PLEASE LOGIN TO KANNADANET.COM FOR REGULAR NEWS-UPDATES

  ಹಾಯ್ ಮಂಜು,
          ಚೆನ್ನಾಗಿದಿಯಾ ಅಂತ ಕೇಳಲ್ಲ. ಖಂಡಿತ ನೀನು ಚೆನಾಗಿರ‍್ತಿಯಾ ಅನ್ನೋದು ನಂಗೊತ್ತು. ಮೂರು ವರ್ಷ ಆಯ್ತು ನಿನ್ನ ನೋಡಿ. ನೀನು ಹೇಳಿದಂತೆ ಹಾಗೂ ನಾನು ಶಪಥ ಮಾಡಿದಂತೆ ಈವರೆಗೂ ನಿನಗೆ ಫೋನ್ ಮಾಡಿಲ್ಲ, ಪತ್ರ ಬರೆದಿಲ್ಲ, ಮೇಲ್ ಕೂಡಾ ಮಾಡಿಲ್ಲ. ಬರೋಬ್ಬರಿ ಮೂರು ವರ್ಷದ ಬಳಿಕ ಮೊದಲ ಸಲ ನಿನ್ನ ನಂಬರ್‌ಗೆ ಟ್ರೈ ಮಾಡ್ದೆ, ಸ್ವಿಚ್ ಆಫ್ ಎನ್ನುವ ಪ್ರತಿಕ್ರಿಯೆ. ಹಾಗಾಗಿ ನಿನ್ನ ಮೇಲ್ ಐಡಿಗೆ ಈ ಪತ್ರ ಕಳ್ಸಿದಿನಿ. 
          ಮಂಜು, ನಿಂಗೊತ್ತು ನಾನು ಮೊದಲಿನಿಂದಲೂ ರಿಸರ್ವಡ್ ಮೈಂಡ್ ಸೆಟ್ ಹುಡುಗ ಅನ್ನೋದು. ಅದಕ್ಕೆ ನನ್ನನ್ನ ಬಹಳ ಫ್ರೆಂಡ್ಸ್ ಅದರಲ್ಲೂ ಹುಡುಗೀರು ಹಚ್ಕೋಳ್ಳಲ್ಲ, ಒಪ್ಕೋಳ್ಳಲ್ಲ. ಯಾಕಂದ್ರೆ " ಸುದೀಪ್, ದರ್ಶನ್‌ರಂತೆ ಹೈಟು, ಡಾ.ರಾಜ್‌ರಂತೆ ಮೂಗು, ಡಾ.ವಿಷ್ಣು ಮೈ ಬಣ್ಣ ನಿನಗಿಲ್ಲ ಕಣೋ" ಅಂತ ಕಾಲೇಜ್‌ನಲ್ಲಿ ಓದೋವಾಗ ನೀನೇ ಹೇಳಿದ್ದೆ.
