ಕೊಪ್ಪಳ, ಡಿ. ೨೪ : ಯುವ ವಕೀಲರಾದ ವಿಜಯಮೃತರಾಜರು ಇತ್ತೀಚೆಗೆ ಕಸಾಪ ಪೂರ್ವಭಾವಿ ಸಭೆಯಲ್ಲಿ ನಾನು ಆಡಿದ ಮತುಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅದಕ್ಕೆ ನನ್ನ ಉತ್ತರ ಇಂತಿದೆ.
ಕೇಂದ್ರ ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆಗಳೆಂದು ಸಂಘಟಕರೇ ಒಪ್ಪಿಕೊಂಡಿದ್ದಾರೆ. ಸಾಹಿತ್ಯ, ಸಂಗೀತ, ಸಂಸ್ಕೃತಿ ಕುರಿತ ಚಿಂತನೆ ಶಾಂತ ವಾತಾವರಣದಲ್ಲಿ ನಡೆಯಬೇಕು. ತಿಂಗಳುಗಟ್ಟಲೆ ನಡೆಯುವ ಜಾತ್ರೆಯ ಕೊನೆಯ ಭಾಗದಲ್ಲಿ ಧೂಳು-ಧುಮ್ಮು, ಜನರ ಮಲಮೂತ್ರ ವಿಸರ್ಜನೆ ನಡೆಯವ ಜಾಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದಲ್ಲಿ ಏನು ಚಂದ? ಕೊಪ್ಪಳದ ಜಾತ್ರೆಗೆ ಸಾಂಸ್ಕೃತಿಕ ಸ್ವರೂಪ ಬಂದದ್ದನ್ನು ನಾನು ಹಿಂದೆಯೇ ಸ್ವಾಗತಿಸಿದ್ದೇನೆ. ಬೆಟ್ಟದ ಮೇಲೆ ನಡೆಯುವ ಕಾರ್ಯಕ್ರಮದಲ್ಲಿ ಬಹುಪಾಲು ಸ್ವಾಮಿಗಳೇ ಪಾಲ್ಗೊಂಡಿರುತ್ತಾರೆ. ಉಳಿದಂತೆ ಸಂಗೀತ ಕಾರ್ಯಕ್ರಮಗಳಿರುತ್ತವೆ. ಜಾತ್ರೆಯ ಮಧ್ಯದಲ್ಲಿದ್ದರೂ ಎತ್ತರದ ತಾಣದಲ್ಲಿ ಬೆಟ್ಟದಲ್ಲಿ ಕಾರ್ಯಕ್ರಮ ನಡೆಯುವುದರಿಂದ ಜನರಿಗೆ ಆಸ್ವಾದಿಸಲು ಅನುಕೂಲವಾಗಿದೆ. ಬಸವನಗರ, ಉರ್ದು ಶಾಲೆಯ ಬದಿಯಿಂದ ಜನ ನುಗ್ಗುತ್ತಲೇಯಿರುತ್ತಾರೆ. ಮಕ್ಕಳು ಪೀಪಿ ಊದುತ್ತಾರೆ, ಜಾಹೀರಾತು ಪ್ರಚಾರ ನಡೆದಿರುತ್ತವೆ, ಕರ್ಕಶ ಧನಿಯಲ್ಲಿ ಹಾಡುಗಳು ಕೇಳಿಬರುತ್ತವೆ. ಇಂಥ ಕಡೆಗೆ ಎಂಥ ಚಿಂತನೆ ಸಾಧ್ಯ?
ಸಾಹಿತ್ಯಿಕ ಕಾರ್ಯಕ್ರಮಗಳಿಗೆ ರಾಜ್ಯದೆಲ್ಲಡೆಯೂ ಜನ ಸೇರುವುದು ಕಡಿಮೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದಕ್ಕೊಂದು ಅಪವಾದ. ಉದ್ಘಾಟನೆಯ ದಿನ ಇರುವಷ್ಟು ಜನ ನಂತರ ಗೋಷ್ಠಿಗಳಲ್ಲಿ ಇರುವುದಿಲ್ಲ. ಶ್ರೀಸಾಮಾನ್ಯನಿಗೆ ಸಾಹಿತ್ಯ ತಲುಪಬೇಕು ಅಂದ ಮಾತ್ರಕ್ಕೆ ಸಂತೆಯಲ್ಲಿ, ಬಜಾರದಲ್ಲಿ, ಜಾತ್ರೆಯಲ್ಲಿ ಕಾರ್ಯಕ್ರಮ ಮಾಡಬೇಕೆ? ಕೊಪ್ಪಳದ ಕಾರ್ಯಕ್ರಮಗಳಲ್ಲಿ ಅವೆ ಹಳೆಯ ಮುಖಗಳು ಮತ್ತೆ ಮತ್ತೆ ಕಾಣಲು ನಿಮ್ಮಂಥವರು ಕಾರ್ಯಕ್ರಮಕ್ಕೆ ಬರದೆ ಫೇಸ್‌ಬುಕ್ಕಿನಲ್ಲಿ ದೂರದ ಜನರೊಡನೆ ಸಂವಾದಿಸುತ್ತೀರಿ. ಸಮೀಪದ ಜನರನ್ನು ಮರೆತು ಬಿಡುತ್ತೀರಿ. ನಿಮ್ಮನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಮಾಡಿದಾಗ ಸಾವಿರಾರು ಜನರನ್ನು ಸದಸ್ಯರನ್ನಾಗಿ ಮಾಡುತ್ತೇನೆ ಎಂದವರು ಅರ್ಧದಲ್ಲಿಯೇ ಜವಾಬ್ದಾರಿಯಿಂದ ಕಳಚಿಕೊಂಡು ಕೆಲವು ಸದಸ್ಯರನ್ನು ಮಾಡಿ ಹೊರಟು ಹೋದಿರಿ. ವಕೀಲರ ಸಾಹಿತ್ಯ ಸಮ್ಮೇಳನ ಮಾಡುತ್ತೇವೆಂದವರು, ಅದನ್ನು ಅರ್ಧಕ್ಕೆ ಕೈ ಬಿಟ್ಟಿರಿ. ನಿಮ್ಮಂಥ ಹೊಸ ಮುಖಗಳನ್ನು ಬೆಳೆಸಲು ಪ್ರಯತ್ನಪಟ್ಟರೆ ಸೆಟಗೊಳ್ಳುತ್ತೀರಿ.
