PLEASE LOGIN TO KANNADANET.COM FOR REGULAR NEWS-UPDATES

 ಸರ್ಕಾರ ರಾಜ್ಯದ ಜನತೆಯ ಶ್ರ್ಯೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಇಲಾಖೆಯು ’ನಮ್ಮ ನಾಡು-ಪ್ರಗತಿ ದರ್ಶನ’ ಎಂಬ ವಿಶೇಷ ಪ್ರಚಾರಾಂದೊಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಫೆ. ೦೧ ರಿಂದ ೨೪ ರವರೆಗೆ ಜಿಲ್ಲೆಯ ಒಟ್ಟು ೧೪೪ ಆಯ್ದ ಗ್ರಾಮಗಳಲ್ಲಿ ನಡೆಯಲಿದೆ.
  ಸರ್ಕಾರ ರೂಪಿಸಿರುವ ಹತ್ತು-ಹಲವು ಯೋಜನೆಗಳ ಬಗ್ಗೆ ಹಾಗೂ ಸಾಧಿಸಿರುವ ಪ್ರಗತಿ ಕುರಿತು ಜನಜಾಗೃತಿಗೊಳಿಸುವ ಉದ್ದೇಶದಿಂದ ವಿಶೇಷ ಪ್ರಚಾರಾಂದೋಲನ ಕಾರ್ಯಕ್ರಮವನ್ನು ವಾರ್ತಾ ಇಲಾಖೆ ಹಮ್ಮಿಕೊಂಡಿದ್ದು,  ವಿಶೇಷವಾಗಿ ಹೈದರಾಬಾದ್-ಕರ್ನಾಟಕಕ್ಕೆ ಸೇರಿದ ಕೊಪ್ಪಳ, ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆ ಅಲ್ಲದೆ ಧಾರವಾಡ ಜಿಲ್ಲೆಗಳಿಗೆ ಸೇರಿದ ಆಯ್ದ ೧೩೦೦ ಹಳ್ಳಿಗಳಲ್ಲಿ ವಿಶಾಲ ಎಲ್‌ಇಡಿ ಪರದೆ ಹಾಗೂ ಅತ್ಯುತ್ತಮ ಧ್ವನಿವರ್ಧಕ ವ್ಯವಸ್ಥೆ ಹೊಂದಿರುವ ವಿಶೇಷ ವಾಹನಗಳನ್ನು ಉಪಯೋಗಿಸಿಕೊಂಡು ಈ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತಿದೆ.
     ಫೆ. ೦೧ ರಂದು ಕೊಪ್ಪಳದಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು.  ಜಿಲ್ಲೆಯ ಎಲ್ಲ ತಾಲ್ಲೂಕುಗಳ ಆಯ್ದ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದ್ದು,  ದಿನವೊಂದಕ್ಕೆ ೬ ಗ್ರಾಮಗಳಲ್ಲಿ ನಡೆಯುವ ಪ್ರಚಾರಾಂದೋಲನ ಕಾರ್ಯವನ್ನು ೨೪ ದಿನಗಳವರೆಗೆ ನಿರಂತರವಾಗಿ ಕೈಗೊಂಡು ಜನಜಾಗೃತಿಗೊಳಿಸಲಾಗುವುದು.  

     ಈ ಪ್ರಚಾರ ಕಾರ್ಯದಲ್ಲಿ ಬೀದಿ ನಾಟಕಗಳು ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಜಾಗೃತಿಗೊಳಿಸಲಾಗುವುದು.  ಪ್ರಸಕ್ತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಹೈದರಾಬಾದ್-ಕರ್ನಾಟಕಕ್ಕೆ ನೀಡಲಾದ ವಿಶೇಷ ಸ್ಥಾನಮಾನ, ಕೃಷಿ, ಹಿಂದುಳಿದ/ಅಲ್ಪಸಂಖ್ಯಾತ ಸಮುದಾಯದ ಅಭ್ಯುದಯ, ಗ್ರಾಮೀಣಾಭಿವೃದ್ಧಿ, ಇವೇ ಮುಂತಾದ ಯೋಜನೆಗಳ ಬಗ್ಗೆ ಜನರಿಗೆ ಈ ಆಂದೋಲನದ ಮುಖೇನ ಮಾಹಿತಿ ನೀಡಲಾಗುವುದು.
     ಸರ್ಕಾರದ ಅಭಿವೃದ್ಧಿ ಯೋಜನೆಗಳ ಆಧಾರಿತ ಕಥಾಚಿತ್ರ/ಸಾಕ್ಷ್ಯಚಿತ್ರ ಹಾಗೂ ಕನ್ನಡ ನಾಡು-ನುಡಿಯ ಕುರಿತು ಅಭಿಮಾನ ಮೂಢಿಸುವಂಥ ಕಥಾಚಿತ್ರಗಳನ್ನು ಸಹ ಪ್ರಚಾರ ಕಾರ್ಯದಲ್ಲಿ ಪ್ರದರ್ಶಿಸಲಾಗುವುದು.  ಅಲ್ಲದೆ ಸರ್ಕಾರದ ಯೋಜನೆ/ಸಾಧನೆಗಳ ಕುರಿತಂತೆ ಇಲಾಖೆ ಹೊರತಂದಿರುವ ಕಿರುಪ್ರಕಟಣೆಗಳನ್ನು ಜನರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ.  ತಿಳಿಸಿದ್ದಾರೆ.

Advertisement

0 comments:

Post a Comment

 
Top