ಕೊಪ್ಪಳ, ಮಾ.೨೩ : ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಾದ ಯಶಸ್ವಿನಿ ಯೋಜನೆಯಡಿ ೨೦೧೫-೧೬ ನೇ ಸಾಲಿಗೆ ಫಲಾನುಭವಿಗಳ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಸಹಕಾರಿ ಸಂಸ್ಥೆಗಳಲ್ಲಿ ಆರಂಭವಾಗಿದ್ದು, ಮೇ.೩೧ ರವರೆಗೆ ಕಾಲಾವಕಾಶ ಒದಗಿಸಲಾಗಿದೆ.
ಗ್ರಾಮೀಣ ಸಹಕಾರಿ ಸಂಘದ ಸದಸ್ಯರಿಗೆ ಯಶಸ್ವಿನಿ ವಾರ್ಷಿಕ ವಂತಿಗೆಯನ್ನು ರೂ. ೨೫೦/- ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ರೂ. ೫೦/- ನಿಗದಿಪಡಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ದಿನಾಂಕ ೨೮-೦೨-೨೦೧೫ ಕ್ಕಿಂತಲೂ ಮೊದಲು ಗ್ರಾಮೀಣ ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿರುವ ವ್ಯಕ್ತಿಗಳು, ಮೂರು ತಿಂಗಳ ಹಿಂದೆ ರಚನೆಯಾದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಸಂಘಟಿಸಲ್ಪಟ್ಟಿರುವ, ಗ್ರಾಮೀಣ ಪ್ರದೇಶದಲ್ಲಿರುವ ಸ್ವಸಹಾಯ ಗುಂಪು ಮತ್ತು ಅವರ ಕುಟುಂಬದ ಅರ್ಹ ಸದಸ್ಯರು ಪ್ರತ್ಯೇಕವಾಗಿ ವಂತಿಗೆ ಹಣ ಪಾವತಿ ಮಾಡುವ ಮೂಲಕ ಯೋಜನೆಯ ವ್ಯಾಪ್ತಿಗೆ ಒಳಪಡಬಹುದಾಗಿದೆ.
ಯಶಸ್ವಿನಿ ಯೋಜನೆಯನ್ನು ೨೦೧೫-೧೬ನೇ ಸಾಲಿಗೆ ನಗರ ಸಹಕಾರಿಗಳಿಗೂ ಮತ್ತು ಅವರ ಕುಟುಂಬವರ್ಗದವರಿಗೂ ವಿಸ್ತರಿಸಲಾಗಿದ್ದು, ವಾರ್ಷಿಕ ವಂತಿಗೆ ರೂ. ೭೧೦/- ನಿಗದಿಪಡಿಸಲಾಗಿದೆ. ನಗರವಾಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ವಂತಿಗೆ ಮೊತ್ತ ರೂ. ೫೧೦/- ನಿಗದಿಪಡಿಸಲಾಗಿದೆ. ನಗರ ಪ್ರದೇಶದ ಯಾವುದೇ ತರಹದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ ನೊಂದಣಿಯಾಗುವ ದಿನಾಂಕ್ಕೆ ೩ ತಿಂಗಳು ಕಳೆದಿದ್ದರೆ ಅಂತಹ ಸಹಕಾರ ಸಂಘದ ಸದಸ್ಯರು ಮತ್ತು ಕುಟುಂಬವರ್ಗದವರಿಗೆ ನಿಗದಿಪಡಿಸಲಾಗಿರುವ ವಂತಿಗೆಯನ್ನು ಪ್ರತ್ಯೇಕವಾಗಿ ಪಾವತಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆ ಹಾಗೂ ಸಮೀಪದ ಸಹಕಾರ ಸಂಸ್ಥೆಯನ್ನು ಸಂಪರ್ಕಿಸಬಹುದು
0 comments:
Post a Comment