ಹೊಸಬರು ಬರೆದ ಮಾತ್ರಕ್ಕೆ ಸಾಹಿತ್ಯ ಹೊಸದಾಗುವುದಿಲ್ಲ, ಹಳಬರು ಬರೆದ ಮಾತ್ರಕ್ಕೆ ಸಾಹಿತ್ಯ ಹಳೆಯದಾಗುವುದಿಲ್ಲ. ಸಮಕಾಲೀನ ಸಮಾಜದ ಆಗು ಹೋಗುಗಳ ಹಿನ್ನೆಲೆಯಲ್ಲಿ ಸಾಹಿತ್ಯ ನಿರ್ಮಾಣವಾದರೆ ತುಸುಮಟ್ಟಿಗೆ ನಾವು ಜನರ ಹತ್ತಿರಾಗಬಹುದು. ’ಸಾಹಿತ್ಯವು ಎಲ್ಲರಿಗೆ ಅಲ್ಲ’ ಎಂದು ಸರ್ವಜ್ಞ ಹೇಳಿದ್ದೇಕೆ?
ಜಾತ್ರೆಯ ಸಂದರ್ಭದಲ್ಲಿ ಗೊ. ರು. ಚನ್ನಬಸಪ್ಪನವರು ಮಠದ ಕಲ್ಯಾಣ ಮಂಟಪದಲ್ಲಿ ಜಾನಪದ ವಿಚಾರ ಗೋಷ್ಠಿ ಹಮ್ಮಿಕೊಂಡಿದ್ದರು. ಅದು ಯಶಸ್ವಿಯಾಗಲಿಲ್ಲ. ಇದರಿಂದ ಪಾಠ ಕಲಿತು ಜಾತ್ರೆಯ ಸಂದರ್ಭದಲ್ಲಿ ನಡೆಸುವುದು ಬೇಡ ಎಂದು ಪೂರ್ವಭಾವಿ ಸಭೆಯಲ್ಲಿ ಹೇಳಿದ್ದೆ.
ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರು ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಸಬೇಕು ಎಂಬ ಬಗ್ಗೆ ಮೊದಲೇ ನಿರ್ಧರಿಸಿ, ಸಮ್ಮೇಳನದಲ್ಲಿ ಏನು ಚರ್ಚೆಯಾಗಬೇಕು ಎಂಬುದನ್ನು ಮಾತ್ರ ಚರ್ಚಿಸಲು ಸಭೆ ಕರೆದಿರುವುದು ಅಪ್ರಜಾಸತ್ತಾತ್ಮಕ ವಿಚಾರ. ಸಮ್ಮೇಳನ ಎಲ್ಲಿ ನಡೆಯಬೇಕು, ಹೇಗೆ ನಡೆಯಬೇಕು ಎಂಬ ಎರಡೂ ವಿಷಯಗಳನ್ನು ನಿರ್ಧರಿಸಿದ ಮೇಲೆ ಕಾರ್ಯಕ್ರಮ ನಡೆಸಿದ್ದರೆ ಸೂಕ್ತವಿತ್ತು. ಇದು ಕೇವಲ ನನ್ನ ಅಭಿಪ್ರಾಯವಾಗಿದೆ. ಕಸಾಪ ಅಧ್ಯಕ್ಷರು ತಮ್ಮ ನಿರ್ಣಯದಂತೆಯೇ ಸಮ್ಮೇಳನ ನಡೆಸಿದರೆ ಅದರಿಂದ ಬರುವ ಕೀರ್ತಿ-ಅಪಕೀರ್ತಿಗೆ ಅವರೇ ಹೊಣೆಗಾರರು ಎಂದು ನಾನು ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ.
ಅಲ್ಲಮಪ್ರಭು ಬೆಟ್ಟದೂರು
ನಿವೃತ್ತ ಪ್ರಾಚಾರ್ಯ ಕೊಪ್ಪಳ
ಮೊ: ೯೮೪೪೦೪೯೨೦೫
0 comments:
Post a Comment