ಅಂಬೇಡ್ಕರ್ ಅಸೋಸಿಯೇಶನ್‌ನಿಂದ ಗೋಮಾಂಸ ಉತ್ಸವ
ಹೈದರಾಬಾದ್, : ಮಹಾರಾಷ್ಟ್ರದಲ್ಲಿ ಗೋಮಾಂಸದ ಮೇಲಿನ ನಿಷೇಧ ಕ್ರಮವನ್ನು ಪ್ರತಿಭಟಿಸಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ (ಎಎಸ್‌ಎ) ಸುಮಾರು 200 ಮಂದಿ ವಿದ್ಯಾರ್ಥಿಗಳು ಬುಧವಾರ ‘ಗೋಮಾಂಸ ಉತ್ಸವ’ ನಡೆಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಗೆ ‘ಕಲ್ಯಾಣಿ ಬಿರ್ಯಾನಿ ತಿನ್ನೋಣ’ ಎಂದು ಹೆಸರಿಟ್ಟುಕೊಂಡಿದ್ದರು. ಹೈದರಾಬಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬಿರ್ಯಾನಿ ಮತ್ತು ‘ಚಿಲ್ಲಿ ಬೀಫ್’ ಹಂಚಿಕೊಂಡು ಸೇವಿಸುವ ಮೂಲಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 18ನೆ ಶತಮಾನದಲ್ಲಿ ಹೈದರಾಬಾದ್‌ಗೆ ವಲಸೆ ಬಂದಿದ್ದ ಬೀದರ್‌ನ ಕಲ್ಯಾಣಿ ನವಾಬರಿಂದಾಗಿ ಈ ‘ಬೀಫ್ ಬಿರ್ಯಾನಿ’ ಖ್ಯಾತಿ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ ಕ್ರಮದ ವಿರುದ್ಧ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿದರು. ಮುಂಬೈ ಮತ್ತು ಮಹಾರಾಷ್ಟ್ರದ ಜನತೆಗೆ ಬೆಂಬಲ ಸೂಚಿಸಲು ಹಾಗೂ ಜನಸಾಮಾನ್ಯರ ಆಹಾರ ಸಂಸ್ಕೃತಿಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಬೀಫ್ ಉತ್ಸವ ನಡೆಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ‘ದೇಶದ ಫ್ಯಾಸಿಸ್ಟ್ ಶಕ್ತಿಗಳು ಜನಸಾಮಾನ್ಯರ ಆಹಾರ ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿವೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಜನರ ಆಹಾರಾಭ್ಯಾಸಗಳನ್ನು ನಾವು ಗೌರವಿಸಬೇಕು. ಗೋಮಾಂಸದ ಮೇಲಿನ ನಿಷೇಧ ಕ್ರಮವು, ಈಗಾಗಲೇ ಹಿಂದುಳಿದಿರುವ ಸಮುದಾಯಗಳ ವಿರುದ್ಧ ಹೇರಲಾಗಿರುವ ತಾರತಮ್ಯದ ಇನ್ನೊಂದು ರೂಪವೆನಿಸಿದೆ’ ಎಂದು ಎಎಸ್‌ಎ ಅಧ್ಯಕ್ಷ ಡಿ.ಪ್ರಶಾಂತ್ ಹೇಳಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಬೀಫ್ ಬಿರ್ಯಾನಿ ಪ್ಯಾಕೆಟ್‌ಗಳನ್ನು ಖರೀದಿಸಿದ ವಿದ್ಯಾರ್ಥಿಗಳು, ಹೈದರಾಬಾದ್ ವಿಶ್ವವಿದ್ಯಾನಿಲಯದ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಹಂಚಿಕೊಂಡು ತಿಂದರು. ಉಸ್ಮಾನಿಯಾ ವಿವಿ ಹಾಗೂ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್ ವಿವಿ ವಿದ್ಯಾರ್ಥಿಗಳೂ ‘ಬೀಫ್ ಉತ್ಸವ’ದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ‘ಕಾಸ್ಟ್ ಆನ್ ದ ಮೆನು’ ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು.
