ಬೇಡ ಬೇಡವೆಂದರೂ ಎಲ್ಲರು ಒಪ್ಪಿಕೊಂಡು ಅಪ್ಪಿಕೊಂಡಿರುವದು ಜಾಗತಿಕರಣವನ್ನು, ೯೦ ದಶಕ ಮತ್ತು ಶತಮಾನದ ಆರಂಭದಲ್ಲಿ ತೀವ್ರ ಚರ್ಚೆಯಾಗಿ ಪರ ವಿರೋಧದ ನಡುವೆಯೆ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರವು ಜಾಗತಿಕರಣವನ್ನು ಒಪ್ಪಿಕೊಂಡು ಬಹುತೇಕ ರಂಗದಲ್ಲಿ ಈಗ ಜಾಗತಿಕರಣವನ್ನು ನೋಡುತ್ತಿದ್ದೇವೆ. ಈ ಜಾಗತಿಕರಣವು ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಹೇಗೆ ನಾಶ ಮಾಡಿದೆ ಎಂಬುವದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಹರನ ಜಡೆಯಿಂದ ಇಳಿದು ಬಾ ತಾಯಿ ಇಳಿದು ಬಾ ಎಂದು ಬೇಂದ್ರೆ ಹಾಡು ಜನಪ್ರಿಯವಾಗಿದೆ, ಶಿವನ ಮುಡಿಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದಿರುವ ಪೌರಾಣಿಕ ಹಿನ್ನೆಲೆ ನಮ್ಮ ದೇಶದಲ್ಲಿದೆ. ಹಿಮಾಲಯದಲ್ಲಿದ್ದ ಗಂಗೆಯನ್ನು ಶಿವ ತನ್ನ ತಲೆಯಲ್ಲಿಟ್ಟುಕೊಂಡಿದ್ದು ಈ ಗಂಗೆಯೂ ಭೂಮಿಗೆ ಬಂದು ಜೀವ ಜಲವಾಗಲಿ, ಆಯಿತು ಎಂಬುವದಕ್ಕೆ ವರಕವಿ ಬೇಂದ್ರೆ ಹೇಳಿದ್ದಾರೆ. ಗಂಗೆಯನ್ನು ದೇವರೆಂದು ಪೂಜಿಸುವ ನಾವು ಯಾವುದೇ ಕಾರ್ಯ ಮಾಡಿದರೂ ಮೊದಲು ಗಂಗೆಯ ಪೂಜೆಯನ್ನು ಮಾಡುತ್ತೇವೆ. ಗಂಗೆಗೆ ನಮ್ಮಲ್ಲಿ ಅಗ್ರ ಸ್ಥಾನವನ್ನು ನೀಡಿದ್ದೇವೆ, ಗಂಗೆಯನ್ನು ತಾಯಿ ಎಂದು ಪೂಜಿಸುವ ನಮ್ಮ ನಾಡಿನಲ್ಲಿ ಗಂಗೆ ಈಗ ಮಾರಾಟವಾಗುತ್ತಿದ್ದಾಳೆ ಎಂದರೆ ಎಂಥ ವಿಪರ್ಯಾಸ.




