PLEASE LOGIN TO KANNADANET.COM FOR REGULAR NEWS-UPDATES


ಜಗತ್ತಿನ ಅಂಧಕಾರ ತೊಳೆದು ಬೆಳಕ ನೀಡಲು ಆತ ಮುಕುಟ ತೊರೆದು ಬಂಧಮುಕ್ತನಾಗಿ ಹೊರ ಬಂದರೂ ಮುಕುಟುಗಳೇ ಆತನೆಡೆಗೆ ನಡೆದು ಬಂದವು.  ಆತ ಮುನ್ನಡಿ ಇಟ್ಟರೆ ಆ ಮುಕುಟಗಳು ಆತನ ಹಿಂದೆ ಪುಟ್ಟ ಹೆಜ್ಜೆ ಇಡುತ್ತ ಸಾಗಿದವು. ಹೀಗೆ ಮುಕುಟ ದಿಕ್ಕರಿಸಿ ಪರಿಹಾರ ಕಂಡುಕೊಂಡು, ಬೆಳಕಿನ ಹೊಂಗಿರಣ ಹರಡುತ್ತಾ ನಡೆದಾತನೇ ಗೌತಮ ಬುದ್ಧ.
ಬುದ್ಧನ ಜೀವನ ಚರಿತೆಯಲ್ಲಿ ಬುದ್ಧ ಪೂರ್ಣಿಮೆ, ವೈಶಾಖ ಶುದ್ಧ ಪೂರ್ಣಿಮೆಯ ಬುದ್ಧನ ಜೀವನದಲ್ಲಿ ಅತ್ಯಂತ ಮಹತ್ವದ ದಿನಗಳಾಗಿವೆ. ಏಕೆಂದರೆ ಬುದ್ಧನ ಜನನ ಜ್ಞಾನೋದಯ ಮತ್ತು ಪರಿನಿರ್ವಾಣ ಈ ಮೂರು ಮಹತ್ವದ ಘಟನೆಗಳು ಈ ಪೂರ್ಣಿಮೆಯ ದಿನಗಳಂದೇ ಘಟಿಸಿದವು ಎಂಬುದು ವಿಶ್ವದ ವಿಸ್ಮಯಕಾರಿ ಸತ್ಯ ಸಂಗತಿ. ಜಗತ್ತಿನ ಕಷ್ಟಗಳಿಗೆ ಪರಿಹಾರ ನೀಡಿ ಅಮೃತದ ಸವಿಯ ಉಣಬಡಿಸಲು ಬಂದ ಜಗದೋದ್ಧಾರ ಬುದ್ಧ.
ಜಾಗತಿ ಮಟ್ಟದಲ್ಲಿ ಹುಟ್ಟಿದ-ಬೆಳದ-ಅವತಿಗೈದ ಧರ್ಮಗಳನ್ನು ಅವಲೋಕಿಸಿದಾಗ, ಧರ್ಮಾವಲಂಬಿ ಸಮಾಜವನ್ನೇ ಹಾಸಿ-ಹೊದ್ದಿರುವ ಭಾರತದಲ್ಲೇ ಹಲವು ಧರ್ಮಗಳು ಜನ್ಮ ತಳೆದಿವೆ. ಇಂಥ ಹಲವು ಧರ್ಮಗಳಲ್ಲಿ ಭಾರತದಲ್ಲಿ ಹುಟ್ಟಿ, ವಿಶ್ವದ ಹಲವು ದೇಶಗಳಲ್ಲಿ ರಾಷ್ಟ್ರೀಯ ಧರ್ಮವಾಗಿ ಸ್ವೀಕಾರಾರ್ಹವಾಗಿರುವ ಬೌದ್ಧ ಧರ್ಮ ಎಂದಿನಿಂದಲೂ ಎಲ್ಲೆಡೆ ಪ್ರಸ್ತುತತೆ ಎನಿಸಿಕೊಂಡಿದೆ. ಭಾರತದಲ್ಲಿ ವೈದೀಕತೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮವನ್ನು ದಿಕ್ಕರಿಸಿ ಬುದ್ಧನೆಂಬ ಮಹಾತ್ಮ ಇಹಲೋಕದ ಸತ್ಯ ಆಧಾರಿತ ಬೌದ್ಧ ಧರ್ಮ ಹುಟ್ಟುಹಾಕಿದ.
ಯಾರು ಬದುಕನ್ನು ಇದ್ದಂಥೆ ಸ್ವೀಕರಿಸುತ್ತಾರೋ ಆವರು ಬದುಕನ್ನು ಇದ್ದಂತೆ ಪ್ರೀತಿಸುವ ಗುಣಧರ್ಮ ಹೊಂದಿರುತ್ತಾರೆ. ಯಾರು ಬದುಕನ್ನು ಪ್ರೀತಿಸುತ್ತಾರೋ ಅವರು ಸತ್ಯವನ್ನು ಅಂಗೀಕರಿಸುತ್ತಾರೆ. ಯಾರು ಸತ್ಯವನ್ನು ಅಂಗೀಕರಿಸುತ್ತಾರೋ ಅವರು ಸರಳವಾಗಿರುತ್ತಾರೆ. ಇದುವೇ ಬೌದ್ಧ ಧರ್ಮದ ಮೂಲ ಆಶಯ-ಆತ್ಮವೂ ಹೌದು.
ಅಹಿಂಸೆ, ಕರುಣೆ, ಮಾನವೀಯತೆ, ಸವೋದ್ಧಾರಗಳ ಜೀವನ ಕೇಂದ್ರಗಳನ್ನು ತನ್ನ ಆತ್ಮವನ್ನಾಗಿ ಧಾರಣ ಮಾಡಿಕೊಂಡು, ಮಹಾತ್ಮಾ ಬುದ್ಧನ ಪ್ರಣೀತವಾದ ಬೌದ್ಧ ಧರ್ಮ ಜಗತ್ತಿನ ಅತ್ಯಂತ ಪ್ರಮುಖ ಹಾಗೂ ಪ್ರಗತಿಪರ ಧರ್ಮವಾಗಿ ಸ್ವೀಕೃತವಾಗಿದೆ. ಇತರೆ ಧರ್ಮಗಳಿಗಿಂತ ವಿಭಿನ್ನವಾದ ತತ್ವಾದರ್ಶಗಳನ್ನು ಆಂತರ್ಯದಲ್ಲಿ ಇರಿಸಿಕೊಂಡಿದೆ ಎಂಬ ಕಾರಣಕ್ಕಾಗಿಯೇ ಬೌದ್ಧ ಧರ್ಮ ದೇಶ, ಭಾಷೆ, ಜಾತಿ, ಜನಾಂಗಗಳ ಸಂಕುಚಿತಗಳ ಪರೀಧಿಗಳನ್ನು ತೊರೆದು ಮಾನವ ಅಖಂಡತೆಯ ಮಹಾ ಧ್ಯೇಯವನ್ನು ಉಸಿರಾಗಿಸಿಕೊಂಡಿದೆ.
