದು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಮಹಿಳೆಯರು, ಪ.ಜಾತಿ, ಪ.ವರ್ಗ ಇವರಿಗೆ ಪ್ರತ್ಯೇಕವಾದ ನೀತಿ ಜಾರಿಗೆ ತಂದಿದೆ.  ಅತಿ ಸಣ್ಣ ಕೈಗಾರಿಕೆಗಳಿಗೆ ೧೫ ಲಕ್ಷ ರೂ. ಗಳಿಂದ ೨೨ ಲಕ್ಷದವರೆಗೆ.  ಸಣ್ಣ ಕೈಗಾರಿಕೆಗಳಿಗೆ ೪೦ ಲಕ್ಷ ರೂ. ಗಳಿಂದ ೪೫ ಲಕ್ಷಗಳವರೆಗೆ ಸಹಾಯಧನ ನೀಡುತ್ತಿದೆ.  ಅಲ್ಲದೆ ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ಭೂ ಪರಿವರ್ತನಾ ಶುಲ್ಕ ಮರುಪಾವತಿ, ಪ್ರವೇಶ ತೆರಿಗೆ ವಿನಾಯಿತಿ, ತ್ಯಾಜ್ಯ ವಸ್ತುಗಳ ಸಂಸ್ಕರಣಾ ಘಟಕಕ್ಕೆ ಸಹಾಯಧನ, ಬಡ್ಡಿ ಸಹಾಯಧನ, ವಿದ್ಯುತ್ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ.  ಕೊಪ್ಪಳ ತಾಲೂಕು ಬಸಾಪುರ ಬಳಿ ಕೆಎಸ್‌ಎಸ್‌ಐಡಿಸಿ ವತಿಯಿಂದ ೧೦೪ ಎಕರೆ, ಕೆಐಎಡಿಬಿ ವತಿಯಿಂದ ೧೫೦ ಎಕರೆ, ಕುಷ್ಟಗಿ ಕೈಗಾರಿಕಾ ಪ್ರದೇಶದ ಎರಡನೆ ಹಂತದಲ್ಲಿ ೬೮ ಎಕರೆ, ಕೆ. ಬೋದೂರ ಗ್ರಾಮದಲ್ಲಿ ೨೮೦೦ ಎಕರೆ ಕೈಗಾರಿಕೆ ಟೌನ್ ಶಿಪ್ ಸ್ಥಾಪಿಸಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಆಹಾರ, ಕಬ್ಬಿಣ ಸಂಸ್ಕರಣಾ ಘಟಕಗಳು, ಉಕ್ಕು ಉತ್ಪಾದನಾ ಘಟಕಗಲು, ಸೋಲಾರ್ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳು, ಗ್ರಾನೈಟ್ ಉದ್ಯಮ, ಜೆಲ್ಲಿ ಕ್ರಷರ್ ಘಟಕ, ಕೃತಕ ಮರಳು ಉತ್ಪಾದನಾ ಘಕಟಗಳಿಗೆ ಹೆಚ್ಚಿನ ಬೇಡಿಕೆ ಇದೆ.  ಜಿಲ್ಲಾ ಮಟ್ಟದ ಸಮಾವೇಶದಲ್ಲಿ ೧೫ ಕೋಟಿ ಒಳಗಿನ ಬಂಡವಾಳ ಹೂಡಿಕೆಯ ಘಟಕಗಳಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಲಾಗುವುದು ಎಂದರು.
     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್, ಛೇಂಬರ್ ಆಫ್ ಕಾಮರ್ಸ್‌ನ ಶ್ರೀನಿವಾಸ ಗುಪ್ತಾ, ರೈಸ್ ಮಿಲ್ಲರ್‍ಸ್ ಅಸೋಸಿಯೇಷನ್ ಅಧ್ಯಕ್ಷ ಎನ್. ಶ್ರೀನಿವಾಸ ಕಾರ್ಯಕ್ರಮ ಕುರಿತು ಮಾತನಾಡಿದರು.  ರಾಜ್ಯ ಹಣಕಾಸು ಸಂಸ್ಥೆ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿ.ಟಿ. ಕಟಗೇರಿ, ಕೆಐಎಡಿಬಿಯ ಜಯಶಂಕರ್, ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಬಲದೇವ್, ಎಪಿಎಂಸಿ ಅಸೋಸಿಯೇಷನ್‌ನ ಕದ್ರಳ್ಳಿ ಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ಸೌಲಭ್ಯ, ಹಾಗೂ ಇಲ್ಲಿನ ಸ್ಥಿತಿ-ಗತಿಗಳ ಅಂಕಿ-ಅಂಶವನ್ನೊಳಗೊಂಡ 'ಇನ್ವೆಸ್ಟ್ ಕೊಪ್ಪಳ' ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
     ಸಮಾವೇಶದ ಅಂಗವಾಗಿ ನಡೆದ ತಾಂತ್ರಿಕ ಅಧಿವೇಶನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆ ಅವಕಾಶಗಳ ಕುರಿತು. ಹಾಗೂ ಸರ್ಕಾರದ ಕೈಗಾರಿಕಾ ನೀತಿ ೨೦೧೪-೧೯ ನಲ್ಲಿರುವ ರಿಯಾಯಿತಿ ಮತ್ತು ಪ್ರೋತ್ಸಾಹ ಯೋಜನೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.

Advertisement

0 comments:

Post a Comment

 
Top