PLEASE LOGIN TO KANNADANET.COM FOR REGULAR NEWS-UPDATES


ಹೈದ್ರಾಬಾದ ಕರ್ನಾಟಕದ ನಿವಾಸಿಗಳೆಂದು ಸಾಬಿತುಪಡಿಸಲು ಪ್ರಮಾಣ ಪತ್ರಗಳನ್ನು ಪಡೆಯಲು ಸರಕಾರ ವಿಶೇಷ ಅಧಿಸೂಚನೆ ಹೊರಡಿಸಿದೆ. ಒಬ್ಬ ವ್ಯಕ್ತಿಯು ತಾನು ಸ್ಥಳೀಯ ವ್ಯಕ್ತಿ ಎಂದು ಸಾಬಿತುಪಡಿಸಲು ಬೇಕಾದ ಅರ್ಹತಾ ಪ್ರಮಾಣ ಪತ್ರವನ್ನು ಪಡೆಯಲು ಕೆಲವೊಂದು ಪೂರಕ ಪ್ರಮಾಣ ಪತ್ರಗಳ ಅವಶ್ಯಕತೆಯಿದೆ. 

(ಎ) ಜನನ ಪ್ರಮಾಣ ಪತ್ರ: ಕರ್ನಾಟಕ ಜನನ ಮತ್ತು ಮರಣ ದಾಖಲಾತಿ ಕಾಯ್ದೆ ಪ್ರಕಾರ ಜನನ ಪ್ರಮಾಣ ಪತ್ರವನ್ನು ನಗರಸಭೆ ಅಥವಾ ತಹಸಿಲದಾರರಿಂದ ಪಡೆಯಬಹುದು. ಜನನ ಪ್ರಮಾಣ ಪತ್ರ ಮತ್ತು ವಿಳಾಸದೊಂದಿಗೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಹೈದ್ರಾಬಾದ ಕರ್ನಾಟಕ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. 

(ಬಿ) ವಾಸಸ್ಥಳ ಪ್ರಮಾಣ ಪತ್ರ (ಅನುಬಂಧ-ಬಿ): ೧-೧-೨೦೧೩ಕ್ಕಿಂತ ಮೊದಲು ಹತ್ತು ವರ್ಷ ಈ ಭಾಗದಲ್ಲಿ ವಾಸಿಸಿದ್ದರೆ, ವಾಸದ ದಾಖಲಾತಿಗಳೊಂದಿಗೆ ತಹಸಿಲದಾರರಿಗೆ ಅರ್ಜಿ ಸಲ್ಲಿಸಿ ವಾಸಸ್ಥಳ ಪ್ರಮಾಣ ಪತ್ರ ಪಡೆಯಬಹುದು. ವಾಸಸ್ಥಳ ಪ್ರಮಾಣ ಪತ್ರ ಮತ್ತು ಚುನಾವಣಾ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಅಥವಾ ಆಸ್ತಿಯ ದಾಖಲೆಯೊಂದಿಗೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಹೈದ್ರಾಬಾದ ಕರ್ನಾಟಕ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. 

(ಸಿ) ವ್ಯಾಸಂಗ ಪ್ರಮಾಣ ಪತ್ರ (ಅನುಬಂಧ-ಸಿ): ಹತ್ತು ವರ್ಷಗಳ ಅವಧಿಗೆ ಈ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ, ಅಂತ ವ್ಯಕ್ತಿ ಸಂಬಂದಿಸಿದ ಶಾಲಾ/ಕಾಲೇಜುಗಳ ಮುಖ್ಯಸ್ಥರಿಂದ ವ್ಯಾಸಂಗ ಪ್ರಮಾಣ ಪತ್ರ ಪಡೆದು ಆಯಾ ಶಾಲಾ/ಕಾಲೇಜು ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ರುಜು ಮಾಡಿಸಬೇಕು. ವ್ಯಾಸಂಗ ಪ್ರಮಾಣ ಪತ್ರ ಮತ್ತು ವಿಳಾಸದೊಂದಿಗೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಹೈದ್ರಾಬಾದ ಕರ್ನಾಟಕ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. 

