PLEASE LOGIN TO KANNADANET.COM FOR REGULAR NEWS-UPDATES

ಸಿಇಓ ಕೃಷ್ಣ ಉದಪುಡಿ
 ಅಕ್ಷರ ದಾಸೋಹ ವಿಭಾಗದಿಂದ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ೧ ರಿಂದ ೮ನೇ ತರಗತಿ ಮಕ್ಕಳಿಗಾಗಿ ಸರಕಾರದ ಆದೇಶದಂತೆ ಬೇಸಿಗೆ ರಜೆಯಲ್ಲಿ ಏ.೧೧ ರಿಂದ ಮೇ.೨೮ ರವರೆಗೆ ಬಿಸಿಯೂಟ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ. 
  ಶಾಲೆಗಳ ಬೇಸಿಗೆ ರಜೆಯಲ್ಲಿಯೂ ಮಕ್ಕಳಿಗೆ ಅಕ್ಷರ ದಾಸೋಹದಡಿ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಿಸಿಯೂಟ ಕೇಂದ್ರಗಳಿಗೆ ಕುಡಿಯುವ ನೀರು, ಅಡುಗೆ ಅನಿಲ ಮತ್ತು ಆಹಾರ ಸಾಮಗ್ರಿ ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 
ಶಾಲೆಯಲ್ಲಿ ಹಾಜರಿರುವ ಮಕ್ಕಳ ದಾಖಲಾತಿಯನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಫಲಾನುಭವಿಗಳ ಹೆಸರು ಬರೆದು ಸಹಿ ಪಡೆಯುವುದಲ್ಲದೆ, ಊಟ ಮಾಡುತ್ತಿರುವ ಸಂದರ್ಭದಲ್ಲಿ ಮುಖ್ಯ ಶಿಕ್ಷಕರನ್ನೊಳಗೊಂಡಂತೆ ಊಟ ಮಾಡುತ್ತಿರುವ ಎಲ್ಲಾ ಮಕ್ಕಳ ಫೋಟೋ ಕಡ್ಡಾಯವಾಗಿ ತೆಗೆಯಿಸಬೇಕು. ಬಿಸಿಯೂಟ ಕೇಂದ್ರಕ್ಕೆ ಮಕ್ಕಳು ಬರುವುದಿಲ್ಲವೆಂಬ ನೆಪವೊಡ್ಡಿ ಕೇಂದ್ರ ಸ್ಥಗಿತಗೊಳಿಸದೆ, ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ. ಯವರು  ಪಾಲಕರಲ್ಲಿ ಜಾಗೃತಿ ಮೂಡಿಸಿ ಮಕ್ಕಳು ಬಿಸಿಯೂಟ ಕೇಂದ್ರಕ್ಕೆ ಬರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಖ್ಯೋಪಾಧ್ಯಾಯರು ಕೇಂದ್ರವನ್ನು ಬಂದ್ ಮಾಡುವಂತಿಲ್ಲ. ಪ್ರತಿನಿತ್ಯ ಮುಖ್ಯೋಪಾಧ್ಯಾಯರು ಬಿಸಿಯೂಟ ಮಾಡಿದ ಮಕ್ಕಳ ಮಾಹಿತಿಯನ್ನು ಸಿ.ಆರ್.ಸಿ. ಕೇಂದ್ರಕ್ಕೆ ತಲುಪಿಸಬೇಕು.  ಶುಕ್ರವಾರಕ್ಕೊಮ್ಮೆ ತಾಲೂಕ ಹಂತದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಸಿ.ಆರ್.ಸಿ.ಯವರಿಂದ ಮಾಹಿತಿಯನ್ನು ಸಂಗ್ರಹಿಸಿ, ಕ್ರೊಢೀಕರಿಸಿ ಪ್ರತಿ ಶನಿವಾರದಂದು ಜಿಲ್ಲಾ ಪಂಚಾಯತಿಯ ಅಕ್ಷರ ದಾಸೋಹ ವಿಭಾಗಕ್ಕೆ ತಪ್ಪದೆ ಸಲ್ಲಿಸಬೇಕು.  ಲೋಕಸಭಾ ಚುನಾವಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರನ್ನು ಏ. ೧೬ ಮತ್ತು ೧೭ ರಂದು ಚುನಾವಣಾ ಕಾರ್ಯಕ್ಕೆ ನೇಮಕ ಮಾಡಿರುವುದರಿಂದ ಅಲ್ಲದೆ ಬಿಸಿಯೂಟದ ಅಡುಗೆ ಸಿಬ್ಬಂದಿ, ಸಹಾಯಕರು ಅಂದು ಚುನಾವಣಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲು ಸೂಚನೆ ನೀಡಿರುವುದರಿಂದ ಏ. ೧೬ ಮತ್ತು ೧೭ ರಂದು ಎರಡೂ ದಿನಗಳ ಕಾಲ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆ ಇರುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top