PLEASE LOGIN TO KANNADANET.COM FOR REGULAR NEWS-UPDATES

ರಾಷ್ಟ್ರೀಯ ಮತದಾರರ ದಿನವನ್ನು ಜ. ೨೫ ರಂದು ಆಚರಿಸಲಾಗುತ್ತಿದ್ದು, ಮತದಾರರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮವನ್ನು ಪ್ರತಿಯೊಂದು ಗ್ರಾಮಗಳಲ್ಲೂ ಜ. ೨೫ ರಂದೇ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದರು.
  ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಜವಾಬ್ದಾರಿಯೂ ಅತ್ಯಂತ ಮಹತ್ವದ್ದಾಗಿದ್ದು, ೧೮ ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳಬೇಕು.  ಚುನಾವಣೆ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾರರು ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕು.  ಮತದಾರರ ಜಾಗೃತಿಗಾಗಿ ಜ. ೨೫ ರ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅಂದು ಎಲ್ಲ ಮತದಾನ ಕೇಂದ್ರಗಳ ಪ್ರದೇಶದಲ್ಲಿ ಕಾರ್ಯಕ್ರಮ ಆಚರಣೆ ಸಲುವಾಗಿ ಸಾರ್ವಜನಿಕರನ್ನು ಸೇರಿಸುವುದು, ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳ ಸಭೆ ಕರೆದು, ಮಾಹಿತಿ ಒದಗಿಸಬೇಕು.  ಎಲ್ಲ ಗ್ರಾಮಗಳಲ್ಲೂ ತಪ್ಪದೆ ಮತದಾರರ ದಿನವನ್ನು ಆಚರಿಸಬೇಕಾಗಿದ್ದು, ಇದಕ್ಕಾಗಿ ಪ್ರತಿ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು.  ಅಂದು, ಎಲ್ಲ ಮತಗಟ್ಟೆ ಕೇಂದ್ರಗಳ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಂಶುಪಾಲರುಗಳು ಒಂದೆಡೆ ಸೇರಿ ಕಾರ್ಯಕ್ರಮವನ್ನು ಆಯೋಜಿಸಬೇಕು.  ಇಂತಹ ಕಾರ್ಯಕ್ರಮದಲ್ಲಿ ಮತದಾರರಿಂದ ಕಡ್ಡಾಯ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.  ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಬೇಕು.  ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಗತ್ಯ ಕ್ರಮ ಕೈಗೊಳ್ಳಬೇಕು.  ಮೊದಲು ತಾಲೂಕು ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಜಿಲ್ಲಾ ಮಟ್ಟದ ಸ್ಪರ್ಧೆ ಜರುಗಿಸಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರತ್ಯೇಕವಾಗಿ ಬಹುಮಾನ ವಿತರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಎಲ್ಲ ತಹಸಿಲ್ದಾರರುಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜ. ೨೫ ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
  ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ತಹಸಿಲ್ದಾರರುಗಳಾದ ಚಂದ್ರಕಾಂತ್, ಗಂಗಪ್ಪ, ಪಾಟೀಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top