PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆರ್ಥಿಕವಾಗಿ ಜಿಲ್ಲೆಯ ಹಿಂದುಳಿದ ಅಲ್ಪಸಂಖ್ಯಾತರ ಮುಸ್ಲಿಂ ಹೆಣ್ಣುಮಕ್ಕಳಿಗೆ, ವಿಚ್ಛೇದಿತ ಮಹಿಳೆ ಮತ್ತು ವಿಧವೆಯರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಮದುವೆ ಕಾರ್ಯಗಳಿಗೆ ಬಿದಾಯಿ ಯೋಜನೆಯಡಿಯಲ್ಲಿ ಸಹಾಯಧನ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಧನಸಹಾಯ ಪಡೆಯುವ ಫಲಾನುಭವಿಯ ಕುಟುಂಬದ ವಾರ್ಷಿಕ ವರಮಾನ ರೂ.೧,೫೦,೦೦೦/- ಗಳಿಗಿಂತ ಕಡಿಮೆ ಇರಬೇಕು, ಈ ಸೌಲಭ್ಯ ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ.   ವಧುವಿಗೆ ಮದುವೆಯ ದಿನಾಂಕಕ್ಕೆ ಕನಿಷ್ಟ ೧೮ ವರ್ಷ ವಯಸ್ಸು ಹಾಗೂ ವರನಿಗೆ ೨೧ ವರ್ಷ ವಯಸ್ಸಾಗಿರಬೇಕು. ವರನಿಗೆ ಜೀವಂತ ಹೆಂಡಂತಿ ಇದ್ದಲ್ಲಿ ಈ ಯೋಜನೆಯ ಸೌಲಭ್ಯ ಅನ್ವಯಿಸುವುದಿಲ್ಲ, ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯ ನೀಡಲಾಗುವುದು. ಮದುವೆ ನಿಶ್ಚಯವಾಗಿರುವ ಬಗ್ಗೆ ಲಗ್ನಪತ್ರಿಕೆ (ಮಾಡಿಸಿದ್ದಲ್ಲಿ) ಮತ್ತು ಇತರೆ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು.  ಆಯ್ಕೆಯಾದ ಫಲಾನುಭವಿಯ ಮದುವೆಯ ದಿನಾಂಕದಂದು ರೂ.೫೦,೦೦೦/- ಗಳ ನಗದು ಸಹಾಯಧನವನ್ನು ವಧುವಿನ ಹೆಸರಿಗಿರುವ ಬ್ಯಾಂಕ್ ಖಾತೆಗೆ ಆನ್‌ಲೈನ್ ಮುಖಾಂತರ ಪಾವತಿಸಲಾಗುವುದು. ಮದುವೆಯಾದ ನಂತರ ವಧು-ವರನ ಭಾವಚಿತ್ರ, ಧಾರ್ಮಿಕ ಸಂಸ್ಥೆ ನೀಡಿರುವ ಮದುವೆ ಪ್ರಮಾಣ ಪತ್ರ ಅಥವಾ ಉಪ ನೋಂದಣಾಧಿಕಾರಿಗಳು ನೀಡಿರುವ ಮದುವೆ ನೋಂದಣಿ ಪತ್ರ ಪಡೆದಿರಬೇಕು.  ಈ ಯೋಜನೆಯ ಲಾಭ ವೈಯಕ್ತಿಕ ಅಥವಾ ಸಾಮೂಹಿಕವಾಗಿ ನೆರವೇರಿಸಲಾಗುವ ವಿವಾಹಗಳಿಗೂ ಅನ್ವಯಿಸುತ್ತದೆ. ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಈ ಯೋಜನೆಯಡಿಯಲ್ಲಿ ನಿಗದಿಪಡಿಸಲಾಗಿರುವ ದಾಖಲಾತಿಗಳನ್ನು ನೀಡಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವ ಸಹಾಯಧನದೊಂದಿಗೆ ಇತರೆ ಸೌಲಭ್ಯಗಳನ್ನು ಒದಗಿಸಬಹುದಾಗಿರುತ್ತದೆ.   
ಅರ್ಜಿದಾರರು ಸಹಾಯಧನ ಮಂಜೂರಾತಿಗೆ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗೆ ನಿಗದಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲಾತಿಗಳು ಮದುವೆ ನಡೆಯುವ ದಿನಾಂಕದಿಂದ ಒಂದು ತಿಂಗಳ ಮುಂಚೆ ಸಲ್ಲಿಸಬೇಕು. ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ಪರಿಶೀಲನೆಯ ನಂತರ ಜಿಲ್ಲೆಗೆ ನಿಗದಿಪಡಿಸಲಾಗಿರುವ ಗುರಿಗೆ ತಕ್ಕಂತೆ ಹಾಗೂ ಅತೀ ಕಡಿಮೆ ಆದಾಯವಿರುವ ಅರ್ಹ ಫಲಾನುಭವಿಗಳ ಪೈಕಿ, ವಿಧವೆ ತಾಯಿಯ ಕುಟುಂಬ, ವಿಕಲಚೇತನ ಕುಟುಂಬದವರಿಗೆ, ವಿಧವೆ ಮತ್ತು ವಿಚ್ಛೇದಿತ ಮಹಿಳೆಯರಿಗೆ ಮೊದಲ ಆದ್ಯತೆ ಮೇರೆಗೆ ಸಹಾಯಧನ ಮಂಜೂರಾತಿ ನೀಡಲಾಗುವುದು.  ನಿಗದಿತ ಅರ್ಜಿ ನಮೂನೆಗಳನ್ನು ಆಯಾ ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಹಾಗೂ ಜಿಲ್ಲಾ ಬಿಸಿಎಂ ಕಛೇರಿಯಲ್ಲಿ ಪಡೆದು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು  ತಿಳಿಸಿದ್ದಾರೆ.

Advertisement

0 comments:

Post a Comment

 
Top