ಗೋಮಾಂಸ ಸೇವನೆ ಎಂಬುದು, ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಂ ಸಮುದಾಯಗಳ ಆಹಾರ ಸಂಸ್ಕೃತಿಯ ಒಂದು ಭಾಗವಾಗಿದೆ. ಗೋಮಾಂಸದ ಮೇಲಿನ ನಿಷೇಧ ಕ್ರಮವನ್ನು ಪ್ರಬಲವಾಗಿ ವಿರೋಧಿಸಲಾಗುವುದು ಎಂದು ವಿದ್ಯಾರ್ಥಿಗಳು ಆಕ್ರೋಶದಿಂದ ಹೇಳಿದ್ದಾರೆ.
ಗೋಹತ್ಯೆ ನಿಷೇಧದಿಂದ ಕಡಿಮೆ ಬೆಲೆಯ ಮಾಂಸ ವ್ಯಾಪಾರ ಮತ್ತು ಚರ್ಮೋದ್ಯಮದಲ್ಲಿ ನಿರತರಾಗಿರುವ ಬಹುತೇಕ ಜನರಿಗೆ ತೊಂದರೆಯಾಗಲಿದೆ. ಕೆಲವು ಸಮುದಾಯಗಳ ಜೀವನೋಪಾಯ ಎಂಬುದು ಮಾಂಸ ಮತ್ತು ಚರ್ಮ ಕೈಗಾರಿಕೆಯ ಮೇಲೆ ಅವಲಂಬಿತವಾಗಿವೆ. ನಿಷೇಧಕ್ರಮದಿಂದ ಅವರ ಜೀವನೋಪಾಯವನ್ನು ಕಸಿದುಕೊಂಡಂತಾಗುವುದು. ಇದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದು ಎಎಸ್‌ಎ ಉಪಾಧ್ಯಕ್ಷ ಮುಹಮ್ಮದ್ ಆಶ್ರಫ್ ಹೇಳಿದ್ದಾರೆ.
ಈ ಹಿಂದೆಯೂ ಕೂಡ ನಗರದ ವಿಶ್ವವಿದ್ಯಾನಿಲಯಗಳ ಬೇರೆಬೇರೆ ಕ್ಯಾಂಪಸ್‌ಗಳಲ್ಲಿ ಬೀಫ್ ಉತ್ಸವ ನಡೆಸಲಾಗಿತ್ತು. ಗೋಮಾಂಸವನ್ನು ದೈನಂದಿನ ಆಹಾರವಾಗಿ ಬಳಸುವ ಸಮುದಾಯಗಳ ಹಕ್ಕುಗಳ ಪ್ರತಿಪಾದನೆಯ ಕಾರ್ಯತಂತ್ರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ನಾವು ಜಾತ್ಯತೀತ ದೇಶವೊಂದರಲ್ಲಿ ಬದುಕುತ್ತಿದ್ದೇವೆ. ವಿವಿಗಳ ಹಾಸ್ಟೆಲ್‌ಗಳಲ್ಲಿ ಶಾಖಾಹಾರಿ ಖಾದ್ಯಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ನಮಗೆ ಬೀಫ್ ಸೇರಿದಂತೆ ಮಾಂಸಾಹಾರಿ ಖಾದ್ಯಗಳನ್ನು ಒದಗಿಸಬೇಕು’ ಎಂದು ಉಸ್ಮಾನಿಯಾ ವಿವಿಯ ಸಂಶೋಧನಾ ವಿದ್ಯಾರ್ಥಿ ಬಿ.ಸುದರ್ಶನ್ ಹೇಳುತ್ತಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಆದರೆ, ಕೋಣ ಮತ್ತು ಎತ್ತುಗಳ ಹತ್ಯೆಗೆ ಅನುಮತಿ ಇದೆ. ಈ ಪ್ರಾಣಿಗಳು 14 ವರ್ಷಕ್ಕಿಂತ ಮೇಲಿನ ಪ್ರಾಯದವು ಆಗಿರಬೇಕು ಹಾಗೂ ಕೃಷಿ ಕೆಲಸಕಾರ್ಯಗಳು, ಸಂತಾನೋತ್ಪತ್ತಿ ಇಲ್ಲವೇ ಹಾಲು ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿರಬಾರದು ಎಂಬ ಷರತ್ತು ವಿಧಿಸಲಾಗಿದೆ.

0 comments:
Post a Comment