        " ಚೆಸ್‌ನಲ್ಲಿ ಎದುರಾಳಿಯನ್ನ ಕಟ್ಟಿ ಹಾಕೋ ನಿನ್ನ ಚಾಣಾಕ್ಷತನ; ಕನ್ನಡ ಸಬ್ಜೆಕ್ಟ್‌ನಲ್ಲಿ ನಾನು ೯೫ ಮಾರ್ಕ್ಸ್ ತಗೊಂಡ್ರೂ ನನಗಿಂತ ೨-೩ ಅಂಕ ಹೆಚ್ಚು ಪಡೆಯೋ ನಿನ್ನ ಕನ್ನಡಪ್ರೀತಿ; ಗುರುಪ್ರಸಾದ್, ಯೋಗರಾಜ್‌ಭಟ್, ಸೂರಿಯನ್ನೇ ಮೀರಿಸುವಂಥ ನಿನ್ನ ಸಿನಿಮಾ ಕಥೆಗಳ ಕಲ್ಪನೆ, ಬರವಣಿಗೆ;

ಅಪರೂಪಕ್ಕೆ ಕ್ಲಾಸ್‌ಗೆ ಬಂದ್ರೂ ಲಾಸ್ಟ ಬೆಂಚ್‌ನಲ್ಲಿ ಒಬ್ಬನೇ ಕೂತು ಪಕ್ಕದವರಿಗೂ ಗೊತ್ತಾಗದ ಹಾಗೆ ತೂಕಡಿಸುವ ನಿನ್ನ ಶೈಲಿ; ಬಸ್ವಾ, ಶೀನಾ, ಶರಣಾ, ರಜಾಕ್‌ರನ್ನ ಬಿಟ್ಟರೆ ಬೇರೆ ಪ್ರಪಂಚಾನೇ ಇಲ್ಲ ಎಂದು ಭಾವಿಸಿದ್ದ ನಿನ್ನ ಮುಗ್ಧತೆ ನನಗಿಷ್ಟ ಆಯ್ತು ಕಣೋ. ಅದಕ್ಕೆ ನಿನ್ನ ಫ್ರೆಂಡ್‌ಶಿಪ್ ಮಾಡ್ದೆ" ಅಂತಾ ಹೇಳಿದ್ದೂ ನೀನೇನೆ.
         ಡಿಗ್ರಿ ಎಕ್ಜಾಂ ಕೊನೆ ಪೇಪರ್ ಮುಗಿದ ದಿನ ನಾ ನಿನಗೆ ಪ್ರಪೋಜ್ ಮಾಡಬೇಕು ಅನ್ಕೊಂಡಿದ್ದೆ ಕಣೆ. ಅದ್ರೆ ಅಷ್ಟರಲ್ಲಿ ಆ  ಫಸ್ಟ್ ಬೆಂಚ್ ಸ್ಟೂಡೆಂಟ್, ಬೆಸ್ಟ್ ಸ್ಟೂಡೆಂಟ್ ಅಂತ ಕರೆಸಿಕೊಂಡಿದ್ದ ಭರತ್ ಬಂದು ನಿನಗೆ ಪ್ರಪೋಜ್ ಮಾಡಿದಾಗ ಮರದ ಹಿಂದೆ ನಾನಿದ್ದೆ. ಆಗ ನೀನು...
       " ಲೋ ಲೂಸು, ಅಪ್ಪ-ಅಮ್ಮ ನಮ್ಮನ್ನ ಕಾಲೇಜ್‌ಗೆ ಕಳಿಸೋದು ಚೆನ್ನಾಗಿ ಓದಿ, ಸಮಾಜದಲ್ಲಿ ಒಳ್ಳೇ ಹೆಸರು ಗಳಿಸಲಿ ಅಂತ. ಆದನ್ನ ಬಿಟ್ಟು ಲವ್, ಡವ್ ಅಂತ್ಹೇಳಿ, ಸಿನಿಮಾ, ಪಾರ್ಕ್ ಸುತ್ತಾಡೋ ಹುಡುಗಿ ನಾನಲ್ಲ. ಮೊದಲು ಜೀವನದಲ್ಲಿ ಯಾವುದಾದರೂ ಸಾಧನೆಯ ಗುರಿ ಇರಬೇಕು. ಇರದಿದ್ದರೆ ಇಂದಿನಿಂದ ಒಂದು ಗೋಲ್ ಇಟ್ಕೋ. ಗೋಲ್ ರೀಚ್ ಆಗು. ಆಗ ನಿನ್ನ ಪ್ರೀತಿನಾ ಯಾವುದಾದರೂ ಹುಡುಗಿ ಒಪ್ಕೋಬಹುದು. ಏನೋ ಬೆಸ್ಟ್ ಸ್ಟೂಡೆಂಟ್ ಅಂತ ನೋಟ್ಸು ಕೇಳ್ತಿದ್ದೆ; ಕ್ಲಾಸ್‌ಗೆ ಬಂದಾಗ ಹಾಯ್ ಹೇಳ್ತಿದ್ದೆ ಅಷ್ಟೇ. ಅದನ್ನೇ ನೀನು ಲವ್ ಅಂತ ಅಪಾರ್ಥ ಮಾಡ್ಕೊಂಡ್ರೆ ಅದಕ್ಕೆ ನಾನು ಹೊಣೆಯಲ್ಲ. ಜೀವನ ಇಷ್ಟಕ್ಕೆ ಮುಗೀಲಿಲ್ಲ. ಇನ್ನೂ ಬೇಕಾದಷ್ಟಿದೆ. ನಿನ್ನ ಮೇಲೆ ನಂಬಿಕೆ ಇಟ್ಟವರಿಗೆ ಒಳ್ಳೇ ಹೆಸರು ತಗೊಂಬಾ ಇಡಿಯಟ್"