ಚಿಕ್ಕವಯದಲ್ಲಿ ಪ್ರಪಂಚದ ನೋವುಗಳಿಗೆ ಅಸಮಾನತೆಗಳಿಗೆ ನಶ್ವರತೆಗಳಿಗೆ ತನ್ನ ಹೃಯದವನ್ನು ಮುಕ್ತವಾಗಿ ತೆರೆದಿಟ್ಟು, ಈ ಅಸಾಧಾರಣ ಮಾನವ ಪ್ರೇಮಿ ತನ್ನ ತತ್ವ-ಆದರ್ಶ-ಸಂದೇಶಗಳ ಕಕ್ಷೆಯಲ್ಲಿ ಅಖಂಡ ಮಾನವ ಕುಲವನ್ನು ಬಂಧಿಸಿದ ಮಹಾನ್ ಚೇತನವೇ ಗೌತಮ ಬುದ್ಧ. ಬುದ್ಧ ತನ್ನ ಪರಿವ್ರಾಜಕತೆಯ ಸಂದರ್ಭದಲ್ಲಿ ಮೇಲು-ಕೀಳು, ಜಾತಿ-ಮತ ಅಂತೆಲ್ಲ ಯಾವುದನ್ನೂ ಪ್ರತ್ಯೇಕಿಸದೇ ಎಲ್ಲ ಮನುಷ್ಯರ ಹೃದಯ ಬಿಡಿದೆಬ್ಬಿಸಿ, ಪರಸ್ಪರರ ಭಾವನೆಗಳನ್ನು ಬೆಸೆಯುತ್ತಾ, ಸಮಚಿತ್ತದ ನೆಲೆಯಲ್ಲಿ ಸರ್ವಸಮಾನತೆಯ ಸಂದೇಶ ಸಾರುತ್ತಾ ಸಾಗಿದನು. ಆತನ ಸಹಜನೆಯ ಸಂದೇಶಗಳ ವಾದ ಸರಣಿಗಳು ಧಾರ್ಮಿಕ ಸಂಕುಚಿತದ ಸೆರೆಯಲ್ಲಿದ್ದ ಮನಸುಗಳಿಗೆ ಹಿತವೆನಿಸಿ, ಆತನ ಹಿಂದೆ ಹೆಜ್ಜೆ ಹಾಕುತ್ತಾ ಬುದ್ಧನ ಅನುಯಾಯಿಗಳಾದರು.
ಸಮಾಜದ ಜನರು ಮಾತ್ರವಲ್ಲ ಸ್ವಯಂ ಬುದ್ಧನಿಗೆ ಜನ್ಮನೀಡಿದ ಆತನ ಹೆತ್ತವರಾದ ಶುದ್ಧೋಧನ, ಧರ್ಮಪತ್ನಿ ಯಶೋಧರೆ, ಪುತ್ರ ರಾಹುಲ್ ಅವರೇ ಬೌದ್ಧ ಧರ್ಮದ ದೀಕ್ಷೆ ಪಡೆದು, ಧಮ್ಮ ಪ್ರಸಾರಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಸಿಕೊಳ್ಳುತ್ತಾರೆ. ಅಷ್ಟೇ ಏಕೆ ವಿಶ್ವಮಾನ್ಯ ಎಂಬ ಕೀರ್ತಿ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದ ಯುದ್ಧಪ್ರಿಯ ಸಾಮ್ರಾಟ ಅಶೋಕ ಎಂಬ ಚಕ್ರವರ್ತಿಯೇ ಬೌದ್ಧ ಧರ್ಮದ ಅಹಿಂಸೆಯ ತತ್ವಗಗಳಿಗೆ ಮಾರುಹೋಗಿ ಸಾಮ್ರಾಜ್ಯ ತೊರೆದನಲ್ಲದೇ, ಬೌದ್ಧ ಧರ್ಮ ಪ್ರಸಾರಕ್ಕೆ ಮುಂದಾದ. ಮಾತ್ರವಲ್ಲದೇ ಅಶೋಕ ಚಕ್ರವರ್ತಿಯ ಮಕ್ಕಳಾದ ಸಂಗಮಿತ್ರೆ, ಮಹೇಂದ್ರರೂ ಬೌದ್ಧ ಭಿಕ್ಷುಗಳಾಗಿ ಬೌದ್ಧ ಧಮ್ಮ ಪ್ರಚಾರಕ್ಕೆ ದೇಶ-ವಿದೇಶಕ್ಕೆಲ್ಲ ಸಂಚಾರ ಮಾಡುತ್ತಾರೆ. ರಾಜನರ್ತಕಿಯಾಗಿದ್ದ ಅಪ್ರತಿಮ ಸುಂದರಿ ಆಮ್ರಪಾಲಿ ಕೂಡ ಬುದ್ಧನ ದರ್ಶನದ ಬಳಿಕ ಅಹಂಮಿಕೆ ತೊರೆದು ಬೌದ್ಧ ಧರ್ಮ ಪ್ರಸಾರದ ಜೊತೆಗೆ ಸ್ತೂಪಗಳನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂಬುಕ್ಕೆ ಐತಿಹಾಸಿಕ ದಾಖಲೆಗಳು ಬುದ್ಧನ ಧಮ್ಮ ಶಕ್ತಿಯ ಪ್ರತೀಕ.
ಭಾರತದಲ್ಲಿ ಬೌದ್ಧ ಧರ್ಮ ಹಿಂದುತ್ವದ ವಿಶಾಲ ತ್ವದ ಮೇಲೆ ಬೆಳೆದು ನಿಂತಿದ್ದು, ವಿದೇಶದಲ್ಲಿ ಅದರ ಒಂದು ಅಂಗವಾಗಿ ’ಝೆನ್’ ಎಂಬ ತತ್ವ ಬೆಳೆಯುತ್ತದೆ. ಭಾರತದ ಬೌದ್ಧ ಧರ್ಮ ಗುರು ’ಪ್ರಾಣತಾರಾ’ ಎಂಬ ಬೌದ್ಧ ಭಿಕ್ಷು ಧರ್ಮ ಪ್ರಚಾರಕ್ಕೆ ಹೊರಟ ಸಂದರ್ಭದಲ್ಲಿ ಬುದ್ಧನ ಧ್ಯಾನವನ್ನು ಬೋಧಿ ಧರ್ಮ ಎಂದು ಕರೆದರು. ಈ ಬೊಧಿ ಧರ್ಮ ಚೈನಾ ದೇಶದಾದ್ಯಂತ ಹರಡಿಕೊಂಡಾಗ ಚೈನಾದದ ಹಿಡಿತದಲ್ಲೇ ಇದ್ದ ಜಪಾನ್ ದೇಶಕ್ಕೂ ಪ್ರವೇಶಿಸಿತು. ಬುದ್ಧನನ್ನು, ಬುದ್ಧನ ತತ್ವ-ಸಂದೇಶಗಳನ್ನು ಇತರೆ ದೇಶಗಳು ಸ್ವೀಕರಿಸಿದಂತೆ ಸಹಜವಾಗಿ ಚೈನಾ ಹಾಗೂ ಅದರ ಅಧೀನದಲ್ಲಿದ್ದ ಜಪಾನ್ ದೇಶಗಳು ಸ್ವೀಕರಿಸಿದವು.
ಝೆನ್ ಎಂದರೆ ಧ್ಯಾನ, ಧ್ಯಾನದ ಮೂಲವೆಂದರೆ ಭಾರತೀಯ ಮೂಲದ ಹಿಂದೂ ಧರ್ಮ. ಹಿಂದೂ ಧರ್ಮದಿಂದ ಪ್ರತ್ಯೇಕವಾಗಿ ಬೆಳೆದು ಬಂದಿರುವ ಬೌದ್ಧ ಧರ್ಮದ ಧ್ಯಾನವೇ ಬೇರೆ ಬೇರೆ ದೇಶಗಳಿಗೆ ಪಸರಿಸಿ, ಅಲ್ಲೆಲ್ಲ ಆಯಾ ದೇಶಗಳ ಭಾಷಾ ಶೈಲಿಯಲ್ಲಿ ಉಚ್ಛಾರಣೆ ಮಾಡಲ್ಪಟ್ಟಿತು. ಹೀಗೆ ಭಾರತೀಯ ಧ್ಯಾನ ಚೀನಿಯರ ಬಾಯಲ್ಲಿ ಚಾನ್ ಎಂದು, ಜಪಾನೀಯರಿಂದ ಝೆನ್ ಎಂದು ಉಚ್ಛರಿಸಲ್ಪಟ್ಟಿತು. ಅಷ್ಟಲ್ಲದೇ ಝೆನ್ ಬೌದ್ಧ ಧರ್ಮಿಯರಲ್ಲೇ ಮಹಾಯಾನೀಯರ ಪ್ರತಿರೂಪದ ಒಂದು ಪಂಥವಾಗಿ ಗುರುತಿಸಲ್ಪಟ್ಟಿತು. ಝೆನ್ ವಿಚಾರ ಶೂನ್ಯವಲ್ಲದೇ ಇರಬಹುದು, ಆದರೆ ಶಬ್ಧಾತೀತ ಜ್ಞಾನ ಹಾಗೂ ಎಲ್ಲಾ ವಿಚಾರಧಾರೆಯಿಂದಾಚೆ.
