ಮಳೆಯನ್ನೇ ಆಶ್ರಯಿಸಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಸ್ಥಿತಿ ಕಷ್ಟದಾಯಕವಾಗಿದ್ದು, ಒಣಬೇಸಾಯ ಆಧಾರಿತ ರೈತರ ಆರ್ಥಿಕ ಸಬಲತೆಗೆ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಇನ್ನೂ ಹೆಚ್ಚಿನ ನೆರವು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
ಕೊಪ್ಪಳ ತಾಲೂಕು ಹಾಸಗಲ್ ಗ್ರಾಮದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಹಾಗೂ ರೈತರೊಂದಿಗೆ ಶನಿವಾರದಂದು ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶೇ. ೭೦ ರಷ್ಟು ಮಳೆ ಆಶ್ರಿತ ಬೇಸಾಯ ಮಾಡುವ ರೈತರಿದ್ದಾರೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಇತ್ಯಾದಿ ಕೃಷಿ ಸಾಮಗ್ರಿಗಳನ್ನು ಸರ್ಕಾರ ನೀಡುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಮಳೆ ಆಗದಿದ್ದಲ್ಲಿ, ಸರ್ಕಾರ ಹಾಗೂ ರೈತರ ಶ್ರಮ ವ್ಯರ್ಥವಾಗಲಿದೆ. ಇಂತಹ ಸ್ಥಿತಿಗತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಕೃಷಿ ಮತ್ತು ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ, ಒಣಬೇಸಾಯ ಆಧಾರಿತ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಮಳೆಗಾಲದಲ್ಲಿ ಜಮೀನಿನಲ್ಲಿ ಬಿದ್ದಂತಹ ಮಳೆ ನೀರು ವ್ಯರ್ಥವಾಗಬಾರದು. ಹನಿ, ಹನಿ ನೀರನ್ನೂ ಸಂರಕ್ಷಿಸಿ, ಉಪಯುಕ್ತಗೊಳಿಸುವ ಬದ್ಧತೆಯನ್ನು ಎಲ್ಲರೂ ತೋರಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಗರಿಷ್ಠ ೧. ೮೪ ಲಕ್ಷ ರೂ. ವೆಚ್ಚದಲ್ಲಿ ಕೃಷಿ ಹೊಂಡ, ತಾಡಪತ್ರಿ, ಡೀಸೆಲ್ ಪಂಪ್‌ಸೆಟ್, ಸ್ಪ್ರಿಂಕ್ಲರ್ ವ್ಯವಸ್ಥೆ, ಸಿಮೆಂಟ್ ಪೈಪ್, ಕೃಷಿ ಬೆಳೆಪದ್ಧತಿ ಸೌಕರ್ಯವನ್ನು ಒದಗಿಸಲಿದೆ. ಇದರಲ್ಲಿ ರೈತರು ಕೇವಲ ೪೦ ಸಾವಿರ ರೂ. ಮಾತ್ರ ಭರಿಸಬೇಕಾಗುತ್ತದೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಗುಣವಾಗಿ ಕೃಷಿ ಹೊಂಡದ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಒಮ್ಮೆ ಕೃಷಿ ಹೊಂಡ ಭರ್ತಿಯಾದಲ್ಲಿ, ರೈತರು ಉತ್ತಮ ಬೆಳೆ ಬೆಳೆಯುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದಾಗಿದೆ. ಶೇ. ೭೦ರಷ್ಟು ಇರುವ ಒಣಬೇಸಾಯ ರೈತರು ಅಭಿವೃದ್ಧಿಯಾದಲ್ಲಿ ಕೃಷಿ ವಲಯವೇ ಅಭಿವೃದ್ಧಿಯಾದಂತೆ ಆಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
ಕೃಷಿಭಾಗ್ಯ ಮಾದರಿಯಾಗಲಿದೆ : ಒಣ ಬೇಸಾಯ ಆಧಾರಿತ ರೈತರ ಹಿತಕಾಯುವ ಸಲುವಾಗಿ ಜಾರಿಗೆ ತಂದಿರುವ ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಇದೇ ವರ್ಷದ ಮೊದಲ ಹಂತ ಫಲಾನುಭವಿಗಳಾಗಿದ್ದು, ಯೋಜನೆಯ ಸದುಪಯೋಗ ಪಡೆದುಕೊಂಡು ಶ್ರಮವಹಿಸುವ ರೈತರು ಇತರೆ ರೈತರಿಗೆ ಮಾದರಿಯಾಗಲಿದ್ದು, ಕೃಷಿ ಭಾಗ್ಯ ಯೋಜನೆಯು ಕೂಡ ಮಾದರಿ ಯೋಜನೆಯಾಗಲಿದೆ ಎಂದು ಸಚಿವರು ಹೇಳಿದರು.
ಪ್ರತಿ ತಾಲೂಕಿಗೆ ೨೦೦ ಹೆಚ್ಚುವರಿ ಫಲಾನುಭವಿಗಳು : ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಒಟ್ಟು ೮೪೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಒಟ್ಟು ೧೦೭ ತಾಲೂಕುಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯೋಜನೆಗಾಗಿ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗಿವೆ. ಬರುವ ಫೆಬ್ರವರಿ ತಿಂಗಳಿನಲ್ಲಿ ಪ್ರತಿ ತಾಲೂಕಿಗೆ ಹೆಚ್ಚುವರಿ ೨೦೦ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ಮಳೆಗಾಲ ಆರಂಭವಾಗುವುದರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಭೈರೇಗೌಡ ಅವರು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೃಷಿಯಲ್ಲಿ ರೈತರ ಭವಿಷ್ಯ ಅಡಗಿದೆ. ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಯೋಜನೆಯ ಲಾಭ ದೊರಕುವಂತೆ ಮಾಡಲು, ಮುಂದಿನ ಬಜೆಟ್‌ನಲ್ಲಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಯಚೂರು ಕೃಷಿ ವಿವಿ ಕುಲಪತಿ ಡಾ. ಪಿ.ಎಂ. ಸಾಲಿಮಠ, ಕೃಷಿ ವಿಸ್ತರಣೆ ಶಿಕ್ಷಣ ಕೇಂದ್ರದ ನಿರ್ದೇಶಕ ಕೆ.ಪಿ. ವಿಶ್ವನಾಥ್, ಜಿ.ಪಂ. ಸದಸ್ಯರುಗಳಾದ ಅಶೋಕ್ ತೋಟದ, ಜನಾರ್ಧನ ಹುಲಿಗಿ, ಜಂಟಿಕೃಷಿ ನಿರ್ದೇಶಕ ಹುನಗುಂದ ಸೇರಿದಂತೆ ಹಲವು ಅಧಿಕಾರಿಗಳು,ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment