PLEASE LOGIN TO KANNADANET.COM FOR REGULAR NEWS-UPDATES




  ಇತಿಹಾಸ ಪ್ರಸಿಧ್ಧ ನಗರ ಕೊಪ್ಪಳ. ಆದಿ ಗ್ರಂಥ ಕವಿರಾಜ ಮಾರ್ಗದಲ್ಲಿ ವಿದಿತ ಮಹಾ ಕೊಪಣನಗರ ಮತ್ತು ತಿರುಳ್ಗನ್ನಡ ನಾಡು ಎಂಬುದು ಇದರ ಪ್ರಸಿದ್ಧಿ. ಅಶೋಕ ಚಕ್ರವರ್ತಿಯ ಶಾಸನಗಳು ಕೊಪ್ಪಳ ಇತಿಹಾಸದ ಪ್ರತಿಷ್ಠೆ. ಧಾರ್ಮಿಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವೈಭವ ಕೊಪ್ಪಳದ ಹಿರಿಮೆ.

ಸಂಸ್ಥಾನ ಶ್ರೀ ಗವಿಮಠ ಹನ್ನೊಂದನೆಯ ಶತಮಾನದಲ್ಲಿ ಸ್ಥಾಪನೆಗೊಂಡು,ಸಾವಿರ ವರ್ಷಗಳ ಶ್ರೇಷ್ಠ ಪರಂಪರೆಯ ಪವಿತ್ರ ಕ್ಷೇತ್ರವಾಗಿದ್ದು. ಗವಿಮಠದ ಮೂಲ ಸ್ಥಾಪಕರು ಶ್ರೀ ಮ.ನಿ.ಪ್ರ.ಜ. ರುದ್ರಮುನಿ ಶಿವಯೋಗಿಗಳು. ಶ್ರೀ ಗವಿಮಠದ ಸಮಸ್ತ ಪೀಠಾಧಿಪತಿಗಳು ಅವರ ತಪೋಬಲ ಮತ್ತು ಅಪಾರ ವಿದ್ಯಾಪ್ರೇಮ ಅಂತಃಕರುಣೆ ಆಧ್ಯಾತ್ಮದ ಪರಮ ಸಾಧನೆಯ ಪರಮಶ್ರೇಷ್ಠರು ಆದ ಶಿವಯೋಗಿಗಳು ಬರದ ನಾಡಿನಲ್ಲಿ ಅನ್ನ ದಾಸೋಹ,ಜ್ಞಾನ ದಾಸೋಹ ಮೂಲಕ ಜಾತಿ ಮತ ಭೇದವಿಲ್ಲದೆ ಈ ಭಾಗದ ಸಮಸ್ತ ಜನ ಕೋಟಿಯ ಭಾಗ್ಯದ ಬಾಗಿಲು ತೆರೆದರು.

ಶ್ರೀಮಠದ ಹನ್ನೊಂದನೆಯ ಪೀಠಾಧಿಪತಿಗಳಾದ ಪರಮ ಪೂಜ್ಯಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅನಂತ ಲೀಲೆಯನ್ನು ಗೈದ ಅಗಾಧ ಮಹಿಮಾಶೀಲರು.ಪರಮ ಪ್ರಸಾದ ಅಂಬಲಿಯನ್ನು ಕರುಣಿಸಿ ನವಾಬನ ಕುಷ್ಠರೋಗವನ್ನು ಕಳೆದ ಶಿವತೇಜ ಪುಂಗವರು.ಇವರು ಗುರುಗಳನ್ನಗಲಿ ಬದುಕುವ ಯಾತನೆಯನ್ನು ಸಹಿಸಲಾರದೆ ತಮ್ಮ ಗುರುಗಳಿಗಾಗಿ ಸಿದ್ಧಪಡಿಸಿದ್ದ ಗದ್ದುಗೆಯಲ್ಲೇ ತಾವೇ ಪ್ರವೇಶಿಸಿ ಸಜೀವ ಗದ್ದುಗೆಗೊಂಡರು.ಅಂದಿನ ಆ ದಿನವನ್ನು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನಾಗಿ ಆಚರಿಸಲಾಗುತ್ತದೆ.


ಸಂಸ್ಥಾನ ಶ್ರೀ ಗವಿಮಠದ ೧೬ನೇ ಪೀಠಾಧಿಪತಿಗಳಾದ .ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಶಿವಯೋಗಿಗಳು ತಪೋನಿಷ್ಠರು,ಆರ್ಯುವೇದ ಅಧ್ವರ್ಯರು,ವಾಕ್ ಸಿದ್ಧಿ ಪುರುಷರು ಆದಇವರು ಬರಗಾಲ ಬವಣೆಯ ಈ ನಾಡ ಜನತೆಯ ಬದುಕನ್ನು ಉಧ್ಧರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು ೧೯೫೧ ರಲ್ಲಿ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯನ್ನು ಆರಂಭಿಸಿದರು. ೧೯೬೩ ರಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸಿ ಶ್ರೀ ಗವಿಮಠದ ಸಮಸ್ತ ಆಸ್ತಿಯನ್ನು ಈ ಸಂಸ್ಥೆಗೆ ಧಾರೆ ಎರೆದು ತಮ್ಮ ಕೊನೆಯ ಕ್ಷಣದ ವರೆಗೂ ಸಮಸ್ತ ಭಕ್ತ ಕೋಟಿಯ ಉದ್ಧಾರಕ್ಕಾಗಿ ತಮ್ಮನ್ನು ತಾವು ಶ್ರೀಗಂಧದಂತೆ ಸವೆಸಿಕೊಂಡ ಮಹಿಮಾಶೀಲರು ಇವರು.

      ಶ್ರೀಮಠದ ಪರಂಪರೆಯ ೧೭ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ. ಶಿವಶಾಂತ ಶಿವಯೋಗಿಗಳು-ಶಿವತೇಜ, ಪ್ರಶಾಂತ ಚಿತ್ತ, ಸದಾ ಭಕ್ತೋದ್ಧಾರದ ಸಚ್ಚಿಂತನ ಸತ್ಕಾರ್ಯ ತಪೋಬಲದ ಶಿವಯೋಗಿಗಳು.  ಅಕ್ಷರಶಃ ಶ್ರೀ ಗವಿಮಠದ ಕೀರ್ತಿಕಲಶ, ಸಮಸ್ತ ಜನಾಂಗದ ಹಿತವನ್ನೆ ಹಾರೈಸಿದವರು.


      ಲಿಂ.ಜ. ಮರಿಶಾಂತವೀರ ಶಿವಯೋಗಿಗಳು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಪ್ರಾಥಮಿಕ ಶಾಲೆಯಿಂದ, ಡಿಗ್ರಿ ಕಾಲೇಜು, ಆಯುರ್ವೇದ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ಸಂಸ್ಥೆ, ಬಿ.ಇಡಿ, ಎಂ.ಎ, ಎಂ.ಕಾಮ್, ಎಂ.ಎಸ್.ಸಿ, ಹಾಗೂ ಸಿ.ಬಿ.ಎಸ್.ಇ. ಪಬ್ಲಿಕ್ ಸ್ಕೂಲ್‌ವರೆಗೂ ಮಹೊನ್ನತವಾಗಿ ಬೆಳೆಯುತ್ತಾ ಸಾಗಿದೆ. ಇಂದಿನ ೧೮ನೇ ಪೀಠಾಧೀಶ್ವರರಾದ ಜ. ಗವಿಸಿದ್ಧೇಶ್ವರ ಶಿವಯೋಗಿಗಳು, ವಾಗ್ಮಿಗಳು,ವಿದ್ಯಾವಂತರು, ಹಾಗೂ ವಿದ್ಯಾ ಪ್ರೇಮಿಗಳೂ ಆಗಿದ್ದಾರೆ. ಪೂರ್ವದ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುತ್ತಾ ಅವರ ಸತ್ಯ ಸಂಕಲ್ಪಗಳನ್ನು ನೆರೆವೇರಿಸುತ್ತಾ ಸಾಗಿದ್ದಾರೆ. ದೂರದೃಷ್ಟಿಯುಳ್ಳ ಪೂಜ್ಯರು ಶ್ರೀಮಠದ ಹಾಗೂ ಶಾಖಾಮಠಗಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಹೊಸ ರೂಪರೇಷೆ ಮೂಡಿಸುವಲ್ಲಿ ನಿರತರಾಗಿರುವರು.



      ಇಂತಹ ದಿವ್ಯ ಪರಂಪರೆಯನ್ನು ಹೊಂದಿದ ಈ ನಾಡಿನ ಗವಿಮಠ ಶ್ರೇಷ್ಠತ್ವವನ್ನು ಹೊಂದಿರುವುದರ ಜೊತೆಗೆ ಇಂತಹ ಪರಮ ಪವಿತ್ರ ಪೂಜ್ಯ ಶ್ರೀಗಳವರನ್ನು ಪಡೆದಿರುವುದು, ಕೊಪಣ ನಗರದ ಸಮಸ್ತ ಜನರ ಪುಣ್ಯವಾಗಿದೆ ಮತ್ತು ಭಾಗ್ಯವಾಗಿದೆ.
ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ.


ಎಸ್. ಎಮ್. ಕಂಬಾಳಿಮಠ.












Advertisement

0 comments:

Post a Comment

 
Top