ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾರದಾ ಸಂಗೀತ ಮತ್ತು ಕಿನ್ನಾಳದ ಕಲಾ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ದಿ. ಹನುಮಂತರಾವ ಕುಲಕರ್ಣಿ (ಬಂಡಿ) ಯವರ ೪ನೇ ವರ್ಷದ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರು ಹಿಂದೂಸ್ತಾನಿ ಮತ್ತು ಸುಗಮ ಸಂಗೀತ ನಡೆಸಿಕೊಟ್ಟರು.
ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕೊಪ್ಪಳದ ಸಂಗೀತಾಸಕ್ತ ಜನಸಾಗರವೇ ಹರಿದು ಬಂದಿತ್ತು. ಈಗಿನ ಸದ್ದುಗದ್ದಲದ ಪಾಶ್ಚಾತ್ಯ ಸಂಗೀತದ ಮಧ್ಯೆ ಹಿಂದೂಸ್ಥಾನಿ ಶಾಸ್ತ್ರಿಯ ಹಾಗೂ ಸುಗಮ ಸಂಗೀತ ಕೇಳುವವರ ಸಂಖ್ಯೆ ಕಡಿಮೆಯಿಲ್ಲ ಎನ್ನುವುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿತು. ಮಧುವಂತಿ ರಾಗದ ಮೂಲಕ ತಮ್ಮ ಸಂಗೀತ ಲಹರಿಯನ್ನು ಪ್ರಾರಂಭಿಸಿದ ಸಂಗೀತಾ ಕಟ್ಟಿಯವರು, ನಂತರ ತಮ್ಮ ಹಾಡುಗಳ ಮೂಲಕ ಇಡೀ ಜನ ಸಮೂಹವನ್ನು ಮಂತ್ರ ಮುಗ್ಧರನ್ನಾಗಿಸಿದರು. ಸಂಗೀತಾ ಕಟ್ಟಿ ಅವರ ಗಾಯನಕ್ಕೆ ತಲೆದೂಗಿದ ಸಂಗೀತಾಸಕ್ತರು, ಹಾಡುಗಳ ಸವಿಯನ್ನು ಸವಿದು ಸಂಭ್ರಮಿಸಿದರು. ಮಧುವಂತಿ, ವಿಲಂಬಿತ ತೀನ್‌ತಾಳ ದೃತ್ ಹಾಗೂ ತರಾನದ ಮೂಲಕ ಸಂಗೀತ ಕಛೇರಿಯನ್ನು ಪ್ರಾರಂಭಿಸಿದ ಸಂಗೀತಾ ಕಟ್ಟಿ ಅವರು ಹಲವಾರು ದಾಸವಾಣಿಗಳನ್ನು ಪ್ರಸ್ತುತ ಪಡಿಸಿದರು. ನಂತರ ಜನಾಪೇಕ್ಷೆಯ ಮೇರೆಗೆ ಹಾಡಿದ ಮೂಡಲ ಮನೆ ಧಾರವಾಹಿಯ ಶೀರ್ಷಿಕೆ ಗೀತೆ ಜನಮನ ಸೂರೆಗೊಂಡಿತು. ಸುಗಮ ಸಂಗೀತ ಕಾರ್ಯಕ್ರಮವನ್ನು ಕು. ಸುಧಾ ಆರ್. ಅಡವಿ ಕಿನ್ನಾಳ ಮತ್ತು ಜಾನಪದ ಸಂಗೀತ ಕು. ವಿನಾಯಿಕ ಹೆಚ್, ಕಿನ್ನಾಳ, ಕು. ಪಲ್ಲವಿ ಎ. ಗಿಣಿಗೇರಿ ನಡೆಸಿಕೊಟ್ಟರು. ಸಂಗೀತ ಕಾರ್ಯಕ್ರಮಕ್ಕೆ ಪಂ. ರವೀಂದ್ರ ಕಾಟೋಟಿ ಬೆಂಗಳೂರು ಅವರು ಹಾರ‍್ಮೋನಿಯಂ ನಲ್ಲಿ ಹಾಗೂ ಡಾ. ರವಿಕಿರಣ್ ನಾಕೋಡ ಧಾರವಾಡ, ಕೃಷ್ಣ ಸೊರಟೂರ ಅವರು ತಾಳದಲ್ಲಿ ಸಾಥ್ ನೀಡಿದರು.
ವೇದಿಕೆಯ ಕಾರ್ಯಕ್ರಮದ ಪೂರ್ವದಲ್ಲಿ ಹನುಮಸಾಗರದ ಹಿರಿಯ ಸಂಗೀತ ಕಲಾವಿದರಾದ ಶ್ರೀ ವಾಜೇಂದ್ರಚಾರ ಜೋಷಿ ಕೆಲವು ದಾಸರ ಪದಗಳನ್ನು ಹಾಡಿದರು.
ಇದಕ್ಕೂ ಪೂರ್ವದಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಚೈತನ್ಯಾನಂದ ಸ್ವಾಮೀಜಿ ವಹಿಸಿ, ಮಾತನಾಡಿದರು. ಉದ್ಘಾಟನೆಯನ್ನು ವಾಜೇಂದ್ರಚಾರ ಜೋಷಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂ
ರಾವ್, ಖ್ಯಾತವೈದ್ಯ ಡಾ|| ಕೆ.ಜಿ.ಕುಲಕರ್ಣಿ ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಗಂಟಿ, ಬಿ.ಎಂ.ಭೂಸನೂರುಮಠ, ಹಿರಿಯ ಸಾಹಿತಿ ಡಾ|| ಮಹಾಂತೇಶ ಮಲ್ಲನಗೌಡ, ಲಚ್ಚಣ್ಣ ಕಿನ್ನಾಳ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಸ್ವಾಗತ ಹಾಗೂ ಪರಿಚಯವನ್ನು ವಸಂತಪೂಜಾರ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು ಪ್ರಾಸ್ತಾವಿಕವಾಗಿ ಮಾತನಾಡಿ, ದಿ. ಹನುಮಂತರಾವ್ ಬಂಡಿ ಅವರ ಸಂಗೀತ ಪ್ರತಿಭೆ ಕುರಿತು ಸ್ಮರಿಸಿದರು. ವಾದಿರಾಜ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 comments:
Post a Comment