ರಾಜೀವ್‌ಗಾಂಧಿ ಯುವ ಚೈತನ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ೪೦ ಜನರಂತೆ ಜಿಲ್ಲೆಯಲ್ಲಿ ಒಟ್ಟು ೫೩೬೦ ಯುವಕರಿಗೆ ವಿವಿಧ ತರಬೇತಿ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರು ತಮ್ಮ ಆಸಕ್ತ ವೃತ್ತಿಯಲ್ಲಿ ಬದುಕನ್ನು ಕಟ್ಟುಕೊಳ್ಳುವಂತೆ ಮಾಡಲು, ರಾಜೀವ್‌ಗಾಂಧಿ ಯುವ ಚೈತನ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗೆ ೪೦ ಅಭ್ಯರ್ಥಿಗಳಂತೆ ಜಿಲ್ಲೆಯ ೧೩೪ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು ೫೩೬೦ ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರ ಆಸಕ್ತ ಮತ್ತು ಅನುಭವ ಆಧಾರದ ವೃತ್ತಿಯಲ್ಲಿ ಸೂಕ್ತ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಯೋಜನೆಯಡಿ ೧೮ ರಿಂದ ೩೫ ವರ್ಷದೊಳಗಿನ ಯುವಕರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೂಕ್ತ ತರಬೇತಿ ನೀಡುವುದು. ಅಲ್ಲದೆ ನಿರುದ್ಯೋಗಿ ಯುವಕರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಿ, ವಿವಿಧ ಸಂಘ ಸಂಸ್ಥೆಗಳಲ್ಲಿ, ಸರ್ಕಾರದಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಲು ಸಜ್ಜುಗೊಳಿಸುವು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ, ಗ್ರಾಮೀಣ ಯುವಕರ ಪಾಲಿಗೆ ವರದಾನವಾಗಿದ್ದು, ಇಂತಹ ಯೋಜನೆಗೆ ಹೆಚ್ಚಿನ ಪ್ರಚಾರ ನೀಡಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಅಧ್ಯಕ್ಷರು ರಾಜೀವ್‌ಗಾಂಧಿ ಯುವ ಚೈತನ್ಯ ಯೋಜನೆಯ ಅನುಷ್ಠಾನಧಿಕಾರಿಯೂ ಆಗಿರುವ ಬಿಸಿಎಂ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರಿಗೆ ಸೂಚನೆ ನೀಡಿದರು.
ಸಮನ್ವಯತೆಯಿಂದ ಕಾರ್ಯನಿರ್ವಹಿಸಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಚಿಕೂನ್‌ಗುನ್ಯ ರೋಗ ಉಲ್ಬಣವಾಗುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಹೇಳಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ತೋಟದ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment