ಮತ್ತೊಂದು ಚಿಂತನೆಯ ಪ್ರಕಾರ ಸಮತಾವಾದವನ್ನು ಪ್ರತಿಪಾದಿಸುವ, ಜಾತಿ ತಾರತಮ್ಯವಿಲ್ಲದ ಧರ್ಮವಾದ ಇಸ್ಲಾಂ ಅನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದನ್ನು ಚರ್ಚಿಸಬೇಕು ಎಂದು ಹೇಳುತ್ತಿದ್ದರೆ, ‘‘ಕೇಂದ್ರದಲ್ಲಿ ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ’’ಎಂದು ಹೇಳಿದ್ದಾರೆ.
ಆದರೆ ನ್ಯಾಯಾಂಗ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವೊಂದು ಹಿಂದುಳಿದಿದೆ ಎನ್ನುವ ವಾಸ್ತವ ಅಂಶವನ್ನು ಮಾನ್ಯ ಮಾಡಲು ಅಡ್ಡಗಾಲು ಹಾಕಿರುವುದು ಒಂದು ವೈರುಧ್ಯವಾದರೆ ಇಂದು ಕೇಂದ್ರದಲ್ಲಿ ರುವ ಬಿಜೆಪಿ ಸರಕಾರ ಮುಸ್ಲಿಂ ಸಮುದಾಯದ ಕುರಿತಾಗಿ ಯಾವುದೇ ಬಗೆಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅದು ಮುಗಿದ ಕಥೆ. ಹಿಂದುಸ್ತಾನ ಎಂದರೆ ಹಿಂದೂಗಳ ರಾಷ್ಟ್ರ, ಇಂಡಿಯಾದ ರಾಷ್ಟ್ರೀಯತೆ ಎಂದರೆ ಹಿಂದುತ್ವದ ರಾಷ್ಟ್ರೀಯತೆ ಎಂದು ಘೋಷಿಸುವುದರ ಮೂಲಕ ಆರೆಸ್ಸೆಸ್ ಸರಸಂಚಾಲಕ ಮೋಹನ್ ಭಾಗವತ್ ಬಹು ಸಂಸ್ಕೃತಿ, ವೈವಿಧ್ಯತೆ, ಧರ್ಮ ನಿರಪೇಕ್ಷತೆ ಎನ್ನುವ ಎಲ್ಲ ವಿಶ್ಲೇಷಣೆಗಳಿಗೆ ತೆರೆ ಎಳೆದಿದ್ದಾರೆ. 56 ಇಂಚಿನ ಎದೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಗೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ‘‘ನಿರ್ದಿಷ್ಟ ಕೋಮಿನ ಪುರುಷರು ಬಹುಸಂಖ್ಯಾತರ ಧರ್ಮಕ್ಕೆ ಸೇರಿದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರೆ ಅದನ್ನು ಕಾಕತಾಳೀಯ ಎಂದು ನಂಬಲು ಸಾಧ್ಯವಿಲ್ಲ. ಅದು ಪೂರ್ವಯೋಜಿತ ಸಂಚು ಎಂದೇ ಕರೆಯಬೇಕಾಗುತ್ತದೆ’’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಸಂಘ ಪರಿವಾರದ ಸದಸ್ಯರ ವರ್ತನೆಗಳಿಗೆ ಪೂರಕವಾಗಿ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜಪೇಯಿ ಅವರು ‘‘ಒಂದು ನಿರ್ದಿಷ್ಟ ಕೋಮಿಗೆ ಸೇರಿದವರಾದ ಮಾತ್ರಕ್ಕೆ ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು, ಮಹಿಳೆಯರನ್ನು ತಮ್ಮ ಮತಕ್ಕೆ ಮತಾಂತರ ಮಾಡಲು ಅವರಿಗೆ ಉಚಿತ ಸರ್ಟಿಫಿಕೇಟ್ ಕೊಡಲಾಗಿದೆಯೇ? ಯುವಕರು ಈ ‘ಲವ್ ಜಿಹಾದ್’ ಕುರಿತು ಎಚ್ಚರದಿಂದರಬೇಕು’’ ಎಂದು ಎಚ್ಚರಿಸಿದ್ದಾರೆ. ಫ್ರೊ.