ಇವತ್ತು ದೇಶದ ಹಲವಾರು ಕಡೆಗಳಲ್ಲಿ ನಡೆಯುತ್ತಿರುವ ‘ಕಿಸ್ ಆಫ್ ಲವ್’, ‘ಹಗ್ ಆಫ್ ಲವ್’ ಮುಂತಾದವುಗಳು ಭಾರೀ ವಿವಾದವನ್ನೆ ಹುಟ್ಟುಹಾಕಿವೆ. ಈ ವಿವಾದದ ಬಿರುಗಾಳಿ ಎಷ್ಟು ಪ್ರಬಲವಾಗಿದೆಯೆಂದರೆ ಮೂಲತಃ ಇವೆಲ್ಲವೂ ಸಾಂಕೇತಿಕ ಪ್ರತಿ ಭಟನೆಗಳು ಎಂಬ ಮುಖ್ಯ ವಿಷಯವೇ ಎಲ್ಲಿಗೋ ಹಾರಿಹೋಗಿದೆ. ಒಂದು ಪ್ರಶ್ನೆ ಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕು. ಈ ಪ್ರೀತಿಯ ಚುಂಬನ ಅಥವಾ ಆಲಿಂಗನದ ಸಾಂಕೇತಿಕ ಪ್ರತಿಭಟನೆಗಳಿಗೂ ಪ್ರತಿಕೃತಿ ದಹನದಂಥವುಗಳಿಗೂ ಏನು ವ್ಯತ್ಯಾಸ? ಹೇಗೆ ಪ್ರತಿಕೃತಿ ದಹನ ಮಾಡುವವರು ಅದನ್ನೊಂದು ನಿತ್ಯ ಕಾಯಕವಾಗಿ ಮಾಡುವುದಿಲ್ಲವೋ ಅದೇ ರೀತಿ ಇವರ್ಯಾರೂ ನಿತ್ಯ ಸಾರ್ವಜನಿಕವಾಗಿ ಚುಂಬನ ಅಥವಾ ಆಲಿಂಗನ ಮಾಡುವವರಲ್ಲ. ವಿವಾದ ಸೃಷ್ಟಿಸುತ್ತಿರುವವರು ಈ ಸತ್ಯವನ್ನು ಮರೆಮಾಚಿ ವಿಷಯಾಂತರ ಮಾಡಿ ಚರ್ಚೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಪರಿಣಾಮವಾಗಿ ನೈತಿಕ ಪೊಲೀಸ್‌ಗಿರಿ ಎಂಬ ಕಾನೂನುಬಾಹಿರ ಕೃತ್ಯಗಳ ಸುತ್ತ ನಡೆಯಬೇಕಾದ ಚರ್ಚೆಗಳನ್ನು ಇನ್ನೆಲ್ಲಿಗೋ ಕೊಂಡೊಯ್ಯಲಾಗುತ್ತಿದೆ. ಪ್ರೇಮಿಗಳು ಮುಕ್ತವಾಗಿ ವಿಹರಿಸಲು ಅಂಜುವಂಥಾ ಸನ್ನಿವೇಶವನ್ನು ನಿರ್ಮಿಸಿದವರ ವಿರುದ್ಧ, ಅವರು ಐಸ್ ಕ್ರೀಮ್ ಪಾರ್ಲರಿನಲ್ಲೊ, ಬಸ್ ನಿಲ್ದಾಣದಲ್ಲೊ, ಕಡಲಕರೆಯಲ್ಲೊ ಅತ್ತಿತ್ತ ಭಯಭೀತ ದೃಷ್ಟಿ ಹರಿಸುತ್ತ ಪಿಸುಗುಡುವ ಅನಿವಾರ್ಯತೆಯನ್ನು ಸೃಷ್ಟಿಸಿದ ತಥಾಕಥಿತ ‘ಸಂಸ್ಕೃತಿ ರಕ್ಷಕ’ರ ವಿರುದ್ಧ ನಡೆಯಬೇಕಾದ ಚರ್ಚೆಗಳು