PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೨೯ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿಯು, ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಿರುವ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕವು ಕೊಪ್ಪಳ ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಜಿ.ಪಂ. ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
     ಕೊಪ್ಪಳ ಜಿಲ್ಲೆಯಲ್ಲಿನ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣ ಹಾಗೂ ತಿಪ್ಪೆಗುಂಡಿಗಳನ್ನು ಜೈವಿಕ ಗೊಬ್ಬರವಾಗಿಸುವ ವ್ಯವಸ್ಥೆಯ ಯಶಸ್ವಿಯ ಬಗ್ಗೆ ಜಿಲ್ಲೆಯ ಗ್ರಾಮಗಳಿಗೆ ಅಧ್ಯಯನ ಭೇಟಿಗಾಗಿ   ಬಳ್ಳಾರಿ ಜಿಲ್ಲೆಯ ಸುಮಾರು ೫೦ ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಗುರುವಾರದಂದು ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಿರುವ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು, ಬಳ್ಳಾರಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ, ಹೊಸಳ್ಳಿ ಗ್ರಾಮದ ಬಳಿಯ ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕಸ ವಿಲೇವಾರಿ, ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಜಿಲ್ಲೆಯಲ್ಲಿ ಈಗಾಗಲೆ ಸುಮಾರು ೦೧ ಲಕ್ಷಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಲಾಗಿದ್ದು, ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ.  ಗ್ರಾಮೀಣ ಸರ್ಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತಿಗಳು, ಸ್ವಚ್ಛತೆಗೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ.  ಬಂಡಿಹರ್ಲಾಪುರ ಜಿ.ಪಂ. ವ್ಯಾಪ್ತಿಯ ಹುಲಿಗಿ, ಶಿವಪುರ, ಬಂಡಿಹರ್ಲಾಪುರ, ಬೂದಗುಂಪಾ, ಗುಳದಳ್ಳಿ ಹಾಗೂ ಅಗಳಕೇರಾ ಗ್ರಾಮಗಳನ್ನು ಒಳಗೊಂಡಂತೆ ಬಹುಗ್ರಾಮ ಕಸ ವಿಲೇವಾರಿ ಘಟಕವನ್ನು ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಲಾಗಿದ್ದು, ಈ ಘಟಕವನ್ನು ಮಾದರಿಯನ್ನಾಗಿಟ್ಟುಕೊಂಡು, ಜಿಲ್ಲೆಯ ಇತರೆ ದೊಡ್ಡ ದೊಡ್ಡ ಗ್ರಾಮ ಪಂಚಾಯತಿಗಳಿಗೂ ಇದೇ ವಿಧಾನ ಅನುಸರಿಸಲಾಗುವುದು ಎಂದರು.
     ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ಕಸದ ವಿಷಯವನ್ನು ಹಗುರವಾಗಿ ತೆಗೆದುಕೊಂಡಿದ್ದರಿಂದಲೇ ಬೃಹತ್ ನಗರ ಮತ್ತು ಪಟ್ಟಣಗಳಲ್ಲಿ ಇದರ ಸಮಸ್ಯೆ ತೀವ್ರ ಸ್ವರೂಪ ತಾಳಿದೆ.  ನಮ್ಮ ಮನೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವ ಕಾಳಜಿ ಎಲ್ಲರಲ್ಲೂ ಇದ್ದಂತೆ, ನಮ್ಮ ಗ್ರಾಮ ಸ್ವಚ್ಛವಾಗಿರಬೇಕು ಎನ್ನುವ ಕಾಳಜಿ ಎಲ್ಲರಲ್ಲೂ ಮೂಡಬೇಕು.  ಹೀಗಾದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಚ್ಛ ಗ್ರಾಮ ನಿರ್ಮಾಣವಾಗಲು ಸಾಧ್ಯ.  ಕಸ ವಿಲೇವಾರಿ ಘಟಕದಲ್ಲಿ ಸದ್ಯ, ಪ್ಲಾಸ್ಟಿಕ್ ತ್ಯಾಜ್ಯ, ಇತರೆ ಘನ ತ್ಯಾಜ್ಯ ಸೇರಿದಂತೆ ಎಲ್ಲ ಬಗೆಯ ತ್ಯಾಜ್ಯವನ್ನೂ ಸಹ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ.  