ಮಾನವ ಹಕ್ಕುಗಳ ಕುರಿತು ಅರಿತು ಅವುಗಳ ಸಂರಕ್ಷಣೆ ಮಾಡುವ ಮತ್ತು ಜನಸಾಮಾನ್ಯರಿಗೂ ಅದರ ಮಾಹಿತಿ ಹಾಗೂ ಜಾಗೃತಿ ಅವಶ್ಯ ಎಂದು ಕೊಪ್ಪಳ ಉಪ ಪೋಲಿಸ ಅಧೀಕ್ಷಕ ರಾಜೀವ್ ಮಾಂಗ ಹೇಳಿದರು.
ಅವರು ನಗರದ ಪೋಲಿಸ್ ಭವನದಲ್ಲಿ ಯೂಥ್ ಫಾರ್ ಹ್ಯೂಮನ್ ರೈಟ್ಸ್ ಇಂಟರ್‌ನ್ಯಾಷನಲ್, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಹೋಮ್ ಗಾರ್ಡ್ಸ್, ಎನ್‌ಎಸ್‌ಎಸ್ ಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ನಡಿಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ, ಮಾನವ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ಕೂಡಲೇ ಎಲ್ಲರೂ ಜಾಗೃತಿವಹಿಸಬೇಕು, ಪೋಲಿಸ್ ಇಲಾಖೆ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತದೆ. ಸರ್ವರೂ ಹಕ್ಕುಗಳನ್ನು ಅರಿತು ಸಹಕರಿಸಬೇಕು ಇದೊಂದು ಉತ್ತಮ ಕಾರ್ಯಕ್ರಮ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಪ್ಪಳ ಗ್ರಾಮೀಣ ಸಿಪಿಐ ಸತೀಶ ಪಾಟೀಲ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಕ್ಕಳು ದೇಶದ ಪ್ರಗತಿ ಚಿಂತಿಸಬೇಕು, ಮಾನವ ಹಕ್ಕುಗಳು ವಿಶ್ವ ಸಂಸ್ಥೆ ಅಂಗೀಕಾರ ಮಾಡಿದಂತಹವು, ಅದಕ್ಕೆ ಸಹಭಾಗಿತ್ವ ಹೊಂದಿದ ಎಲ್ಲಾ ದೇಶಗಳು ಕಡ್ಡಾಯವಾಗಿ ಅವುಗಳ ರಕ್ಷಣೆ ಮಾಡಬೇಕು ಎಂದ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಜಾಂಬೋರೇಟ್‌ನಲ್ಲಿ ಭಾಗವಹಿಸಿದ ನೆನಪು ಬಿಚ್ಚಿಟ್ಟರು.
ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಡಾ|| ವಿ. ಬಿ. ರಡ್ಡೇರ್ ಮಾತನಾಡುತ್ತ, ನಮ್ಮ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತ ಪೋಲಿಸ್ ಅಧಿಕಾರಿಯೊಬ್ಬರು, ರೈಲಿನ ಹಳಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವದನ್ನು ನೆನಪಿಸುತ್ತ, ನಾವು ಹಕ್ಕುಗಳನ್ನು ರಕ್ಷಣೆ ಮಾಡುವ ಸಂಕಲ್ಪ ಮಾಡಬೇಕು, ಗೊಂಡಬಾಳರು ಮುಂದಾಳತ್ವವಹಿಸಿ ಹಮ್ಮಿಕೊಂಡಿರುವ ನಡಿಗೆ ಮುಂದೆ ಮುಂದೆ ಸಾಗಿ ಸರ್ವರ ಕಲ್ಯಾಣವಾಗಲಿ ಎಂದರು.
ಉಪನ್ಯಾಸ ನೀಡಿದ ನ್ಯಾಯವಾದಿ ಹನುಮಂತರಾವ ೧೨ ನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಬಸವಣ್ಣ ಈಗಿರುವ ಐಪಿಸಿ ಕೋಡಗಳನ್ನು ವಚನಗಳ ಮೂಲಕ ಸಾರಿ ಸಾರಿ ಹೇಳಿದ್ದಾರೆ, ನಾವು ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ಅವುಗಳ ಪಾಲನೆ ಮಾಡಿದರೆ, ಪೋಲಿಸರ ಕೆಲಸ ಕಡಿಮೆ ಆಗುತ್ತದೆ. ಮಾನವ ಹಕ್ಕುಗಳನ್ನು ನಾವು ರಕ್ಷಣೆ ಮಾಡಬೇಕು, ಕಾನೂನನ್ನು ಗೌರವಿಸಬೇಕು ಎಂದ ಅವರು, ಬಾಲ್ಯ ವಿವಾಹ, ಜೀತ ಪದ್ದತಿ, ಮಲ ಹೋರುವ ಪದ್ದತಿ ಎಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆ ಎಂದರು. ಯುವ ಸಬಲೀಕರಣ ಇಲಾಖೆ ಸಹಾಯಕ ಕ್ರೀಡಾಧಿಕಾರಿ ಎನ್. ಎಸ್. ಪಾಟೀಲ, ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಬಸವಲಿಂಗಪ್ಪ ಲಾಡಿ, ಹೋಮ್ ಗಾರ್ಡ್ಸ ಜಿಲ್ಲಾ ಸಮಾದೇಷ್ಟರ ರವೀಂದ್ರ ಶೀಗನಹಳ್ಳಿ ಇತರರು ಇದ್ದರು.
ಕಾರ್ಯಕ್ರಮ ಸಂಘಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲೂ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು.
ಮಲ್ಲಮ್ಮ ಪ್ರಾರ್ಥಿಸಿದರು, ಪ್ರಹ್ಲಾದ ಬಡಿಗೇರ ಸ್ವಾಗತಿಸಿದರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟಕ ಎ.ಎಸ್. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ರಾಮು ಪೂಜಾರ ವಂದಿಸಿದರು. ನಂತರ ವಿದ್ಯಾರ್ಥಿಗಳು, ಶಿಕ್ಷಕರು, ಹೋಮ್ ಗಾರ್ಡ್ಸ್ ನಗರದ ಪ್ರಮುಖ ರಸ್ತೆಗಳಲ್ಲಿ ಮಾನವ ಹಕ್ಕುಗಳ ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದರು.
0 comments:
Post a Comment