ಕೊಪ್ಪಳ:ತಾಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ೩ ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿರುವ ಕ್ರಮವನ್ನು ಖಂಡಿಸಿ,ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಹಾಗೂ ಸಕಾಲಕ್ಕೆ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ಒಂದು ದಿನದ ಧರಣಿಯನ್ನು ಇಂದು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂದೆ ಸರ್ಕಾರಿ ಅಂಗವಿಕಲ ನೌಕರರ ಸಂಘ ಹಾಗೂ ಶಿಕ್ಷಕರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೩ ತಿಂಗಳಿಗೊಮ್ಮೆ ವೇತನವನ್ನು ನೀಡಲಾಗುತ್ತಿದೆ.ಇದರಿಂದ ಶಿಕ್ಷಕರು ತಮ್ಮ ಕುಟುಂಬಗಳ ನಿರ್ವಹಣೆಯನ್ನು ಮಾಡುವುದು ತುಂಬಾ ಕಷ್ಟಕರವಾಗಿದೆ.ಇದರಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.ಯಾವ ಜಿಲ್ಲೆಯಲ್ಲಿ ಇಲ್ಲದ ಅನುದಾನದ ಕೊರತೆಯು ನಮ್ಮ ಜಿಲ್ಲೆಯಲ್ಲಿ ಯಾಕೆ? ಕಾಡುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ.ವೇತನ ಸಮಸ್ಯೆಯು ಉಂಟಾಗಲು ಯಾರು ಕಾರಣ ಎಂಬ ಅಂಶವನ್ನು ಬಹಿರಂಗಪಡಿಸಬೇಕು ಹಾಗೂ ಅವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು.ಅಲ್ಲದೆ ಕೂಡಲೇ ವೇತನದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನವನ್ನು ಹರಿಸಿ ಸಮಸ್ಯೆಗೆ ಶೀಘ್ರವೇ ಪರಿಹಾರವನ್ನು ಕಂಡು ಹಿಡಿಯಬೇಕು.ಅಲ್ಲದೆ ಪ್ರತಿ ತಿಂಗಳು ೫ ನೇ ತಾರೀಖಿನ ಒಳಗಡೆ ಶಿಕ್ಷಕರಿಗೆ ವೇತನ ಪಾವತಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಕೂಡಾ ನಡೆಸಲಾಗುವುದು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ್ ಮಾತನಾಡುತ್ತ,ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೂರು ತಿಂಗಳಿಗೊಮ್ಮೆ ವೇತನ ನೀಡುವ ಕ್ರಮ ಸರಿಯಾದುದ್ದಲ್ಲ.ಇಂತಹ ಕ್ರಮವನ್ನು ಖಂಡಿಸುತ್ತೆನೆ. ಈ ಸಮಸ್ಯೆಯು ಕಳೆದ ಮೂರು ವರ್ಷಗಳಿಂದ ಉಂಟಾಗುತ್ತಿದೆ.ಈ ಸಮಸ್ಯೆಯು ಪರಿಹಾರವಾದೇ ಇರುವುದಕ್ಕೆ ಇಲಾಖೆಯ ನಿರ್ಲಕ್ಷವೇ ಕಾರಣವಾಗಿದೆ.ಕೇವಲ ಅನುದಾನಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದರೇ ಸಾಲದು ಅದರ ಬಗ್ಗೆ ಗಮನವನ್ನು ಹರಿಸಬೇಕು.ಅಲ್ಲದೆ ಅನುದಾನದ ಬಿಡುಗಡೆಗಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಶೀಘ್ರವೇ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ಯಾಮಸುಂದರ ಮಾತನಾಡಿ,ಅನುದಾನದ ಬಿಡುಗಡೆಗಾಗಿ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.೨೦೧೪-೧೫ ಸಾಲಿಗೆ ೧೦ಕೋಟಿಗಳ ಅನುದಾನ ಬಿಡುಗಡೆಯಾಗಬೇಕಿದೆ.ಅಲ್ಲದೆ ೨೦೧೫-೧೬ನೇ ಸಾಲಿಗೆ ೧೩ ಕೋಟಿಗಳಷ್ಟು ಅನುದಾನ ಬಿಡುಗಡೆಯಾಗಬೇಕಿದೆ.ಒಟ್ಟು ನಮ್ಮ ಜಿಲ್ಲೆಗೆ ೨೬ ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ.ಈ ವಿಷಯದ ಕುರಿತಾಗಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರವೇ ಅನುದಾನ ಬಿಡುಗಡೆಯಾಗಿ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ವೇತನ ಪಾವತಿಯಾಗಲಿದೆ.ಮುಂದಿನ ದಿನಗಳಲ್ಲಿ ವೇತನ ವಿಳಂಬವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ರವೀಂದ್ರ ಜೋಶಿ,ನಿರ್ದೇಶಕರಾದ ಚಂದ್ರು ಹೆಳವರ.ಶಿಕ್ಷಕರಾದ ವಿಜಯಕುಮಾರ ಕುರುಗೋಡ,ಮೈಲಾರಪ್ಪ.ಹಿಬ್ರಾಯಿಂ,ಶ್ರೀಧರ.ಹೆಚ್.ಕಾಂತರಾಜು, ದೇವಪ್ಪ ಒಂಟಿಗಾರ,ಶರಣಪ್ಪ ಪಟ್ಟಣಶೆಟ್ಟಿ,ದ್ಯಾಮಪ್ಪ ಅಬ್ಬಿಗೇರಿ,ರುದ್ರಪ್ಪ,ಬೀಮಣ್ಣ,ವಿರುಪಾಕ್ಷಪ್ಪ ಬಾಗೋಡಿ,ನಾಗಪ್ಪ ನರಿ,ಶ್ರೀನಿವಾಸರಾವ್ ಕುಲಕರ್ಣಿ,ಯಲ್ಲಪ್ಪ ಮುಸಲಿ ಮುಂತಾದವರು ಹಾಜರಿದ್ದರು.
0 comments:
Post a Comment