ಇದಕ್ಕೆ ಅಗತ್ಯವಿರುವ ವಾಹನ, ಸೆಗ್ರಿಗೇಟರ್ ಯಂತ್ರ, ಎರೆಹುಳು ಗೊಬ್ಬರದ ಘಟಕಗಳು, ಶೆಡ್ ಸೇರಿದಂತೆ ಎಲ್ಲವನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ.  ಆರೂ ಗ್ರಾ.ಪಂ. ಗಳ ಅಧ್ಯಕ್ಷರು, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರುಗಳನ್ನು ಒಳಗೊಂಡ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ.  ಅಲ್ಲದೆ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿಯೂ ಸ್ವಚ್ಛತಾ ಸಮಿತಿಯನ್ನು ರಚಿಸಿ, ಎಲ್ಲರಿಗೂ ಜವಾಬ್ದಾರಿಯನ್ನು ವಹಿಸಲಾಗಿದೆ.  ಗ್ರಾಮಸ್ಥರೂ ಸಹ ಇದಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಘಟಕದಲ್ಲಿ ಪ್ರತಿ ದಿನ ಸುಮಾರು ೧೮ ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ.  ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕವು ಲಾಭದಾಯಕ ಘಟಕವಾಗುವ ವಿಶ್ವಾಸವಿದೆ.  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸ್ವಚ್ಛ ಗ್ರಾಮ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣ ಕಷ್ಟ ಸಾಧ್ಯವೇನಲ್ಲ ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ರಾಸಾಯನಿಕ ಗೊಬ್ಬರವು ಭೂಮಿಗೆ ವಿಷಕಾರಿಯಾಗುತ್ತಿದೆ ಎಂಬುದರ ಅರಿವು ರೈತರಲ್ಲಿ ಮೂಡುತ್ತಿದೆ.  ರೈತರೂ ಸಹ ಸಾವಯವ ಗೊಬ್ಬರ ಮತ್ತು ಜೈವಿಕ ಗೊಬ್ಬರಕ್ಕೆ ಆದ್ಯತೆ ನೀಡಲು ಆರಂಭಿಸಿದ್ದಾರೆ
     ಅಧ್ಯಯನ ಭೇಟಿಗಾಗಿ ಆಗಮಿಸಿದ್ದ ಬಳ್ಳಾರಿ ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಕಸ ವಿಲೇವಾರಿ ಘಟಕದ ಬಗ್ಗೆ ಜಿಲ್ಲೆಯ ಜಿ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಮಾಹಿತಿ ಪಡೆದುಕೊಂಡರು.  ಇಲ್ಲಿನ ಕಸ ವಿಲೇವಾರಿ ಘಟಕದ ವ್ಯವಸ್ಥೆ ನಿಜಕ್ಕೂ ಉತ್ತಮವಾಗಿದೆ.  ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಇಂತಹ ಘಟಕ ಸ್ಥಾಪನೆಗೆ ಕೊಪ್ಪಳ ಜಿಲ್ಲೆಯ ಅಧಿಕಾರಿಗಳ ನೆರವು ಪಡೆದುಕೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.
     ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮುಖ್ಯ ಲೆಕ್ಕಾಧಿಕಾರಿ ಚನ್ನಪ್ಪ ಎಸ್., ಕೊಪ್ಪಳ ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿಡಿಓಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಬಳ್ಳಾರಿ ಜಿಲ್ಲೆಯ ಅಧ್ಯಯನ ತಂಡವು ಜಿಲ್ಲೆಯ ವಿವಿಧ ಸಂಪೂರ್ಣ ಬಯಲು ಬಹಿರ್ದೆಸೆ ಗ್ರಾಮಗಳು, ಜೈವಿಕ ವಿಧಾನದಲ್ಲಿ ತಿಪ್ಪೆಗುಂಡಿಗಳ ವಿಲೇವಾರಿ ವ್ಯವಸ್ಥೆಯ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.
.  ಮುಂದಿನ ದಿನಗಳಲ್ಲಿ ಕಸದಿಂದ ಉತ್ಪಾದಿಸಲಾಗುವ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬರಲಿದ್ದು, ಗ್ರಾಮ ಪಂಚಾಯತಿಗಳು ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.

Advertisement

0 comments:

Post a Comment

 
Top