ಜೋಯಾ ಹಸನ್ ಅವರು ‘‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂದು ಹೇಳುತ್ತಿರುವ ಮೋದಿ ತನ್ನ ಪರಿವಾರದ ಲುಂಪೆನ್ ಮತೀಯವಾದಿಗಳೊಂದಿಗೆ ಮತ್ತು ಅವರ ಕೋಮುವಾದಿ ಹೇಳಿಕೆಗಳೊಂದಿಗೆ ಇಂದಿಗೂ ಗುರುತಿಸಿಕೊಂಡಿದ್ದಾರೆ. ಯಾವುದನ್ನೂ ನಿರಾಕರಿಸಿಲ್ಲ. ತಮಗೆ ಬಹುಮತ ಗಳಿಸಲು ಕಾರಣರಾದ ಶೇಕಡ 31ರಷ್ಟು ಮತದಾತರಿಗೆ ಮಾತ್ರ ಪ್ರಧಾನ ಮಂತ್ರಿಯಂತೆ ವರ್ತಿಸುತ್ತಿರುವ ಈ ನರೇಂದ್ರ ಮೋದಿ, ‘ಅಲ್ಪಸಂಖ್ಯಾತ(ಮುಸ್ಲಿಂ)ರಹಿತ ರಾಜಕೀಯ’ ಎನ್ನುವ ಮಾಡೆಲ್ ಅನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಸಾಚಾರ್ ಕಮಿಟಿ ಮತ್ತು ರಂಗನಾಥ್ ಮಿಶ್ರ ಕಮಿಟಿ ವರದಿಗಳನ್ನು ಒಪ್ಪಿಕೊಂಡು ಮುಸ್ಲಿಂ ಸಮುದಾಯದ ಪರವಾಗಿ ಹಂತಹಂತವಾಗಿ ಸುಧಾರಣೆಗಳನ್ನು ಜಾರಿಗೊಳಿಸುವ ರಾಜಕೀಯ ಇಚ್ಛಾಶಕ್ತಿ ಇಂದಿನ ಸಂದರ್ಭದಲ್ಲಿ ಸಂಪೂರ್ಣವಾಗಿ ಗೌಣಗೊಂಡಿದೆ. ಈ ವರದಿಗಳಿಗೆ ಕಾನೂನು ಚೌಕಟ್ಟನ್ನು ಹಾಕಿಕೊಟ್ಟು ಆ ಮೂಲಕ ಜಾರಿಗೊಳಿಸಬಹುದಾದ ಸಾಧ್ಯತೆಗಳೂ ಕ್ಷೀಣವಾಗಿವೆ.
ಇಂಡಿಯಾದಲ್ಲಿ ಬಲು ದೊಡ್ಡ ಅಲ್ಪಸಂಖ್ಯಾತ ರಿಲಿಜನ್ ಆದ ಇಸ್ಲಾಂ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳನ್ನು ಒಳಗೊಂಡಂತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದ ಧರ್ಮವೂ ಹೌದು. ಮುಸ್ಲಿಮರಿಗೆ ಹೊರಗಿನವರಾದ (ಅನೇಕ ಕಾರಣಗಳಿಗೆ) ಬಹುಸಂಖ್ಯಾತ ಹಿಂದೂ ಮತಾಂಧರ ಲುಂಪೆನ್ ಗುಂಪು ಮತ್ತು ಮತೀಯವಾದಿ ಸಂಘ ಪರಿವಾರದವರು ನಡೆಸುವ ದೈಹಿಕ ಹಲ್ಲೆಗಳು, ಮಾನಸಿಕ ಹಿಂಸೆಗಳು, ಅವರನ್ನು ಅನುಮಾನಿತರನ್ನಾಗಿ ಪರಿಭಾವಿಸುವ ಮಧ್ಯಮವರ್ಗದ ಸಂಕುಚಿತ ಮನಸ್ಸು ಮುಸ್ಲಿಮರ ಘನತೆಯನ್ನೇ ನಾಶಗೊಳಿಸಿ ಅವರನ್ನು ದ್ವಿತೀಯ ದರ್ಜೆಯ ನಾಗರಿಕನ್ನಾಗಿಸಿದ್ದರೆ, ಒಳಗಿನವರಾದ ಮೂಲಭೂತವಾದಿ ಧಾರ್ಮಿಕ ಗುರುಗಳು ಮತ್ತು ಪಿಎಫ್‌ಐ, ಎಸ್‌ಡಿಪಿಐನಂತಹ ಮತೀಯವಾದಿ ರಾಜಕೀಯ ಪಕ್ಷಗಳು ಮುಸ್ಲಿಮರ ಐಡೆಂಟಿಟಿಯನ್ನು ಹೆಚ್ಚೂ ಕಡಿಮೆ ಪ್ರಶ್ನಾರ್ಹವಾಗುವಂತೆ ವರ್ತಿಸುತ್ತಿವೆ. ಸೆಕ್ಯುಲರ್ ತತ್ವವನ್ನು ಮೈಗೂಡಿಸಿಕೊಂಡಿರುವ ಮುಸ್ಲಿಂ ಸಮುದಾಯದ ಎಲೈಟ್ ಗುಂಪು ತನ್ನನ್ನು ಐಡೆಂಟಿಟಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ದುರಂತವೇ ಸರಿ. ಏಕೆಂದರೆ ಚಿಂತಕ ಅಲಮ್ ಅವರು ‘‘ಈ ಎಲೈಟ್ ಮುಸ್ಲಿಂ ಸಮುದಾಯ ತನ್ನನ್ನು ಅಲಿಘರ್ ಮುಸ್ಲಿಂ ಯೂನಿವರ್ಸಿಟಿ, ಉರ್ದು ಭಾಷೆ, ಮುಸ್ಲಿಂ ಪರ್ಸನಲ್ ಲಾದಂತಹವುಗಳೊಂದಿಗೆ ಗುರುತಿಸಿಕೊಳ್ಳುತ್ತದೆಯೇ ವಿನಃ ಮುಸ್ಲಿಂ ಸಮುದಾಯದ ಶಿಕ್ಷಣ, ಸಾಮಾಜಿಕ, ಆರ್ಥಿಕ ಸಬಲೀಕರಣಗಳಂತಹ ಸೂಕ್ಷ್ಮ ಮತ್ತು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸಿದೆ’’ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಮಧ್ಯಯುಗೀನ ಕಾಲದಲ್ಲಿ ಮುಸ್ಲಿಂ ದೊರೆಗಳು ನಡೆಸಿದ ಯುದ್ಧಗಳನ್ನು ಮತ್ತು ಆ ಸಂದರ್ಭದಲ್ಲಿನ ಲೂಟಿಗಳನ್ನು ಇತಿಹಾಸದ ವಸ್ತುನಿಷ್ಠ ದೃಷ್ಟಿಕೋನದಿಂದ, ವಿವಿಧ ಆಯಾಮಗಳಿಂದ ಅರ್ಥೈಸಲು ನಿರಾಕರಿಸುವ ಮತೀಯವಾದಿ ಸಂಘ ಪರಿವಾರ ಮತ್ತು ಮಧ್ಯಮವರ್ಗ 700 ವರ್ಷಗಳ ನಂತರವೂ ಇಂದಿನ ಮುಸ್ಲಿಮರನ್ನು ಆ ದಾಳಿಕೋರರೊಂದಿಗೆ ಸಮೀಕರಿಸಿ ಹಂಗಿಸುವುದನ್ನು ಮುಂದುವರಿಸಿದ್ದರೆ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಪರಂಪರೆಯನ್ನು ಮೊಘಲ ದೊರೆಗಳೊಂದಿಗೆ ವೈಭವೀಕರಿಸಿ ಇಂಡಿಯಾದ ಇಸ್ಲಾಂ ಧರ್ಮವನ್ನು ಅರೇಬಿಯಾ ರಾಷ್ಟ್ರಗಳ ಧಾರ್ಮಿಕತೆಗೆ ಗಂಟು ಹಾಕಿದ್ದಾರೆ. ಆದರೆ ಅಭಿವೃದ್ಧಿ ಮತ್ತು ಆಧುನಿಕತೆ ಮುಸ್ಲಿಮರ ಜಛಿಠಿಠಿಟ ಗಳಿಂದ ಸಾವಿರಾರು ಮೈಲಿಗಳಷ್ಟು ದೂರದಲ್ಲಿದೆ. ಪ್ರತಿದಿನ ಮುಂಜಾನೆ ಅತ್ಯಂತ ಆತಂಕ ಮತ್ತು ಭಯದಿಂದ ಬಾಗಿಲನ್ನು ತೆರೆಯಬೇಕಾದಂತಹ ಸಂದಿಗ್ಧತೆ ಮತ್ತು ದುಸ್ಥಿತಿಯಲ್ಲಿರುವ ಇಂಡಿಯಾದ ಮುಸ್ಲಿಮರು ಪ್ರತಿ ಕ್ಷಣವೂ ತಮ್ಮ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಸಾಬೀತುಪಡಿಸುತ್ತಲೇ ಬದುಕಬೇಕಾದಂತಹ ದುರಂತದಲ್ಲಿದ್ದಾರೆ. ಇಲ್ಲಿಯವರೆಗೆ ಕನಿಷ್ಠ ವೋಟ್ ಬ್ಯಾಂಕ್ ರಾಜಕಾರಣಕ್ಕಾದರೂ ಅವರನ್ನು ಓಲೈಸುತ್ತಿದ್ದ ಇಂಡಿಯಾದ ರಾಜಕಾರಣದ ದಿಕ್ಸೂಚಿ 2014ರ ಲೋಕಸಭೆ ಚುನಾವಣೆಯ ನಂತರ ಸಂಪೂರ್ಣವಾಗಿ ಬದಲಾಗಿದೆ. ಮುಸ್ಲಿಮರ ಮತದ ಆವಶ್ಯಕತೆ ಇಲ್ಲದೆಯೇ ಸರಳ ಬಹುಮತವನ್ನು ಸಾಧಿಸಿರುವ ಬಿಜೆಪಿಗೆ ಇಂದು ಯಾವುದೇ ಕಾರಣಕ್ಕೂ ಮುಸ್ಲಿಮರ ಆವಶ್ಯಕತೆ ಇಲ್ಲ. ಮುಸ್ಲಿಂ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಔಪಚಾರಿಕವಾಗಿ ಈದ್ ಶುಭಾಶಯ ಹೇಳದ ಮೊಟ್ಟ ಮೊದಲ ಪ್ರಧಾನಿ ಎಂದರೆ ಈ ನರೇಂದ್ರ ಮೋದಿ. ‘ನೀವು ಇರುವ ಹಾಗಿದ್ದರೆ ಇರಿ ಇಲ್ಲದಿದ್ದರೆ ನಿಮ್ಮಿಷ್ಟ’ ಎನ್ನುವಂತಹ ಧೋರಣೆಯನ್ನು ವ್ಯಕ್ತಪಡಿಸುತ್ತಿರುವ ಪ್ರಧಾನಿ ಮೋದಿ ಮತ್ತು ಸಂಘ ಪರಿವಾರದ ಆಡಳಿತದಲ್ಲಿ ಮುಸ್ಲಿಂ ಸಮುದಾಯ ಘನತೆಯನ್ನು ಕಳೆದುಕೊಂಡು ಕ್ರಮೇಣ ನಗಣ್ಯವಾಗುವ ಹಂತಕ್ಕೆ ತಲಪುತ್ತಿದೆ.
ಮತ್ತೊಂದೆಡೆ ಹಿಂದೂ ಧರ್ಮದ ಜಾತಿ ಪದ್ಧತಿಯ ದೌರ್ಜನ್ಯಕ್ಕೆ ನಲುಗಿದ ತಳ ಸಮುದಾಯಗಳು ಸೆಮೆಟಿಕ್ ರಿಲಿಜನ್‌ಗಳಾದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಳ್ಳುತ್ತಿರುವುದು ಈ ಸೆಮೆಟಕ್ ರಿಲಿಜನ್‌ಗೆ ತಾತ್ವಿಕವಾಗಿ ಬಲ ತಂದುಕೊಡುವುದರ ಬದಲಾಗಿ ಮತ್ತಷ್ಟು ದ್ವೇಷಕ್ಕೆ ಬಲಿಯಾಗುತ್ತಿರುವುದು ಮತ್ತೊಂದು ದುರಂತ. ಮತಾಂತರ ಪ್ರಕ್ರಿಯೆ ರಾಜಕೀಯ ವಾತಾವರಣವನ್ನೇ ಧಗಧಗಿಸುವಂತೆ ಮಾಡಿದೆ. ಇಲ್ಲೊಂದು ನೈಜ ಸತ್ಯವನ್ನು ನಾವು ಅರಿಯಬೇಕು. ತಳ ಸಮುದಾಯಗಳು ಇಂಡಿಯಾದ ಜಾತೀಯತೆಗೆ, ತಾರತಮ್ಯಕ್ಕೆ ಸೆಮೆಟಿಕ್ ರಿಲಿಜನ್‌ಗಳಾದ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಮಾತ್ರ ಮುಕ್ತಿ ಒದಗಿಸಬಲ್ಲವು ಎಂದು ಮುಗ್ಧವಾಗಿ ನಂಬುತ್ತವೆ. ನಮ್ಮ ಬುದ್ಧಿಜೀವಿಗಳು ಸಹ ಈ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳನ್ನು