ಕೊಪ್ಪಳ: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಇದರಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಅದರ ಪಠ್ಯಕ್ರಮ ಮತ್ತು ಪರೀಕ್ಷಾ ರಚನೆಯನ್ನು ಸರಿಯಾಗಿ ತಿಳಿದುಕೊಂಡು ತಯಾರಿ ಮಾಡಬೇಕೆಂದು ಜಿಲ್ಲಾ ಪಂಚಾಯತ ಲೆಕ್ಕಪತ್ರ ಸಹಾಯಕ ನಿಯಂತ್ರಕರಾದ ಅಮೀನಸಾಬ ಅತ್ತಾರ ತಿಳಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಹಾಗೂ ಕ್ಲಾಸಿಕ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್, ಧಾರವಾಡ ಇವರ ಸಹಯೋಗದಲ್ಲಿ ರವಿವಾರ (ದಿ: ೧೮-೫-೧೪) ಆಯೋಜಿಸಲಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಗ್ರಾಮೀಣ ಯುವಜನರಲ್ಲಿ ವಿಶೇಷ ಪ್ರತಿಭೆಯಿದೆ. ಅದನ್ನು ಹೊರತರುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಹಾಗೂ ಕ್ಲಾಸಿಕ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ಯುವಕರಿಗೆ ಉಚಿತ ಮಾರ್ಗದರ್ಶನ ನೀಡುವ ಮೂಲಕ ಸ್ತುತ್ಯಾರ್ಹ ಕೆಲಸ ಮಾಡುತ್ತಿವೆ. ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಉನ್ನತ ಗುರಿಯನ್ನು ಹೊಂದುವುದರ ಜೊತೆಗೆ ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಪರ್ಧಾ ಸ್ಫೂರ್ತಿ ಹಿರಿಯ ಸಂಪಾದಕ ಐ ಜಿ ಚೌಗಲಾ ಮಾತನಾಡಿ ಶಿಕ್ಷಣ ಇಂದು ಮೂಲಭೂತ ಹಕ್ಕಾಗಿದ್ದು ಗುಣಮಟ್ಟದ ಶಿಕ್ಷಣವನ್ನು ಎಲ್ಲ ಮಕ್ಕಳಿಗೆ ಒದಗಿಸುವ ಉದ್ದೇಶದಿಂದ ಟಿಇಟಿ ಪರೀಕ್ಷೆಯನ್ನು ಜಾರಿಗೆ ತರಲಾಗಿದೆ. ಈ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬೇಕಾದರೆ ವಿಷಯಗಳ ಜ್ಞಾನದ ಜೊತೆಗೆ ಶಿಕ್ಷಕನಿಗಿರುವ ಸಕಾರಾತ್ಮಕ ಗುಣಗಳನ್ನು ಮತ್ತು ಪಾಠ ಮಾಡುವ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕ್ಲಾಸಿಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಿಜಯೇಂದ್ರ ಮಹಿಷಿ ಸಕಾರತ್ಮಕ ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸದ ಕುರಿತು ಉಪನ್ಯಾಸ ನೀಡಿದರು. ಸಂಸ್ಥೆಯ ಉಪನ್ಯಾಸಕರಾದ ರುದ್ರೇಶ ಮೇಟಿ ಕನ್ನಡ ವಿಷಯ ಕುರಿತಾಗಿ, ಮೋಹನ ಶಿಂಧೆ ಇತಿಹಾಸ ಕುರಿತಾಗಿ, ಎನ್ ಜಿ ಕನಕರಡ್ಡಿ ಗಣಿತದ ಕುರಿತಾಗಿ ಮಾರ್ಗದರ್ಶನ ನೀಡಿದರು.
ಬಸವರಾಜ ಬಂಗಾರಿ, ಮಂಜುನಾಥ ಮಠಪತಿ, ಹಾಗೂ ಮಾಧ್ಯಮ ಸಂಯೋಜಕರಾದ ರಾಘವೇಂದ್ರ ರಾಯರಡಿ,
ರಾಜು ಲೋಂಡೆ, ಲಕ್ಷೀಕಾಂತ ಸಗರದ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊಪ್ಪಳ ಜಿಲ್ಲೆಯ ನೂರಾರು ಪರೀಕ್ಷಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.
0 comments:
Post a Comment