ಇನ್ನು ಮೊದಲು ಹೊಟೆಲ್‌ಗಳಲ್ಲಿ ಕುಡಿಯಲು ನೀರು ಕೇಳಿದರೆ ಬೈಯ್ದು ಕೊಳ್ಳುತ್ತಾ ನೀರು ಕೊಡುತ್ತಿದ್ದರು ಅವರು ಬೈಯ್ದುಕೊಳ್ಳುತ್ತಾ ನೀರು ನೀಡುತ್ತಿರುವದಕ್ಕೆ ಕಾರಣ ಅವರು ಸಹ ದುಡ್ಡು ಕೊಟ್ಟು ನೀರು ತಂದಿರುತ್ತಿದ್ದರು ಅದೇ ಪರಿಸ್ಥಿತಿ ಇಂದು ಮನೆ ಮನೆಗಳಲ್ಲಿಯೂ ಇದೆ. ಇನ್ನು ಹೊಟೆಲ್‌ಗಳಲ್ಲಿ ಕುಡಿವ ನೀರು ಕೇಳದರೆ ಬೇಕೆಂದಲೆ ಉಪ್ಪು ನೀರು ನೀಡುತ್ತಿದ್ದು ಬೇರೆ ನೀರು ಕೇಳಿದರೆ ಇಲ್ಲ ಎಂದು ಹೇಳುತ್ತಾರೆ, ಅಷ್ಟಕ್ಕೂ ನಮಗೆ ಶುದ್ಧ ನೀರು ಬೇಕೆಂದರೆ ಮತ್ತೆ ದುಡ್ಡು ಕೊಟ್ಟು ಬಾಟಲಿಯ ನೀರು ಖರೀದಿಸಬೇಕು. ಹೊಟೆಲ್‌ಗಳಲ್ಲಿ ಬಾಟಲಿ ನೀರು ಖರೀದಿಸಲಿ ಎಂಬ ಕಾರಣಕ್ಕೆ ಉಪ್ಪು ನೀರು ನೀಡುತ್ತಿದ್ದಾರೆ. ಬಹುತೇಕರು ಇತ್ತೀಚಿಗೆ ಹೊಟೆಲ್‌ಗಳಲ್ಲಿ ಹೋಗಿ ಅಲ್ಲಿ ಕೊಡುವ ನೀರಿಗಿಂತ ಬಾಟಲಿ ನೀರು ಖರೀದಿಸಿ ಕುಡಿಯವದನ್ನು ಕಾಣುತ್ತೇವೆ. ಒಂದು ವೇಳೆ ನೀವು ಮನೆಯಿಂದ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದು ದಾರಿಯ ಮಧ್ಯೆ ಈ ಬಾಟಲಿಯ ನೀರು ಖಾಲಿಯಾಗಿ ಹೊಟೆಲ್‌ನಲ್ಲಿ ಚಹ ಕುಡಿದೊ ಇಲ್ಲವೆ ಟಿಫನ್ ಮಾಡಿ ಖಾಲಿಯಾಗಿರುವ ಬಾಟಲಿಯಲ್ಲಿ ನೀರು ತುಂಬಿಕೊಳ್ಳಲು ಹೋಗಿ ಹೊಟೆಲ್‌ನವರು ಅದಕ್ಕೆ ಅವಕಾಶ ನೀಡುವುದಿಲ್ಲ ಕಾರಣ ಅವರಿಗೆ ಲಾಭ ತರುವಂಥ ಬಾಟಲಿ ನೀರು ಮಾರಾಟವಾಗಬೇಕಾಗಿದೆ.
ಪ್ರಾಣವಿರುವ ಎಲ್ಲಾ ವಸ್ತುಗಳಿಗೆ ನೀರು ಅವಶ್ಯವಾಗಿ ಬೇಕಾಗಿದ್ದು ಮನುಷ್ಯನಿಗೆ ಗಾಳಿ ನೀರು ಅವಶ್ಯವಾಗಿ ಬೇಕು ಆದರೆ ಜೀವಜಲವಾಗಿರುವ ಗಂಗೆಯನ್ನು ಪಡೆಯಲು ಅಂದು ಭಗೀರಥ ಮಹರ್ಷಿ ತಪ್ಪಸ್ಸು ಮಾಡಿ ಭೂಮಿಗೆ ನೀರು ತಂದ ಎಂದು ಹೇಳುತ್ತಿದ್ದರೆ ಇಂದು ಭೂಮಿಯಲ್ಲಿರುವ ಗಂಗೆಯನ್ನು ಶುದ್ಧ ಮಾಡಿ ಕುಡಿಯಲು ಹರಸಾಹಸ ಪಡಬೇಕು ಅಲ್ಲದೆ ತಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ನೀರಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಖರ್ಚು ಮಾಡದೆ ನೀರು ಸಿಗುವ ಕಾಲ ಈಗಾಗಲೆ ಹೋಗಿದ್ದು ಮುಂದಿನ ದಿನಗಳಲ್ಲಿ ಶುದ್ದವಾದ ಗಂಗೆ ದೊರೆಯುವದು ಅಸಾಧ್ಯವೇನೊ ಎಂಬಂತೆ ಸ್ಥಿತಿ ಬರುತ್ತದೆ ಎನ್ನಲಾಗುತ್ತದೆ.
