ಹೊಸದಿಲ್ಲಿ, ಮಾ.20: ಖ್ಯಾತ ಅಂಕಣಕಾರ, ಬರಹಗಾರ ಖುಷ್ವಂತ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಸಿಂಗ್‌ರ ಅಂತ್ಯಸಂಸ್ಕಾರವು ಗುರುವಾರ ಸಂಜೆ 4 ಗಂಟೆಗೆ ಹೊಸದಿಲ್ಲಿಯ ಲೋಧಿ ಚಿತಾಗಾರದಲ್ಲಿ ನಡೆಯಲಿದೆ.
1915ರ ಫೆ.15ರಂದು ಈಗಿನ ಪಾಕಿಸ್ತಾನ ದೇಶದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಖುಷ್ವಂತ್ ಸಿಂಗ್ ದೇಶದ ಖ್ಯಾತ ಅಂಕಣಕಾರರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟವರು. ಅವರು ಬರೆದ ‘ಕಂಪೆನಿ ಆಪ್ ವುಮೆನ್’, ‘ಟ್ರೈನ್ ಟು ಪಾಕಿಸ್ತಾನ್’, ‘ಡೆಲ್ಲಿ’ ಸೇರಿದಂತೆ ಅನೇಕ ಪುಸ್ತಕಗಳು ಇಂದಿಗೂ ಜನಪ್ರಿಯವಾಗಿವೆ.
‘ಯೋಜನಾ’ ಇದರ ಸಂಸ್ಥಾಪಕ ಸಂಪಾದಕರಾಗಿದ್ದ ಖುಷ್ವಂತ್ ಸಿಂಗ್ ಅವರು ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’, ‘ದಿ ನ್ಯಾಷನಲ್ ಹೆರಾಲ್ಡ್’ ಮತ್ತು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅಂಕಣಗಳ ಮೂಲಕವೇ ಹೆಚ್ಚು ಖ್ಯಾತಿ ಪಡೆದಿದ್ದ ಅವರ ಬರಹಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
1980ರಿಂದ 1986ರ ಅವಧಿಯಲ್ಲಿ ಸಂಸದರಾಗಿದ್ದ ಖುಷ್ವಂತ್ ಸಿಂಗ್, 1974ರಲ್ಲಿ ‘ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು. ಆದರೆ ಅಮೃತಸರದ ಸ್ವರ್ಣಮಂದಿರದಲ್ಲಿ ಭಾರತೀಯ ಸೇನೆಯು ಸಿಕ್ಖ್‌ರ ಮೇಲೆ ದಾಳಿ ನಡೆಸಿದ ಘಟನೆಯನ್ನ ವಿರೋಧಿಸಿ ತಮಗೆ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು 1984ರಲ್ಲಿ ಸರಕಾರಕ್ಕೆ ಹಿಂದಿರುಗಿಸಿದ್ದರು. 2007ರಲ್ಲಿ ಅವರು ‘ಪದ್ಮವಿಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದರು.
ಅನಾರೋಗ್ಯದ ನಡುವೆಯೂ ತಮ್ಮ ಇಳಿವಯಸ್ಸಿನಲ್ಲೂ ಉತ್ಸಾಹದ ಬುಗ್ಗೆಯಂತಿದ್ದ ಖುಷ್ವಂತ್ ಸಿಂಗ್, ತಮ್ಮ 98ನೆ ವಯಸ್ಸಿನಲ್ಲಿ ಬಿಡುಗಡೆಗೊಳಿಸಿದ್ದ ‘ಖುಷ್ವಂತ್‌ನಾಮ’ ಎಂಬ ಪುಸ್ತಕವೇ ಇದಕ್ಕೆ ಸ್ಪಷ್ಟ ನಿದರ್ಶನ.
0 comments:
Post a Comment