         ಇದನ್ನೇ ತಾನೇ ಆವತ್ತು ನೀನು ಭರತ್‌ಗೆ ಹೇಳಿದ್ದು? ನಿನ್ನ ಬಳಿ ಬರೋವಾಗ ಮೊದಲೇ ಮೈ ತುಂಬಾ ನಡುಕ ಇತ್ತು.  ನಿನ್ನ ಆ ಮಾತುಗಳನ್ನ ಕೇಳಿದ ಮೇಲಂತೂ ಫುಲ್ ಬೆವತು ಹೋಗಿದ್ದೆ. ನೀನು ಅದೇ ಬೇಜಾರಲ್ಲಿ ಬರುವಾಗ ಇನ್ನೇನು ತಪ್ಪಿಸಿಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ನಿನ್ನ ಕಣ್ಣು ನನ್ನ ಕಟ್ಟಿ ಹಾಕಿಬಿಡ್ತು. ಹುಡುಗರ ಬಗ್ಗೆ, ಅದರಲ್ಲೂ ಲವ್ ಬಯಸೋ ಹುಡುಗರ ಬಗ್ಗೆ ನೀನು ನನ್ನ ಎದುರಿಗೆ ಮಾತಾಡ್ತಿಯಾ ಅನ್ನೋದನ್ನ ನಿರೀಕ್ಷೆನೇ ಮಾಡಿರಲಿಲ್ಲ.
         " ನಿಜವಾಗಲೂ ಪ್ರೀತಿ ಮಾಡೋರಿಗೆ ತಮ್ಮ ಕಾಲ ಮೇಲೆ ನಿಲ್ಲೋ ಸಾಮರ್ಥ್ಯ ಇರಬೇಕು. ಅನ್ಕೊಂಡ ಗುರಿ ಮುಟ್ಟೋವರೆಗೂ ಇಬ್ಬರು ಪರಸ್ಪರ ದೂರಾನೇ ಇರಬೇಕು. ಗುರಿ ತಲುಪುವ ಯಾವುದೇ ಸಮಯದಲ್ಲೂ ಸಂದರ್ಭದಲ್ಲೂ ಬೇರೊಬ್ಬರಿಗೆ ಮನಸು ಕೊಡಬಾರದು. ಒಬ್ಬರಿಗೊಬ್ಬರು ಮಾತಾಡೋದಿರಲಿ, ಎಸ್.ಎಂ.ಎಸ್ ಮೂಲಕವೂ ಭಾವನೆಗಳನ್ನ ಕಟ್ಟಿ ಹಾಕುವ ಗುಂಡಿಗೆ ಇದ್ದರೆ ಖಂಡಿತ ಪ್ರೀತಿ ಗೆಲ್ಲುತ್ತೆ. ಅದನ್ನ ಬಿಟ್ಟು ಸಿನಿಮಾದಲ್ಲಿ ತೋರಿಸೋ ಹಾಗೆ ಕಾಲೇಜ್ ಅಂದ ತಕ್ಷಣ ಲವ್ ಇರಬೇಕು, ಲವ್ ಮಾಡಬೇಕು ಎನ್ನುವ ಮೂರ್ಖರ ಕಪಾಳಕ್ಕೆ ಎರಡೇಟು ಬಿಡಬೇಕು ಅನ್ಸುತ್ತೆ." ಅಂತಾ ಸಿಟ್ಟು ಹೊರಗೆ ಹಾಕುತ್ತಾ ನನ್ನ ಪರೀಕ್ಷೆ ಬಗ್ಗೆ ವಿಚಾರಿಸಿ ಮುಂದೆ ಎಂಎಸ್‌ಡಬ್ಲ್ಯೂ ಮಾಡ್ತಿನಿ ಅಂತ ಹೇಳಿದ್ದೆ ಕೊನೆ. ಮತ್ತೆ ನಾನು ನಿನ್ನನ್ನ ಮಾತಾಡ್ಸಿಲ್ಲ. ಫೋನ್ ಮಾಡಿಲ್ಲ. ಈಮೇಲ್ ಕಳಿಸಿಲ್ಲ. ಈಗ ನಿನಗೊಂದು ಲೆಟರ್ ಬರೀತಾ ಇದೀನಿ...