ಚುಂಬನದ ನೈತಿಕತೆ ಮತ್ತು ಭಾರತೀಯ ಸಂಸ್ಕೃತಿಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಕಾಮಶಾಸ್ತ್ರ ರಚಿಸಿದ ಮುನಿ ವಾತ್ಸ್ಯಾಯನನನ್ನು, ಖಜುರಾಹೊ, ಕೋನಾರ್ಕ್, ನಂಜನಗೂಡು, ತೆಲಂಗಾಣದ ರಾಮಮಂದಿರ ಮೊದಲಾದ ಕಡೆಗಳಲ್ಲಿರುವ ಮೈಥುನ ಶಿಲ್ಪಗಳನ್ನು ಜಾಣ ಮರೆವಿಗೆ ತಳ್ಳಿರುವ ‘ಸಂಸ್ಕೃತಿ ರಕ್ಷಕ’ರು ಭಾರತೀಯ ಸಂಸ್ಕೃತಿ ಬಗ್ಗೆ ಭೋರ್ಗರೆಯುವುದನ್ನು ಕೇಳುವಾಗ ನಗು ಉಕ್ಕಿ ಬರದಿದ್ದೀತೇ? ನೈತಿಕ ಪೊಲೀಸ್‌ಗಿರಿ
ನಮ್ಮದು ಹತ್ತುಹಲವು ಸಮುದಾಯ ಗಳಿಂದ ಮತ್ತು ಅಷ್ಟೇ ಭಿನ್ನ ಭಿನ್ನ ಸಂಸ್ಕೃತಿಗಳಿಂದ ಕೂಡಿದ ವೈವಿಧ್ಯಮಯ ದೇಶ. ಇಲ್ಲಿ ಹಲವಾರು ಮತಧರ್ಮಗಳಿವೆ. ನೂರಾರು ಪಂಥಗಳಿವೆ. ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇರದಂತಹ ಜಾತಿಪದ್ಧತಿ ಇದೆ. ಹೆಚ್ಚಿನ ಸಮುದಾಯಗಳಲ್ಲಿ ಪುರುಷ ಪ್ರಾಧಾನ್ಯ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿ ಕುಟುಂಬಕ್ಕೆ ಗಂಡೇ ಯಜಮಾನ. ಆಸ್ತಿಯ ಹಕ್ಕು ಯಜಮಾನದಿಂದ ಗಂಡು ಮಕ್ಕಳಿಗೆ ಹಸ್ತಾಂತರಗೊಳ್ಳುತ್ತದೆ. ಈಚೆಗೆ ಸಮಾನ ಹಕ್ಕಿನ ಕಾಯ್ದೆ ಜಾರಿಗೆ ಬಂದಿದೆ. ಆದರೂ ಅನೇಕ ಕುಟುಂಬಗಳಲ್ಲಿ ಇನ್ನೂ ಹಳೆಯ ಪಿತೃಪ್ರಧಾನ ವ್ಯವಸ್ಥೆಯೇ ಮುಂದುವರಿದಿದೆ. ಸ್ತ್ರೀಭ್ರೂಣ ಹತ್ಯೆಗಳಿಗೆ ಇದೂ ಒಂದು ಪ್ರಮುಖ ಕಾರಣ. ಪಿತೃಪ್ರಧಾನ ಕುಟುಂಬದಲ್ಲಿ ಸ್ತ್ರೀಯ ಪಾತ್ರ ಕೇವಲ ಮನೆಗೆಲಸ ಮತ್ತು ವಂಶೋದ್ಧಾರಕರನ್ನು ಹೆರುವ ಕೆಲಸಗಳಿಗೆ ಸೀಮಿತ. ಹೆಣ್ಣಿನ ಈ ಪರಿಶುದ್ಧತೆಯ ಕಲ್ಪನೆಗೂ ಆಸ್ತಿಯ ಹಕ್ಕು ವಂಶೋದ್ಧಾರಕರಿಗಷ್ಟೆ ಹಸ್ತಾಂತರ ಆಗಬೇಕೆಂಬ ಬಯಕೆಗೂ ಪರಸ್ಪರ ಸಂಬಂಧಗಳಿವೆ. ಜಾತಿ, ಧರ್ಮ, ಕುಲ ಮುಂತಾದವುಗಳು ಮನುಷ್ಯ ನಿರ್ಮಿತ ಗಡಿಗಳು. ಮನುಷ್ಯನ ಮೂಲ ಗುಣ ಇವುಗಳನ್ನೆಲ್ಲ ಮೀರಿ ನಿಲ್ಲುತ್ತದೆ. ಆದುದರಿಂದಲೆ ಅನ್ಯ ಜಾತಿ, ಕುಲ ಅಥವಾ ಧರ್ಮದ ಯುವಕ, ಯುವತಿಯರು ಪರಸ್ಪರರನ್ನು ಇಷ್ಟಪಟ್ಟರೆ ಅದು ಖಂಡಿತಾ ಅಸ್ವಾಭಾವಿಕವೂ ಅಲ್ಲ ಅಪರಾಧವೂ ಅಲ್ಲ. ಹಾಗೆ ಭಾವಿಸುವುದು ತಪ್ಪಾಗುತ್ತದೆ. ನಿಜ ಹೇಳಬೇಕೆಂದರೆ ಇಂತಹ ಸಂಬಂಧಗಳು ಸಂವಿಧಾನದಲ್ಲಿ ಹೇಳಲಾಗಿರುವ ಜಾತ್ಯತೀತ ಮೌಲ್ಯವನ್ನು ಬೆಳೆಸುವ ರೀತಿಯಲ್ಲಿದೆ. ಭಾರತವನ್ನು ಒಂದು ಜಾತಿಮುಕ್ತ, ಸೆಕ್ಯೂಲರ್ ಸಮಾಜವಾಗಿಸಬೇಕೆಂಬುದು ಅಂಬೇಡ್ಕರ್‌ರ ಕನಸಾಗಿತ್ತು. ಅಂತಹ ಸಮಾಜದಲ್ಲಿ ಜನ ಖಾಸಗಿಯಾಗಿ ಯಾವುದೇ ಧರ್ಮವನ್ನು ಅನುಸರಿಸಬಹುದು ಮತ್ತು ಅಂತರ್ಧಮೀಯ ಸಂಬಂಧಗಳಿಗೆ ಯಾವುದೇ ಅಡ್ಡಿಆತಂಕಗಳಿರಬಾರದು. ಇದು ಆಧುನಿಕ ಪ್ರಗತಿಪರ ಸಮಾಜದ ಪರಿಕಲ್ಪನೆಯಾಗಿದೆ. ಇದು ಕುವೆಂಪುರವರ ‘ವಿಶ್ವಮಾನವ’ ಪರಿಕಲ್ಪನೆಯೂ ಹೌದು. ಇವತ್ತಿನ ಸುಶಿಕ್ಷಿತ ಯುವಜನಾಂಗ ಆಧುನಿಕತೆ ತಂದುಕೊಡುತ್ತಿರುವ ಹೊಸ ಹೊಸ ವಿಚಾರಗಳ ಬೆಳಕಿನಲ್ಲಿ ಹಳೆಯ ಕಟ್ಟುಪಾಡುಗಳನ್ನು ಮೀರಲು ಯತ್ನಿಸುತ್ತಿದೆ. ಇದು ಬುದ್ಧ ಹೇಳಿದ ‘ಬದಲಾವಣೆಯೇ ಜೀವನದ ಸಾರ’ ಎಂಬ ಜೀವನಧರ್ಮಕ್ಕೆ ಅನುಗುಣವಾಗಿದೆ. ಆದರೆ ಹಳೆ ಮೌಲ್ಯಗಳಿಗೆ ಕಟ್ಟುಬಿದ್ದ ಪ್ರತಿಗಾಮಿ ಶಕ್ತಿಗಳು ಬದಲಾವಣೆಯನ್ನು ವಿರೋಧಿಸುತ್ತವೆ. ಆಗ ಕೆಲವೊಮ್ಮೆ ಹಳೆ ಮತ್ತು ಹೊಸ ಮೌಲ್ಯಗಳ ನಡುವೆ ಸಂಘರ್ಷಗಳು ನಡೆಯುತ್ತವೆ. ಭಾರತದ ಸನ್ನಿವೇಶದಲ್ಲಿ ಇದನ್ನು ಸ್ಥೂಲವಾಗಿ ಮನುಸಂಹಿತೆ ಮತ್ತು ಸಂವಿಧಾನಗಳ ನಡುವಿನ ಸಂಘರ್ಷ ಎನ್ನಬಹುದು. ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯ ಇದೇ ಸಂಘರ್ಷದ ಒಂದು ಭಾಗವಾಗಿದೆ. ಜಾತಿಸಂಕರ, ಧರ್ಮಸಂಕರದ ಹೆಸರಿನಲ್ಲಿ ಅಂತರ್ಜಾತೀಯ, ಅಂತರ್ಧರ್ಮೀಯ ಸಂಬಂಧಗಳನ್ನು ಹತ್ತಿಕ್ಕುವ ಪ್ರಯತ್ನಗಳು ಸಂಘರ್ಷದ ಇನ್ನೊಂದು ಮುಖ. ಈಗ ಅಂತರ್ಧರ್ಮೀಯ ಸಂಬಂಧಗಳನ್ನು ಹತ್ತಿಕ್ಕುವ ಪ್ರಯತ್ನವನ್ನಷ್ಟೇ ನೈತಿಕ ಪೊಲೀಸ್‌ಗಿರಿ ಎಂದು ಕರೆಯಲಾಗುತ್ತಿದೆ. ಆದರೆ ಅಂತರ್ಜಾತೀಯ ಸಂಬಂಧಗಳನ್ನು ಹತ್ತಿಕ್ಕುವುದೂ ನೈತಿಕ ಪೊಲೀಸ್‌ಗಿರಿಯೇ. ವಿಶಾಲ ಅರ್ಥದಲ್ಲಿ ಹೇಳುವುದಾದರೆ ನಿರ್ದಿಷ್ಟ ಗುಂಪು ಅಥವಾ ವ್ಯಕ್ತಿಗಳು ತಮ್ಮ ಮೂಗಿನ ನೇರದ ಸಂಪ್ರದಾಯ/ನೈತಿಕ ನಡವಳಿಕೆಗಳನ್ನು ಇತರರ ಮೇಲೆ ಹೇರಲು ಯತ್ನಿಸುವುದೇ ನೈತಿಕ ಪೊಲೀಸ್‌ಗಿರಿ. ಬಹುಶಃ ಖಾಪ್ ಪಂಚಾಯತ್‌ಗಳು ಮತ್ತು ಮರ್ಯಾದಾ ಹತ್ಯೆಗಳ ವಿಚಾರ ತಿಳಿಯದವರು ಯಾರೂ ಇಲ್ಲ. ಇವು ಪ್ರಧಾನವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸಿ, ಮುಂದುವರಿಸಲು ಇರುವ ರಚನೆಗಳು. ಜಾತಿ ಜಾತಿಗಳ ನಡುವಿನ ವಿವಾಹ ಸಂಬಂಧಗಳ ವಿಚಾರದಲ್ಲಿ ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುತ್ತಿರುವ ಖಾಪ್ ಪಂಚಾಯತುಗಳು ವಾಸ್ತವದಲ್ಲಿ ಸಂವಿಧಾನ ವಿರೋಧಿ ಸಂಸ್ಥೆಗಳು. ಇವುಗಳಿಗೆ ಸಾಂವಿಧಾನಿಕ ಮನ್ನಣೆ ಇಲ್ಲವಾದರೂ ರಾಜಕೀಯ ಪ್ರಭಾವದ ಪರಿಣಾಮವಾಗಿ ಅಸ್ತಿತ್ವದಲ್ಲಿವೆ.
