ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಕಾರಕ್ಕೆ ತರಬೇಕು. ಆ ಮೂಲಕ ತನ್ನ ಕೋಮುವಾದಿ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು ಎಂಬುದು ಆರೆಸ್ಸೆಸ್ ಷಡ್ಯಂತ್ರವಾಗಿದೆ. ರಾಜ್ಯದ ಮೇಲ್ಜಾತಿಯ ಮಠಾೀಶರಿಗೂ, ಗಣಿ ಮತ್ತು ರಿಯಲ್ ಎಸ್ಟೇಟ್ ಮಾಫಿಯಾಕ್ಕೂ ಬಿಜೆಪಿ ಅಕಾರಕ್ಕೆ ಬರುವುದು ಬೇಕಾಗಿದೆ. ಸರಕಾರಿ ಬೊಕ್ಕಸವನ್ನು ಭಕ್ಷಣೆ ಮಾಡುತ್ತಿರುವ ಅಕಾರಶಾಹಿಗೂ ಬಿಜೆಪಿ ಪರ ಒಲವು ಇದೆ. ಬಿಜೆಪಿ ಅಕಾರಕ್ಕೆ ಬರಬೇಕೆಂದರೆ, ಈಗಿರುವ ಕಾಂಗ್ರೆಸ್ ಸರಕಾರವನ್ನು ಉರುಳಿಸಬೇಕು. ಚುನಾವಣೆವರೆಗೆ ಕಾಯಲು ಈ ಕರಾಳಶಕ್ತಿಗಳು ಸಿದ್ಧವಿಲ್ಲ. ಕಾಂಗ್ರೆಸ್ ಅಕಾರದಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಬದಲಾಯಿಸಬೇಕು.
ಅವರ ಬದಲಿಗೆ ತಮ್ಮ ಹಿತಾಸಕ್ತಿ ಕಾಯುವ ದುರ್ಬಲ ವ್ಯಕ್ತಿಯನ್ನು ಕುರ್ಚಿಯ ಮೇಲೆ ಕೂರಿಸಬೇಕು ಎಂಬುದು ಶತಮಾನಗಳಿಂದ ಈ ಸಮಾಜವನ್ನು ಕತ್ತಲೆಕೂಪಕ್ಕೆ ದೂಡಿದ ಪಟ್ಟಭದ್ರ ಹಿತಾಸಕ್ತಿಗಳ ಗುರಿಯಾಗಿದೆ. ಈ ಮಸಲತ್ತಿನ ಭಾಗವಾಗಿ ರಾಜ್ಯದಲ್ಲಿ ಈಗ ದಲಿತ ಮುಖ್ಯಮಂತ್ರಿಯ ಕೂಗು ಎದ್ದಿದೆ. ಸಮಾಜವಾದಿ ವಿಚಾರ ಧಾರೆ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿರುವವರೆಗೆ ತಮ್ಮ ಬೇಳೆ ಬೇಯುವುದಿಲ್ಲ. ಅವರನ್ನು ಯಾವುದೇ ಹಗರಣದಲ್ಲಿ ಸಿಲುಕಿಸಲೂ ಕೂಡ ಸಾಧ್ಯ ವಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಈ ಶಕ್ತಿಗಳು ಸರಕಾರದ ಆಧಾರಸ್ತಂಭವಾದ ದಲಿತ ಹಿಂದುಳಿದ ವರ್ಗಗಳಲ್ಲಿ ಒಡಕು ಹುಟ್ಟಿಸುವ ಹುನ್ನಾರ ನಡೆಸಿವೆ. ಇದಕ್ಕಾಗಿ ಸಮಾವೇಶ ಸಂಘಟಿಸುತ್ತಿವೆ. ದಿಲ್ಲಿ ಯಾತ್ರೆ ನಡೆಸುತ್ತಿವೆ.

