PLEASE LOGIN TO KANNADANET.COM FOR REGULAR NEWS-UPDATES



 ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅವರಲ್ಲಿ ಭದ್ರತೆಯ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಸಶಸ್ತ್ರ ಅರೆಸೇನಾ ಪಡೆಯ ಯೋಧರು ಶನಿವಾರ ಕೊಪ್ಪಳ ನಗರದ ವಿವಿಧ ಪ್ರದೇಶಗಳಲ್ಲಿ ಅಭಯ ಪಥಸಂಚಲನ ನಡೆಸಿ, ಸಾರ್ವಜನಿಕ ವಲಯದಲ್ಲಿ ಸಂಚಲನವನ್ನುಂಟು ಮಾಡಿದರೆ, ಇವರ ಜೊತೆಗೆ ನಗರದ ವಸತಿ ನಿಲಯಗಳ ವಿದ್ಯಾರ್ಥಿಗಳು ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲು ಯೋಧರೊಂದಿಗೆ ಘೋಷಣೆಗಳನ್ನು ಕೂಗುತ್ತ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
  ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ನಿರ್ಭೀತಿಯಿಂದ ಮತ ಚಲಾವಣೆ ಮಾಡಬೇಕು, ಪುಂಡ-ಪೋಕರಿಗಳು ತಮ್ಮ ಯಾವುದೇ ದುಷ್ಕೃತ್ಯ ನಡೆಸಲು ಸಾಧ್ಯವಿಲ್ಲ.  ಸಾರ್ವಜನಿಕರ ರಕ್ಷಣೆಗೆ ನಾವಿದ್ದೇವೆ ಎನ್ನುವಂತೆ ಅರೆ ಸೇನಾ ಪಡೆಯ ಶಸ್ತ್ರ ಸಜ್ಜಿತ ಯೋಧರು, ಕೊಪ್ಪಳ ನಗರದ ಪೊಲೀಸ್ ಠಾಣೆ ಆವರಣದಿಂದ ಪ್ರಾರಂಭಿಸಿ, ನಗರದ ವಿವಿಧ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಸೆಪಟ್ ಅವರು ಪಥ ಸಂಚಲನದ ನೇತೃತ್ವ ವಹಿಸಿದ್ದರು. ಲೋಕಸಭಾ ಚುನಾವಣೆಯ ಬಂದೋಬಸ್ತ್‌ಗಾಗಿ ಮಹಾರಾಷ್ಟ್ರ ರಾಜ್ಯದಿಂದ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಅರೆ ಸೇನಾ ಪಡೆಯ ಯೋಧರ ಜೊತೆಗೆ, ರಾಜ್ಯ ಮೀಸಲು ಪಡೆ, ಆರ್.ಎ.ಎಫ್, ಸೇರಿದಂತೆ ಜಿಲ್ಲಾ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.  ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಶಿಸ್ತು ಬದ್ಧರಾಗಿ ಕೈಯಲ್ಲಿ ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದ ಯೋಧರನ್ನು ಸಾರ್ವಜನಿಕರು ಆಶ್ಚರ್ಯ ಚಕಿತರಾಗಿ ವೀಕ್ಷಿಸಿದರು.  ನಗರದ ಪ್ರಮುಖ ರಸ್ತೆಗಳಲ್ಲಿ
 ಯೋಧರು ಸಂಚರಿಸುತ್ತಿದ್ದರೆ, ಮಹಿಳೆಯರು ತದೇಕಚಿತ್ತರಾಗಿ ಪಥಸಂಚಲನವನ್ನು ವೀಕ್ಷಿಸುತ್ತ, ’ಮಿಲ್ಟ್ರಿ ಮಂದಿ ನಮ್ಮೂರ‍್ನಾಗ ಯಾಕ ಬಂದಾರ್ರಿ’, ಎಂದರೆ, ಉಳಿದವರು, ಚುನಾವಣೆ ಐತಲ್ರ್ರಿ, ಎಲೆಕ್ಷನ್‌ನಾಗ ಗಲಾಟೆ ಮಾಡೋ  ಪುಂಡ ಪೋಕರಿಗಳಿಗೆ ’ಧಮ್ಕಿ ಹಾಕಾಕ ಮಿಲ್ಟ್ರಿ ಮಂದಿ ಬಂದಾರ’.  ಮಿಲ್ಟ್ರಿ ಮಂದಿ ಬಂದಾರ ಅಂದ್ರ, ರೌಡಿಗಳ ಆಟ ಏನೂ ನಡಿಯಾಂಗಿಲ್ಲ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂದಿತು.
  ಹೀಗೆ ಕೊಪ್ಪಳ ನಗರದ ಪ್ರಮುಖ ನಗರದಲ್ಲಿ ಪಥ ಸಂಚಲನ ನಡೆಸಿದ ಅರೆ ಸೇನಾ ಪಡೆ ಸಾರ್ವಜನಿಕ ವಲಯದಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಯಿತು.  ಅರೆ ಸೇನಾ ಪಡೆಯೊಂದಿಗೆ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳೂ ಸಹ ಸಾಥ್ ನೀಡಿದ್ದರು.  ಇದರ ಜೊತೆಗೆ ನಗರದ ವಸತಿ ನಿಲಯಗಳ ವಿದ್ಯಾರ್ಥಿಗಳು ಮತದಾರರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಪ್ರೇರೇಪಣೆ ನೀಡುವ ಸಲುವಾಗಿ ಯೋಧರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.  ಡಿವೈಎಸ್‌ಪಿ ರಾಜೀವ್, ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ರಾಮಕೃಷ್ಣಯ್ಯ, ನಗರ ಸಂಚಾರ ಠಾಣೆ ಪಿಎಸ್‌ಐಗಳಾದ ರಾಥೋಡ್, ಪಾಟೀಲ್, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ, ನಗರ ಠಾಣೆ ಪಿಎಸ್‌ಐ ಆಂಜನೇಯ, ವಿಜಯ ಬಿರಾದಾರ್, ಅವರು ಸಹ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.  ಪಥ ಸಂಚಲನವು ಜವಾಹರ ರಸ್ತೆ, ವಾರಕಾರ ಗಲ್ಲಿ, ದಿಡ್ಡಿಕೇರಿ, ಶಿರಸಪ್ಪಯ್ಯನಮಠ ರಸ್ತೆ, ಸಾಲಾರಜಂಗ್ ರಸ್ತೆ ಮೂಲಕ ತಾಲೂಕು ಪಂಚಾಯತಿ ಕಚೇರಿ ರಸ್ತೆಯ ಮೂಲಕ ಸಾಗಿ ಬಂದಿತು.

Advertisement

0 comments:

Post a Comment

 
Top