ಶಾಲೆಯ ಸುತ್ತಮುತ್ತ ಉತ್ತಮ ಪರಿಸರವಿದ್ದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪರಿಸರ ಮಿತ್ತ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಆರೋಗ್ಯವೇ ಪ್ರಮುಖ ಸಂಪತ್ತಾಗಿದ್ದು, ಉತ್ತಮ ಪರಿಸರ ಇದ್ದಲ್ಲಿ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಶಾಲೆಯ ಸುತ್ತಮುತ್ತ ಪರಿಸರ ಸ್ವಚ್ಛವಾಗಿದ್ದಲ್ಲಿ ಮಾತ್ರ ಮಕ್ಕಳು ಉತ್ತಮ ವ್ಯಾಸಂಗ ಮಾಡಲು ಸಾಧ್ಯ. ಆದರೆ ಜಿಲ್ಲೆಯ ಹಲವಾರು ಶಾಲೆಗಳ ಸುತ್ತಮುತ್ತಲೇ ತಿಪ್ಪೆ ಹಾಕುವುದು, ಸಾರ್ವಜನಿಕರು ಶೌಚಕ್ಕೆ ಹೋಗುವುದು ಕಂಡುಬರುತ್ತಿದ್ದು, ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಮಕ್ಕಳ ಕಲಿಕೆಗೂ ಇದು ಅಡ್ಡಿಯನ್ನುಂಟು ಮಾಡುತ್ತದೆ. ತಮ್ಮ ಮನೆಗಳ ಸುತ್ತಮುತ್ತ ಉತ್ತಮ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಸಾಲದು, ಶಾಲೆಗಳೂ ಸಹ ಸಾರ್ವಜನಿಕರ ಆಸ್ತಿಯಾಗಿದ್ದು, ದೇಶದ ಭವಿಷ್ಯ ರೂಪುಗಳ್ಳುವುದೇ ಶಾಲೆಗಳಲ್ಲಿ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಶಾಲಾ ಪರಿಸರ ನಿರ್ಮಿಸಲು ಮುಂದಾಗಬೇಕಿದೆ. ಗಿಡಮರಗಳನ್ನು ಬೆಳೆಸುವುದರ ಮೂಲಕ ಉತ್ತಮ ಪರಿಸರವನ್ನು, ಕಾಯ್ದುಕೊಂಡು ಬರುವ ಶಾಲೆಗಳಿಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ೨೧ ಶಾಲೆಗಳು ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಜಿಲ್ಲೆಯ ಎಲ್ಲ ಶಾಲೆಗಳೂ ಉತ್ತಮ ಪರಿಸರವನ್ನು ನಿರ್ಮಿಸಿ, ಪರಿಸರ ಮಿತ್ರ ಪ್ರಶಸ್ತಿ ಪಡೆದುಕೊಳ್ಳುವಂತಾಗಬೇಕು. ಉದ್ಯೋಗಖಾತ್ರಿ ಯೋಜನೆಯಡಿ ಶಾಲೆಗಳಿಗೆ ತಡೆಗೋಡೆ ಜೊತೆಗೆ ಉದ್ಯಾನವನ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು, ಎಲ್ಲ ಶಾಲೆಗಳು ಇದರ ಸೌಲಭ್ಯ ಪಡೆದುಕೊಂಡು, ಉತ್ತಮ ವಾತಾವರಣ ಕಲ್ಪಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಯಲು ಮಲವಿಸರ್ಜನ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ, ಶೌಚಾಲಯದ ಜಾಗೃತಿಗಾಗಿ ವಿಜಲ್ ಹಾಕುವಂತಹ ವಿನೂತನ ಕಾರ್ಯಕ್ರಮವನ್ನು ಫೆ. ೨೭ ರಿಂದ ಹಮ್ಮಿಕೊಳ್ಳಲಾಗಿದ್ದು, ಈ ಮಹತ್ವದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಸಹಕಾರವೂ ಸಹ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವಿಶ್ವಮೂರ್ತಿ ಅವರು ಮಾತನಾಡಿ, ಹಿರಿಯರು ನಮಗೆ ಬಿಟ್ಟುಹೋದ ಉತ್ತಮ ಪರಿಸರವನ್ನು ಸ್ವಾರ್ಥ ಸಾಧನೆಗಾಗಿ ನಾವು ಕಲುಷಿತಗೊಳಿಸದ್ದು, ಭವಿಷ್ಯದಲ್ಲಿ ಇದಕ್ಕಿಂತಲೂ ಕೆಟ್ಟ ಪರಿಸರ ಸೃಷ್ಠಿಯಾಗುವ ಆತಂಕವಿದೆ. ಶಾಲೆಯ ಸುತ್ತಮುತ್ತಲ ಪರಿಸರ, ನೀರು ನಿರ್ವಹಣೆ, ಕಲಿಕಾ ಸಾಮರ್ಥ್ಯ ಮುಂತಾದ ಅಂಶಗಳ ಬಗ್ಗೆ ಮೌಲ್ಯಮಾಪನ ಮಾಡಿದ ನಂತರವೇ ಪರಿಸರ ಮಿತ್ರ ಶಾಲೆಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಕಿತ್ತಳೆ, ಹಸಿರು ಪರಿಸರ ಮಿತ್ರ ಶಾಲೆ ಪ್ರಶಸ್ತಿ ಹಾಗೂ ಜಿಲ್ಲೆಗೆ ಒಂದು ಶಾಲೆಯನ್ನು ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆಗೆ ಆಯ್ಕೆ ಮಾಡಲಾಗುವುದು. ಈ ಸಾಲಿನಲ್ಲಿ ಜಿಲ್ಲೆಯ ಮೂಗನೂರು ಗ್ರಾಮದ ಶಾಲೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್, ಶಿಕ್ಷಣ ಇಲಾಖೆಯ ಜಿ.ಹೆಚ್. ಗೋನಾಳ್, ಮ್ಯಾಗೇರಿ, ಪರಿಸರ ಅಧಿಕಾರಿ ರುದ್ರೇಶ್ ಉಪಸ್ಥಿತರಿದ್ದರು. ಈ ವರ್ಷದ ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಆಯ್ಕೆಯಾದ ೨೧ ಶಾಲೆಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು.
0 comments:
Post a Comment