PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೧೫ (ಕ ವಾ) ಶೇಂಗಾ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆಗೆ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಲಹೆಗಳನ್ನು ನೀಡಿದೆ.
     ಶೇಂಗಾ ಬಿತ್ತನೆಗೂ ಮುನ್ನ, ಪ್ರತೀ ಎಕರೆಗೆ ಬೀಜಕ್ಕೆ ೪೦೦ ಗ್ರಾಂ ಟ್ರೈಕೊಡರ್ಮ ಮತ್ತು ೪೦೦ ಗ್ರಾಂ ರೈಜೋಬಿಯಂನಿಂದ ಬೀಜೋಪಚಾರ ಮಾಡಬೇಕು.  ಬೇವಿನ ಹಿಂಡಿಯನ್ನು ಪ್ರತಿ ಎಕರೆಗೆ ೨ ಕ್ವಿಂಟಾಲ್‌ನಂತೆ  ಬಿತ್ತನೆ ಪೂರ್ವದಲ್ಲಿ ಭೂಮಿಗೆ ಸೇರಿಸಬೇಕು.  ಔಡಲ ಬೆಳೆಯನ್ನು ಬಲೆ ಬೆಳೆಯಾಗಿ ಪ್ರತೀ ಎಕರೆಗೆ ಶೇಂಗಾ ಬಿತ್ತನೆ ಬೀಜದಲ್ಲಿ ೨೦೦ ಗ್ರಾಂ ಔಡಲ ಬೀಜವನ್ನು ಬೆರೆಸಿ ಬಿತ್ತಬೇಕು. ಹಾಗೂ ಸಜ್ಜೆಯನ್ನು ಕೀಟ ತಡೆ ಬೆಳೆಯಾಗಿ ೪ ಸಾಲು ಒತ್ತಾಗಿ ಹೊಲದ ಸುತ್ತ ಬಿತ್ತಬೇಕು ಮತ್ತು ಪ್ರತೀ ೧೦ ಸಾಲಿಗೆ ಒಂದು ಸಾಲಿನಂತೆ ಬಿತ್ತಬೇಕು. 
     ಸ್ಪೋಡೋಪ್ಟೆರಾ ಕೀಡೆಯ ಸಮೀಕ್ಷೆಗಾಗಿ ಪ್ರತೀ ಎಕರೆಗೆ ಕನಿಷ್ಠ ೨ ಮೋಹಕ ಬಲೆಗಳನ್ನು ೩೦ ಅಡಿ ಅಂತರದಲ್ಲಿ ನೇತು ಹಾಕಬೇಕು. ೨೦ ದಿನಕ್ಕೊಮ್ಮೆ ಮೋಹಕ ವಸ್ತುಗಳನ್ನು ಬದಲಾಹಿಸಬೇಕು ಮತ್ತು ಬೆಳೆಯಿಂದ ಎರೆಡು ಅಡಿ ಎತ್ತರ ಇಡಬೇಕು.  ಸ್ಪೋಡೋಪ್ಟೆರಾ ಕೀಡೆಯ ಮೊಟ್ಟೆ ಮತ್ತು ಮರಿಹುಳುಗಳು ಗುಂಪಾಗಿರುವುದರಿಂದ ಶೇಂಗಾ ಮತ್ತು ಔಡಲ ಬೆಳೆಯಿಂದ ಆರಿಸಿ ನಾಶ ಮಾಡಬೇಕು.  ರಸ ಹೀರುವ ಕೀಟಗಳು ಕಂಡುಬಂದಾಗ ಶೇ. ೫ ರ ಬೇವಿ ಕಷಾಯನ್ನು ಸಿಂಪಡಿಸಬೇಕು.  ಸ್ಪೋಡೋಪ್ಟೆರಾ ಎನ್.ಪಿ.ವಿ ೨೫೦ ಎಲ್.ಇ ಪ್ರತೀ ಹೆಕ್ಟೇರಿಗೆ ಬಳಸಬೇಕು.
     ಪ್ರತಿ ಎಕರೆಗೆ ೪ ಕಿ. ಗ್ರಾಂ ಬೆಲ್ಲ ೨೫೦ ಮಿ.ಲೀ ಮೊನೋಕ್ರೋಟೊಫಾಸ್ ೩೬ ಎಸ್ ಎಲ್ ೫-೮ ಲೀಟರ್ ನೀರು ಹಾಗೂ ೫೦ ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ ೪೮ ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು. ತಯಾರಿಸಿದ ವಿಷ ಪಾಷಾಣವನ್ನು ಸಾಲುಗಳಲ್ಲಿ ಎರಚಬೇಕು.  ಎಲೆ ಸುರಳಿ ಪೂಚಿ ಹುಳು ಕಂಡುಬಂದರೆ ೨ ಮಿ.ಲೀ ಪ್ರೊಪೆನೋಫಾಸ್ ೫೦ ಇ.ಸಿ ಮತ್ತು  ೨ ಮಿ.ಲೀ ಮೋನೊಕ್ರೊಟೊಫಾಸ್ ೩೬ ಎಸ್.ಎಲ್ ಪ್ರತೀ ಲೀ. ನೀರಿಗ ಬೆರೆಸಿ ಸಿಂಪಡಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್ ಕೆ.ಎ (೯೮೪೫೧೯೪೩೨೮) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (೯೪೮೦೬೯೬೩೧೯)  ತಿಳಿಸಿದ್ದಾರೆ. 

Advertisement

0 comments:

Post a Comment

 
Top