ಬಳ್ಳಾರಿ, ಮಾ. ೨೯: ಮಕ್ಕಳು, ಯುವ ಜನತೆಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ರಂಗಭೂಮಿ ಸೂಕ್ತ ವೇದಿಕೆ ಎಂದು ಅರಿವು ಸಂಘಟನೆಯ ಸಂಚಾಲಕ ಸಿರಿಗೆರೆ ಪನ್ನರಾಜ್ ತಿಳಿಸಿದರು.
ಮಯೂರ ಕಲಾ ಸಂಘ ಹಾಗೂ ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮಕ್ಕಳು, ಯುವಜನತೆ ಸಮಾಜಮುಖಿಗಳಾಗಿ ರೂಪಗೊಳ್ಳುವರು. ರಂಗಭೂಮಿ ಆತ್ಮ ವಿಶ್ವಾಸ ಬೆಳೆಸುವುದರ ಜತೆಗೆ ಸಹನೆ, ಸೌಜನ್ಯವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ರಂಗ ಆಂದೋಲನದ ಮೂಲಕ ಪರಿವರ್ತನೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು ತಲಾ ೨೦-೩೦ ನಿಮಿಷದ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರೆ ಪರಿಣಾಮಕಾರಿಯಾಗಿರುತ್ತದೆ ಎಂದರು.
ಭರಣಿ ಸಾಂಸ್ಕೃತಿಕ ವೇದಿಕೆ ಪ್ರತಿ ವರ್ಷವೂ ಕಲಾವಿದರ ಮನೆಗಳಿಗೆ ತೆರಳಿ ರಂಗ ಕಲಾವಿದರನ್ನು ಕುಟುಂಬದ ಸದಸ್ಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸನ್ಮಾನಿಸುವ ಮೂಲಕ ವಿಶ್ವರಂಗಭೂಮಿ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಿರುವುದು ಮಾದರಿಯಾಗಿದೆ ಎಂದು ಪನ್ನರಾಜ್ ಶ್ಲಾಘಿಸಿದರು.
ಭರಣಿ ವೇದಿಕೆಯ ಅಧ್ಯಕ್ಷ ಸಿ. ಮಂಜುನಾಥ್ ಮಾತನಾಡಿ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಸರಕಾರ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ತಿಳಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಸೊಂತಾ ಗಿರಿಧರ್, ಮಯೂರ ಕಲಾ ಸಂಘದ ಅಧ್ಯಕ್ಷ ಕೆ. ಮಲ್ಲೇಶ್ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಭರಣಿ ವೇದಿಕೆಯ ಪರವಾಗಿ ರಂಗ ಕಲಾವಿದರಾದ ಬಿ. ಗಂಗಣ್ಣ, ಶ್ರೀಮತಿ ಎಂ. ರೂಪ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಕಸಂ ಪದಾಧಿಕಾರಿಗಳಾದ ಕೆ. ಎಸ್. ಚಂದ್ರಶೇಖರ್, ಕೆ ಎಂ ಗುರುಬಸಯ್ಯ, ಕೆ ಮದನ ಮೋಹನ್, ಶಿವೇಶ್ವರ ಗೌಡ, ಯು ರಮೇಶ್, ಸೊಂತ ಬಾಬು, ಶ್ರೀಮತಿ ಗಂಗಣ್ಣ ಮತ್ತಿರರು ಉಪಸ್ಥಿತರಿದ್ದರು.
ಅಧ್ಯಾಪಕಿ ರೂಪಾ ಪ್ರಾರ್ಥಿಸಿದರು. ಅಧ್ಯಾಪಕ ಬಸವರಾಜ ಜೋಳದರಾಶಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಗುರು ಚಾ ಮ ಗಂಗಾಧರಯ್ಯ ವಂದಿಸಿದರು. ಅಧ್ಯಾಪಕ ಕೆ ಎಂ ಸಿದ್ಧಲಿಂಗಯ್ಯ ನಿರೂಪಿಸಿದರು.
0 comments:
Post a Comment