PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಮಾ. ೨೪ : ಜಿಲ್ಲೆಯಲ್ಲಿ ಮಾ. ೩೦ ರಿಂದ ಏ. ೧೩ ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಸರ್ಕಾರಿ ಶಾಲೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡಲೆ ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಈ ಬಾರಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರನ್ವಯ ಪರೀಕ್ಷಾ ಕೇಂದ್ರಗಳಾಗಿರುವ ಸರ್ಕಾರಿ ಶಾಲೆಗಳಲ್ಲಿ ಸಂಚಿತ ನಿಧಿಯಲ್ಲಿನ ಅನುದಾನವನ್ನು ಬಳಸಿಕೊಂಡು ಕೂಡಲೆ ಸಿಸಿ ಕ್ಯಾಮೆರಾ ಅಳವಡಿಸಬೇಕು.  ಅನುದಾನದ ಕೊರತೆಯಾದಲ್ಲಿ, ಡಿಡಿಪಿಐ ಮೂಲಕ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.  ಪರೀಕ್ಷಾ ಕೇಂದ್ರಗಳಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾ. ೩೦ ರ ಒಳಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಳಿಸಬೇಕು.  ತಪ್ಪಿದಲ್ಲಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.  ಈ ಬಾರಿ ಒಟ್ಟು ೧೮೧೨೧ ವಿದ್ಯಾರ್ಥಿಗಳು   ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು ೬೨ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷೆಯು ಸಮರ್ಪಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ರಾಜ್ಯದ ವಿವಿಧೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗದ ಬಗ್ಗೆ ಇತ್ತೀಚೆಗೆ ಹಲವಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿದ್ದು, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು.  ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು, ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವ ಮೂಲಕ ಪರೀಕ್ಷಾಭಯ ಹೋಗಲಾಡಿಸಬೇಕು.  ಪರೀಕ್ಷಾ ಕೊಠಡಿಯೊಳಗೆ ಮಾಧ್ಯಮದವರಿಗೆ ಪ್ರವೇಶ ನೀಡುವಂತಿಲ್ಲ ಆದರೆ ಪರೀಕ್ಷಾ ಕೇಂದ್ರದ ಹೊರಗಿನ ಫೋಟೋ ಅಥವಾ ಚಿತ್ರೀಕರಣ ನಡೆಸಬಹುದು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಬೇಕು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.  ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಕೊಡುವುದು ಅಥವಾ ಸಹಕರಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ಒಟ್ಟು ೧೭೧೦೧ ರೆಗ್ಯುಲರ್ ವಿದ್ಯಾರ್ಥಿಗಳು, ೫೮೬ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೪೩೪ ಖಾಸಗಿ ಅಭ್ಯರ್ಥಿಗಳು ಹೀಗೆ ಒಟ್ಟಾರೆ  ೧೮೧೨೧ ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೨೦, ಗಂಗಾವತಿ-೨೧, ಕುಷ್ಟಗಿ-೦೯ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೨ ಸೇರಿದಂತೆ ಒಟ್ಟು ೬೨ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷಾ ನಕಲು ತಡೆಗೆ ರಾಜ್ಯ ಮಟ್ಟದಿಂದ ಜಾಗೃತ ದಳ ಆಗಮಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾಗೃತ ದಳ ರಚಿಸಲಾಗಿದೆ.  ಜಿಲ್ಲೆಯಲ್ಲಿ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರವನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಇಲ್ಲಿಗೆ ಹೆಚ್ಚುವರಿಯಾಗಿ ಸ್ಥಾನಿಕ ಜಾಗೃತ ದಳವನ್ನು ನೇಮಿಸಲಾಗುವುದು.  ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ರವಾನೆಗಾಗಿ ಒಟ್ಟು ೨೨ ಮಾರ್ಗಗಳನ್ನು ನಿಗದಿ ಮಾಡಲಾಗಿದ್ದು, ಎಲ್ಲ ಮಾರ್ಗಗಳಿಗೆ ಪ್ರತ್ಯೇಕ ವಾಹನ ಬಳಸಲಾಗುವುದು.  ವಿದ್ಯಾರ್ಥಿಗಳು ಮೊಬೈಲ್ ಅಥವಾ ಕ್ಯಾಲುಕುಲೇಟರ್ ಅನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲಎಂದರು.
  ಸಭೆಯಲ್ಲಿ ಡಿವೈಎಸ್‌ಪಿ ರಾಜೀವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್,  ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

0 comments:

Post a Comment

 
Top