ನೋಡುವುದು ಮತ್ತು ಅರ್ಥೈಸಿಕೊಂಡಿರುವುದು ಯುರೋಪಿಯನ್ ಕನ್ನಡಕದ ಮೂಲಕ. ಏಕ ದೇವೋಪಾಸಕ ಮತಗಳಾದ ಸೆಮೆಟಿಕ್ ರಿಲಿಜನ್‌ಗಳು ಕುಲೀನತನದ ಶ್ರೇಷ್ಠತೆಯನ್ನು ತಿರಸ್ಕರಿಸಿ ಜನಸಾಮಾನ್ಯರ ಪರವಾಗಿ ನಿಲ್ಲುತ್ತವೆ ಮತ್ತು ಅವುಗಳ ತತ್ವಗಳು ಜೀವಪರವಾಗಿವೆ, ಸೆಕ್ಯುಲರಿಸಂ ಅಲ್ಲಿನ ಜೀವನ ಕ್ರಮವಾಗಿದೆ ಮತ್ತು ಈ ಸೆಮೆಟಿಕ್ ರಿಲಿಜನ್‌ಗಳು ಸಮತಾವಾದವನ್ನು ಧ್ಯಾನಿಸುತ್ತವೆ. ಆದರೆ ವಸಾಹತುಶಾಹಿಯ ದುರಹಂಕಾರಕ್ಕೆ, ನವ ಉದಾರೀಕರಣದ ಬಂಡವಾಳಶಾಹಿಯ ಯಜಮಾನಿಕೆಗೆ ಹಿಂದೂ ಧರ್ಮದಂತೆಯೇ ಬಲು ಸುಲಭವಾಗಿ ಈ ಸೆಮೆಟಿಕ್ ರಿಲಿಜನ್‌ಗಳೂ ಕೂಡ ಬಲಿಯಾಗಿಬಿಡುತ್ತವೆ ಎನ್ನುವ ಅಪಾಯದ ಕುರಿತು ನಮ್ಮ ಬುದ್ಧಿಜೀವಿಗಳ ಬಳಿ ಉತ್ತರವಿದ್ದಂತಿಲ್ಲ.
ಪಟ್ಟಭದ್ರ ಹಿತಾಸಕ್ತಿಗಳನ್ನು ಈ ಸೆಮೆಟಿಕ್ ರಿಲಿಜನ್‌ಗಳೂ ಪೋಷಿಸುತ್ತವೆ ಮತ್ತು ದಲಿತರಿಗೆ ವಿಮೋಚನೆಯ ಅಂತಿಮ ಗಮ್ಯ ಸ್ಥಾನವಾಗಿ ತಮ್ಮಾಳಗೆ, ತಮ್ಮ ಸಮಾಜದೆಡೆಗೆ ತುಂಬು ಹೃದಯದಿಂದ, ಮಾನವೀಯತೆಯಿಂದ ಬರ ಮಾಡಿಕೊಂಡ ಈ ಸೆಮೆಟಿಕ್ ರಿಲಿಜನ್‌ಗಳು ಕಡೆಗೆ ದಲಿತರಿಗೆ ಘನತೆ ಮತ್ತು ಆತ್ಮಾಭಿಮಾನವನ್ನು ತಂದು ಕೊಟ್ಟವೇ ಎನ್ನುವುದು ಇಂದಿಗೂ ಚರ್ಚೆಗೆ ಒಳಪಡುತ್ತಿದೆ. ದಲಿತ ಕ್ರಿಶ್ಚಿಯನ್ನರು ನಿಜಕ್ಕೂ ಪಡೆದಿದ್ದೇನು ಎನ್ನುವ ಪ್ರಶ್ನೆಗೆ ಅತ್ಯಂತ ಸಂಕೀರ್ಣವಾದ ಉತ್ತರಗಳು ದೊರಕುತ್ತವೆ. ಈ ಸೆಮೆಟಿಕ್ ರಿಲಿಜನ್‌ಗಳು ಸಹ ಹಿಂದೂ ಧರ್ಮದಂತೆಯೇ ಅನೇಕ ಬಾರಿ ಪುರುಷಾಧಿಕಾರಕ್ಕೆ ಬಲಿಯಾಗಿಬಿಡುತ್ತವೆ ಎನ್ನುವ ಆರೋಪಗಳಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಸಂಘ ಪರಿವಾರದ ‘ಘರ್ ವಾಪಸಿ’ ಎನ್ನುವ ಹಿಂದೂ ಬಹುಸಂಖ್ಯಾತತ್ವ ಕಾರ್ಯಕ್ರಮ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೇರೆ ಧರ್ಮದವರು ಮಾಡಬಹುದಾದರೆ ಹಿಂದೂಗಳು ಯಾಕೆ ಮಾಡಬಾರದು ಎನ್ನುವ ತತ್ವದ ಅಡಿಯಲ್ಲಿ ಈ ‘ಘರ್ ವಾಪಸಿ’ ಅನ್ನು ಸಂಘ ಪರಿವಾರ ಸಮರ್ಥಿಸಿಕೊಳ್ಳುತ್ತಿದೆ. 56 ಇಂಚಿನ ಎದೆಯ ಮೋದಿ ಇಲ್ಲಿಯೂ ಬಾಯಿ ಬಿಟ್ಟಿಲ್ಲ.