ಪರಮೇಶ್ವರ್ ವಿಧಾನಸಭೆ ಚುನಾವಣೆಯಲ್ಲಿ ಸೋತಿ ದ್ದರೂ ಕೂಡ ಈಗ ಅವರು ಅಲಂಕರಿಸಿರುವ ಹುದ್ದೆ ಸಾಮಾನ್ಯವಾದುದಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಅವರು ಮುಖ್ಯಮಂತ್ರಿಗೆ ಸಮಾನವಾದ ಸ್ಥಾನಮಾನ ಹೊಂದಿದ್ದಾರೆ. ಆದರೆ ಸಂವಿಧಾನಾತ್ಮಕ ಕೆಲ ಸೌಕರ್ಯಗಳು ಅವರಿಗೆ ಇರುವುದಿಲ್ಲ. ಪಕ್ಷಕ್ಕೆ ನಿಷ್ಠನಾದ ವ್ಯಕ್ತಿಗೆ ಸರಕಾರಿ ಅಕಾರಕ್ಕಿಂತ ಪಕ್ಷದ ಅಧ್ಯಕ್ಷ ಸ್ಥಾನ ಮುಖ್ಯವಾಗಬೇಕು. ಅವರು ಮನಸ್ಸು ಮಾಡಿದರೆ, ಮುಖ್ಯಮಂತ್ರಿಗಳ ಕಿವಿ ಹಿಂಡಿ ಆದೇಶ ನೀಡಬಹುದು. ಆದರೆ ತನ್ನ ಅಧ್ಯಕ್ಷ ಸ್ಥಾನದ ಮಹತ್ವ ಅರಿತುಕೊಳ್ಳದ ಅವರು ನಾನು ಮುಖ್ಯಮಂತ್ರಿಯೆಂದು ಕನವರಿಸುತ್ತಿದ್ದಾರೆ. ಕಾಂಗ್ರೆಸ್‌ನೊಳಗಿನ ಒಡಕನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸಂಘ ಪರಿವಾರ ಇದನ್ನು ಬಳಸಿಕೊಂಡು ಸರಕಾರ ವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ದಲಿತ ಸಮುದಾಯವನ್ನು ಈಗಾಗಲೇ ಎಡಗೈ, ಬಲಗೈಯೆಂದು ಒಡೆಯಲಾಗಿದೆ. ಈಗ ಹಿಂದುಳಿದವರು ಮತ್ತು ದಲಿತರ ನಡುವೆ ಒಡಕಿನ ವಿಷಬೀಜ ಬಿತ್ತಿ ರಾಜ್ಯದಲ್ಲಿ ಮತ್ತೆ ಮೇಲ್ವರ್ಗಗಳು ಪ್ರಾಬಲ್ಯ ಸಾಸಲು ಹುನ್ನಾರ ನಡೆಸಿವೆ. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಚಿಂತಾಜನಕವಾಗಿದೆ. ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರು ಒಬ್ಬರೇ ಎದ್ದು ನಿಂತು ಮಾತನಾಡಿ ಪಕ್ಷದ ಮರ್ಯಾದೆ ಕಾಪಾಡು ತ್ತಿದ್ದಾರೆ. ಮೋದಿ ಸರಕಾರದ ದಿವಾಳಿಕೋರ ನೀತಿಯನ್ನು ಎದುರಿಸಬೇಕಿದ್ದ ಸರಕಾರ ನಾಪತ್ತೆಯಾಗಿರುವುದೇ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ವರದಿಯಾಗುತ್ತಲೇ ಇದೆ. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ಗೆ ಕರ್ನಾಟಕವೊಂದೇ ಭದ್ರಕೋಟೆಯಾಗಿದೆ. ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸುವ ಮಸಲತ್ತು ನಡೆದಿದೆ.
ಇಂದಿನ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಆರ್ಥಿಕ ನೀತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಯಾರೇ ಮುಖ್ಯಮಂತ್ರಿ ಯಾದರೂ ದಲಿತ ಮತ್ತು ದಮನಿತ ಸಮುದಾಯ ಏಳಿಗೆಯಾಗುವುದಿಲ್ಲ. ಪರಮೇಶ್ವರ್ ಮುಖ್ಯಮಂತ್ರಿಯಾದರೂ ದಲಿತ ದಮನಿತ ಸಮುದಾಯ ಉದ್ಧಾರ ವಾಗುವುದಿಲ್ಲ. ಯಾವುದೇ ವ್ಯಕ್ತಿ ಅಕಾರಕ್ಕೆ ಬರುವುದರಿಂದ ಸಮಾಜ ಬದಲಾಗುವುದಿಲ್ಲ. ದಮನಿತ ಜನತೆಯ ಐಕ್ಯ ಹೋರಾಟವೊಂದೇ ಹೊಸ ಬೆಳಕನ್ನು ನೀಡಬಹುದು.
-vbnewsonline
0 comments:
Post a Comment