- ಸನತ್ ಕುಮಾರ ಬೆಳಗಲಿ
ಮೂಲಭೂತವಾದ ಬರೀ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಜಾತಿ, ಭಾಷೆ, ಪ್ರದೇಶ, ಸಿದ್ಧಾಂತ ಮತ್ತು ಸಂಘಟನೆಗಳ ಬಗೆಗಿನ ಅತಿರೇಕದ ಪ್ರೇಮ ಮನುಷ್ಯನ ವಿವೇಚನಾ ಶಕ್ತಿಯನ್ನು ಕುಂಠಿತಗೊಳಿಸಿ, ಅಸಹನೆಯ ಅಂಧಕಾರದ ಕೂಪಕ್ಕೆ ನೂಕುತ್ತದೆ. ಅನೇಕ ಬಾರಿ ಮಹಾಪುರುಷರ ಹೆಸರಿನಲ್ಲಿ ಇಂತಹ ಅವಿವೇಕದ ಕೃತ್ಯಗಳು ನಡೆಯುತ್ತವೆ. ಇತ್ತೀಚೆಗೆ ಪುಣೆಯಲ್ಲಿ ಶಿವಾಜಿ ಚಿತ್ರವನ್ನು ತಿರುಚಿ ಪ್ರಕಟಿಸ ಲಾಗಿದೆಯೆಂದು ಮೂಲಭೂತವಾದಿಗಳು ಸಾದಿಕ್ ಎಂಬ ಯುವಕನ ಹತ್ಯೆ ಮಾಡಿದರು. ಶಿವಾಜಿಯೇನು ಇವರ ಕನಸಿನಲ್ಲಿ ಬಂದು ಈ ರೀತಿ ಮಾಡುವಂತೆ ಹೇಳಿದ್ದನೇ? ಶಿವಾಜಿ ಬಗ್ಗೆ ತಿಳಿದುಕೊಂಡವರ್ಯಾರೂ ಈ ರೀತಿ ಮಾಡುವುದಿಲ್ಲ. ತನ್ನ ಸೇನಾಪಡೆಯಲ್ಲಿ ಮುಸ್ಲಿಂ ಸೇನಾಧಿಕಾರಿಗಳನ್ನು ನೇಮಿಸಿ ಕೊಂಡಿದ್ದ ಛತ್ರಪತಿಯನ್ನು ಮುಸ್ಲಿಂ ವಿರೋಧಿಯೆಂದು ಬಿಂಬಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಪುಣೆಯ ಘಟನೆ ಹಾಳಾಗಿ ಹೋಗಲಿ, ನಮ್ಮ ಕರ್ನಾಟಕ ದಲ್ಲೂ ಇತ್ತೀಚೆಗೆ ಅಸಹನೆಯ ಪ್ರವೃತ್ತಿ ಹೆಚ್ಚುತ್ತಿದೆ.
ಕರಾವಳಿಯಲ್ಲಿ ನಕಲಿ ಧರ್ಮ ರಕ್ಷಕರ ಹಾವಳಿ, ಚರ್ಚ್ ಮೇಲಿನ ದಾಳಿ, ಕಬೀರ್ ಹತ್ಯೆ ಇವೆಲ್ಲಾ ಎಲ್ಲರಿಗೂ ಗೊತ್ತಿರುವ ಸಂಗತಿಗಳು. ಇಂತಹ ಅವಿವೇಕದ ಕೃತ್ಯಗಳನ್ನು ಖಂಡಿಸಿ, ದಾರಿಗೆ ತರಬೇಕಾದವರೇ ದಾರಿ ತಪ್ಪುತ್ತಿರುವುದು ನೋವಿನ ಸಂಗತಿಯಾಗಿದೆ. ಕರ್ನಾಟಕ ಕಂಡ ಹೆಸರಾಂತ ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಬಗ್ಗೆ ನನಗೆ ಅಪಾರ ಗೌರವ. ದರ್ಗಾ ಮತ್ತು ನನ್ನಂತೆ ಕಲ್ಬುರ್ಗಿಯವರು