PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - ಜು. ೦೧ ಡಿಜಿಟಲ್ ಇಂಡಿಯಾ ಯೋಜನೆಯನ್ನು ಭಾರತ ಸರ್ಕಾರದ ಪ್ರಧಾನಮಂತ್ರಿಗಳು ಜು. ೦೧ ಬುಧವಾರದಂದು ದೇಶಕ್ಕೆ ಸಮರ್ಪಿಸಿದ್ದು, ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜು. ೦೧ ರಿಂದ ೦೭ ರವರೆಗೆ  ಡಿಜಿಟಲ್ ಇಂಡಿಯಾ ಸಪ್ತಾಹ ಆಚರಿಸಲಾಗುತ್ತಿದೆ.  ಇದರ ಅಂಗವಾಗಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದರು.
     ಪ್ರಧಾನಮಂತ್ರಿಗಳಿಂದ ಡಿಜಿಟಲ್ ಇಂಡಿಯಾ ಯೋಜನೆಯ ಸಮರ್ಪಣೆ ಹಾಗೂ ಸಪ್ತಾಹ ಆಚರಣೆಯ   ಉದ್ಘಾಟನೆ ಕಾರ್ಯಕ್ರಮವನ್ನು ಎನ್.ಐ.ಸಿ. ಸಹಯೋಗದೊಂದಿಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆಯ ನಂತರ ಈ ವಿಷಯ ತಿಳಿಸಿದ ಅವರು,  ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಮ್ಮ ವೈಯಕ್ತಿಕ ದಾಖಲೆಗಳನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಡಿಜಿಟಲ್ ಲಾಕರ್‌ನಲ್ಲಿ ಸಂಗ್ರಹಿಸಿ ಇಡಬಹುದಾದ ಡಿಜಿಟಲ್ ಲಾಕರ್ ಸಿಸ್ಟಂ ಜು. ೦೧ ರಿಂದ ಜಾರಿಗೆ ಬಂದಿದೆ.  ಇದಕ್ಕಾಗಿ ಡಿಜಿಟಲ್ ಇಂಡಿಯಾ ಸಪ್ತಾಹವನ್ನು ಜು. ೦೧ ರಿಂದ ೦೭ ರವರೆಗೆ ಆಚರಿಸಲಾಗುತ್ತಿದೆ.  
     ಡಿಜಿಟಲ್ ಲಾಕರ್ ಸಿಸ್ಟಂ ಭಾರತ ಸರ್ಕಾರದ ಯೋಜನೆಯಾಗಿದ್ದು, ಇದನ್ನು ಪ್ರಾಥಮಿಕವಾಗಿ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಹೊಂದುವ ಸಲುವಾಗಿ  ಜುಲೈ.೦೧ ರಿಂದ ೦೭ ರವರೆಗೆ ಡಿಜಿಟಲ್ ಇಂಡಿಯಾ ಸಪ್ತಾಹ (ವೀಕ್) ಆಚರಿಸಲಾಗುತ್ತಿದೆ.  ಈ ಯೋಜನೆಯಡಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ವೈಯಕ್ತಿಕ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳು ಮತ್ತು ಇನ್ನಿತರೆ ಅಮೂಲ್ಯ ದಾಖಲೆಗಳನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಡಿಜಿಟಲ್ ಲಾಕರ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ. ಅಲ್ಲದೇ ಡಿಜಿಟಲ್ ಲಾಕರ್ ಹೊಂದಿದವರಿಗೆ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡಲಾಗುವುದು. ಯಾವುದೇ ಸರ್ಕಾರಿ ಕೆಲಸಕ್ಕಾಗಿ ಅವಶ್ಯವಿರುವ ದಾಖಲೆಗಳನ್ನು ನೀಡುವಾಗ ಕೇವಲ ಪಾಸ್ ಕೋಡ್ ಮಾತ್ರ ನೀಡಬಹುದಾಗಿದೆ.   ಯೋಜನೆಯ ಕುರಿತು ಜಿಲ್ಲೆಯಾದ್ಯಂತ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಸಪ್ತಾಹದ ಅಂಗವಾಗಿ ಜು. ೦೨ ರಂದು ಆಯಾ ತಾಲೂಕು ಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಕ್ವಿಜ್ ಸ್ಪರ್ಧೆಗಳು, ತಾಲೂಕು ಕಚೇರಿಗಳಲ್ಲಿ ಇ-ಗವರ್ನೆನ್ಸ್ ಪ್ರೆಸೆಂಟೇಷನ್ ನಡೆಸಲಾಗುವುದು.  ಜು. ೦೩ ರಂದು ಗ್ರಾಮ ಪಂಚಾಯತಿ ಮತ್ತು ಹೋಬಳಿ ಮಟ್ಟದಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ಒದಗಿಸುವುದು, ಜು. ೦೪ ರಂದು ಜಿಲ್ಲಾ ಮಟ್ಟದಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಡಿಜಿಟಲ್ ಲಾಕರ್ ಸಿಸ್ಟಂ, ಇ-ಗವರ್ನೆನ್ಸ್, ಆಧಾರ್ ಯೋಜನೆ ಕುರಿತು ಮಾಹಿತಿ ಒದಗಿಸುವುದು.  ಜು. ೦೫ ರಂದು ಜಿಲ್ಲಾ ಮಟ್ಟದಲ್ಲಿ ಪೇಪರ್ ರಹಿತ ಆಡಳಿತ ವ್ಯವಸ್ಥೆ ಕುರಿತು ಕಾರ್ಯಗಾರ, ಡಿಜಿಟಲ್ ಇಂಡಿಯಾ ವೀಕ್ ಕುರಿತು ಕಿರು ಚಿತ್ರ ಪ್ರದರ್ಶನ ಹಾಗೂ ಡಿಜಿಟಲ್ ಲಾಕರ್ ವ್ಯವಸ್ಥೆ ಹಾಗೂ ಆಧಾರ್ ಯೋಜನೆಗೆ ನೋಂದಣಿ ಕಾರ್ಯ ಮಾಡಲಾಗುವುದು.  ಜು. ೦೬ ರಂದು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಲ್ಲಿನ ತಂತ್ರಾಂಶಗಳ ಬಳಕೆ ಕುರಿತು ಕಾರ್ಯಗಾರ ಹಾಗೂ ಡಿಜಿಟಲ್ ಲಾಕರ್ ವ್ಯವಸ್ಥೆಗೆ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.  ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಆಯೋಜಿಸಲು ಅಪರ ಜಿಲ್ಲಾಧಿಕಾರಿ ಹಾಗೂ ಎನ್.ಐ.ಸಿ. ಜಿಲ್ಲಾ ಅಧಿಕಾರಿಗಳಿಗೆ ಹೆಚ್ಚಿನ ಹೊಣೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಎನ್‌ಐಸಿ ಜಿಲ್ಲಾ ಅಧಿಕಾರಿ ವೀರಣ್ಣ ಏಳುಬಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಆಡಿಟೋರಿಯಂ ಹಾಲ್‌ನಲ್ಲಿ ಉಪಸ್ಥಿತರಿದ್ದು  ಪ್ರಧಾನಮಂತ್ರಿಗಳಿಂದ ಡಿಜಿಟಲ್ ಇಂಡಿಯಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿದರು.

Advertisement

0 comments:

Post a Comment

 
Top