ಸಿಎನ್‌ಎನ್ ಛಾನಲ್‌ನ ಫರೀದ್ ಝಕಾರಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಭಾರತದ ಮುಸ್ಲಿಮರು ದೇಶಕ್ಕಾಗಿ ಪ್ರಾಣ ಕೊಡುತ್ತಾರೆ ಎಂದು ಹೇಳಿದ ಮಾತನ್ನು ಕುರಿತಾಗಿ ಹಸನ್ ಸುರೂರ್ ಅವರು ಮುಸ್ಲಿಮರ ಕುರಿತಾಗಿ ಮೋದಿಯ ಈ ಮಾತನ್ನು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಕೇಳಿದಾಗ ‘‘ಮುಸ್ಲಿಮರ ಬದ್ಧತೆಯ ಪ್ರಶ್ನೆ ಈ ಮಟ್ಟದಲ್ಲಿ ರಾಜಕೀಯ ಚರ್ಚೆ ಆಗುತ್ತಿರುವುದು ಇದೇ ಮೊದಲು ಎಂದೆನಿಸುತ್ತಿದೆ. ದೃಶ್ಯ ಮಾಧ್ಯಮಗಳಲ್ಲಿ ಸೆಕ್ಯುಲರಿಸಂ ಅನ್ನು ದೇಶಭಕ್ತ ಹಿಂದೂಗಳು ಒಂದು ಕಡೆ, ಅನುಮಾನಿತ ಮುಸ್ಲಿಮರು ಮತ್ತೊಂದೆಡೆ ಎನ್ನುವ ನೆಲೆಯಲ್ಲಿಯೇ ಚರ್ಚೆಗೊಳಪಡಿಸಲಾಗುತ್ತಿದೆ. ಹಿಂದೂ-ಮುಸ್ಲಿಮರ ಸಂಬಂಧಗಳ ಸ್ವರೂಪವು ಸಂಪೂರ್ಣವಾಗಿ ದ್ರುವೀಕರಣಗೊಳ್ಳುತ್ತಿದೆ. ಪ್ರತಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಶಾಹಿ ಇಮಾಮ್ ಬುಖಾರಿಯವರ ಫತ್ವಾವನ್ನು ಬಳಸಿಕೊಳ್ಳುವುದರ ಮೂಲಕ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬಿಜೆಪಿಯು ಬಹುಸಂಖ್ಯಾತ ಹಿಂದೂಗಳನ್ನು ದ್ರುವೀಕರಣಗೊಳಿಸುವಲ್ಲಿ ಯಶಸ್ವಿಯಾಗುವುದಕ್ಕೆ ಸಹಕರಿಸುತ್ತಿವೆ. ಮತ್ತೊಂದೆಡೆ ಶಾಹಿದ್ ಸಿದ್ದೀಕಿಯಂತಹ ಪತ್ರಕರ್ತರು ‘‘ಮುಸ್ಲಿಮರು ಕಾಂಗ್ರೆಸ್, ಸಮಾಜವಾದಿ ಪಕ್ಷಗಳ ಬೋಗಸ್ ಸೆಕ್ಯುಲರಿಸಂನ ಗುಲಾಮರಾಗಿದ್ದಾರೆ. ಈ ಪಕ್ಷಗಳೇ ಮುಸ್ಲಿಮರ ಶತ್ರುಗಳು’’ ಎಂದು ಟೀಕಿಸುತ್ತಿದ್ದಾರೆ. ಸಿದ್ದೀಕಿಯಂತಹ ಪತ್ರಕರ್ತರ ಈ ಟೀಕೆಗಳು ಸಂಘಪರಿವಾರದ ‘ಸಿಕ್ಯುಲರಿಸ್ಟ್’ ಎನ್ನುವ ಲೇವಡಿ ಮತ್ತು ಟೀಕೆಗಳಿಗೆ ನೀರೆರೆದು ಪೋಷಿಸುತ್ತಿವೆ’ ಎಂದು ಬರೆಯುತ್ತಾರೆ. ತಮ್ಮ ಜಪಾನ್ ಪ್ರವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿಗೆ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ಕೊಡುತ್ತ ‘‘ಭಾರತದಲ್ಲಿ ಸೆಕ್ಯುಲರಿಸ್ಟ್‌ಗಳು ಇದಕ್ಕೆ ಆಕ್ಷೇಪಿಸುತ್ತಾರೆ’’ ಎಂದು ಲೇವಡಿ ಮಾಡಿದ್ದರು. ನಿಜ. ನೇಪಾಳದ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರಿಗೆ ಕುರ್‌ಆನ್ ಅನ್ನು ಉಡುಗೊರೆಯಾಗಿ ಕೊಡುವಷ್ಟು ಬಹುತ್ವದ ಪಾಠವೇ ಗೊತ್ತಿಲ್ಲದಂತಹ ಹಿಂದೂ ರಾಷ್ಟ್ರೀಯವಾದಿ ನರೇಂದ್ರ ಮೋದಿ ಸೆಕ್ಯುಲರಿಸಂ ಕುರಿತಾಗಿ ಮಾತನಾಡುವುದೇ ಒಂದು ವ್ಯಂಗ್ಯ.
ಕಾರ್ಪೊರೇಟ್ ಶಕ್ತಿಗಳ ಕ್ಯಾಪಿಟಲಿಸಂ ಮತ್ತು ಬಹುಸಂಖ್ಯಾತತ್ವದ ಕೋಮುವಾದಿ ರಾಜಕಾರಣಗಳ ಸಮ್ಮಿಶ್ರ ಸರಕಾರವು ಇಂಡಿಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಇದೇ ಮೊದಲು. ಮೋದಿ ಪ್ರಧಾನಿ ಆಗುವುದರ ಮೂಲಕ ತನ್ನ ಅಸ್ತಿತ್ವವನ್ನು ಗಳಿಸಿಕೊಂಡ ಬಲಪಂಥೀಯ ಫೆನಟಿಸಂ ಆಧುನಿಕತೆ ಮತ್ತು ಕೋಮು ಸೌಹಾರ್ದತೆಯನ್ನು ಸಂಪೂರ್ಣವಾಗಿ ನಾಶಗೊಳಿಸುವತ್ತ ದಾಪುಗಾಲು ಇಟ್ಟಿದೆ. ಇತ್ತೀಚೆಗೆ ಶೇಖರ್ ಗುಪ್ತ, ಸುಮನ್ ದೇಬ್‌ರಂತಹ ಪತ್ರಕರ್ತರು ‘‘
""centre rightists”ಎನ್ನುವ ಹಣೆಪಟ್ಟಿಯೊಂದಿಗೆ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇವರ ಜನಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಒಂದು ಕಡೆ ಪ್ರಭಾವಶಾಲಿ ಕ್ಯಾಪಿಟಲಿಸ್ಟ್, ಮತ್ತೊಂದು ಕಡೆ ಬಲಪಂಥೀಯ ಫೆನಟಿಸಂ, ಬೆನ್ನ ಹಿಂದೆ ""centre rightists” ಕಟ್ಟಿಕೊಂಡಿರುವ ನರೇಂದ್ರ ಮೋದಿಯ ಮಿಷನ್ ಒಂದು ಭಯಾನಕ ಸ್ವಪ್ನದಂತೆ ಪ್ರಜ್ಞಾವಂತರಲ್ಲಿ ಬೆಚ್ಚಿಬೀಳಿಸುತ್ತಿದೆ.
-ಶ್ರೀಪಾದ್ ಭಟ್ , ವಾರ್ತಾಭಾರತಿ
0 comments:
Post a Comment