ಕೂಡ ವಿಜಾಪುರ ಜಿಲ್ಲೆಯಿಂದ ಬಂದವರು. ನಾಲ್ಕು ದಶಕಗಳಿಂದ ವೈದಿಕಶಾಹಿ ವಿರೋಧಿ ಹೋರಾಟಗಳಲ್ಲಿ ನಮಗೆಲ್ಲಾ ಮಾರ್ಗದರ್ಶನ ನೀಡುತ್ತ ಬಂದವರು. ಇಂತಹ ಕಲ್ಬುರ್ಗಿಯವರು ಇತ್ತೀಚೆಗೆ ಎಡವಿದ್ದನ್ನು ಕಂಡು ಆಘಾತಗೊಂಡೆ. ಕರ್ನಾಟಕದ ಸಾಕ್ಷಿಪ್ರಜ್ಞೆ ಡಾ. ಯು.ಆರ್.ಅನಂತಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ನೀಡಿದ್ದನ್ನು ಖಂಡಿಸಿ ಕಲ್ಬುರ್ಗಿಯವರು ಬರೆದಿರುವ ಲೇಖನ ವೊಂದು ವಿವಾದದ ಅಲೆಯನ್ನು ಎಬ್ಬಿಸಿ ಕಲ್ಬುರ್ಗಿ ಮತ್ತು ಅವರ ಶಿಷ್ಯ ರಂಜಾನ್ ದರ್ಗಾ ನಡುವೆ ಪತ್ರಿಕೆಯೊಂದರಲ್ಲಿ ವಾಗ್ವಾದ ನಡೆದಿದೆ. ದರ್ಗಾ ಈಗ ಬಸವಶ್ರೀ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು. ಅನಂತಮೂರ್ತಿಯವರಿಗೆ ಪ್ರಶಸ್ತಿ ನೀಡಿರುವುದನ್ನು ಅವರು ಸಹಜವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಆದರೆ ಕಲ್ಬುರ್ಗಿ ಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಬಸವ ಸಾಹಿತ್ಯಕ್ಕೆ ಅನಂತಮೂರ್ತಿಯವರ ಕೊಡುಗೆಯೇನು ಎಂದು ಪ್ರಶ್ನಿಸಿದ್ದಾರೆ.
ಪ್ರಶಸ್ತಿ ಬಗ್ಗೆ ಮಾತ್ರವಲ್ಲ ಕಲ್ಬುರ್ಗಿ ಯವರು ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜೈನ ಮತ್ತು ಬೌದ್ಧ ಧರ್ಮಗಳು ಕರ್ನಾಟಕದ ಮೂಲ ಧರ್ಮಗಳಲ್ಲ. ಲಿಂಗಾಯಿತ ಮಾತ್ರ ಕರ್ನಾಟಕದ ಮೂಲ ಧರ್ಮವೆಂದು ಹೇಳಿದ್ದಾರೆ. ಇದರಿಂದ ಕೆರಳಿದ ಇನ್ನೊಬ್ಬ ಸಾಹಿತಿ ಡಾ. ಹಂಪನಾ ಕಲ್ಬುರ್ಗಿಯವರಿಗೆ ಸಾಕ್ಷ್ಯಾಧಾರ ಸಮೇತ ಉತ್ತರ ನೀಡಿದ್ದಾರೆ. ಇವೆರಡು ವಿಷಯಗಳು ಕಲ್ಬುರ್ಗಿಯವರ ಸುತ್ತ ವಿವಾದದ ಹುತ್ತಗಳನ್ನು ಸೃಷ್ಟಿಸಿವೆ.
