PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜು.೦೯  ಜಿಲ್ಲೆಯಲ್ಲಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಣೆಯಾಗಿರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಬಯಲು ಶೌಚ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಉತ್ತೇಜನ ನೀಡಲು ಕೊಪ್ಪಳ ಜಿಲ್ಲಾ ಪಂಚಾಯತಿ ಮುಂದಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.ಸ್ವಚ್ಛ ಭಾರತ ಅಭಿಯಾನದಡಿ ಉತ್ತಮ ಸಾಧನೆ ತೋರಿರುವ ತಾಲೂಕಿನ ಅಲ್ಲಾನಗರ ಮತ್ತು ಹುಚ್ಚೀರೇಶ್ವರ ಕ್ಯಾಂಪ್‌ಗೆ ಜಿಲ್ಲಾ ಪಂಚಾಯತಿ, ಸಿಡಿಎಲ್ ಸಂಸ್ಥೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಮಾಧ್ಯಮದ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿ


ದರು.  ಎಲ್ಲ ಗ್ರಾಮಗಳು ಸಂಪೂರ್ಣ ಬಯಲು ಶೌಚ ಮುಕ್ತ ಗ್ರಾಮಗಳಾಗಿ ಘೋಷಣೆಯಾದಾಗ ಮಾತ್ರ ಸ್ವಚ್ಛ ಗ್ರಾಮ, ಆರೋಗ್ಯಯುತ ದೇಶ ನಿರ್ಮಾಣದ ಕನಸು ನನಸಾಗಲು ಸಾಧ್ಯ.  ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಿಗೆ ವಯಕ್ತಿಕ ಶೌಚಾಲಯ ಒದಗಿಸುವುದು, ಗ್ರಾಮಗಳಲ್ಲಿನ ಘನ ಮತ್ತು ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಹಾಗೂ ನಿರ್ವಹಣೆಗೆ ಉತ್ತೇಜನ ನೀಡುವುದು, ಸ್ವಚ್ಛ ಹಾಗೂ ಸುಂದರ ಗ್ರಾಮಗಳ ನಿರ್ಮಾಣದೊಂದಿಗೆ ಗ್ರಾಮೀಣ ಜನರ ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಣೆ ಮಾಡುವುದು ಸ್ವಚ್ಛ ಭಾರತ ಅಭಿಯಾನದ ಉದ್ದೇಶವಾಗಿದೆ.  ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನ ೧೪, ಗಂಗಾವತಿ-೧೪, ಕುಷ್ಟಗಿ-೦೬ ಮತ್ತು ಯಲಬುರ್ಗಾ ತಾಲೂಕಿನ ೦೫ ಗ್ರಾಮಗಳು ಸೇರಿದಂತೆ ಒಟ್ಟು ೩೯ ಗ್ರಾಮಗಳನ್ನು ಈಗಾಗಲೆ ಸಂಪೂರ್ಣ ಬಯಲು ಶೌಚ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದ್ದು, ಬರುವ ಆಗಸ್ಟ್ ೧೫ ರ ಒಳಗಾಗಿ ೭೦ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಪ್ರಗತಿ ನಡೆದಿದೆ.  ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಘೋಷಣೆಯಾಗಿರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾ ಪಂಚಾಯತಿಯು ವಿಶೇಷ ಆದ್ಯತೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಇಂತಹ ಗ್ರಾಮಗಳಲ್ಲಿ ಪ್ರತಿಯೊಂದು ಕುಟುಂಬಗಳಿಗೆ ತೆಂಗು, ನಿಂಬೆ, ಕರಿಬೇವು, ನುಗ್ಗೆ, ಪೇರಲ, ಸೀತಾಫಲ, ನೆಲ್ಲಿ ಮುಂತಾದ ತೋಟಗಾರಿಕೆ ಗಿಡಗಳನ್ನು ಇಲಾಖೆಯಿಂದಲೇ ನೀಡಿ, ಅವುಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಿದೆ.  ಅಲ್ಲದೆ ಗ್ರಾಮದ ಶಾಲೆ, ಅಂಗನವಾಡಿ ಸೇರಿದಂತೆ ಸರ್ಕಾರಿ ಕಟ್ಟಡ, ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಗ್ರಾಮವನ್ನು ಹಸಿರಾಗಿಸುವುದು.  ಗ್ರಾಮದಲ್ಲಿನ ತಿಪ್ಪೆಗಳನ್ನು ಜೈವಿಕ ವಿಧಾನದ ಮೂಲಕ ಅಲ್ಪಾವಧಿಯಲ್ಲಿಯೇ ಉಪಯುಕ್ತ ಗೊಬ್ಬರವನ್ನಾಗಿಸಿಕೊಳ್ಳಲು ಇಲಾಖೆ ನೆರವಾಗಲಿದ್ದು, ರೈತ ಸಂಪರ್ಕ ಕೇಂದ್ರದ ಮೂಲಕ ಸಮರ್ಪಕವಾಗಿ ಜೈವಿಕ ಪುಡಿ ಸಾಮಗ್ರಿ ದೊರಕುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.  