        ಮಂಜು, ಪ್ರೀತಿಯ ಬಗ್ಗೆ ನಿನಗಿದ್ದ ಕಲ್ಪನೆಯನ್ನು, ಭಾವನೆಯನ್ನು ನಾನು ಗೌರವಿಸುವವನಾದ್ದರಿಂದ ಇವತ್ತಿನವರೆಗೂ ನಿನ್ನನ್ನು ಸಂಪರ್ಕಿಸಿಲ್ಲ. ಈಗ ನಾನು ಜರ್ನಲೀಸಂ ಮುಗಿಸಿ ಚಿಕ್ಕಂದಿನಿಂದಲೂ ಸಿನಿಮಾ ರಿಪೋರ್ಟರ್ ಆಗಬೇಕು ಎಂದು ಕಟ್ಟಿಕೊಂಡಿದ್ದ ಗುರಿಯನ್ನು ಮುಟ್ಟಿದ್ದೇನೆ. ರಾಜ್ಯದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಲ್ಲಿ ನಾನೀಗ ಸಿನಿಮಾ ರಿಪೋರ್ಟರ್ ಆಗಿದ್ದೇನೆ. ಕೆಲಸ ಆರಂಭಿಸಿ ಮೊದಲ ತಿಂಗಳ ವೇತನ ೪೦ ಸಾವಿರ ರು.ಗಳನ್ನು ಅಮ್ಮನ ಕೈಗೆ ಕೊಟ್ಟಿದ್ದೇನೆ. 
         ಮನೇಲಿ ಅಪ್ಪ-ಅಮ್ಮ ನನ್ನ ಮದುವೆ ಯೋಚನೆ ಮಾಡ್ತಿದಾರೆ. ಇನ್ನೂ ತಡ ಮಾಡೋದು ಬೇಡ ಅಂತ ಪತ್ರ ಬರ‍್ದಿದಿನಿ. ನಾನು ನಿನ್ನಿಂದ ದೂರವಿದ್ರು, ನಿನ್ನ ಆಗು-ಹೋಗುಗಳನ್ನು ಗಮನಿಸುತ್ತಲೇ ಇದ್ದೆ. ನೀನೀಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದು ನಂಗೊತ್ತಿದೆ. ನಿಮ್ಮನೇಲೂ ನಿನಗೊಂದು ವರ ಹುಡುಕ್ತಿರೋದೂ ಗೊತ್ತು. ನನ್ನ ಜೀವನದಲ್ಲಿ ಫಸ್ಟ್ ಟೈಮ್ ಹುಡುಗಿಗೆ ಪ್ರಪೋಸ್ ಮಾಡ್ತಾ ಇದೀನಿ. ಐ ಲವ್ ಯೂ ಮಂಜು.  