ಝೆನ್ ಎಂದರೆ ಬುದ್ಧಿ, ಬುದ್ಧಿಯೇ ಬುದ್ಧ, ಬುದ್ಧನು ಒಂದು ಪಂಥ, ಆ ಪಂಥವೇ ಒಂದು ಝೆನ್ ಎಂದು ಜಪಾನೀಯ ತತ್ವಜ್ಞಾನಿ ಪೈನೆ ಹೇಳಿದರೆ, ಜಪಾನೀಯನೇ ಆದ ಸುಝುಕಿ ಎಂಬ ಮತ್ತೊಬ್ಬ ತತ್ವಜ್ಞಾನಿ ಏನನ್ನೂ ಯೋಚಿಸದೇ ಬುದ್ಧಿ ಖಾಲಿ ಇರಬೇಕು ಹಾಗೂ ಸ್ವತಂತ್ರವಾಗಿರಬೇಕು. ಅಂದರೆ ಯಾವುದನ್ನೂ ವಿಚಾರ ಮಾಡಲಾಗದ ಸ್ಥಿತಿಯಲ್ಲಿ ಇರುವುದೇ ಝೆನ್ ಎಂದು ಅರ್ಥೈಸುತ್ತಾನೆ. ಈ ಝೆನ್ ತತ್ವ ಪ್ರತಿಪಾದಕನ ಶ್ರಮದ ಪರಿಣಾಮವೇ ಝೆನ್ ಅಮೆರಿಕಾ ಸೇರಿಸದಂತೆ ಯುರೋಪಿನ ಹಲವು ರಾಷ್ಟ್ರಗಳಿಗೂ ಹೆಜ್ಜೆ ಹಾಕುವಂತಾಯಿತು. 
ಬುದ್ಧನ ಕುರಿತು ಕನ್ನಡದ ವರಕವಿ ಡಾ.ದ.ರಾ.ಬೇಂದ್ರೆ ಅವರು ತಮ್ಮ ಕವನವೊಂದರದಲ್ಲಿ ಹೀಗೆ ಹೆಳುತ್ತಾರೆ.
...
ಬುದ್ಧನೆಂಬುವ ಒಬ್ಬ ಎಂದೋ ಇದ್ದ
ಎನುವಂತೆ ಇಂದಿಗೂ ಇಲ್ಲೇ ಇಲ್ಲ
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೇ ಇತ್ತು...
