ಎ.ಜಿ. ನೂರಾನಿ
ಕೃಪೆ: ದಿ ಹಿಂದೂ
1948 ಜನವರಿ 20ರಂದು ಮಹಾತ್ಮಾ ಗಾಂಧೀಜಿಯ ಹತ್ಯೆಗೆ ಮದನ್‌ಲಾಲ್ ಪಾಹ್ವ ವಿಫಲ ಯತ್ನ ನಡೆಸಿದನು. ಆ ಕೂಡಲೇ ಈ ಆಕ್ರಮಣದ ಹಿಂದಿನ ರೂವಾರಿ ವಿ.ಡಿ. ಸಾವರ್ಕರ್ ಎಂಬ ಸಂಶಯ ಎಲ್ಲರಲ್ಲೂ ಮೊಳೆಯಿತು. ಸಂಶಯ ತನಿಖೆಗಳಿಂದ ದೃಢಪಟ್ಟಿತು. ವಿಚಾರಣಾ ನ್ಯಾಯಾಲಯದಲ್ಲಿ ಮಂಡಿಸಲಾದ ಪುರಾವೆಗಳು ಆತನ ಶಾಮೀಲಾತಿಯನ್ನು ಸಾಬೀತುಪಡಿಸಿದವು. ಆದರೆ, ಸಾವರ್ಕರ್‌ರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು.
ಹತ್ಯಾ ಯತ್ನದಲ್ಲಿ ಸಾವರ್ಕರ್ ಇದ್ದಾರೆ ಎಂಬುದು ಉಪಪ್ರಧಾನಿ ವಲ್ಲಭಭಾಯಿ ಪಟೇಲ್‌ಗೆ ಮನದಟ್ಟಾಗಿತ್ತು. ಗಾಂಧೀಜಿ ಹತ್ಯಾ ಯತ್ನದ ಬಗ್ಗೆ ತನಿಖೆ ನಡೆಸಲು 1965 ಮಾರ್ಚ್ 22ರಂದು ವಿಚಾರಣಾ ಆಯೋಗವೊಂದನ್ನು ಸರಕಾರ ರಚಿಸಿತು. ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶ ಜೆ.ಕೆ. ಕಪೂರ್ ಆಯೋಗದ ಮುಖ್ಯಸ್ಥರಾಗಿದ್ದರು. ವಿಶಾಲ ವ್ಯಾಪ್ತಿಯ ತನಿಖೆಯ ಬಳಿಕ ಆಯೋಗ ಈ ತೀರ್ಮಾನಕ್ಕೆ ಬಂತು: ‘‘ಪರಿಶೀಲನೆಗೆ ತೆಗೆದುಕೊಳ್ಳಲಾದ ಎಲ್ಲ ವಾಸ್ತವಾಂಶಗಳು, ಸಾವರ್ಕರ್ ಮತ್ತು ಅವರ ಗುಂಪು ಕೊಲೆ ಸಂಚು ನಡೆಸಿದೆ ಎಂದು ಹೇಳುತ್ತದೆಯೇ ಹೊರತು ಬೇರೆ ಯಾವುದೇ ವಿಷಯವನ್ನು ಹೇಳುವುದಿಲ್ಲ’’.
ಲ್ಯಾರಿ ಕಾಲಿನ್ಸ್ ಮತ್ತು ಡೋಮಿನಿಕ್ ಲ್ಯಾಪಿಯರ್ ಬರೆದ ಪುಸ್ತಕ ‘ಫ್ರೀಡಂ ಎಟ್ ಮಿಡ್‌ನೈಟ್’ (1976) ಈ ನಿಟ್ಟಿನಲ್ಲಿ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಲೇಖಕರಿಗೆ ಪೊಲೀಸ್ ಮತ್ತು ಗುಪ್ತಚರ ದಾಖಲೆಗಳನ್ನು ನೋಡುವ ಅವಕಾಶವಿದ್ದ ಕಾರಣ ಪುಸ್ತಕ ಹಲವಾರು ವಾಸ್ತವಾಂಶಗಳನ್ನು ಹೊರಗೆಡವಿದೆ. ಅದೂ ಅಲ್ಲದೆ, ಘಟನೆಯ ಹಿನ್ನೆಲೆಯಲ್ಲಿ ಮಹತ್ವ ಹೊಂದಿದ್ದ ಹಾಗೂ ಆಗ ಬದುಕಿದ್ದ ಕೆಲವು ವ್ಯಕ್ತಿಗಳ ಹೇಳಿಕೆಗಳನ್ನೂ ಅವರು ಪಡೆದುಕೊಂಡಿದ್ದರು.