(ಡಿ) ವಿವಾಹ ಪ್ರಮಾಣ ಪತ್ರ: ಬೇರೆ ಭಾಗದ ಹೆಣ್ಣು ಮಗಳು ಈ ಭಾಗದ ಪುರುಷನೊಂದಿಗೆ ಮದುವೆಯಾಗಿದ್ದರೆ, ಅವರು ಮದುವೆ ಪ್ರಮಾಣ ಪತ್ರವನ್ನು ಸಂಬಂದಿಸಿದ ಅಧಿಕಾರಿಯೊಂದಿಗೆ ಪಡೆದು, ತಮ್ಮ ಪತಿಯ ಅರ್ಹತಾ ದಾಖಲಾತಿಯೊಂದಿಗೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಹೈದ್ರಾಬಾದ ಕರ್ನಾಟಕ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು.
(ಇ) ಸ್ವಗ್ರಾಮ (ಅಥವಾ ಸ್ಥಳ) ಪ್ರಮಾಣ ಪತ್ರ (ಅನುಬಂಧ-ಡಿ): ನೌಕರಸ್ತರಿದ್ದರೆ ಅವರ ಸ್ವಗ್ರಾಮ ಪ್ರಮಾಣ ಪತ್ರವನ್ನು ತಮ್ಮ ಸೇವಾ ಪುಸ್ತಕದಲ್ಲಿರುವದನ್ನು ನಮೂದಿಸಿ ಇಲಾಖೆ ಮುಖ್ಯಸ್ಥರಿಂದ ಪಡೆಯಬಹುದು. 
(ಎಫ್) ವಾರಸು ಪ್ರಮಾಣ ಪತ್ರ: ಅಭ್ಯರ್ಥಿ ಈ ಭಾಗದಲ್ಲಿ ಜನಿಸದೇ, ವ್ಯಾಸಂಗ ಮಾಡದೇ ಇದ್ದು ಅವರ ತಂದೆ/ತಾಯಿ ಈ ಭಾಗದಲ್ಲಿ ಜನಿಸಿದ್ದರೆ, ಅವರ ತಂದೆ ತಾಯಿಯ ಜನನ ಪ್ರಮಾಣ ಪತ್ರ ಅಥವಾ ವಾಸಸ್ಥಳ ಪ್ರಮಾಣ ಪತ್ರ ಅಥವಾ ವ್ಯಾಸಂಗ ಪ್ರಮಾಣ ಪತ್ರದೊಂದಿಗೆ ತಹಸಿಲ್ದಾರರಿಂದ ವಾರಸು ಪ್ರಮಾಣ ಪತ್ರ ಪಡೆದು ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಹೈದ್ರಾಬಾದ ಕರ್ನಾಟಕ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು.

ಈ ಮೇಲಿನ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಪ್ರಮಾಣ ಪತ್ರಗಳನ್ನು ಪಡೆದು ಉಪವಿಭಾಗಾಧಿ ಕಾರಿಗಳಿಗೆ ಸಲ್ಲಿಸತಕ್ಕದ್ದು, ಅವರು ಪರಿಶೀಲಿಸಿ ಅನುಬಂಧ-ಎ ಯಲ್ಲಿರುವ ನಮೂನೆಯಲ್ಲಿ ಅರ್ಹತಾ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಪ್ರಮಾಣ ಪತ್ರವನ್ನು ತಮ್ಮ ಶಿಕ್ಷಣ ಅಥವಾ ಉದ್ಯೋಗ ಮೀಸಲಾತಿಗಾಗಿ ಬಳಸಬಹುದು. 

ಯಾರಾದರೂ ಈ ಪ್ರಮಾಣ ಪತ್ರವನ್ನು ಸುಳ್ಳು ದಾಖಲೆ ಸಲ್ಲಿಸಿ ಪಡೆದರೆ ಅಥವಾ ಅಧಿಕಾರಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದರೆ ಒಂದು ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಜಿಲ್ಲಾಧಿಕಾರಿಗಳು ಒಂದು ತಿಂಗಳಲ್ಲಿ ಸೂಕ್ತ ಕ್ರಮ ಜರುಗಿಸಬೇಕು.

ಒಮ್ಮೆ ಪ್ರವೇಶ ಪಡೆದ ನಂತರ ಅಥವಾ ನೇಮಕಾತಿ ಹೊಂದಿದ ನಂತರ ಹೈದ್ರಾಬಾದ ಕರ್ನಾಟಕ ಸಿಂಧೂತ್ವ ಪ್ರಮಾಣ ಪತ್ರ ಪಡೆಯಬೇಕು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರಿರುವ ಸಮಿತಿ  ಸಿಂಧುತ್ವ ಪ್ರಮಾಣ ಪತ್ರ (ಅನುಬಂಧ-ಇ) ನೀಡುತ್ತದೆ. ಈ ರೀತಿ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳು ೩೭೧(ಜೆ) ಕಲಂ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗುತ್ತಿದೆ.

ಡಾ.ರಝಾಕ ಉಸ್ತಾದ್
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ, 
ಮೊ: ೯೪೪೯೯೬೪೩೭೧

Advertisement

0 comments:

Post a Comment

 
Top