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧ ಜಯಂತಿಗಿದೆ ಜಯವೆಂದಿಗೂ
ಬುದ್ಧನ ಸಮಾದಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ

ಬೌದ್ಧ ಧರ್ಮವು ಭಾರತದದಲ್ಲಿ ಜನಿಸಿದರೂ ಇತರೆ ಧರ್ಮಗಳಂತೆ ಭಾರತದಲ್ಲೇ ಬಂಧಿಯಾಗಲಿಲ್ಲ. ಬದಲಾಗಿ ಅನ್ಯ ಧರ್ಮಗಳನ್ನು ಹೊಂದಿದ್ದ ಚೈನಾ, ಜಪಾನ್, ಶ್ರೀಲಂಕಾ, ಮಂಗೋಲಿಯಾ, ಬರ್ಮಾ (ಮ್ಯಾನ್ಮಾರ), ಜಾವಾ, ಸುಮಾತ್ರಾ, ಕಾಂಬೋಡಿಯಾ, ಥೈಲ್ಯಾಂಡ, ನೇಪಾಳ, ಟಿಬೇಟ್, ಮಲೇಶಿಯಾ, ಸಿಂಗಪೂರ, ಕೋರಿಯಾ, ಇಂಡೋನೇಶಿಯಾ ಹೀಗೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧರ್ಮ ಪ್ರವೇಶಿಸಿ, ಪ್ರಜ್ವಲಿಸಿ ಬೆಳಕಾಗಿ ನಿಂತಿದೆ. ಪರಿಣಾಮವೇ ಇಂದು ಜಾಗತಿಕ ಮಟ್ಟದಲ್ಲಿ ಸುಮಾರು ೪೦ ಕೋಟಿಗೂ ಅಧಿಕ ಜನರು ಬುದ್ಧನ ಅನುಯಾಯಿಗಳಾಗಿ ಬೌದ್ಧ ಧರ್ಮ ಸ್ವೀಕರಿಸಿ ಬುದ್ಧಂ ಶರಣಂ ಗಚ್ಛಾಮಿ ಎನ್ನುತ್ತಿದ್ದಾರೆ.
ಒಂದು ಜ್ಯೋತಿಯಿಂದ ಮತ್ತೊಂದು ಜ್ಯೋತಿಯನ್ನು ಬೆಳಗಿಸಬಹುದೇ ಹೊರತು, ನಂದಿದ ಪ್ರಣತಿಯಿಂದ ಮತ್ತೊಂದು ಜ್ಯೋತಿ ಬೆಳಗಿಸಲು ಅಸಾಧ್ಯ, ಹೀಗಾಗಿ ಜ್ಞಾನದ ಜ್ಯೋತಿಯಿಂದ ಮತ್ತೊಂದು ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವೇ ಹೊರತು, ಅಜ್ಞಾನದಿಂದ ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವಿಲ್ಲ ಎಂಬ ಸರಳ ಸೂತ್ರವನ್ನು ಬುದ್ಧ ಅಂಧಕಾರ ತುಂಬಿದ ಈ ಜಗಕೆ ಸನ್ಮಾರ್ಗ ಸಂದೇಶ ನೀಡಿದ. ಭಾರತದಲ್ಲಿ ಬೌದ್ಧ ಧರ್ಮವನ್ನು ಜಾತಿ-ಮತ-ಪಂಥ ಆಧಾರಿತವಾಗಿ ಗುರುತಿಸಲ್ಪಟ್ಟರೆ, ಭಾರತದ ಆಚೆಯ ದೇಶಗಳಲ್ಲಿ ಬುದ್ಧನನ್ನು ಹಾಗೂ ಆತನ ಅಪರೂಪದ ತತ್ವ-ಸಂದೇಶಗಳ ಬೌದ್ಧ ಧರ್ಮವನ್ನು ಬುದ್ಧ ನೀಡಿದ ಸ್ಥಿತಿಯಲ್ಲೇ ಸ್ವೀಕರಿಸಲ್ಪಟ್ಟವು. ಇದೇ ಕಾರಣಕ್ಕೆ ಶತ ಶತಮಾನಗಳಿಂದ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧರ್ಮ ವಿಶ್ವಮಾನ್ಯವಾಗಿ ಬೆಳೆಯುತ್ತಾ, ಬೆಳಗುತ್ತಾ, ಬೆಳಕಾಗುತ್ತಾ ಬರುತ್ತಿದೆ.

--------------

ರೇಣುಕಾದೇವಿ ಜಿ. ಕಮತರ
ಎಂ.ಎ. ಎಂ.ಫಿಲ್,
ವಚನ ಸದನ, ಬಸವ ನಗರ
ಮಾನವಿ-೫೮೪೧೨೩ ಜಿ.ರಾಯಚೂರು
ಮೊ.೯೯೪೫೦೯೫೬೦೬ / ೯೯೮೬೧೯೨೩೯೮

Advertisement

0 comments:

Post a Comment

 
Top