ಹತ್ಯಾ ಯತ್ನದ ಮುನ್ನ ತಾನು ಸಾವರ್ಕರ್‌ರನ್ನು ಭೇಟಿಯಾಗಿದ್ದೆ ಎಂಬ ಸಂಗತಿಯನ್ನು ಮದನ್‌ಲಾಲ್ ತನ್ನ ಬಂಧನದ ಬಳಿಕ ಪೊಲೀಸರಿಗೆ ತಿಳಿಸಿದನು ಹಾಗೂ ಗೋಡ್ಸೆಯ ಗುರುತನ್ನೂ ಬಹಿರಂಗಪಡಿಸಿದನು: ‘‘ಪುಣೆಯ ಮರಾಠಿ ದೈನಿಕ ‘ಹಿಂದೂ ರಾಷ್ಟ್ರ’ದ ಸಂಪಾದಕ- ಎನ್.ವಿ. ಗೋಡ್ಸೆ; ಮಾಲಕ ಎನ್.ಡಿ. ಆಪ್ಟೆ. ಇದು ಸಾವರ್ಕರ್ ಗುಂಪಿನ ಪತ್ರಿಕೆ.’’
ಗಾಂಧಿಯನ್ನು ಹತ್ಯೆಗೈಯುವ ಮದನ್‌ಲಾಲ್ ಯತ್ನ ವಿಫಲವಾದಾಗ ಆತನ ಸಹಚರರು ಬಟ್ಟೆಗಳನ್ನು ಬಿಟ್ಟು ಓಡಿ ಹೋಗಿದ್ದರು. ಆ ಬಟ್ಟೆಗಳಲ್ಲಿ ಒಂದೇ ರೀತಿಯ ಲಾಂಡ್ರಿ ಗುರುತಿತ್ತು- ಎನ್.ವಿ.ಜಿ.
ಯಾವ ಪೊಲೀಸರಿಗಾದರೂ ಇದಕ್ಕಿಂತ ಹೆಚ್ಚಿನ ಪುರಾವೆ ಬೇರೇನು ಬೇಕು? ಆದರೆ, ಅಲ್ಲಿ ನಡೆದದ್ದೇ ಬೇರೆ. ‘‘ಅತ್ಯಂತ ಚೆನ್ನಾಗಿ ಆರಂಭಗೊಂಡ ತನಿಖೆಯನ್ನು ಬಳಿಕ ನಿರ್ಲಕ್ಷದಿಂದ ಬೇಕಾಬಿಟ್ಟಿಯಾಗಿ ಮುಂದುವರಿಸಲಾಯಿತು. ಹಾಗೂ ಮೂರು ದಶಕಗಳ ಬಳಿಕ ಈಗ ಆ ಬಗ್ಗೆ ವಿವಾದ ತಲೆದೋರುವಂತಾಯಿತು’’ ಎಂದು ಕಾಲಿನ್ಸ್ ಮತ್ತು ಲ್ಯಾಪಿಯರ್ ಹೇಳುತ್ತಾರೆ. ಬಾಂಬೆ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದ್ದರು, ಆದರೆ ಹೊಸದಿಲ್ಲಿಯಲ್ಲಿರುವ ಹಿರಿಯ ಅಧಿಕಾರಿಗಳು ಅಸಮರ್ಥರಾಗಿದ್ದರು. ಬಾಂಬೆಯ ಗೃಹ ಸಚಿವ ಮೊರಾರ್ಜಿ ದೇಸಾಯಿ ಪ್ರಕರಣವನ್ನು ಬಾಂಬೆ ಸಿಐಡಿ ಸ್ಪೆಶಲ್ ಬ್ರಾಂಚ್‌ನ ಉಪ ಕಮಿಶನರ್ ಜಮ್ಶೀದ್ ನಗರ್‌ವಾಲ (32)ರಿಗೆ ವಹಿಸಿದ್ದರು. ಗಾಂಧಿ ಹತ್ಯಾ ಯತ್ನದ ಹಿಂದೆ ಸಾವರ್ಕರ್ ಇರುವುದು ಪೊಲೀಸ್ ಅಧಿಕಾರಿಗೆ ಖಚಿತವಾಗಿತ್ತು. ಹಾಗಾಗಿ, ಮದನ್‌ಲಾಲ್‌ನ ತಪ್ಪೊಪ್ಪಿಗೆ ಆಧಾರದಲ್ಲಿ ಸಾವರ್ಕರ್‌ರನ್ನು ಬಂಧಿಸಲು ನಗರ್‌ವಾಲ ಮೊರಾರ್ಜಿ ದೇಸಾಯಿಯ ಅನುಮತಿ ಕೋರಿದರು. ಆದರೆ. ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿದ ಮೊರಾರ್ಜಿ ಅನುಮತಿ ನಿರಾಕರಿಸಿದರು. ನಗರ್‌ವಾಲರ ‘ವಾಚರ್ಸ್ ಬ್ರಾಂಚ್’ (ಗುಪ್ತಚರ ತಂಡ) ಸಾವರ್ಕರ್ ಮನೆ ಮೇಲೆ ನಿಗಾ ಇಟ್ಟಿತ್ತು. ಗಾಂಧಿ ಹತ್ಯೆಯಾದ ಸ್ವಲ್ಪವೇ ದಿನಗಳ ಬಳಿಕ, ಅಂದರೆ 1948 ಫೆಬ್ರವರಿ 22ರಂದು ಸಾವರ್ಕರ್ ಪೊಲೀಸರಿಗೆ ಮುಚ್ಚಳಿಕೆಯೊಂದನ್ನು ಬರೆದುಕೊಟ್ಟರು. ಎಷ್ಟು ಸಮಯ ತಾನು ‘ರಾಜಕೀಯ ಸಾರ್ವಜನಿಕ ಚಟುವಟಿಕೆ’ಯಿಂದ ದೂರವಿರಬೇಕೆಂದು ಆಡಳಿತ ಹೇಳುತ್ತದೆಯೋ ಅಷ್ಟು ಸಮಯ ತಾನು ಅವುಗಳಿಂದ ದೂರವಿರುತ್ತೇನೆ’ ಎಂದು ತನ್ನ ಮುಚ್ಚಳಿಕೆಯಲ್ಲಿ ಅವರು ಹೇಳಿದ್ದರು.
ಸಾವರ್ಕರ್ ವಿರುದ್ಧ ಪ್ರಮುಖ ಸಾಕ್ಷಿ ಮಾಫಿಸಾಕ್ಷಿದಾರ ದಿಗಂಬರ್ ಬಡ್ಗೆ ಆಗಿದ್ದನು. ತಾನು ಸಾವರ್ಕರ್ ಮನೆಗೆ ಹೋಗುತ್ತಿದ್ದ ಬಗ್ಗೆ ಬಡ್ಗೆ ನ್ಯಾಯಾಲಯದಲ್ಲಿ ಸಾಕ್ಷ ನುಡಿದನು. ಇದನ್ನು ಇತರ ಇಬ್ಬರು ಸಾಕ್ಷಿಗಳು ಖಚಿತಪಡಿಸಿದರು. ಬಡ್ಗೆ ಓರ್ವ ನೈಜ ಸಾಕ್ಷಿ ಎಂಬುದನ್ನು ನ್ಯಾಯಾಧೀಶ ಆತ್ಮ ಚರಣ್ ಕಂಡುಕೊಂಡರು.