        ನೀನು ನನ್ನ ಪ್ರೀತಿ ಒಪ್ಕೋತಿಯಾ ಎಂದು ಬಲವಾಗಿ ನಂಬಿರೋದಕ್ಕೆ ಇನ್ನೊಂದು ಕಾರಣ, ನಮ್ಮಿಬ್ಬರ ಜಾತಿ. ನಮ್ಮಿಬ್ಬರದೂ ಬೇರೆ ಜಾತಿಯಾಗಿದ್ದರೆ ನನಗಿಂತ ಹೆಚ್ಚು ನೀನು ಗೊಂದಲಕ್ಕೀಡಾಗುತ್ತಿದ್ದೆ. ನನಗೆ ಜಾತಿಯಲ್ಲಿ ನಂಬಿಕೆ ಇಲ್ಲ. ಅದರಲ್ಲೂ ರಾಹುಕಾಲ, ಗುಳಿಕ ಕಾಲ, ಸುಮೂಹೂರ್ತ, ಜಾತಕ, ಮನೆದೇವ್ರು ಅಂತೆಲ್ಲ ಏನು ಹೇಳ್ತಾರೋ ಅದರ ಬಗ್ಗೆ ಒಂಚೂರು ನಂಬಿಕೆ ಇಲ್ಲ. ಸಮಾಜಕ್ಕೆ ಒಳ್ಳೆಯದು ಮಾಡೊದೆ ಗುಳಿಕ ಕಾಲ. ಕೆಟ್ಟದ್ದನ್ನ ಬಯಸೋದೇ ರಾಹುಕಾಲ. ಈವರೆಗಿನ ನಮ್ಮ ಕೆಲಸ ಕಾರ್ಯಗಳೇ ಜಾತಕ ಅಂತ ನಂಬಿರೋನು ನಾನು. 
          ನಾನು ನಿನಗೆ ಒಪ್ಪಿಗೆಯಾಗಿದ್ದರೆ ಇದನ್ನ ಓದಿದ ತಕ್ಷಣ ೯೪೪೮೦ ೩೬೬೩೬ಗೆ "ನಾನು ಮಂಜು. ಮನೆಗೆ ಅಪ್ಪ-ಅಮ್ಮನ ಕರ‍್ಕೊಂಡು ಯಾವಾಗ್ ಬರ‍್ತಿಯಾ" ಅಂತ ಎಸ್.ಎಂ.ಎಸ್. ಮಾಡು. ಮರುದಿನ ಬೆಳಿಗ್ಗೆ ೧೦ ಗಂಟೆಗೆ ನಿಮ್ಮನೇಲಿ ನಾವಿರ‍್ತಿವಿ. ಮದುವೆ ಮಾತುಕತೆಗೆ. "ಬಸು ವೆಡ್ಸ್ ಮಂಜು" ಅಂತ ಕಾರ್ಡ್ ಮುದ್ರಿಸುವ ಸಲುವಾಗಿ. ಮೂರು ವರ್ಷದ ನನ್ನ ಪ್ರೀತಿಯ ಪಕ್ಷಿಗೆ ಈಗ ರೆಕ್ಕೆ ಮೂಡಿದ ಅನುಭವವಾಯ್ತು. ಆದಷ್ಟೂ ಬೇಗನೇ ನನ್ನೊಟ್ಟಿಗೆ ಸೇರು. ಪ್ರೇಮವೆಂಬ ಶುಭ್ರಾಕಾಶದೆತ್ತರಕ್ಕೆ ನಾವಿಬ್ಬರೂ ಹಾರೋಣ ಎಂದು ಅಹ್ವಾನ ನೀಡುತ್ತಾ,
                                                   
                                                           ಸದಾ ನಿನ್ನವನೇ ಆಗಿರುವ  
                                                             ರಿಜರ್ವಡ್ ಬಸು
-------------------------------------------------------------------------------------ಚಿತ್ರಪ್ರಿಯ ಸಂಭ್ರಮ್

Advertisement

0 comments:

Post a Comment

 
Top