ಗ್ರಾಮದಲ್ಲಿ ಸಮರ್ಪಕ ರಸ್ತೆ, ಚರಂಡಿ ಮುಂತಾದ ಮೂಲಭೂತ ಸೌಕರ್ಯವನ್ನು ಆದ್ಯತೆ ಮೇಲೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.  ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳುವ ಮೂಲಕ, ಇನ್ನೂ ಶೌಚಾಲಯ ನಿರ್ಮಾಣದ ಪ್ರಗತಿಯ ಹಾದಿಯಲ್ಲಿರುವ ಗ್ರಾಮಗಳಿಗೆ ಸಂಪೂರ್ಣ ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿಸಲು ಹೆಚ್ಚಿನ ಉತ್ತೇಜನ ನೀಡುವುದು ಇಲಾಖೆಯ ಉದ್ದೇಶವಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.ತಾಲೂಕಿನ ಅಲ್ಲಾನಗರ ಗ್ರಾಮದಲ್ಲಿ ಸುಮಾರು ೧೭೫ ಕುಟುಂಬಗಳಿದ್ದು, ಕಳೆದ ವರ್ಷ ಕೈಗೊಂಡ ಶೌಚಾಲಯ ಅಭಿಯಾನದ ನಂತರ, ಇದೀಗ ಗ್ರಾಮದಲ್ಲಿ ಎಲ್ಲ ೧೭೫ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿವೆ.  ಈ ಮೂಲಕ ಸಂಪೂರ್ಣ ಬಯಲು ಶೌಚ ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ.  ಅದೇ ರೀತಿ ಓಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಚ್ಚೀರೇಶ್ವರ ಕ್ಯಾಂಪ್ ಗ್ರಾಮದಲ್ಲಿಯೂ ಕೂಡ ಸ್ವಚ್ಛ ಭಾರತ ಮಿಷನ್ ಯೋಜನೆಯ ಉದ್ದೇಶ ಈಡೇರಿದ್ದು, ಇಲ್ಲಿನ ಎಲ್ಲ ೫೭ ಕುಟುಂಬಗಳು ವಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡಿವೆ.   ಉಭಯ ಗ್ರಾಮಗಳಲ್ಲೂ ತಿಪ್ಪೆಗಳನ್ನು ಜೈವಿಕ ವಿಧಾನದ ಮೂಲಕ ವಿಲೇವಾರಿ ಮಾಡಲು ಇಲಾಖೆ ಕ್ರಮ ಕೈಗೊಂಡಿದೆ, ಅಲ್ಲದೆ ಗಿಡಗಳನ್ನು ನೆಟ್ಟು, ಹಸಿರು ಗ್ರಾಮಗಳನ್ನಾಗಿಸಲು ಕ್ರಮ ಜರುಗಿಸಲಾಗಿದೆ ಎಂದು ಕೃಷ್ಣ ಉದಪುಡಿ ಹೇಳಿದರು.ಸಂಪೂರ್ಣ ಬಯಲು ಬಹಿರ್ದೆಸೆ ಗ್ರಾಮವನ್ನಾಗಿಸಿದ ಸಾಧನೆ ಕುರಿತಂತೆ ವಿವರಣೆ ನೀಡಿದ ಅಲ್ಲಾನಗರ ಗ್ರಾ.ಪಂ. ಅಧ್ಯಕ್ಷ ಹೇಮಣ್ಣ ದೇವರಮನಿ ಅವರು, ಗ್ರಾಮದ ಎಲ್ಲರೂ ಸ್ವಂತ ಆರೋಗ್ಯ ಹಾಗೂ ಕುಟುಂಬದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಶೌಚಾಲಯ ನಿರ್ಮಾಣದ ಆಂದೋಲನಕ್ಕೆ ಮುಂದಾದೆವು, ಶೌಚಾಲಯ ನಿರ್ಮಾಣಕ್ಕೆ ಸರ್ಕಾರವೇ ಹಣ ಕೊಡುತ್ತಿದೆ, ಮನೆಯ ಬಳಿ ಶೌಚಾಲಯ ನಿರ್ಮಾಣ ಕುರಿತಂತೆ ಹಿರಿಯರಲ್ಲಿ ಮನೆ ಮಾಡಿದ್ದ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ, ಅವರಲ್ಲಿ ಅರಿವು ಮೂಡಿಸಿದಾಗ, ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಕಟ್ಟಿಸಿಕೊಳ್ಳಲು ಆಸಕ್ತಿ ತೋರಿದರು.  ಜಿಲ್ಲೆಯ ಎಲ್ಲ ಗ್ರಾಮಗಳೂ ಸಂಪೂರ್ಣ ಬಯಲು ಬಹಿರ್ದೆಸೆ ಗ್ರಾಮಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸಿಡಿಎಲ್ ಸಂಸ್ಥೆಯ ಗಣಪತಿ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಅಲ್ಲಾನಗರ ಗ್ರಾಮದಲ್ಲಿ ಶೌಚಾಲಯ ಹೊಂದಿದ ಕುಟುಂಬಗಳ ಮನೆಗಳ ಬಳಿ ಗಿಡಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ಜರುಗಿತು.

Advertisement

0 comments:

Post a Comment

 
Top