ಆತ ಹೇಳಿದ ಹೆಚ್ಚಿನ ವಿಷಯಗಳನ್ನು ‘ಸ್ವತಂತ್ರ ಪುರಾವೆ’ಗಳಿಂದ ಖಚಿತಪಡಿಸಲಾಯಿತು. ಗೋಡ್ಸೆ ಮತ್ತು ಆತನ ಸಹಚರ ನಾರಾಯಣ ಆಪ್ಟೆ ಸಾವರ್ಕರ್‌ರನ್ನು ಅವರ ಮನೆಯಲ್ಲಿ 1948 ಜನವರಿ 14 ಮತ್ತು 17ರಂದು ಭೇಟಿಯಾಗಿದ್ದರು ಎಂಬ ಸಾಕ್ಷವನ್ನು ಬಡ್ಗೆ ನುಡಿದಿದ್ದನು. ಆದರೆ ಈ ಸಾಕ್ಷದ ದೃಢೀಕರಣವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ. ಗೋಡ್ಸೆ ಮತ್ತು ಆಪ್ಟೆ ಸಾವರ್ಕರ್‌ರನ್ನು ಭೇಟಿಯಾದ ಎರಡೂ ಸಂದರ್ಭಗಳಲ್ಲಿ ಬಡ್ಗೆಯನ್ನು ಹೊರಗೆ ನಿಲ್ಲುವಂತೆ ಸೂಚಿಸಲಾಗಿತ್ತು. ಎರಡನೆ ಭೇಟಿಯ ಸಂದರ್ಭದಲ್ಲಿ ಗೋಡ್ಸೆ ಮತ್ತು ಆಪ್ಟೆಗೆ ಧೈರ್ಯ ತುಂಬುವ ರೀತಿಯಲ್ಲಿ ಸಾವರ್ಕರ್ ಮಾತನಾಡುತ್ತಿರುವುದನ್ನು ಬಡ್ಗೆ ಕೇಳಿಸಿಕೊಂಡಿದ್ದನು. ಆ ಮಾತುಗಳು ಹೀಗಿವೆ: ‘‘ಯಶಸ್ವಿ ಹೋ ಯಾ’’ (ವಿಜಯಶಾಲಿಯಾಗಿ ಬನ್ನಿ). ಸಾವರ್ಕರ್ ಮನೆಗೆ ಮೂವರು ಬಂದಿಳಿದುದಕ್ಕಿಂತ ಹೆಚ್ಚಿನ ವಿಷಯವನ್ನು ಇಬ್ಬರು ದೃಢೀಕರಣ ಸಾಕ್ಷಿಗಳು ಹೇಳಲಿಲ್ಲ. ಆದಾಗ್ಯೂ, ಆ ವೇಳೆಗೆ ಮನೆಯಲ್ಲಿ ಇತರ ಇಬ್ಬರು ಇದ್ದರು. ಮಾಫಿ ಸಾಕ್ಷಿದಾರನ ಸಾಕ್ಷವನ್ನು ಸ್ವತಂತ್ರ ಸಾಕ್ಷಿಯೊಬ್ಬ ಖಚಿತ ಪಡಿಸುವುದು ಕಾನೂನಿನ ಅಗತ್ಯವಾಗಿದ್ದುದರಿಂದ ಸಾವರ್ಕರ್‌ರನ್ನು ಖುಲಾಸೆ ಗೊಳಿಸಲಾಯಿತು.
ಆದಾಗ್ಯೂ, ಸಾವರ್ಕರ್ ಸಾವಿನ ಒಂದು ಅಥವಾ ಎರಡು ವರ್ಷಗಳ ಬಳಿಕ ಅವರ ಅಂಗರಕ್ಷಕ ಆಪ್ಟೆ ರಾಮಚಂದ್ರ ಕಸರ್ ಮತ್ತು ಕಾರ್ಯದರ್ಶಿ ಗಜಾನನ್ ವಿಷ್ಣು ದಾಮ್ಲೆ ಕಪೂರ್ ಆಯೋಗದ ಮುಂದೆ ಸಾಕ್ಷ ಹೇಳುತ್ತಾ ಬಿಟ್ಟು ಹೋಗಿರುವ ಕೊಂಡಿಯನ್ನು ಸಿಕ್ಕಿಸಿದರು.
ಕಪೂರ್ ಆಯೋಗ ಹೀಗೆ ಹೇಳುತ್ತದೆ: ‘‘ಆಪ್ಟೆ ಮತ್ತು ಗೋಡ್ಸೆ ಸಾವರ್ಕರ್‌ರನ್ನು ಬಾಂಬೆಯಲ್ಲಿ ಪದೇ ಪದೇ ಭೇಟಿಯಾಗುತ್ತಿದ್ದರು. ಸಮ್ಮೇಳನಗಳು ಮತ್ತು ಪ್ರತಿ ಸಭೆಗಳಲ್ಲಿ ಅವರು ಸಾವರ್ಕರ್ ಜೊತೆಗಿರುವುದು ಈ ಇಬ್ಬರು ಸಾಕ್ಷಿಗಳ ಹೇಳಿಕೆಗಳಿಂದ ಗೊತ್ತಾಗುತ್ತದೆ. ಕರ್ಕರೆ ಕೂಡ ಸಾವರ್ಕರ್‌ಗೆ ಚಿರಪರಿಚಿತರಾಗಿದ್ದರು ಹಾಗೂ ಅವರನ್ನು ಆಗಾಗ ಭೇಟಿಯಾಗುತ್ತಿದ್ದರು. ಬಡ್ಗೆ ಸಾವರ್ಕರ್‌ರನ್ನು ಭೇಟಿಯಾಗುತ್ತಿದ್ದರು. ಸಾವರ್ಕರ್‌ರನ್ನು ಪರ್ಚುರೆ ಕೂಡ ಸಂದರ್ಶಿಸುತ್ತಿದ್ದರು. ಬಳಿಕ ನಡೆದ ಮಹಾತ್ಮಾ ಗಾಂಧಿಯ ಹತ್ಯೆಯಲ್ಲಿ ಶಾಮೀಲಾಗಿದ್ದವರು ಸಾವರ್ಕರ್ ಸದನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಒಟ್ಟು ಸೇರುತ್ತಿದ್ದರು ಹಾಗೂ ಹಲವು ಸಂದರ್ಭಗಳಲ್ಲಿ ಅವರು ಸಾವರ್ಕರ್ ಜೊತೆಗೆ ಸುದೀರ್ಘ ಮಾತುಕತೆ ನಡೆಸುತ್ತಿದ್ದರು ಎಂಬುದನ್ನು ಇದು ತೋರಿಸುತ್ತದೆ. ಕರ್ಕರೆ ಮತ್ತು ಮದನ್‌ಲಾಲ್ ದಿಲ್ಲಿಗೆ ತೆರಳುವ ಮೊದಲು ಸಾವರ್ಕರ್‌ರನ್ನು ಭೇಟಿಯಾಗಿದ್ದರು. ಗಾಂಧಿಯತ್ತ ಬಾಂಬ್ ಎಸೆದ ಹಾಗೂ ಅವರ ಹತ್ಯೆ ನಡೆಯುವ ಮುಂಚೆ- ಎರಡೂ ಸಂದರ್ಭಗಳಲ್ಲಿ ಗೋಡ್ಸೆ ಸಾವರ್ಕರ್‌ರನ್ನು ಭೇಟಿಯಾಗಿದ್ದನು. 1946, 1947 ಮತ್ತು 1948ರಲ್ಲಿ ವಿವಿಧ ಸ್ಥಳಗಳಲ್ಲಿ ನಡೆದ ಸಾರ್ವಜನಿಕ ಸಮಾರಂಭಗಳಲ್ಲಿ ಗೋಡ್ಸೆ ಮತ್ತು ಆಪ್ಟೆ ಸಾವರ್ಕರ್ ಜೊತೆಗೆ ಇದ್ದಿದ್ದು ಎಲ್ಲರ ಗಮನ ಸೆಳೆದಿತ್ತು.
ಈ ಇಬ್ಬರು ನ್ಯಾಯಾಲಯದಲ್ಲಿ ಸಾಕ್ಷ ಹೇಳಿದ್ದರೆ ಸಾವರ್ಕರ್‌ಗೆ ಶಿಕ್ಷೆಯಾಗುತ್ತಿತ್ತು. 1948 ಜನವರಿ 14 ಮತ್ತು 17ರಂದು ಸಾವರ್ಕರ್ ಮನೆಗೆ ಗೋಡ್ಸೆ ಮತ್ತು ಆಪ್ಟೆ ಭೇಟಿ ನೀಡಿರುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಬಾಂಬ್ ಘಟನೆಯ ಬಳಿಕ ಜನವರಿ 23 ಮತ್ತು 24ರ ವೇಳೆಗೆ ಸಾವರ್ಕರ್‌ರನ್ನು ಭೇಟಿಯಾಗಿದ್ದರು ಎಂಬುದಾಗಿ ಅಂಗರಕ್ಷಕ ಕಸರ್ ಆಯೋಗದ ಮುಂದೆ ಹೇಳಿದ್ದಾರೆ. ಗೋಡ್ಸೆ ಮತ್ತು ಆಪ್ಟೆ ಜನವರಿ ತಿಂಗಳ ಮಧ್ಯಭಾಗದಲ್ಲಿ ಸಾವರ್ಕರ್‌ರನ್ನು ಭೇಟಿಯಾಗಿ ಅವರ ಉದ್ಯಾನದಲ್ಲಿ ಅವರೊಂದಿಗೆ ಕುಳಿತು ಮಾತನಾಡಿದ್ದರು ಎಂದು ಸಾವರ್ಕರ್‌ರ ಕಾರ್ಯದರ್ಶಿ ದಾಮ್ಲೆ ಸಾಕ್ಷ ನುಡಿದರು.