(public order, morality) ಖಾಪ್ ಪಂಚಾಯತುಗಳು ಜಾತಿಗೆ ಸಂಬಂಧಪಟ್ಟಂತೆ ನೈತಿಕ ಪೊಲೀಸ್‌ಗಿರಿ ಮಾಡಿದರೆ ಧರ್ಮಕ್ಕೆ ಸಂಬಂಧಪಟ್ಟ ನೈತಿಕ ಪೊಲೀಸ್‌ಗಿರಿ ನಡೆಸುವವರು ಮತೀಯ ಮೂಲಭೂತವಾದಿ ಸಂಘ ಸಂಸ್ಥೆಗಳು. ಇತ್ತೀಚಿನ ಕೆಲವು ವರ್ಷಗಳಿಂದ ಇಂತಹ ಕೃತ್ಯಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಆಗಿರುವುದಕ್ಕೆ ಮತೀಯ ಮೂಲಭೂತವಾದದ ಬೆಳವಣಿಗೆಯೆ ಕಾರಣ. ಈಗ ಭಾರಿ ಸುದ್ದಿಯಲ್ಲಿರುವ ‘ಲವ್ ಜಿಹಾದ್’ ನಿರ್ದಿಷ್ಟವಾಗಿ ಹಿಂದೂ ಮುಸ್ಲಿಂ ಜೋಡಿಗಳ ವಿರುದ್ಧದ ನೈತಿಕ ಪೊಲೀಸ್‌ಗಿರಿ. ಗಂಡು ಹೆಣ್ಣು ಪಾರ್ಕಿನಲ್ಲೋ, ಹೊಟೇಲ್‌ನಲ್ಲೋ, ಸಮುದ್ರ ಕಿನಾರೆಯಲ್ಲೋ ಜೊತೆಯಾದಾಗ ಅದನ್ನು ವಿರೋಧಿಸುವುದು ಅಥವಾ ಹಲ್ಲೆ ಮಾಡುವುದು ಆ ಜೋಡಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಂತೆ. ಜೋಡಿಯ ಸಾರ್ವಜನಿಕ ನಡವಳಿಕೆ ತೀರ ಅಸಭ್ಯವಿದ್ದಾಗಲಷ್ಟೆ ಕಾನೂನುಪಾಲಕರು ಹಸ್ತಕ್ಷೇಪ ಮಾಡಬಹುದಾಗಿದೆ. ಆದರೆ ನಾವಿಂದು ನೋಡುತ್ತಿರುವಂತೆ ಅಂತರ್ಧರ್ಮೀಯ ಜೋಡಿಗಳು ಜೊತೆಯಾಗಿರುವುದನ್ನು, ಪರಸ್ಪರ ಮಾತಾಡುವುದನ್ನು ಹೊಂಚುಹಾಕಿ ಗಮನಿಸುವ ಸಂಘಟನೆಗಳು ತಕ್ಷಣ ಪೊಲೀಸರಿಗೆ ದೂರು ಕೊಡುವ ಮೂಲಕ ಜೋಡಿಯನ್ನು ಬೇರ್ಪಡಿಸುವ ವಿದ್ಯಮಾನ ನಡೆಯುತ್ತಿದೆ. ಇದು ಬಹಳ ಸ್ಪಷ್ಟವಾಗಿ ಸಂವಿಧಾನಬಾಹಿರ ಕೃತ್ಯ. ಯಾಕೆಂದರೆ ಇಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಭ್ಯ ನಡವಳಿಕೆ ಅಥವಾ ಸದಾಚಾರಗಳ ಉಲ್ಲಂಘನೆ ಆಗಿಲ್ಲ. ನಿಜವಾಗಿ ಇಂತಹ ಸುಳ್ಳು ದೂರು ಕೊಡುವವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು. ಅದರ ಬದಲು ಬಲಿಪಶುಗಳಿಗೆ, ಅವರ ಪೋಷಕರಿಗೆ ಪೀಡನೆ ನೀಡಿ ಅವರನ್ನೇ ಅಪರಾಧಿಗಳೆಂಬಂತೆ ನಡೆಸಿ ಕೊಳ್ಳುವುದು ಅಕ್ಷಮ್ಯ. ಇದು ಸಂವಿಧಾನದ ತತ್ವಗಳಿಗೆ ವಿರುದ್ಧ ಮಾತ್ರವಲ್ಲ ಪ್ರತಿಗಾಮಿ ನಿಲವು ಕೂಡ ಆಗಿದೆ. ಇದು ಸಮಾಜಕ್ಕೆ, ವಿಶೇಷವಾಗಿ ಯುವಜನಾಂಗಕ್ಕೆ ತಪ್ಪು ಸಂದೇಶ ರವಾನಿಸುತ್ತದೆ. ನಮ್ಮ ಕಾನೂನು ರಚನಾಕಾರರು ಈ ಬಗ್ಗೆ ಗಂಭೀರವಾಗಿ ಯೋಚಿಸಿ ನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿದಂತೆ ಹೆಚ್ಚುವರಿ ಶಿಕ್ಷೆಗಳಿಗೂ (Exemplary Punishment) ಅವಕಾಶ ಇರುವಂತಹ ಹೊಸ ಐಪಿಸಿ ನಿಯಮವೊಂದನ್ನು ಯಾಕೆ ರೂಪಿಸಬಾರದು? ನೈತಿಕ ಪೊಲೀಸ್‌ಗಿರಿ ಕೃತ್ಯಗಳು ಸ್ಪಷ್ಟವಾಗಿ ಕಾನೂನುಬಾಹಿರ. ಯಾಕೆಂದರೆ ಅದಕ್ಕೆ ಸಾಂವಿಧಾನಿಕ ಮನ್ನಣೆ ಇಲ್ಲ. ಸಂವಿಧಾನ ಎಲ್ಲಿಯೂ ಅಂತರ್ಧರ್ಮೀಯ, ಅಂತರ್ಜಾತೀಯ ವಿವಾಹ ಸಂಬಂಧಗಳು ಅನೈತಿಕ ಎನ್ನುವುದಿಲ್ಲ. ವಾಸ್ತವವಾಗಿ ಸಂವಿಧಾನದ ವಿಧಿ 16 ಪ್ರತಿಯೊಬ್ಬ ಭಾರತದ ಪ್ರಜೆಗೆ ದೇಶದ ಯಾವುದೇ ಭಾಗಕ್ಕೆ ಹೋಗಿ ಯಾರ ಜೊತೆಗಾದರೂ ಜೀವಿಸುವ ಹಕ್ಕನ್ನು ನೀಡುತ್ತದೆ. ಒಂದು ಗಂಡು, ಒಂದು ಹೆಣ್ಣು ಮದುವೆಯಾಗದಿದ್ದರೂ ಒಟ್ಟಿಗೆ ಇರಬಹುದು. ಸಮಾಜ ಇದನ್ನು ಅನೈತಿಕವೆಂದು ಭಾವಿಸಲೂಬಹುದು. ಆದರೆ ಇದು ಕಾನೂನುಬಾಹಿರ ಅಲ್ಲ. ಕಾನೂನು ಬೇರೆ. ನೈತಿಕತೆ ಬೇರೆ (ಪಾಯಲ್ ಶರ್ಮ ವರ್ಸಸ್ ನಾರಿ ನಿಕೇತನ್ ಕಾಲಿಂತ್ರಿ ವಿಹಾರ್ ಆಗ್ರಾ. ಎಐಆರ್ 2001). ಇವತ್ತು ನೈತಿಕ ಪೊಲೀಸ್‌ಗಿರಿಯನ್ನು ಮಟ್ಟಹಾಕಲು ಕಷ್ಟವಾಗುತ್ತಿದೆ. ಏಕೆಂದರೆ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಬಲಪಂಥೀಯ ರಾಜಕೀಯ ಪಕ್ಷಗಳ ಬೆಂಬಲವಿದೆ. ಒಂದು ಕಾಲದಲ್ಲಿ ಸಮಾಜವಾದಿ ಎಂದು ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷ ಕೂಡ ಇಂಥಾ ಹಲವಾರು ಮೃದು ಹಿಂದೂತ್ವವಾದಿ, ಸಂಪ್ರದಾಯವಾದಿ ಸಂಸ್ಕೃತಿ ರಕ್ಷಕರನ್ನು ತನ್ನ ಬಗಲಲ್ಲಿ ಬಚ್ಚಿಟ್ಟುಕೊಂಡಿರುವ ತೆರೆದ ರಹಸ್ಯವನ್ನು ಇದೀಗ ‘ಕಿಸ್ ಆಫ್ ಲವ್’ ಪ್ರತಿಭಟನಾ ಕಾರ್ಯಕ್ರಮ ಸಂಪೂರ್ಣವಾಗಿ ಬಟಾಬಯಲುಗೊಳಿಸಿದೆ. ಒಂದರ್ಥದಲ್ಲಿ ನೈತಿಕ ಪೊಲೀಸ್‌ಗಿರಿ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಪರೋಕ್ಷವಾಗಿ ಇಂಥವರೇ ಕಾರಣ ಎನ್ನಬಹುದು. ‘ಕಿಸ್ ಆಫ್ ಲವ್’ ಎಂಬ ಸಮುದ್ರ ಮಂಥನದ ಮೂಲಕವಾದರೂ ಅಮೃತ, ಹಾಲಾಹಲಗಳು ಬೇರೆಬೇರೆಯಾಗುವುವೇ?
Courtesy-varthabharati
0 comments:
Post a Comment