ಕೊಪ್ಪಳ ಗವಿಮಠ ಜಾತ್ರಾ ಈಗಾಗಲೇ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಹಾರಥೋತ್ಸವದ ದಿನದಂದು ಸೇರಿದ ಸುಮಾರು ಆರು ಲಕ್ಷ ಭಕ್ತರು ದೇಶದಲ್ಲಿ ಹೊಸ ಇತಿಹಾಸವನ್ನ ಬರೆದರು. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ದಾಸೋಹವು ರಾಜ್ಯದ ಚರಿತ್ರೆಯಲ್ಲಿ ವಿಶಿಷ್ಟವಾಗಿದೆ. ಜಾತ್ರೆಯ ಎರಡನೇ ದಿನದ ದಾಸೋಹದಲ್ಲಿ ಭಕ್ತರು ಸವಿ ಸವಿಯಾದ ವಿಶಿಷ್ಟ ರೀತಿಯ ಭೋಜನವನ್ನು ಸವಿದರು. ಕಡಕ ರೊಟ್ಟಿ, ಬದನಿಕಾಯಿ ಪಲ್ಲೆ, ಬೇಳೆ ದಾಲ, ಕಡ್ಲಿ ಪುಡಿ, ಹುಣಸಿ ಚಟ್ನಿ, ಮಾದಲಿ, ಹಾಲು, ತುಪ್ಪದ ಜೊತೆಗೆ ಈ ಸಲದ ಜಾತ್ರಾ ಮಹೋತ್ಸವದಲ್ಲಿ ಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯವಾದ ಗರಂ ಮಿರ್ಚಿಯ ಸವಿಯನ್ನ ಸವಿದು ದಾಸೋಹದ ವೈವಿಧ್ಯತೆಯನ್ನು ಕೊಂಡಾಡಿದರು. ಬನ್ನಿಕೊಪ್ಪ ಗ್ರಾಮದ ಭಕ್ತರು, ಕಲಕೇರಿ, ಹಲಗೇರಿ, ಕೊಪ್ಪಳ ಜಿಲ್ಲಾ ಗೆಳೆಯರ ಬಳಗ, ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಯುವ ಘಟಕದವರು ಇಂದಿನ ದಾಸೋಹದ ಸೇವೆಯನ್ನು ಮಾಡಿದರು. ೧೮ ಕ್ವಿಂಟಲ್ ಕಡಲೆ ಹಿಟ್ಟು, ೧೫ ಕ್ವಿಂಟಲ್ ಹಸಿ ಮೆಣಸಿನ ಕಾಯಿ, ೧೦ ಬ್ಯಾರೆಲ್ ಎಣ್ಣೆ, ೧ ಕ್ವಿಂಟಲ್ ಉಪ್ಪು, ೨೫ ಕೆಜಿ ಅಜವಾನ, ೨೫ ಕೆಜಿ ಸೋಡಾ ಪುಡಿ ಸೇರಿಸಿ ೨೦೦ ಜನ ಬಾಣಸಿಗರು ನಿರಂತರವಾಗಿ ಮಿರ್ಚಿ ಹಾಕುವ ಸೇವೆಯಲ್ಲಿ ತೊಡಗಿದ್ದರು.
Subscribe to:
Post Comments (Atom)
0 comments:
Post a Comment