ದೇಶ ನೂರಾರು ವರ್ಷಗಳಿಂದ ಧರ್ಮ-ದೇವರ ಹೆಸರಿನಲ್ಲಿ ನಾನಾ ಸಂಕಟಗಳಿಗೆ ಸಿಕ್ಕು ಒದ್ದಾಡುತ್ತಿದೆ. ಅನೇಕ ಬಾರಿ ಬಾಹ್ಯ ಆಕ್ರಮಣಕ್ಕೆ ಒಳಗಾಗಿದೆ. ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ ಇಂತಹ ಗಾಯಗಳು ಇನ್ನೂ ಮಾಸಿಲ್ಲ. ಇಂತಹ ಸನ್ನಿವೇಶದಲ್ಲಿ ಇದು ಸಾಲದೆಂಬಂತೆ ಕಲ್ಬುರ್ಗಿಯವರು ವಿವಾದದ ಹೊಸ ಅಲೆಯನ್ನು ಎಬ್ಬಿಸುವ ಅಗತ್ಯವಿರಲಿಲ್ಲ. ಚಿದಾನಂದಮೂರ್ತಿ, ಬೈರಪ್ಪ ಇಂತಹ ಕೃತ್ಯಕ್ಕೆ ಕೈ ಹಾಕಿದಾಗ, ಅವರನ್ನು ತರಾಟೆಗೆ ತೆಗೆದುಕೊಂಡವರಲ್ಲಿ ಕಲ್ಬುರ್ಗಿಯವರೂ ಒಬ್ಬರು. ಅವರೇಕೆ ಹೀಗೆ ಮಾಡಿದರು ಎಂಬುದು ನನಗೆ ಅರ್ಥವಾಗಲಿಲ್ಲ.
ಈ ನಡುವೆ ಹಾವೇರಿಯ ಮೇ ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾಗಿದ್ದ ಶತಮಾನದ ಗೆಳೆಯ ಇತಿಹಾಸ ತಜ್ಞ ಅಶೋಕ ಶೆಟ್ಟರು ಕೂಡ ಕಲ್ಬುರ್ಗಿಯವರು ಹೀಗೇಕೆ ಮಾಡಿದರೆಂದು ಅಚ್ಚರಿ ವ್ಯಕ್ತಪಡಿಸಿದರು. ಈಗಿರುವ ಸಮಸ್ಯೆಗಳೇ ಸಾಕಾಗಿದೆ. ಇದೇನು ಹೊಸ ವಿವಾದ ಎಬ್ಬಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಬಸವ ಪರಂಪರೆಯ ಬೆಳಕಿನಲ್ಲಿ ಸಾಗಿ ಬಂದ ಕಲ್ಬುರ್ಗಿಯವರ ಈ ನಡೆ ಅನೇಕರಲ್ಲಿ ದಿಗ್ಭ್ರಮೆ ಮೂಡಿಸಿದೆ. ಕಲ್ಬುರ್ಗಿಯವರು ಲಿಂಗಾಯಿತ ಮೂಲಭೂತವಾದಿಗಳೇ? ಎಂಬ ಸಂದೇಹ ಬರುವಂತಾಗಿದೆ. ಆದರೆ ಕಲ್ಬುರ್ಗಿಯವರನ್ನು ಚಿಮೂ ಜೊತೆ ಹೋಲಿಸಲು ಮನಸ್ಸಾಗುತ್ತಿಲ್ಲ. ಚಿಮೂ ಅವರಂತೆ ಕಲ್ಬುರ್ಗಿಯವರು ಯಾವುದೇ ಜಾತಿ-ಧರ್ಮದ ಮೂಲಭೂತವಾದಿಯಲ್ಲ. 80ರ ದಶಕದ ಕೊನೆಯಲ್ಲಿ ಕಲ್ಬುರ್ಗಿಯವರು ಮಾರ್ಗ-1 ಸಂಶೋಧನಾ ಗ್ರಂಥ ರಚಿಸಿದಾಗ, ಲಿಂಗಾಯಿತ ಜಾತಿವಾದಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಚಂಪಾ ಸೇರಿದಂತೆ ಉತ್ತರ ಕರ್ನಾಟಕದ ಪ್ರಗತಿಪರರೆಲ್ಲ ಕಲ್ಬುರ್ಗಿಯವರ ಬೆಂಗಾವಲಿಗೆ ನಿಂತಿದ್ದರು. ಇಂತಹ ಕಲ್ಬುರ್ಗಿಯವರು ಖಂಡಿತ ಲಿಂಗಾಯಿತ ಮೂಲಭೂತವಾದಿ ಗಳಾಗಲು ಸಾಧ್ಯವಿಲ್ಲ. ಇಂತಹ ಕಲ್ಬುರ್ಗಿ ಸರ್ ಹೀಗೇಕೆ ಮಾಡಿದರು ಎಂದು ಸ್ನೇಹಿತರ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕನ್ನಡ ಸಾಹಿತ್ಯಕ್ಕೆ ಅನಂತಮೂರ್ತಿ ಅವರು ನೀಡಿದ ಕೊಡುಗೆ ಎಲ್ಲರಿಗೂ ಗೊತ್ತಿದೆ. ಅದಕ್ಕಿಂತ ಮಿಗಿಲಾಗಿ ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳ ವಿರುದ್ಧ ದನಿಯೆತ್ತಿದ ಸೌಹಾರ್ದ ಕರ್ನಾಟಕದ ಹೆಮ್ಮೆಯ ಸಂಕೇತವಾಗಿದ್ದಾರೆ. ಶಾಂತವೇರಿ ಗೋಪಾಲಗೌಡರ ಒಡನಾಡಿಯಾಗಿ ಬೆಳೆದ ಅನಂತ ಮೂರ್ತಿಯವರು ನಾಲ್ಕು ದಶಕಗಳ ಹಿಂದೆಯೇ ಜಾತ್ಯತೀತ ಮದುವೆ ಯಾಗಿ ನುಡಿದಂತೆ ನಡೆದವರು. ಇನ್ನು ವಿಶ್ವಮಾನವರಾಗಬೇಕೆಂದು ಕುವೆಂಪು ಕರೆ ನೀಡಿದ ಈ ನಾಡಿನಲ್ಲಿ ಈ ದಿನಗಳಲ್ಲಿ ಹೊರಗಿನಿಂದ ಬಂದ ಧರ್ಮ ಯಾವುದು? ಇಲ್ಲಿನ ಧರ್ಮ ಯಾವುದು ಎಂಬ ಚರ್ಚೆ ಇಲ್ಲಿ ಅಪ್ರಸ್ತತ. ಈ ನಾಡು ಜೈನರನ್ನು, ಬೌದ್ಧರನ್ನು, ಕ್ರೈಸ್ತರನ್ನು, ಮುಸ್ಲಿಮರನ್ನು ಆತ್ಮೀಯವಾಗಿ ಅಪ್ಪಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ಪಂಪ, ರನ್ನ, ಶಿಶುನಾಳ ಷರೀಫ ಸಾಹೇಬ, ರೆವರೆಂಡ್ ಕಿಟ್ಟಲ್ ಇವರೆಲ್ಲರೂ ನೀಡಿದ ಕೊಡುಗೆ ಹೇಗೆ ಮರೆಯಲು ಸಾಧ್ಯ?
ಅನಂತಮೂರ್ತಿಯವರು ಈ ನಾಡಿನ ಹೆಮ್ಮೆಯ ಆಸ್ತಿಯಾಗಿರುವಂತೆ ಕಲ್ಬುರ್ಗಿ ಯವರು ಕೂಡ ಕರ್ನಾಟಕಕ್ಕೆ ಗೌರವ ತಂದುಕೊಟ್ಟವರು. ಇವರು ಮಾತ್ರವಲ್ಲ ಗಿರೀಶ್ ಕಾರ್ನಾಡ್, ಚಂಪಾ, ಬರಗೂರು, ಷ.ಶೆಟ್ಟರ, ನಿಸಾರ್ ಅಹ್ಮದ್, ಮರುಳಸಿದ್ದಪ್ಪ ಹೀಗೆ ನಮ್ಮ ನಡುವೆ ಇರುವ ಎಲ್ಲಾ ಪ್ರಜ್ಞಾವಂತರು, ಸಮಾನ ಮನಸ್ಕರು ಒಂದಾಗಿರಬೇಕು ಎಂಬುದು ಪ್ರಗತಿಪರರೆಲ್ಲರ ಆಶಯವಾಗಿದೆ. ಭಿನ್ನಾಭಿಪ್ರಾಯಗಳು ವೈಚಾರಿಕವಾಗಿರಲಿ. ವೈಯಕ್ತಿಕ ಒಣಪ್ರತಿಷ್ಠೆ ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ.
ಕೃಪೆ: ವಾರ್ತಾಭಾರತಿ
0 comments:
Post a Comment