ನಗರ್‌ವಾಲ ತನ್ನ ಕ್ರೈಮ್ ರಿಪೋರ್ಟ್ ನಂಬರ್ 1ರಲ್ಲಿ ಹೀಗೆ ಬರೆಯುತ್ತಾರೆ: ‘‘ಸಾವರ್ಕರ್ ಪಿತೂರಿಯ ಬೆನ್ನೆಲುಬಾಗಿದ್ದಾರೆ ಹಾಗೂ ಅಸೌಖ್ಯದಿಂದ ಬಳಲುತ್ತಿರುವವರಂತೆ ಅವರು ನಟಿಸುತ್ತಿದ್ದರು.’’
ಹತ್ಯೆ ನಡೆದ ಒಂದು ದಿನದ ಬಳಿಕ 1948 ಜನವರಿ 31ರಂದು ನಗರ್‌ವಾಲ ಬರೆದ ಪತ್ರದಲ್ಲಿ ಸಾವರ್ಕರ್, ಗೋಡ್ಸೆ ಮತ್ತು ಆಪ್ಟೆ ದಿಲ್ಲಿಗೆ ಹೊರಡುವ ಮುನ್ನ ರಾತ್ರಿ 40 ನಿಮಿಷಗಳ ಕಾಲ ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ಕಸರ್ ಮತ್ತು ದಾಮ್ಲೆ ನೀಡಿದ ಮಾಹಿತಿಯ ಆಧಾರದಲ್ಲಿ ನಗರ್‌ವಾಲ ಈ ವಿಷಯ ಹೇಳಿದ್ದರು. ‘‘ಈ ಇಬ್ಬರಿಗೆ ಸಾವರ್ಕರ್ ಮನೆಗೆ ಯಾವುದೇ ನಿರ್ಬಂಧವಿಲ್ಲದೆ ಪ್ರವೇಶವಿತ್ತು’’ ಎಂದು ಪತ್ರದಲ್ಲಿ ಬರೆದಿದೆ. ಒಟ್ಟಾರೆ ಗೋಡ್ಸೆ ಮತ್ತು ಆಪ್ಟೆ ಬಡ್ಗೆಯ ಅನುಪಸ್ಥಿತಿಯಲ್ಲಿ ಸಾವರ್ಕರ್‌ರನ್ನು ಇನ್ನೊಮ್ಮೆ ಭೇಟಿಯಾಗಿದ್ದರು. ಇದಕ್ಕಿಂತಲೂ ಮುಂಚೆ ಅವರು ಜನವರಿ 14 ಮತ್ತು 17ರಂದು ಭೇಟಿಯಾಗಿದ್ದರು. ಆದರೆ, ಅವರನ್ನು ನ್ಯಾಯಾಲಯದಲ್ಲಿ ಸಾಕ್ಷಿಗಳಾಗಿ ಯಾಕೆ ಹಾಜರುಪಡಿಸಲಾಗಿಲ್ಲ ಎಂಬುದು ಒಂದು ರಹಸ್ಯವಾಗಿದೆ. ವಲ್ಲಭಭಾಯಿ ಪಟೇಲ್ ಹೇಳಿದ್ದು ಸತ್ಯವಾಗಿತ್ತು. ಅವರು 1948 ಫೆಬ್ರವರಿ 27ರಂದು ಪ್ರಧಾನಿ ನೆಹರೂಗೆ ಪತ್ರ ಬರೆದಿದ್ದರು. ಪತ್ರದ ಸಾರಾಂಶ ಹೀಗಿದೆ: ‘‘ಬಾಪು ಹತ್ಯೆ ಪ್ರಕರಣದ ವಿಚಾರಣೆಯ ಪ್ರಗತಿಯನ್ನು ನಾನು ಬಹುತೇಕ ಪ್ರತಿ ದಿನ ಪಡೆದುಕೊಳ್ಳುತ್ತಿದ್ದೆ’’. ಅವರು ತೆಗೆದುಕೊಂಡ ನಿರ್ಧಾರ: ‘‘ನೇರವಾಗಿ ಸಾವರ್ಕರ್ ಅಡಿಯಲ್ಲಿ ಬರುವ ಹಿಂದೂ ಮಹಾಸಭಾದ ಮತಾಂಧ ಘಟಕವೊಂದು ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ನೇರವಾಗಿ ಶಾಮೀಲಾಗಿದೆ’’.
ಹಲವು ವರ್ಷಗಳ ಬಳಿಕ ಬಿಜೆಪಿ ಸಂಸದ್ ಭವನದಲ್ಲಿ ಸಾವರ್ಕರ್ ಚಿತ್ರವನ್ನು ತೂಗುಹಾಕಿತು.
Courtesy: varthabharati
0 comments:
Post a Comment