ಹಿಂದೆ ನಾವು ಚಿಕ್ಕವರು ಇದ್ದಾಗ ಮೊದಲು ಬಿಸ್ಲೇರಿ ನೀರು ಬಂತು ಆ ಸಂದರ್ಭದಲ್ಲಿ ಅಂದಿನ ಪತ್ರಿಕೆಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿವ ನೀರು ಪ್ರತಿ ಲಿಟರ್‌ಗೆ ೪೦ ರೂಪಾಯಿಯಾಗುವ ಸಾಧ್ಯತೆ ಇದೆ ಎಂದು ಬರೆದಿದ್ದರು ಅಂದು ಓದಿದ ನಾವು ಇದು ಎಗ್ಜಾಗೆರೇಷನ್ ವರದಿ ಎಂದುಕೊಂಡವರೆ ಹೆಚ್ಚು ಆದರೆ ಇದೇ ವರದಿ ಕೇವಲ ೨೦ ವರ್ಷಗಳಲ್ಲಿ ಸತ್ಯವಾಗಿದೆ. ಅಂದು ಬೇರೆ ಊರಿಗೆ ಹೋಗುವಾಗ ನಮ್ಮ ಹಿರಿಯರು ಹೊಟ್ಟೆ ತುಂಬಾ ನೀರು ಕುಡಿ ಎಂದು ಹೇಳುತ್ತಿದ್ದರು ಯಾಕಂದರೆ ಅವರು ಪ್ರಯಾಣಿಸುವ ಬಸ್‌ಗಳಲ್ಲಿ ನೀರು ಸಿಗುತ್ತಿರಲಿಲ್ಲ. ಆದರೆ ಇಂದು ಜನತೆ ಯಾವುದೇ ಊರಿಗೆ ಹೋಗಲಿ ಅವರು ಕೈಯಲ್ಲಿ ಆಗ ತಾನೇ ಖರೀದಿಸಿ ನೀರಿನ ಬಾಟಲಿ ಇರುತ್ತದೆ. ಈ ಬಾಟಲಿಯ ನೀರು ಖಾಲಿಯಾಗುತ್ತಿದ್ದಂತೆ ಅದನ್ನು ನಾಶ ಮಾಡಿ ಎಂದು ಬಾಟಲಿಗಳ ಮೇಲೆ ಬರೆದಿರುತ್ತಾರೆ ಕಾರಣ ಬಾಟಲಿ ನೀರು ತಯಾರಕರಿಗೆ ಹೊಸ ಬಾಟಲಿಯಲ್ಲಿರುವ ನೀರನ್ನು ಜನತೆ ಖರೀದಿಸಬೇಕು.
ಬಹುತೇಕ ಕಡೆ ಇರುವ ನೀರನ್ನಲ್ಲಿ ಖನಿಜವನ್ನು ತೆಗೆದು ಶುದ್ಧ ನೀರು ಎಂದು ಮಾರಾಟ ಮಾಡಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಂತೂ ನೀರು ಮಾರಾಟದ್ದು ದೊಡ್ಡ ಬಿಜಿನೆಸ್ ಆಗುತ್ತದೆ. ಅದಕ್ಕಾಗಿ ಐಎಸ್‌ಐ ಮಾರ್ಕು ಇರುವ ನೀರು ಕುಡಿಯಿರಿ ಎಂಬ ಸಂದೇಶವನ್ನು ಸಹ ಸರ್ಕಾರ ಪರೋಕ್ಷವಾಗಿ ನೀಡಿದೆ.

ಶರಣಪ್ಪ ಬಾಚಲಾಪುರ
ಹನುಮಸಾಗರ
---------------------------------------------------
0 comments:
Post a Comment